ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಸ್ತ್ರ ಅನುಬಂಧ– ಮರುಬಳಕೆಗಿರಲಿ ಅವಕಾಶ

ವಸ್ತುಗಳ ಮರುಬಳಕೆಗೆ ಅವಕಾಶ ಕಲ್ಪಿಸುವುದು ಸಂಸ್ಕೃತಿಯಾಗಿ ಬೆಳೆಯಬೇಕು
Published 17 ಅಕ್ಟೋಬರ್ 2023, 23:16 IST
Last Updated 17 ಅಕ್ಟೋಬರ್ 2023, 23:16 IST
ಅಕ್ಷರ ಗಾತ್ರ

ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಖಾದಿ ಧೋತರವನ್ನೇ ಸೀರೆ ಮಾಡಿಕೊಂಡು ಅವರ ಮಗಳು ಮಣಿಬೆನ್ ಧರಿಸುತ್ತಿದ್ದರು. ಮಣಿಬೆನ್ ನೂತ ನೂಲಿನಿಂದಲೇ ಸಿದ್ಧವಾದ ಬಟ್ಟೆಯನ್ನು ಪಟೇಲರು ಧರಿಸುತ್ತಿದ್ದರು. ಪಟೇಲರು ಉಪಪ್ರಧಾನಿಯಾಗಿದ್ದಾಗಲೂ ತಂದೆ, ಮಗಳು ಈ ‘ವಸ್ತ್ರ ಅನುಬಂಧ’ವನ್ನು ಪಾಲಿಸುತ್ತಿದ್ದರು. ನಂದಿ ಬೆಟ್ಟದಲ್ಲಿ ವಿಶ್ರಾಂತಿಗಾಗಿ ತಂಗಿದ್ದ ಪಟೇಲರ ಜೊತೆಗಿದ್ದ ಮಣಿಬೆನ್ ಅವರಿಗೆ ರೇಷ್ಮೆ ಸೀರೆ ಉಡುಗೊರೆ ಕೊಡಲು ಅಭಿಮಾನಿಗಳು ಬಂದಿದ್ದರು. ತಮ್ಮ ಈ ಅನುಬಂಧವನ್ನು ವಿವರಿಸಿ ಅವರು ಉಡುಗೊರೆ ಪಡೆಯಲು ನಿರಾಕರಿಸಿದ್ದರು.

ಬಟ್ಟೆಬರೆ, ಪುಸ್ತಕ ಮರುಬಳಕೆಯ ಕುರಿತು ‘ಅಡ್ಡಗೋಡೆ ಮೆಟ್ಟಿನಿಲ್ಲಲಿ ಕರುಣೆಯ ಗೋಡೆ’ ಎಂಬ ಪತ್ರವನ್ನು (ವಾ.ವಾ., ಅ. 10) ಓದಿದಾಗ, ಪಟೇಲ್ ಅವರ ಮಗಳು ತಂದೆಯ ಧೋತರವನ್ನು ಮರುಬಳಕೆ ಮಾಡುತ್ತಿದ್ದ ಅಪರೂಪದ ಸಂಗತಿ ನೆನಪಾಯಿತು.

ತಮಗೆ ಬೇಡವಾದ ವಸ್ತುಗಳನ್ನು ಅವಶ್ಯವಿದ್ದವರಿಗೆ ವ್ಯವಸ್ಥಿತವಾಗಿ ತಲುಪಿಸುವುದು ಒಂದು ಒಳ್ಳೆಯ ಸೇವೆ. ಕೊಟ್ಟವರಿಗೆ ಭಾರವಾಗದ, ಪಡೆದುಕೊಂಡವರಿಗೆ ಬೆಳಕಾಗುವ ಕಾರ್ಯವಿದು. ಇದನ್ನು ಪ್ರೀತಿ, ಶ್ರದ್ಧೆಯಿಂದ ಮಾಡಬೇಕು. 60–70ರ ದಶಕದಲ್ಲಿ ನಾವು ವಿದ್ಯಾರ್ಥಿಗಳಾಗಿದ್ದಾಗ, ಉತ್ತೀರ್ಣರಾಗಿ ಮುಂದಿನ ಕ್ಲಾಸಿಗೆ ಹೋದವರ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳುತ್ತಿದ್ದೆವು. ಅವುಗಳಿಗೆ ಹೊಸ ಕವರ್‌ ತೊಡಿಸಿ, ಕಿತ್ತ ಪುಟಗಳಿಗೆ ಅಂಟು ಲೇಪಿಸಿ ಸರಿಪಡಿಸುತ್ತಿದ್ದೆವು. ಇವೇ ಪುಸ್ತಕಗಳನ್ನು ನಮ್ಮ ನಂತರ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ನಂತರ ಹಸ್ತಾಂತರಿಸುತ್ತಿದ್ದೆವು. ಒಂದು ಪಠ್ಯಪುಸ್ತಕ 5–6 ವರ್ಷ ಉಪಯೋಗ ಆಗುತ್ತಿತ್ತು. ಸರ್ಕಾರಿ ಶಾಲೆಗಳಲ್ಲಿ ಈ ಪದ್ಧತಿ ಸ್ವಲ್ಪಮಟ್ಟಿಗೆ ಈಗಲೂ ಜಾರಿಯಲ್ಲಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷ ಹೊಸ ಪುಸ್ತಕ ಪೂರೈಸುತ್ತಿವೆ.

ವಸ್ತುಗಳ ಮರುಬಳಕೆಯನ್ನು ಆರ್ಥಿಕ ಉಳಿತಾಯದ ದೃಷ್ಟಿಯಿಂದಲೂ ನೋಡುವುದು ಬಹಳ ಮುಖ್ಯ. ಉಚಿತವಾಗಿ ಸಿಗುವ ಹಳೆಯ ವಸ್ತುಗಳನ್ನು ಅಗತ್ಯ ಎಂದು ಪರಿಗಣಿಸಿ ಪಡೆದವರಿಗೆ ದೊಡ್ಡ ಊರುಗೋಲು. ಹೊಸ ವಸ್ತುಗಳನ್ನು ಕೊಳ್ಳಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ ಅವರು ಪರಿತಪಿಸಬೇಕಾಗುತ್ತದೆ. ತಮಗೆ ಉಪಯೋಗವಿಲ್ಲದ ವಸ್ತುವನ್ನು ಅಗತ್ಯ ಇರುವವರಿಗೆ ಕೊಟ್ಟರೆ ಅವರ ಬದುಕು ಸುಗಮವಾಗುತ್ತದೆ.

ಪತ್ರಿಕೆ ಹಂಚುವ ಹುಡುಗನೊಬ್ಬನಿಗೆ ನನ್ನ ಸ್ನೇಹಿತರೊಬ್ಬರು ತಮ್ಮ ಹಳೆಯ ಸೈಕಲ್ ನೀಡಿದರು. ಈಗ ಅವನು ಖುಷಿಯಿಂದ ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ಶಿಕ್ಷಣ ಮುಂದುವರಿಸಿದ್ದಾನೆ.

ಪತ್ರಕರ್ತ ಪಿ.ಲಂಕೇಶ್ ತಮ್ಮ ‘ಸುಮ್ಮನೆ ಕಳೆದ ಒಂದು ದಿನ’ ಪ್ರಬಂಧದಲ್ಲಿ, ಶರ್ಟಿನ ಕಿತ್ತುಹೋದ ಗುಂಡಿಯನ್ನು ಮನೆಯಲ್ಲಿಯ ಸೂಜಿ ದಾರದಿಂದ ಸರಿಪಡಿಸಿ ಬಳಸತೊಡಗಿದ್ದನ್ನು ವಿವರಿಸಿದ್ದಾರೆ. ಪ್ರತಿ ಮನೆಯಲ್ಲಿ ಸೂಜಿ, ದಾರ, ಗುಂಡಿಗಳನ್ನು ಇಟ್ಟು
ಕೊಂಡಿರಬೇಕು ಎಂಬ ಸಲಹೆ ಬಹಳ ಉಪಯುಕ್ತವಾಗಿದೆ. ಮನೆಯಲ್ಲಿಯ ಬಟ್ಟೆಗಳನ್ನು ಸರಿಪಡಿಸಿ ಪುನಃ ಬಳಸುವಂತೆ ಸರಳವಾಗಿ ಮಾಡಬಹುದಾಗಿದೆ.

ಗ್ರಾಮೀಣ ಮಹಿಳೆಯರು ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಜೋಡಿಸಿ ಕೌದಿಗಳನ್ನು ಸಿದ್ಧಪಡಿಸುತ್ತಾರೆ. ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪು ನೀಡುವ ವಿಶೇಷ ಗುಣ ಕೌದಿಗೆ ಇದೆ. ಕೌದಿಯನ್ನು ಜನಪ್ರಿಯಗೊಳಿಸಿದರೆ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ದೊರೆಯುವುದು.

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಸಮಾಜ ಕಾರ್ಯಕರ್ತ ಕೆ.ಸುಗಪ್ಪ ಅವರು ಮುಖ್ಯಪೇಟೆಯ ಚೌಕದಲ್ಲಿ ದೊಡ್ಡ ಕಪಾಟು ಇರಿಸಿ, ಅದರಲ್ಲಿ ಸಾರ್ವಜನಿಕರು ತಮಗೆ ಅವಶ್ಯವಿರದ ಬಟ್ಟೆಗಳನ್ನು ಇಡಲು ವ್ಯವಸ್ಥೆ ಮಾಡಿದ್ದಾರೆ. ಅವಶ್ಯವಿದ್ದವರು ಈ ಬಟ್ಟೆಗಳನ್ನು ತೆಗೆದುಕೊಂಡು ಹೋಗಬಹುದು. ಇದರ ಉಸ್ತುವಾರಿಗೆ ಒಬ್ಬ ಕೆಲಸಗಾರನನ್ನು ನೇಮಕ ಮಾಡಿದ್ದಾರೆ. ಜಮಖಂಡಿ, ಮುಧೋಳದಂತಹ ಊರುಗಳಲ್ಲಿ ಬಟ್ಟೆ ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಿ, ಅವಶ್ಯ ಇರುವವರಿಗೆ ವಿತರಿಸುವ ಕೇಂದ್ರಗಳು ಕೆಲಸ ಮಾಡುತ್ತಿವೆ. ಇವು ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಬಹಳಷ್ಟು ಜನರಿಗೆ ನೆರವಾಗುವುದು.

ಹೀಗೆ ದೊರೆಯುವ ಬಟ್ಟೆಗಳನ್ನು ನೇರವಾಗಿ ಬಳಸದೆ, ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿ ಧರಿಸಬೇಕು. ಬಳಸುವ ಕಲೆ ತಿಳಿದಿದ್ದರೆ ಬಟ್ಟೆ ಎಂದೂ ಹಳೆಯದಾಗುವುದಿಲ್ಲ.

ಕೃಷಿ ಕಾರ್ಮಿಕರು ಬೆಳೆಗಳ ಮಧ್ಯೆ ನಿಂತು ಕೆಲಸ ಮಾಡುವಾಗ ಮೈತುಂಬಾ ಬಟ್ಟೆ ಧರಿಸುವುದು ಅವಶ್ಯವಾಗಿರುತ್ತದೆ. ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ತಿಂಗಳಲ್ಲಿ ಮೂರು– ನಾಲ್ಕು ಜೋಡಿ ಬಟ್ಟೆಗಳು ಬೇಕಾಗುತ್ತವೆ. ಇವರಲ್ಲಿ ಕೆಲವರು ಜನರಿಂದ ಬಟ್ಟೆಗಳನ್ನು ಸಂಗ್ರಹಿಸಿ ಅಥವಾ ಹಳೆಯ ಬಟ್ಟೆ ವ್ಯಾಪಾರಸ್ಥರಿಂದ ಖರೀದಿಸಿ ಬಳಸುತ್ತಾರೆ. ಸಕ್ಕರೆ ಕಾರ್ಖಾನೆಗಳು ಈ ವಿಷಯದಲ್ಲಿ ಕಾರ್ಮಿಕರಿಗೆ ಆಸರೆಯಾಗಿ ನಿಲ್ಲಬೇಕು.

ಭೂದಾನ ಚಳವಳಿಯ ಪ್ರವರ್ತಕ ವಿನೋಬಾ ಭಾವೆ ಅವರು ತಾಯಿ ಧರಿಸುತ್ತಿದ್ದ ಸೀರೆಯನ್ನು ಸದಾ ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಈ ಸೀರೆ ಅಮ್ಮ ಜೊತೆಗಿದ್ದ ಅನುಭವ ಕೊಡುತ್ತದೆ ಎಂದು ಅವರು ಹೇಳುತ್ತಿದ್ದರು. ಬಟ್ಟೆಯೊಂದಿಗೆ ಭಾವನಾತ್ಮಕ ಬೆಸುಗೆ ಕೂಡ ಇರುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ.

ತಮಗೆ ಅವಶ್ಯವಿರದ ವಸ್ತುಗಳನ್ನು ತಮ್ಮ ಮನೆಯ ಮುಂದೆ ಇಡುವುದು, ಅವಶ್ಯವಿದ್ದವರು ತೆಗೆದುಕೊಂಡು ಹೋಗುವುದು ಜರ್ಮನ್ ದೇಶದಲ್ಲಿ ಒಂದು ಸಂಸ್ಕೃತಿಯಾಗಿ ರೂಪುಗೊಂಡಿದೆ. ಅಲ್ಲಿ ಎಲ್ಲರ ಮನೆಗಳ ಮುಂದೆ ತಮಗೆ ಅವಶ್ಯವಿಲ್ಲದ ವಸ್ತುಗಳನ್ನು ಇಟ್ಟಿರುವ ಚಿತ್ರವನ್ನು ಕಾಣಬಹುದು. ನಮ್ಮಲ್ಲಿಯೂ ವಸ್ತುಗಳ ಮರುಬಳಕೆಗೆ ಅವಕಾಶ ಕಲ್ಪಿಸುವುದು ಒಂದು ಸಂಸ್ಕೃತಿಯಾಗಿ ಬೆಳೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT