ಸೋಮವಾರ, ಸೆಪ್ಟೆಂಬರ್ 20, 2021
20 °C
ಗೋಳದ ಬಿಸಿ ತಗ್ಗಿಸಲು ಹಲವು ದೇಶಗಳು ಅತ್ಯುತ್ಸಾಹ ತೋರಿಸಿವೆ

ಸಂಗತ: ಬರಲಿದೆ ಮರಗಳ ಸುನಾಮಿ!

ಶ್ರೀಗುರು Updated:

ಅಕ್ಷರ ಗಾತ್ರ : | |

Prajavani

ವಿಶ್ವ ಪರಿಸರ ದಿನವನ್ನು ಕಳೆದ ತಿಂಗಳಷ್ಟೇ ಆಚರಿಸಿದ್ದೇವೆ. ಪರಿಸರ ದಿನಾಚರಣೆಯ ಈ ಸಾಲಿನ ಆತಿಥೇಯ ದೇಶವಾಗಿರುವ ಪಾಕಿಸ್ತಾನವು ಮುಂದಿನ ಐದು ವರ್ಷಗಳಲ್ಲಿ ತನ್ನ ನೆಲದಲ್ಲಿ ಸಾವಿರ ಕೋಟಿ ಸಸಿ ನೆಟ್ಟು ಮರಗಳ ಸುನಾಮಿಯನ್ನೇ ಸೃಷ್ಟಿಸಲಿದೆ. ವಿಶ್ವದಾದ್ಯಂತ ಪರಿಸರ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯೊಂದಿಗೆ ಕೈಜೋಡಿಸಿರುವ ಪಾಕಿಸ್ತಾನವು ಈ ಸಲದ ಧ್ಯೇಯವಾಕ್ಯ ‘ಇಕೋಸಿಸ್ಟಮ್ ರೆಸ್ಟೊರೇಶನ್’ನ (ಜೀವಿಪರಿಸರ ಪುನರ್‌ಸ್ಥಾಪನೆ) ಅನುಸಾರ ತನ್ನ ದೇಶದ ಶಾಲೆ– ಕಾಲೇಜು, ಉದ್ಯಮ ಆವರಣ, ಸಾರ್ವಜನಿಕ ಪಾರ್ಕ್, ಗೋಮಾಳ, ನಗರ ಪ್ರದೇಶ, ಕಾಂಡ್ಲಾ ಪ್ರದೇಶಗಳ 730 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಭಾರಿ ಸಂಖ್ಯೆಯ ದೇಶೀಯ ಸಸಿ ನೆಟ್ಟು, 15 ಮಾದರಿ ಸಂರಕ್ಷಣಾ ವಲಯಗಳನ್ನು ನಿರ್ಮಿಸಿ, 5,000ಕ್ಕೂ ಹೆಚ್ಚು ‘ಹಸಿರು ಉದ್ಯೋಗ’ ಸೃಷ್ಟಿಸುವ ಯೋಜನೆ ರೂಪಿಸಿದೆ.

ನೆಡಲಿರುವ ಸಸಿಗಳು ಹತ್ತು ಲಕ್ಷ ಹೆಕ್ಟೇರ್ ಪ್ರದೇಶವನ್ನು ಹಸಿರಾಗಿಸಲಿವೆ. ನಿಸರ್ಗದ ಸಹಜ ಕಾರ್ಬನ್ ಸಿಂಕ್‍ಗಳಂತೆ ವರ್ತಿಸುವ ಈ ಹಸಿರುರಾಶಿ 2030ರ ವೇಳೆಗೆ ಶೇ 25ರಷ್ಟು ಇಂಗಾಲದ ಹೊಮ್ಮುವಿಕೆಯನ್ನು ಕಡಿಮೆ ಮಾಡಲಿದೆ ಎಂಬ ಅಂದಾಜಿದೆ.

ವಿಶ್ವದ ಪ್ರತಿಯೊಂದು ದೇಶವೂ ಕಳೆದುಕೊಂಡ ತನ್ನ ‘ಜೀವಿ ಪರಿಸರ’ ವ್ಯವಸ್ಥೆಯನ್ನು ಮರು
ಸ್ಥಾಪಿಸಿಕೊಳ್ಳಲು 2021– 2030ರ ಅವಧಿಯನ್ನು ನಿಗದಿ ಮಾಡಿರುವ ಯುಎನ್‍ಇಪಿ (ಯುನೈಟೆಡ್ ನೇಷನ್ಸ್ ಎನ್‌ವಿರಾನ್‌ಮೆಂಟ್‌ ಪ್ರೋಗ್ರ್ಯಾಂ), ಪ್ಯಾರಿಸ್ ಒಪ್ಪಂದ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ (ಎಸ್‍ಡಿಜಿ) ಹೊಂದಿಕೊಂಡಂತೆ ಈ ಕೆಲಸ ಆಗಬೇಕೆಂದು ಹೇಳಿದೆ.

ಇರುವ ಜೀವಿಪರಿಸರಗಳನ್ನು ಸಂರಕ್ಷಣೆಗೊಳಪಡಿಸಿ, ಧ್ವಂಸಗೊಂಡಿರುವ ಪ್ರದೇಶಗಳನ್ನು ಪುನರು ಜ್ಜೀವನಗೊಳಿಸುವುದು ‘ಎಕೊಸಿಸ್ಟಮ್ ರೆಸ್ಟೊರೇಶನ್’ನ ಮುಖ್ಯ ಕೆಲಸಗಳಲ್ಲೊಂದು. ನೈಸರ್ಗಿಕ ಕಾಡುಗಳನ್ನು ಕಡಿದು ರಸ್ತೆ, ಉದ್ಯಾನ, ಬಡಾವಣೆ, ಅಣೆಕಟ್ಟು ನಿರ್ಮಿಸಲಾಗಿದೆ. ಅಲ್ಲಿ ಪುನಃ ಅರಣ್ಯ ಬೆಳೆಸಲಾಗುವುದಿಲ್ಲ. ನಾಶಗೊಂಡಿರುವುದನ್ನು ಯಥಾಸ್ಥಿತಿಯಲ್ಲಿ ಹಿಂಪಡೆಯುವುದು ಆಗದ ಮಾತು ಮತ್ತು ಅದು ಅಪ್ರಾಯೋಗಿಕವೂ ಹೌದು.

ಇರುವ ಅಪರೂಪದ ಜೀವಿವೈವಿಧ್ಯ, ಮಣ್ಣಿನ ಫಲವತ್ತತೆ, ಕಾಡು, ವನ್ಯ- ಸಾಗರ ಜೀವಿಗಳನ್ನು ಉಳಿಸಿ, ಬದಲಾದ ವಾಯುಗುಣಕ್ಕೆ ತಕ್ಕಂತೆ ಆಹಾರ ಮತ್ತು ಜೀವನಕ್ರಮ ಬದಲಾಯಿಸಿಕೊಂಡು, ಇನ್ನು ಒಂಬತ್ತು ವರ್ಷಗಳಲ್ಲಿ ಮೂರೂವರೆ ಕೋಟಿ ಹೆಕ್ಟೇರ್‌ ನಷ್ಟು ಸತ್ವಹೀನ ಮಣ್ಣು ಹಾಗೂ ಮಲಿನ ನೀರಿನ ಪ್ರದೇಶಗಳನ್ನು ಪುನಃ ಸುಸ್ಥಿತಿಗೆ ತರಬಹುದು. ಖಾಲಿ ಜಾಗದಲ್ಲಿ ಗಿಡ ನೆಟ್ಟು, ನಗರಗಳನ್ನು ಹಸಿರಾಗಿಸಿ, ತೋಟಗಳನ್ನು ಪುನರ್‌ರೂಪಿಸಿ, 26 ಗಿಗಾ ಟನ್‍ಗಳಷ್ಟು ಶಾಖವರ್ಧಕ ಅನಿಲಗಳನ್ನು ವಾತಾವರಣದಿಂದ
ತೆಗೆದುಹಾಕಬಹುದು. ನದಿ, ಸಾಗರ ತೀರ ಪ್ರದೇಶಗಳ ಕಸಕ್ಕೆ ಮುಕ್ತಿ ನೀಡಬಹುದು. ಇದಕ್ಕಾಗಿ ರೂಪಿಸುವ ಯೋಜನೆಗಳು ಸಹಸ್ರಾರು ಕೋಟಿ ಡಾಲರ್‌ಗಳ ವಹಿವಾಟು ನಡೆಸಲಿವೆ. ಹಾಕಿದ ಬಂಡವಾಳಕ್ಕಿಂತ ಹೆಚ್ಚು ಪಟ್ಟು ಲಾಭ ತರಲಿವೆ.

ಪ್ರಸ್ತುತ ವಿಶ್ವದ 320 ಕೋಟಿ ಜನ ಶುದ್ಧ ಕುಡಿಯುವ ನೀರು, ಗುಣಮಟ್ಟದ ಗಾಳಿ ಮತ್ತು ಫಲವತ್ತತೆ ಇಲ್ಲದ ಜಮೀನುಗಳಿಂದ ಕಷ್ಟ ಅನುಭವಿಸುತ್ತಿದ್ದಾರೆ. ವಿಶ್ವದ ಶೇ 45ರಷ್ಟು ಶಾಖವರ್ಧಕ ಅನಿಲಗಳು ಯುರೋಪ್, ಚೀನಾ ಮತ್ತು ಅಮೆರಿಕ ಗಳಿಂದಲೇ ಹೊಮ್ಮುತ್ತಿವೆ. ಅಭಿವೃದ್ಧಿಗಾಗಿ ಕಾಡು ಕಡಿತ, ಕಾಳ್ಗಿಚ್ಚು, ಬರದಿಂದಾಗಿ ಪ್ರತಿದಿನ 320 ಚದರ ಕಿ.ಮೀ.ನಷ್ಟು ಮರುಭೂಮಿ ಸೃಷ್ಟಿಯಾಗುತ್ತಿದೆ. ದಿನವೊಂದಕ್ಕೆ ಏಳು ಪ್ರಭೇದದ ಸಸ್ಯ ಮತ್ತು ಮೂರು ಬಗೆಯ ಪ್ರಾಣಿಗಳು ಶಾಶ್ವತ ವಿನಾಶ ಹೊಂದುತ್ತಿವೆ. ಮರ ಮಾರಾಟದಿಂದಲೇ ಹಣ ಗಳಿಸುವ ಬ್ರೆಜಿಲ್, ಇಂಡೊನೇಷ್ಯಾದಲ್ಲಿ ಲಕ್ಷಾಂತರ ಎಕರೆ ಕಾಡು ಪ್ರತಿದಿನ ಕೊಡಲಿಗೆ ಬಲಿಯಾಗುತ್ತಿದೆ.

ಸಮುದ್ರಮಟ್ಟ ಅಪಾಯಕರ ವೇಗದಲ್ಲಿ ಏರುತ್ತಿದೆ. ಸುಸ್ಥಿರ ಅಭಿವೃದ್ಧಿಯ 17 ಗುರಿಗಳನ್ನು ತಲುಪಲು 2030 ಅಂತಿಮ ವರ್ಷವಾಗಿದೆ. ಗುರಿಗಳಿಗೆ ಪೂರಕವಾಗಿ ನದಿ, ಹುಲ್ಲುಗಾವಲು, ಪರ್ವತ, ಸಾಗರ, ಕಾಡು, ಮರುಭೂಮಿ, ತರಿಭೂಮಿ, ಹವಳದ ದಿಬ್ಬ, ಕೃಷಿಭೂಮಿ, ಗಣಿ ಪ್ರದೇಶಗಳನ್ನೆಲ್ಲ ಸುಸ್ಥಿತಿಯಲ್ಲಿ ಇಡಬೇಕಾದುದು ಪ್ರತಿಯೊಂದು ದೇಶದ ಕರ್ತವ್ಯವಾಗಿದೆ. ಪ್ಯಾರಿಸ್ ಒಪ್ಪಂದದ ಪ್ರಕಾರ, ಗೋಳದ ಬಿಸಿಯನ್ನು 2050ರ ವೇಳೆಗೆ 1.5 ಡಿಗ್ರಿ ಸೆ.ಗಿಂತ ಹೆಚ್ಚದಂತೆ ತಡೆಯಬೇಕಿದೆ.

ಈ ಕೆಲಸಕ್ಕೆ ಹಲವು ದೇಶಗಳು ಅತ್ಯುತ್ಸಾಹ ತೋರಿಸಿವೆ. ಭವಿಷ್ಯದ ಜನಾಂಗಗಳಿಗೆ ಬೇಕಾಗುವ ವಾತಾವರಣವನ್ನು ಸಿದ್ಧಗೊಳಿಸಲು ಯುವಜನರ ಅಭಿಪ್ರಾಯ ತುಂಬಾ ಮುಖ್ಯ ಎಂದಿರುವ ಯುರೋಪಿನ ಯುಎನ್‍ಇಪಿ ಕಚೇರಿ, ವಿಶ್ವದ 22 ಭಾಷೆಗಳಲ್ಲಿ ಸಮೀಕ್ಷಾ ನಮೂನೆಯನ್ನು ತಯಾರಿಸಿ 71 ದೇಶಗಳ ಯುವಕರ ಅಭಿಪ್ರಾಯ ಸಂಗ್ರಹಿಸಲು ಪ್ರಾರಂಭಿಸಿದೆ.

2060ರ ವೇಳೆಗೆ ತಾನು ಕಾರ್ಬನ್‌ಮುಕ್ತ ರಾಷ್ಟ್ರವಾಗುವುದಾಗಿ ಚೀನಾ ಹೇಳಿದೆ. ಹಸಿರು ಉದ್ಯಮ ಮತ್ತು ಕಟ್ಟಡ ನಿರ್ಮಾಣಕ್ಕೆ ಜರ್ಮನಿ
250 ಕೋಟಿ ಡಾಲರ್ ಹಣ ಹೂಡಿದೆ. ‘ಗ್ರೀನ್ ಎನರ್ಜಿ’ಗಾಗಿ ಫ್ರಾನ್ಸ್ 760 ಕೋಟಿ ಡಾಲರ್ ಹಾಕಿದೆ. ನಾವು ಸಹ ಬೃಹತ್ ಸೋಲಾರ್ ಹಾಗೂ ಗಾಳಿಶಕ್ತಿ ಯೋಜನೆಗಳಿಗೆ ಕೈಹಾಕಿದ್ದು, ವಾಯುಗುಣ ಶುದ್ಧೀಕರಣ ಕೆಲಸದಲ್ಲಿ ಜಿ– 20 ದೇಶಗಳ ಪೈಕಿ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದ್ದೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು