ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸರ್ಕಾರಿ ಶಾಲೆಯ ಉಜ್ವಲ ಮಾದರಿ

ಸ್ಥಳೀಯ ಸಮುದಾಯವು ಸರ್ಕಾರದ ಜೊತೆ ಸಕ್ರಿಯ ಸಹಭಾಗಿತ್ವ ಹೊಂದುವುದರಿಂದ ಸರ್ಕಾರಿ ಶಾಲೆಯು ಪ್ರಗತಿಯ ಮೆಟ್ಟಿಲು ಏರಲು ಸಾಧ್ಯ
Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಅವಲೋಕನವು ಕುತೂಹಲಕಾರಿಯಾಗಿದೆ. 2011- 12ರಿಂದ 2021- 22ನೇ ಸಾಲಿನವರೆಗಿನ ಅವಧಿಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳ ಒಟ್ಟು ದಾಖಲಾತಿಯಲ್ಲಿ ಐದೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ.

ಈ ಹತ್ತು ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದರೆ, ಅನುದಾನರಹಿತ ಶಾಲೆ ಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಕೊರೊನಾದ ಎರಡು ವರ್ಷ ಗಳ ಕಾಲಘಟ್ಟದಲ್ಲಿ, ಅದರ ಹಿಂದಿನ ವರ್ಷಕ್ಕೆ ಹೋಲಿ ಸಿದರೆ 4.22 ಲಕ್ಷದಷ್ಟು ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 1.33 ಲಕ್ಷದಷ್ಟು ವಿದ್ಯಾರ್ಥಿಗಳು ಕಡಿಮೆ ಆಗಿದ್ದಾರೆ. ಅದೇ ರೀತಿ ಈ ಎರಡು ವರ್ಷಗಳಲ್ಲಿ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 38,629ರಷ್ಟು ಕಡಿಮೆ ಆಗಿದೆ.

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಉಚಿತವಾಗಿ ದಾಖಲಿಸಲು ಅವಕಾಶ ಕಲ್ಪಿಸಿದ್ದು, 2012- 13ನೇ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣದಲ್ಲಿ ಕುಸಿತವಾಗಲು ಕಾರಣವಾಯಿತು. ರಾಜ್ಯದಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ– 2009ರ ಅಡಿ 2012- 13ನೇ ಸಾಲಿನಿಂದ 2021- 22ನೇ ಸಾಲಿನವರೆಗೆ ಒಟ್ಟು 6,54,628 ವಿದ್ಯಾರ್ಥಿಗಳು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾಗಿದ್ದರು.

2019- 20ನೇ ಸಾಲಿನಿಂದ ಅನ್ವಯವಾಗುವಂತೆ ಮಕ್ಕಳ ವಾಸಸ್ಥಳದ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೆ ಖಾಸಗಿ ಅನು ದಾನರಹಿತ ಶಾಲೆಗಳಲ್ಲಿ ದಾಖಲಾತಿ ನೀಡದೆ, ಹತ್ತಿರದ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿಗೆ ದಾಖಲಿಸುವ ನಿಯಮವನ್ನು ಒಳಗೊಂಡು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ– 2009ಕ್ಕೆ ತಿದ್ದುಪಡಿ ತಂದ ಮೇಲೆ, ವಿದ್ಯಾರ್ಥಿಗಳ ಸಂಖ್ಯೆ ಖಾಸಗಿ ಶಾಲೆಗಳಲ್ಲಿ ಕಡಿಮೆಯಾಗುತ್ತಾ ಬರುವುದರ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗುತ್ತಾ ಹೋಯಿತು. ಈ ಹಿನ್ನೆಲೆಯಲ್ಲಿ 2019- 20ರಿಂದ 2021- 22ರವರೆಗೆ 11,248 ವಿದ್ಯಾರ್ಥಿಗಳು ಮಾತ್ರ ಆರ್‌ಟಿಇ ನಿಯಮದಡಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿಉಚಿತವಾಗಿ ದಾಖಲಾಗಿದ್ದಾರೆ.

ಕೋವಿಡ್ ತಂದೊಡ್ಡಿದ ಆರ್ಥಿಕ ಸಂಕಷ್ಟದ ಕಾರಣ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ, ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಶುರುವಿಟ್ಟುಕೊಂಡ ಪರಿಣಾಮ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಉತ್ತಮಗೊಳ್ಳುತ್ತಾ ಸಾಗಿದೆ. ಇಂಗ್ಲಿಷ್ ಮಾಧ್ಯಮದೆಡೆ ವ್ಯಾಮೋಹ ಹಾಗೂ ಇತರ ಆಕರ್ಷಣೆಗಳ ಪರಿಣಾಮವಾಗಿ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಿದ್ದ ಪೋಷಕರು ಉತ್ತಮವಾಗಿ ನಡೆಯುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಸ್ಥಳೀಯ ಸಮುದಾಯ ಹಾಗೂ ಕೆಲವು ಆಸಕ್ತ ಶಿಕ್ಷಣಾಸಕ್ತರ ಪ್ರೇರಣೆ, ಪ್ರಯತ್ನಗಳ ಫಲವಾಗಿ ಅನೇಕ ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಿಕೊಂಡು, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗಿ ಶಾಲೆಗಳಿಗೆ ತೀವ್ರ ಸ್ಪರ್ಧೆ ನೀಡುತ್ತಿವೆ.

ಇದೇ ಮೇ 7ರಂದು ಶಿಕ್ಷಣ ಸಚಿವರ ಜೊತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಶಾಲೆಗೆ ಭೇಟಿ ನೀಡುವ ಅವಕಾಶ ದೊರೆತಿತ್ತು. ಅಂದು ಶಾಲೆಯ ನೂತನ ಕೊಠಡಿಗಳು ಹಾಗೂ ಕಲಿಕಾ ಭವನದ ಉದ್ಘಾಟನೆಯ ಕಾರ್ಯಕ್ರಮವಿತ್ತು. ಭವ್ಯವಾಗಿ ಮೈತಳೆದು ನಿಂತ ಶಾಲೆಯ ಮುಂದೆ ದೊಡ್ಡ ಸಭಾಮಂಟಪ ನಿರ್ಮಿಸಿ, ಊರಿನ ಜನರನ್ನೆಲ್ಲಾ ಸೇರಿಸಿ, ದೊಡ್ಡ ಉತ್ಸವವನ್ನು ಆಚರಿಸಿದ್ದು ವಿಶೇಷ.

ಇಲ್ಲಿ ಗಮನ ಸೆಳೆದ ಇನ್ನೊಂದು ವಿಷಯವೆಂದರೆ, ಶಾಲೆಯ ಎಲ್ಲಾ ಮಕ್ಕಳಿಗೆ ಭೋಜನಾಲಯ ನಿರ್ಮಿ ಸುವ ಯೋಜನೆಯ ನೀಲನಕಾಶೆಗೆ ಶಂಕುಸ್ಥಾಪನೆ ನೆರ ವೇರಿಸಿದ್ದು. ಸರ್ಕಾರಿ ಶಾಲೆಯ ಬೆಳವಣಿಗೆ ಕುರಿತಂತೆ ಈ ರೀತಿಯ ಮುನ್ನೋಟವು ಯಾವುದೇ ಶಾಲೆಯನ್ನು ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡುತ್ತದೆ.

2015- 16ರಲ್ಲಿ 28 ವಿದ್ಯಾರ್ಥಿಗಳ ದಾಖಲಾತಿ ಇದ್ದ ಈ ಶಾಲೆಯಲ್ಲಿ, ಸ್ಥಳೀಯ ಶಿಕ್ಷಣಪ್ರೇಮಿ ಪ್ರಕಾಶ್ ಅಂಚನ್ ಮತ್ತು ಸಹಚರರ ಪ್ರಯತ್ನದ ಫಲವಾಗಿ ಪ್ರಸ್ತುತ ದಾಖಲಾತಿ 1,200 ಮುಟ್ಟಿದೆ. ಏಳು ಬಸ್‌ಗಳಿದ್ದು, ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಮಕ್ಕಳು ಬರುತ್ತಿದ್ದಾರೆ. ಉತ್ತಮ ಗ್ರಂಥಾಲಯ, ಪ್ರಯೋಗಾಲಯಗಳ ಜೊತೆ ಕರಾಟೆ, ನೃತ್ಯ, ಸಂಗೀತದಲ್ಲಿ ತರಬೇತಿ ನೀಡಲಾಗುತ್ತಿದೆ. ಬೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಶಾಲೆಯ ಅಭಿವೃದ್ಧಿಯಲ್ಲಿ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳೂ ಕೈಜೋಡಿಸಿರುವುದು ವಿಶೇಷ.

ಸ್ಥಳೀಯ ಸಮುದಾಯವು ಸರ್ಕಾರಿ ಶಾಲೆಯನ್ನು ತಮ್ಮದೇ ಶಾಲೆಯೆಂದು ಸಂಭ್ರಮಿಸುತ್ತಾ ಪ್ರಗತಿಯ ಒಂದೊಂದು ಮೆಟ್ಟಿಲನ್ನು ಏರುತ್ತಿರುವುದು ಸರ್ಕಾರಿ ಶಾಲೆಗಳ ಬೆಳವಣಿಗೆಯ ಬಗ್ಗೆ ಭರವಸೆ ಹುಟ್ಟಿಸಿದೆ. ಸ್ಥಳೀಯ ಸಮುದಾಯವು ಸರ್ಕಾರದ ಜೊತೆ ಸಕ್ರಿಯ ಸಹಭಾಗಿತ್ವ ಹೊಂದುವುದರಿಂದ ಸರ್ಕಾರಿ ಶಾಲೆಗಳು ಉಜ್ವಲವಾಗುವ ಹೊಸ ಮಾದರಿಯನ್ನು ನಮ್ಮ ಮುಂದೆ ತೆರೆದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT