ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಾಗರ ಎಂಬ ಭವ್ಯ ಭರವಸೆ

Last Updated 8 ಜೂನ್ 2020, 2:21 IST
ಅಕ್ಷರ ಗಾತ್ರ

2009ರಿಂದ ಪ್ರತಿವರ್ಷ ಜೂನ್ 8 ಅನ್ನು ‘ವಿಶ್ವ ಸಾಗರಗಳ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಸಾಗರಗಳು ನಮ್ಮ ದಿನನಿತ್ಯದ ಬದುಕನ್ನು ಪೋಷಿಸುತ್ತವೆ. ಅವು ಆಹಾರ, ಖನಿಜ ಹಾಗೂ ಔಷಧಗಳ ಮೂಲಗಳು, ಜೈವಗೋಳದ ನಿರ್ಣಾಯಕಗಳು. ಸಾಗರದ ಸೌಂದರ್ಯ, ನಿಕ್ಷೇಪ ಮತ್ತು ಭರವಸೆಗಳನ್ನು ಸಂಭ್ರಮಿಸುವ ಸಂದರ್ಭ ಕೂಡ ಇಂದು.

ಜಲಮಾರ್ಗದ ಹೊರತಾಗಿ ಮನುಷ್ಯನ ನಾಗರಿಕತೆಯ ಯಾತ್ರೆಯನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಇಂದೇನೋ ಜಗತ್ತಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ವಿಮಾನಗಳು ಹಾರಾಡುತ್ತವೆ. ಆದರೆ ಅದಕ್ಕೂ ಮೊದಲು? ಸಮದ್ರವೇ ಸಾರಿಗೆ ಮಾಧ್ಯಮ. ಸರಕು ಸಾಗಣೆಗೆ, ಪ್ರಯಾಣಕ್ಕೆ, ಪ್ರವಾಸಕ್ಕೆ. ವಿಷ್ಣುವಿನ ದಶಾವತಾರಗಳಲ್ಲಿ ಮತ್ಸ್ಯ, ಕೂರ್ಮ ಮತ್ತು ವರಾಹ- ಈ ಮೂರು ನೇರ ಸಮುದ್ರಕ್ಕೆ ಸಂಬಂಧಿಸಿದವು. ಸಮುದ್ರಮಥನವಾದಾಗ ಹಾಲಾಹಲ, ಪಾರಿಜಾತ, ಕಾಮಧೇನು, ಕಲ್ಪವೃಕ್ಷ... ಹೀಗೆ ಹದಿನಾಲ್ಕು ‘ರತ್ನಗಳು’ ಲಭ್ಯವಾದವೆಂದು ಪುರಾಣಗಳು ಸಾರುತ್ತವೆ. ಸಾಗರ ಒಂದು ಅಮೂಲ್ಯ ಖಜಾನೆಯೆಂಬ ಗ್ರಹಿಕೆ ಇಲ್ಲಿ ಮುಖ್ಯವಾಗುತ್ತದೆ.

ಸಾಗರಗಳು ಜಗತ್ತಿಗೆ ಅಗತ್ಯವಿರುವ ಶೇಕಡ 50ರಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ. ವಾತಾವರಣಕ್ಕಿಂತಲೂ 50 ಪಟ್ಟು ಹೆಚ್ಚಾಗಿ ಇಂಗಾಲಾಮ್ಲವನ್ನು ಹೀರುತ್ತವೆ. ತಾಪವನ್ನು ಭೂಮಧ್ಯ ರೇಖೆಯಿಂದ ಧ್ರುವಪ್ರದೇಶಗಳಿಗೆ ರವಾನಿಸುತ್ತವೆ. ಹವಾಮಾನ, ವಾಯುಗುಣದ ಏರುಪೇರುಗಳನ್ನು ನಿಯಂತ್ರಿಸುತ್ತವೆ. ವಿಶ್ವ ಜನಸಂಖ್ಯೆಯ ಶೇಕಡ 60ರಷ್ಟು ಜನ, ಸಾಗರ ತೀರಪ್ರದೇಶಗಳಲ್ಲೇ ವಾಸಿಸುತ್ತಾರೆ. ಸಾಗರಗಳು ಭೂಮಿಯ ಶ್ವಾಸಕೋಶಗಳು, ಜೀವಗಳನ್ನು ಜೋಪಾನ ಮಾಡುವ ಕಾವುಪೆಟ್ಟಿಗೆಗಳು.

ಗಮನಿಸಬೇಕಾದ್ದೇನು ಗೊತ್ತೇ? ಸಾಗರ ಒಂದೇ. ಆದರೆ ಪೆಸಿಫಿಕ್, ಅಟ್ಲಾಂಟಿಕ್, ಇಂಡಿಯನ್, ಆರ್ಕ್‌ಟಿಕ್‌ ಮತ್ತು ಅಂಟಾರ್ಕ್‌ಟಿಕ್ ಎಂದು ಐದು ಭಾಗಗಳಾಗಿ ವಿಭಜಿಸಲಾಗಿದೆಯಷ್ಟೆ. ಒಂದರಿಂದ ಇನ್ನೊಂದಕ್ಕೆ ನೀರು ಸರಾಗವಾಗಿ ಭೇದವಿಲ್ಲದೆ ಹರಿಯುತ್ತದೆ. ಅವು ಈ ಪರಿಯಲ್ಲಿ ‘ಉದಾರ ಚರಿತಾನಾಂತು ವಸುಧೈವ ಕುಟುಂಬಕಮ್’ ವಾಣಿಯನ್ನು ಎತ್ತಿಹಿಡಿಯುತ್ತವೆ ಎನ್ನಬಹುದು.

ಮತ್ತೊಂದು ಮುಖ್ಯ ಸಂಗತಿಯೆಂದರೆ, ಪಾತಳಿಯಲ್ಲಿ ಅಧಿಕ ಆಮ್ಲಜನಕವೇನೂ ಇಲ್ಲ. ಹಾಗಾಗಿ ಇಂಧನ ತೈಲ ದಹಿಸದೆ ಸುಭದ್ರ. ನೀರಿಲ್ಲದಿರೆ ಬದುಕಿಲ್ಲ, ನೀಲಿಯಿಲ್ಲದೆ ಹಸಿರಿಲ್ಲ. ‘ಕೊನೆಯ ವೃಕ್ಷ ಕಡಿದಾಗ, ಕೊನೆಯ ಮೀನು ಹಿಡಿದಾಗ, ಕೊನೆಯ ನದಿ ವಿಷವಾದಾಗ ಮಾತ್ರವೇ ಹಣವನ್ನು ತಿನ್ನಲಾಗದೆಂಬ ಅರಿವಾಗುವುದು’ ಎಂಬ ಉಕ್ತಿಯಿದೆ. ‘ಎಲ್ಲೆಲ್ಲೂ ನೀರು, ಕುಡಿಯಲು ಮಾತ್ರ ಹನಿ ನೀರೂ ಇಲ್ಲ’ ಎಂದ ಕವಿಗೆ, ಕುಡಿಯುವ ನೀರು ಲಭ್ಯವಾಗುವುದೇ ಸಾಗರಗಳಿಂದ ಎಂಬ ನಿಜ ತಿಳಿದಿರಲಿಕ್ಕಿಲ್ಲ! ಅವನ ಉದ್ಗಾರ ಹೇಗೂ ಇರಲಿ. ಸಕಲ ಜೀವವೈವಿಧ್ಯಕ್ಕೆ ಪ್ರಾಣವಾಯುವಾದ ಆಮ್ಲಜನಕವನ್ನು ಒದಗಿಸುವುದು ಸಾಗರವೇ ಎನ್ನುವುದು ತಥ್ಯ. ಸಾಗರ ಸ್ವಚ್ಛವಾಗಿದ್ದಷ್ಟೂ ಜಾಗತಿಕ ತಪನದ ಭೀತಿಯೂ ದೂರವಾಗುತ್ತದೆ.

ಸ್ವಾರಸ್ಯವೆಂದರೆ, 3.90 ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನ ಮೇಲೆ ಈ ತನಕ 12 ಮಂದಿ ನಡೆದಾಡಿ ಸುರಕ್ಷಿತವಾಗಿ ಮರಳಿದ್ದಾರೆ. ಆದರೆ ಸಾಗರದ ಅತ್ಯಂತ ಆಳ ಪ್ರದೇಶಕ್ಕೆ ಇಳಿದು ವಾಪಸಾದವರ ಸಂಖ್ಯೆ ಕೇವಲ ಮೂರು! ಸಾಗರ ಪಾತಳಿಯಲ್ಲಿ ತಿಮಿಂಗಿಲದಂತಹ ಹಲವು ದೈತ್ಯ ಪ್ರಾಣಿಗಳುಳ್ಳ ವನ್ಯಲೋಕವೇ ಇದೆ. ಇದರ ಜೊತೆಗೆ ಬಗೆ ಬಗೆಯ ಏಕಕೋಶೀಯಗಳು, ಶಿಲೀಂದ್ರ, ಪಾಚಿಗಳದ್ದೇ ಒಂದು ಜಗತ್ತು.

ಇಂತಹ ಸಾಗರದ ಸಂಪನ್ಮೂಲಗಳನ್ನು ಜಗತ್ತು ಎಗ್ಗಿಲ್ಲದೇ ಬಳಸಿಕೊಳ್ಳುತ್ತಿದೆ. ಅದು ಸಾಲದ್ದಕ್ಕೆ ಸಮದ್ರವನ್ನು ರೊಚ್ಚುಗುಂಡಿಯೆಂದು ಉಪೇಕ್ಷಿಸಿ ಅಪಾರ ಪ್ರಮಾಣದ ಪೆಟ್ರೋಲಿಯಂ ತ್ಯಾಜ್ಯ, ರಾಸಾಯನಿಕಗಳನ್ನು ಒಗೆದು ಮಲಿಗೊಳಿಸಲಾಗುತ್ತಿದೆ. ವರ್ಷಕ್ಕೆ 80 ಲಕ್ಷ ಟನ್ನುಗಳಷ್ಟು ಪ್ಲಾಸ್ಟಿಕ್ ರದ್ದಿಯು ಸಾಗರ ಸೇರುತ್ತಿದೆ. ಮೀನುಗಳು ಪ್ಲಾಸ್ಟಿಕ್ ಸೇವಿಸುತ್ತವೆ. ಆ ಮೀನುಗಳನ್ನು ಮನುಷ್ಯ ತಿನ್ನುತ್ತಾನೆ. ಈ ಎಡವಟ್ಟಿಗೆ ಆಸ್ಪದವಾಗದಂತೆ ನಿಗಾ ವಹಿಸಬೇಕು. ನಾವು ತೆಗೆದುಕೊಳ್ಳುವ ಪ್ರತೀ ಉಸಿರಿಗೂ, ಪ್ರತೀ ಹನಿ ನೀರಿಗೂ ಸಾಗರಕ್ಕೆ ನಾವು ಆಭಾರಿಗಳಾಗಿರಬೇಕು.

ಕಡಲ ಕಿನಾರೆಯಲ್ಲಿ ಸ್ನಾನ, ಈಜು, ವಿಹಾರ, ಬೋಟಿಂಗ್ ಸರಿಯೆ. ಆದರೆ ಶುಭ್ರತೆಗೆ ತಪ್ಪದೆ ಗಮನ ವಹಿಸಬೇಕು. ಚಿಪ್ಪು, ಕೋಶಗಳಿಂದ ತಯಾರಾದ ಆಭರಣ, ಅಲಂಕರಣ ಸಾಮಗ್ರಿಗಳನ್ನು ಖರೀದಿಸಬಾರದು. ಕಲ್ಲುಬಂಡೆಗಳನ್ನು ಸ್ಥಳಾಂತರಿಸಬಾರದು. ತೀರಕ್ಕೆ ಬರುವ ಸಾಗರಜೀವಿಗಳನ್ನು ಹಿಂಸಿಸಕೂಡದು. ಜಗತ್ತಿನಾದ್ಯಂತ ವರ್ಷಕ್ಕೆ ಲಕ್ಷಾಂತರ ಟನ್ನುಗಳಷ್ಟು ಮೀನು, ಶೆಲ್‍ಫಿಶ್‌ ಹಿಡಿಯಲಾಗುತ್ತದೆ. ಮೀನುಗಾರಿಕೆಗೆ ಸ್ವಯಂ ಕಡಿವಾಣವಿರಬೇಕು. ದುರ್ದೈವವೆಂದರೆ, ಈಗಾಗಲೇ ಸಾಗರಗಳಿಂದ ಶೇಕಡ 90ರಷ್ಟು ದೈತ್ಯ ಮೀನುಗಳು ಮಾಯವಾಗಿವೆ! ನಾವು ಶಾಖಾಹಾರಿಗಳಾಗಿರಲೀ ಮಾಂಸಾಹಾರಿಗಳಾಗಿರಲೀ ಸಮುದ್ರ ತೀರಪ್ರದೇಶಗಳ ನಿವಾಸಿಗಳಾಗಿರಲೀ ಅಲ್ಲದಿರಲೀ ಸಾಗರಗಳ ವೈವಿಧ್ಯ ಮತ್ತು ಉತ್ಪಾದಕತೆಯು ಜಾಗತಿಕ ಆರ್ಥಿಕ ಸುಸ್ಥಿತಿಯ ದೃಷ್ಟಿಯಲ್ಲಿ ಮುಖ್ಯ ಸಂಗತಿಯಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT