ಮಂಗಳವಾರ, ಅಕ್ಟೋಬರ್ 26, 2021
21 °C
ಗಾಂಧೀಜಿ ಕಂಡ ಕನಸಿನ ಭಾರತ ಅವರ ಮೂಲ ಶಿಕ್ಷಣದ ಪರಿಕಲ್ಪನೆ ಆಧರಿಸಿದ್ದು

ಸಂಗತ| ಬಾಪೂ, ಒಮ್ಮೆ ಶಾಲೆಗೆ ಬನ್ನಿ...

ಬಿ.ಎಸ್. ಭಗವಾನ್ Updated:

ಅಕ್ಷರ ಗಾತ್ರ : | |

Prajavani

ನಿವೃತ್ತ ಐಎಎಸ್ ಅಧಿಕಾರಿಯೊಬ್ಬರೊಂದಿಗೆ ಇತ್ತೀಚೆಗೆ ಮಾತಿಗಿಳಿಯುವ ಅವಕಾಶ ಒದಗಿತು. ‘ನಿಮಗೆ ಕುದುರೆ ಸವಾರಿ, ಗೋಡೆ ಹಾರುವುದು, ಜಿಗಿಯುವುದು, ಇಟ್ಟಿಗೆ ತಯಾರಿಸುವುದು, ಬ್ರೆಡ್ ತಯಾರಿ, ಬೈಕ್ ರಿಪೇರಿ... ಇಂಥದ್ದಕ್ಕೆಲ್ಲ ತರಬೇತಿ ಕೊಡುತ್ತಾರಂತೆ ಹೌದೇ ಸಾರ್’ ಅಂತ ಕೇಳಿದೆ. ಅವರು ‘ನಿಜ, ಏಕಾಏಕಿ ಜಿಲ್ಲೆಯ ಉನ್ನತಾಧಿಕಾರ ವಹಿಸಿಕೊಂಡ ಮಾತ್ರಕ್ಕೆ ಗಾಡಿ ಹೊಡೆಯುವವರ, ಧಾನ್ಯ ಒಕ್ಕುವವರ, ಇಟ್ಟಿಗೆ ಸುಡುವವರ, ಬಾವಿ ತೋಡುವವರ ಕಷ್ಟ, ಪರಿಶ್ರಮ ಅರ್ಥವಾದೀತೆ? ಒಂದು ವೇಳೆ ನಮಗೆ ಶಾಲಾ ಕಾಲೇಜಿನಲ್ಲಿ ಅವನ್ನು ಹೇಳಿಕೊಟ್ಟಿದ್ದಿದ್ದರೆ ಅಂಥ ತರಬೇತಿಯ ಅಗತ್ಯವೇ ಇರುತ್ತಿರಲಿಲ್ಲ ನೋಡಿ’ ಎಂದು ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಎಂತಹ ಮೌಲಿಕ ಅಭಿಪ್ರಾಯವಿದು. ಒಳಿತು- ಕೆಡುಕುಗಳ, ಸತ್ಯಾಸತ್ಯಗಳ, ರುಚಿ-ಅರುಚಿಗಳ ನಡುವಿನ ಭೇದ ತಿಳಿಸದ ಶಿಕ್ಷಣ ನಿರರ್ಥಕ ಎಂದರು ಮಹಾತ್ಮ ಗಾಂಧಿ. ಶಿಕ್ಷಣ ಕುರಿತ ಅವರ ಚಿಂತನೆಗಳು ಸಾರ್ವಕಾಲಿಕ. ಗಾಂಧೀಜಿ ಕಂಡ ಕನಸಿನ ಭಾರತವು ಅವರ ಮೂಲ ಶಿಕ್ಷಣದ ಪರಿಕಲ್ಪನೆ ಆಧರಿಸಿದ್ದು. ಶಿಕ್ಷಣದಲ್ಲಿ ಮಕ್ಕಳ ಸ್ವಾಭಾವಿಕ ಪ್ರವೃತ್ತಿ ಯೊಂದಿಗೆ ಆದರ್ಶವಾದ ಮತ್ತು ವ್ಯಾವಹಾರಿಕತೆ ಬೆಸೆದಿರಬೇಕೆಂದು ಅವರು ಆಶಿಸಿದರು.

ವೃತ್ತಿಪರ ಶಿಕ್ಷಣ ಕ್ರಮಕ್ಕೆ ಗಾಂಧೀಜಿ ವಿಶೇಷ ಒತ್ತು ನೀಡಿದರು. ಸಾಂಕೇತಿಕವಾಗಿ ನೂಲುವುದು, ನೇಯ್ಗೆ ರಾಷ್ಟ್ರೀಯ ಶಿಕ್ಷಣದ ಅಂಗವಾಗಬೇಕೆಂದು ಹಂಬಲಿಸಿದರು. ಮರಗೆಲಸ, ಟೈಲರಿಂಗ್, ಕಟ್ಟಡ ಕಾಮಗಾರಿ, ಕುಂಬಾರಿಕೆ, ಪುಸ್ತಕ ಬೈಂಡಿಂಗ್, ಅಡುಗೆ, ತೋಟಗಾರಿಕೆ... ಹೀಗೆ ಒಂದಲ್ಲೊಂದು ಕಾಯಕವನ್ನು ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಕಲಿಸದಿದ್ದರೆ ಶಿಕ್ಷಣ ಕೇವಲ ಗಿಳಿಯೋದು. ಅಂಕಗಳಿಗಾಗಿ ಮಕ್ಕಳಿಗೆ ಉರು ಹೊಡೆಸಿದರೆ ಅವರಲ್ಲಿ ಕಲಿಕೆಯ ಉತ್ಸಾಹದ ಕಾರಂಜಿಯೇ ಬತ್ತುವುದು. ಮಾಹಿತಿ, ಅಂಕಿ ಅಂಶಗಳನ್ನು ಒಂದು ಯಂತ್ರವೂ ಕಲೆ ಹಾಕಬಲ್ಲದು! ಆದರೆ ಪ್ರಾಯೋಗಿಕ ಜ್ಞಾನ, ವಿವೇಕ? ಓದು, ಬರಹಗಳಾಚೆಗೆ ಅವಕ್ಕೆ ಸಂಬಂಧಿಸಿದ
ಕಾರ್ಯ, ಕಸುಬು ರೂಢಿಸಿಕೊಂಡಲ್ಲಿ ಅನುಕರಣಪಟುತ್ವಕ್ಕೆ ಶರಣಾಗದೆ ಮಕ್ಕಳು ತಮ್ಮದೇ ವ್ಯಕ್ತಿತ್ವ ಹೊಂದುವರು.

ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸುವಲ್ಲಿ ಶಿಕ್ಷಣ ಸೋಲಲು ಕಾರಣ ವಿಜ್ಞಾನ, ತಂತ್ರಜ್ಞಾನದ ಅತಿ ಅವಲಂಬನೆ. ಅದಕ್ಕೂ ಹೆಚ್ಚಾಗಿ ಶಿಕ್ಷಣವನ್ನು ಕೈಭರ್ತಿ ಸಂಬಳ, ಸಂಪತ್ತು ಅರ್ಜನೆ, ಸವಲತ್ತುಗಳಿಗೇ ಸೀಮಿತಗೊಳಿಸುವ ಸಂಕುಚಿತ ಪ್ರವೃತ್ತಿ. ಅದಕ್ಕಾಗಿಯೇ ಗಾಂಧೀಜಿ ‘ಕೈ, ಹೃದಯ, ಮಿದುಳನ್ನು ಆರೋಗ್ಯಯುತವಾಗಿ ಅಣಿಗೊಳಿಸುವುದೇ ಶಿಕ್ಷಣ’ ಅಂತ ನಿರ್ವಚಿಸಿದರು. ದೈಹಿಕ ಪರಿಶ್ರಮ ಬೌದ್ಧಿಕ ಬೆಳವಣಿಗೆಗೂ ಪೂರಕ. ‘ಗಳಿಕೆಯೊಂದಿಗೆ ಕಲಿಕೆ’ ಮೂಲಕ ದೈಹಿಕ ಪರಿಶ್ರಮದ ಮಹತ್ವವನ್ನು ಮಕ್ಕಳಲ್ಲಿ ಜಾಗೃತಗೊಳಿಸಬೇಕು.

ಮಾತೃಭಾಷೆಯ ಮೂಲಕವೇ ಮಕ್ಕಳಿಗೆ ಶಿಕ್ಷಣ ಇರದಿದ್ದರೆ ಅದು ನಿಸ್ಸಂದೇಹವಾಗಿ ಅವರಿಗೆ ಹೊರೆಯೇ ಹೌದು. ಕಲಿಯಬೇಕಾದ್ದು ಭಾಷೆಯನ್ನೋ ವಿಷಯವನ್ನೋ ಎನ್ನುವ ಗೊಂದಲದಲ್ಲಿ ಮಗುವನ್ನು ಸಿಲುಕಿಸಬಾರದು.

ಅಧ್ಯಾಪಕರಲ್ಲಿ ಮಿತಿಮೀರಿದ ಇಂಗ್ಲಿಷ್ ವ್ಯಾಮೋಹವಿದ್ದರೆ ಕನ್ನಡದ ಮಕ್ಕಳಿಗೆ ಏನು ಬೇಕು, ಅವರಿಗೆ ಏನನ್ನು, ಹೇಗೆ ವಿವರಿಸಬೇಕು ಎನ್ನುವುದರ ಸಂಪೂರ್ಣ ಅರಿವಿರುವ ಸಂದರ್ಭಗಳು ಬಹುತೇಕ ವಿರಳವೆನ್ನಿ. ಅಂದಹಾಗೆ ನೊಬೆಲ್ ಪ್ರಶಸ್ತಿ ಪಡೆದ ಅದೆಷ್ಟೋ ಸಾಧಕರಿಗೆ ಇಂಗ್ಲಿಷ್ ತಿಳಿಯದು. ಒಬ್ಬರ ಮಾತೃಭಾಷೆ ಯಾವುದೇ ಕಾರಣಕ್ಕೂ ಎಂತಹದ್ದೇ ಸನ್ನಿವೇಶಕ್ಕೂ ಸಂಪರ್ಕಕ್ಕೆ ಬಲಹೀನವಾಗದು. ಗಾಂಧೀಜಿ ತಮ್ಮ 76ನೇ ಇಳಿವಯಸ್ಸಿನಲ್ಲೂ ಬಂಗಾಲಿ ಕಲಿತಿದ್ದು ಅವರ ಲವಲವಿಕೆಗೆ, ಪರಭಾಷಾ ಸಹಿಷ್ಣುತೆಗೆ ಸಾಕ್ಷಿ.

ಇಸವಿ 1897. ದಕ್ಷಿಣ ಆಫ್ರಿಕಾದ ಡರ್ಬನ್. ಗಾಂಧೀಜಿಗೆ ತಮ್ಮ ಒಂಬತ್ತು ವರ್ಷ ಮತ್ತು ಐದು ವರ್ಷದ ಪುತ್ರರನ್ನು ಹಾಗೂ ತಮ್ಮ ಸಹೋದರಿಯ ಹತ್ತು ವರ್ಷದ ಪುತ್ರನನ್ನು ಅಲ್ಲಿನ ವಸತಿಶಾಲೆಗೆ ಕಳಿಸಲು ಮನಸ್ಸಾಗಲಿಲ್ಲ. ಸಮಯದ ಅಭಾವದ ನಡುವೆಯೂ ಮನೆಯಲ್ಲಿ ತಾವೇ ಬೋಧಿಸಲು ನಿರ್ಧರಿಸುತ್ತಾರೆ. ಆಗಲೇ ಅವರಿಗೆ ದಕ್ಷ ಬೋಧನೆ ಯೆಂದರೆ ಮಕ್ಕಳ ಸಾಮರ್ಥ್ಯ ಪ್ರಚೋದನೆ ಎಂಬ ತಥ್ಯ ಅನುಭವವಾಗಿದ್ದು.

ಪುಸ್ತಕದಲ್ಲಿ ತಲೆಯೆತ್ತದೆ ತನ್ಮಯರಾದರೆ ವಿದ್ಯಾರ್ಥಿಗಳಲ್ಲಿ ಸತ್ಯ, ಅಹಿಂಸೆ, ಪರೋಪಕಾರ ದಂತಹ ನೈತಿಕ ಮೌಲ್ಯಗಳು ಮೈದಳೆಯುವುದು ಎಂತು? ಧೈರ್ಯ, ಆತ್ಮವಿಶ್ವಾಸವಿಲ್ಲದ ಕಲಿಕೆ ಯನ್ನು ಗಾಂಧೀಜಿ ಮೇಣದ ಮೂರ್ತಿಗೆ ಹೋಲಿಸುತ್ತಾರೆ. ಬಿಸಿ ತಾಗಿದರೆ ಮೂರ್ತಿ ಕರಗಿ ಬಿಡುತ್ತದೆ! ಒಮ್ಮೆ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ತಮ್ಮ ಭಾಷಣದ ಕೊನೆಯಲ್ಲಿ ಗಾಂಧೀಜಿ ಕಿವಿಮಾತಿದು: ‘ನೀವು ಕಲಿತಿದ್ದು ಸುತ್ತ ಮುತ್ತಲನ್ನು ಪರಿಮಳಯುಕ್ತಗೊಳಿಸಲಿ. ನೀವು ಪ್ರತಿನಿತ್ಯ ನಿಮ್ಮ ಅಷ್ಟು ಸಮಯ ಜನಸೇವೆಗೆ ಮೀಸಲಿಡಿ. ಸದಾ ಸಾಮಾಜಿಕ ಎಚ್ಚರವಿರಲಿ. ಪೊರಕೆ, ಬುಟ್ಟಿ ಹಿಡಿಯಿರಿ. ಈ ಪವಿತ್ರ ಸ್ಥಳದ ಜಾಡಮಾಲಿಗಳಾಗಿ...’

ಕವಿ ಪು.ತಿ.ನ ತಮ್ಮ ‘ನೆರಳು’ ಕವನದಲ್ಲಿ ಗಾಂಧಿ ಅವರನ್ನು ಬಿಂಬಿಸುವ ಪರಿ ವಿಶಿಷ್ಟವಾಗಿದೆ. ಹಾರುವ ಗರುಡನನ್ನು ಬಣ್ಣಿಸುತ್ತ ಕವಿ ಕೊನೇ ಸಾಲಿನಲ್ಲಿ ಅಚ್ಚರಿ ಮೂಡಿಸುತ್ತಾರೆ: ‘ಇದ ನೋಡಿ ನಾನು ನೆನೆವೆನಿಂದು.../ಇಂಥ ನೆಳಲೇನು ಗಾಂಧಿಯೆಂದು!/ಹರಿವತ್ತ ಹರಿಚಿತ್ತ ಈ ಧೀರ ನಡೆವನತ್ತ//’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು