ಮಹಾತ್ಮ ಗಾಂಧೀಜಿ ಅವರ ಅಹಿಂಸೆ ಮತ್ತು ಸತ್ಯಾಗ್ರಹ ಹೋರಾಟದ ಮಾದರಿ ವರ್ತಮಾನದಲ್ಲಿಯೂ ಪುನರಾವರ್ತನೆ ಆಗುತ್ತಿರುವುದಕ್ಕೆ ಹೊಸ ನಿದರ್ಶನ, ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಸರ ಮಾಲಿನ್ಯವನ್ನು ವಿರೋಧಿಸಿ ನಡೆಯುತ್ತಿರುವ ಚಳವಳಿ.

ಬಿಸಿಲುನಾಡು ಎನಿಸಿರುವ ಕೊಪ್ಪಳ ಜಿಲ್ಲೆ ನೆಲ–ಜಲದ ವಿಷಯದಲ್ಲಿ ಸಂಪದ್ಭರಿತವಾದರೂ, ಆ ಸಂಪತ್ತೇ ಈಗ ಮುಳುವಾಗುತ್ತಿದೆ. ಹೇರಳವಾಗಿ ಲಭ್ಯವಿರುವ ತುಂಗಭದ್ರಾ ಜಲಾಶಯದ ನೀರು ಮಲಿನವಾಗಿದೆ. ಎರಡು ಮೂರು ದಶಕಗಳ ಹಿಂದೆ ಜಿದ್ದಿಗೆ ಬಿದ್ದಂತೆ ಆರಂಭವಾದ ಕಾರ್ಖಾನೆಗಳು ಈಗ ಕೊಪ್ಪಳ ಹಾಗೂ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ಜನರ ಬದುಕನ್ನು ದುರ್ಬರಗೊಳಿಸಿವೆ. ಕಾರ್ಖಾನೆಗಳು ಹೊರಸೂಸುತ್ತಿರುವ ಕಲುಷಿತ ಕಪ್ಪು ಕಣಗಳ ದೂಳಿನಿಂದಾಗಿ ಜನ ತತ್ತರಿಸಿದ್ದಾರೆ. ಇದರ ಕಾವು ಜಿಲ್ಲಾ ಕೇಂದ್ರದ ಜನರಿಗೂ ತಟ್ಟಿದೆ. ಕೈಗಾರಿಕೆಗಳು ಬಂದರೆ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ, ಜಿಲ್ಲೆಯೂ ಅಭಿವೃದ್ಧಿಯಾಗುತ್ತದೆ ಎನ್ನುವುದು ಜನರ ನಿರೀಕ್ಷೆಯಾಗಿತ್ತು. ಕೈಗಾರಿಕೆಗಳಿಂದ ಸ್ಥಳೀಯರಿಗೆ ಒಂದಷ್ಟು ಉದ್ಯೋಗ ಸಿಕ್ಕಿರುವುದೂ ನಿಜ. ಆದರೆ, ಕಲುಷಿತ ದೂಳಿನಿಂದಾಗಿ ಜನರ ಆರೋಗ್ಯದ ಮೇಲೆ ಆದ ಗಂಭೀರ ಪರಿಣಾಮಕ್ಕೆ, ತೆತ್ತ ಬೆಲೆಗೆ ಲೆಕ್ಕವಿಲ್ಲ.

ಕೊಪ್ಪಳ ತಾಲ್ಲೂಕಿನ ಹಾಲವರ್ತಿ, ಕುಣಿಕೇರಿ, ಅಲ್ಲಾನಗರ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ, ಹೀಗೆ ಅನೇಕ ಗ್ರಾಮಗಳ ರೈತರು ಸ್ವಂತ ಭೂಮಿಯಿದ್ದರೂ ಉಳುಮೆ ಮಾಡಲಾಗದ ಸ್ಥಿತಿಯಿದೆ. 2024ರಲ್ಲಿ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಕಾರ್ಖಾನೆಗಳಿಂದ ಬಾಧಿತವಾದ ಗ್ರಾಮಗಳಲ್ಲಿ ಅಧ್ಯಯನ ನಡೆಸಿ, ಕೈಗಾರಿಕೆಗಳ ಕಪ್ಪು ದೂಳು ಎಲೆಗಳ ಮೇಲೆ ಬೀಳುವುದರಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆ ಕುಂಠಿತವಾಗಿ, ಉತ್ಪಾದನೆ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿಯೇ ಸಣ್ಣ, ಮಧ್ಯಮ ಮತ್ತು ಬೃಹತ್ ಗಾತ್ರದ 202 ಕೈಗಾರಿಕೆಗಳಿವೆ. ಬೃಹತ್ ಕೈಗಾರಿಕೆಗಳಲ್ಲಿ 20ಕ್ಕೂ ಹೆಚ್ಚು ಕೈಗಾರಿಕೆಗಳು ಉಕ್ಕು ತಯಾರಿಸುತ್ತವೆ. ಅವುಗಳಿಂದ ಬರುವ ಕಪ್ಪು ದೂಳು ಜನರ ಬದುಕು ಮಬ್ಬಾಗಿಸಿದೆ. ಬಾಧಿತ ಊರುಗಳ ಜೊತೆ ಹೊಸ ಸಂಬಂಧ ಬೆಸೆಯಲು ಜನ ಹಿಂದೇಟು ಹಾಕುವಂತಾಗಿದೆ. ಈಗಿರುವ ಪರಿಸರ ಮಾಲಿನ್ಯದ ಸಮಸ್ಯೆಗಳು ಜನರಿಗೆ ನುಂಗಲಾಗದೆ, ಉಗುಳಲೂ ಆಗದೇ ಕಲುಷಿತ ಗಾಳಿಯಲ್ಲಿ ಏದುಸಿರು ಬಿಡುವಂತಾಗಿದೆ. ಈ ಎಲ್ಲ ಸಂಕಷ್ಟಗಳ ನಡುವೆ ಈಗಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ ಹಾಗೂ ಎಕ್ಸ್ಇಂಡಿಯಾ ಸೇರಿದಂತೆ ಕೆಲವು ಕಾರ್ಖಾನೆಗಳು ನೂರಾರು ಎಕರೆ ಪ್ರದೇಶದಲ್ಲಿ ವಿಸ್ತರಣೆಗೆ ಮುಂದಾಗಿದ್ದು, ಜನರ ಏದುಸಿರು ಹೆಚ್ಚಾಗುವಂತೆ ಮಾಡಿವೆ.

ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆಯಿಂದ ಅನಿರ್ದಿಷ್ಟ ಧರಣಿ ಆರಂಭವಾಗಿದೆ. ಈ ಬೇಡಿಕೆ ಈಡೇರಿಕೆಗೆ ಕೊಪ್ಪಳ ಬಂದ್ ಸೇರಿದಂತೆ ಅನೇಕ ಹೋರಾಟಗಳು ಈ ಮೊದಲು ನಡೆದಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ, ಹೋರಾಟಗಾರರು ಈ ಬಾರಿ ‘ಗಾಂಧಿ ಮಾರ್ಗ’ದ ಮೊರೆ ಹೋಗಿದ್ದಾರೆ. ನಿವೃತ್ತ ಉಪನ್ಯಾಸಕರು ಹಾಗೂ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಕೊಂಡವರು ಸೇರಿ ಆರಂಭಿಸಿದ ಧರಣಿ ಈಗ ಸಮಾಜಮುಖಿಯಾಗಿ ಪರಿವರ್ತನೆ ಹೊಂದಿದೆ.

ಸರಳತೆ ಹಾಗೂ ಅಹಿಂಸಾ ತತ್ತ್ವವನ್ನು ನಂಬಿಕೊಂಡು ನಿತ್ಯ ಒಂದೊಂದು ಸಂಘಟನೆಗಳು ಧರಣಿಯನ್ನು ಬೆಂಬಲಿಸುತ್ತಿವೆ. ಸಾಮಾಜಿಕ ಪ್ರಜ್ಞೆಯುಳ್ಳವರು ಕುಟುಂಬ ಸಮೇತ ಬಂದು ಹೋರಾಟದಲ್ಲಿ ತೊಡಗಿಕೊಂಡರೆ, ಸಾಹಿತಿಗಳು, ಕವಿಗಳು ಧರಣಿ ವೇದಿಕೆಯಲ್ಲಿ ಕವನ ವಾಚಿಸಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಉಪವಾಸ, ಮೌನವ್ರತ ಕೈಗೊಂಡಿದ್ದಾರೆ. ಅಹಿಂಸಾಮಾರ್ಗವೊಂದನ್ನೇ ಅಸ್ತ್ರವನ್ನಾಗಿಸಿಕೊಂಡು ಕಾರ್ಖಾನೆಗಳ ವಿರುದ್ಧದ ಹೋರಾಟವನ್ನು ಜನರ ಶಾಂತ ರೀತಿಯ ಹೋರಾಟವನ್ನಾಗಿ ರೂಪಿಸಲಾಗಿದೆ. ವಿಶೇಷವೆಂದರೆ, ಜನಸಾಮಾನ್ಯರು ಕೂಡ ಹೋರಾಟಕ್ಕೆ ಸಮಯ
ಮೀಸಲಿಡುತ್ತಿದ್ದಾರೆ. ಹೋರಾಟ ಬೆಂಬಲಿಸಿ ಧರಣಿ ವೇದಿಕೆಯಲ್ಲಿ ಹೋರಾಟಗಾರರ ಜೊತೆಯಾಗಲು ಸಂಘ–ಸಂಸ್ಥೆಗಳು, ಸಮುದಾಯಗಳ ಮುಖಂಡರು, ಹಿರಿಯ ನಾಗರಿಕರು, ಯುವಕರು, ಮಹಿಳೆಯರು, ವಯೋವೃದ್ಧರು ಮುಂಗಡವಾಗಿ ಸರತಿಯಲ್ಲಿ ಹೆಸರು ನೋಂದಾಯಿಸುವ ಮೂಲಕ ಚಳವಳಿಗೆ ಹೊಸ ಆಯಾಮ ನೀಡುತ್ತಿದ್ದಾರೆ.

ಅನಿರ್ದಿಷ್ಟ ಹೋರಾಟ ಕೇವಲ ಕಾರ್ಖಾನೆಗಳ ವಿರುದ್ಧ ಮಾತ್ರವಲ್ಲ. ಸ್ವಚ್ಛ ಗಾಳಿ, ಪರಿಸರ, ನೀರು ಬೇಕು ಎನ್ನುವ ಬೇಡಿಕೆಗಳನ್ನೂ ಚಳವಳಿ ಒಳಗೊಂಡಿದೆ. ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳು ವಿಸ್ತರಣೆ ಆಗಬಾರದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ
ಕಾರ್ಖಾನೆಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಾಲಿನ್ಯದ ಪ್ರಮಾಣ ಕಡಿಮೆ ಮಾಡಬೇಕು; ಕೊಪ್ಪಳ ಹಾಗೂ ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳು ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎನ್ನುವುದು ‘ಗಾಂಧಿ ಮಾರ್ಗ’ದ ಹೋರಾಟದ ಧ್ಯೇಯವಾಗಿದೆ.

ಕಾರ್ಖಾನೆಗಳ ವಿಸ್ತರಣೆ ಬೇಡ ಎನ್ನುವ ಬೇಡಿಕೆ ಒಂದೆಡೆಯಾದರೆ, ಹತ್ತಾರು ವರ್ಷಗಳ ಹಿಂದೆಯೇ ಭೂಮಿ ಕಳೆದುಕೊಂಡು– ಅತ್ತ ಉದ್ಯೋಗವೂ ಇಲ್ಲದೆ, ಇತ್ತ ಕಾರ್ಖಾನೆಯಲ್ಲಿ ನೌಕರಿಯೂ ಇಲ್ಲದೆ ಅಡಕತ್ತರಿಯಲ್ಲಿ ಸಿಲುಕಿದ ಇನ್ನೊಂದು ವರ್ಗವೂ ಇದೆ. ಅವರ ಕೂಗು ಅರಣ್ಯರೋದನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.