ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬದಲಾಗಬೇಕಿದೆ ನೌಕರರ ಮನೋಭಾವ

ನೊಂದವರಿಗೆ ತ್ವರಿತವಾಗಿ ನ್ಯಾಯ ಒದಗಿಸುವ ಪರಿಪಾಟವು ನೌಕರರ ಸೇವಾ ನಿಯಮವಾದಲ್ಲಿ ಜನರಿಗೂ ಸರ್ಕಾರಿ ಕಚೇರಿಗಳ ಮೇಲೆ ಪ್ರೀತಿ ಹುಟ್ಟುತ್ತದೆ
Last Updated 16 ಜುಲೈ 2021, 19:31 IST
ಅಕ್ಷರ ಗಾತ್ರ

ಹೆದ್ದಾರಿಯ ವಿಸ್ತರಣೆ ಕಾರ್ಯ ನಡೆಯುತ್ತಿತ್ತು. ಚತುಷ್ಪಥ ರಸ್ತೆಗಾಗಿ ಎರಡೂ ಬದಿಗಳನ್ನು ಅಗಲವಾಗಿಸಲು ದೈತ್ಯ ಯಂತ್ರಗಳು ಮನೆಗಳನ್ನು, ಮರಗಳನ್ನು ಕತ್ತರಿಸಿ ಹಾಕುತ್ತ ಹೋಗುತ್ತಿದ್ದವು.

ಆ ವೇಳೆ, ಜಿಲ್ಲಾಧಿಕಾರಿಯೊಬ್ಬರು ಅದೇ ದಾರಿಯಲ್ಲಿ ಹೋಗುವಾಗ ಒಂದು ಮನೆಯ ದೃಶ್ಯವನ್ನು ನೋಡಿದರು. ಗುಡ್ಡದ ಅಂಚಿನಲ್ಲಿನ ಆ ಮನೆಯ ತಳಪಾಯದ ತನಕವೂ ಕತ್ತರಿಸಿ ಸಮತಟ್ಟು ಮಾಡಲಾಗಿದೆ. ಹದಿನೈದು ಅಡಿ ಎತ್ತರದಲ್ಲಿರುವ ಮನೆಗೆ ಹೋಗಲು ದಾರಿಯೇ ಇರಲಿಲ್ಲ. ಜಿಲ್ಲಾಧಿಕಾರಿ ಕಾರು ನಿಲ್ಲಿಸಿ, ರಸ್ತೆಯ ಬಳಿ ಕಂಬನಿ ತುಂಬಿಕೊಂಡು ನಿಂತಿದ್ದ ಮಹಿಳೆಯನ್ನು ‘ಏನಮ್ಮ, ಮನೆ ನಿನ್ನದೇನಾ?’ ಎಂದು ಕೇಳಿದರು. ‘ಹೌದು ಸರ್, ಕಟ್ಟಿದ ಬೀಡಿ ಕೊಟ್ಟು ಬರಲು ಪೇಟೆಗೆ ಹೋಗಿದ್ದೆ. ಬರುವುದರೊಳಗೆ ಎಲ್ಲ ಕತ್ತರಿಸಿ ಹಾಕಿ ಹೋಗಿದ್ದಾರೆ. ನನ್ನ ಪಾತ್ರೆ ಪಡಗ ಎಲ್ಲ ಮನೆಯೊಳಗೇ ಇವೆ. ಒಳಗೆ ಹೋಗಲಿಕ್ಕೆ ದಾರಿಯೂ ಇಲ್ಲ’ ಎಂದಳು.

ಜಿಲ್ಲಾಧಿಕಾರಿ ತಮ್ಮ ಮೊಬೈಲಿನಲ್ಲಿ ಆ ಮನೆಯ ಚಿತ್ರ ತೆಗೆದರು. ಕಂದಾಯ ವಿಭಾಗದ ಎಲ್ಲ ಅಧಿಕಾರಿಗಳಿಗೂ ಕಳುಹಿಸಿ ತಕ್ಷಣ ಕ್ರಮ ಕೈಗೊಳ್ಳಲು ಹೇಳಿದರು. ಮರುದಿನ ಸಹಾಯಕ ಆಯುಕ್ತರು ಆ ಮಹಿಳೆಯನ್ನು ಹುಡುಕಿಕೊಂಡು ಬಂದರು. ರಸ್ತೆ ಗುತ್ತಿಗೆದಾರನನ್ನು ಕರೆಸಿದರು. ಮಹಿಳೆಗೆ ಮೂವತ್ತು ಲಕ್ಷ ರೂಪಾಯಿ ಪರಿಹಾರ ಕೊಡಿಸಿ, ಮನೆ ಕಟ್ಟಲು ಸರ್ಕಾರಿ ಜಾಗ ತೋರಿಸಿದರು. ಇನ್ನೇನು, ಆಕೆಯ ಹೊಸ ಮನೆ ಈಗ ಪ್ರವೇಶೋತ್ಸವಕ್ಕೆ ಸಿದ್ಧವಾಗಿದೆ.

ಮರುಭೂಮಿಯಲ್ಲಿ ಓಯಸಿಸ್ ಕಂಡ ಹಾಗೆ ಸಂತೋಷವಾಗುತ್ತಿದೆಯಲ್ಲ! ನೊಂದ ಮಹಿಳೆ ತನಗೆ ಅನ್ಯಾಯವಾಗಿದೆ ಎಂದು ಜಿಲ್ಲಾಧಿಕಾರಿಗೆ ಅರ್ಜಿ ಕೊಡುವುದು, ಅದು ತನಿಖೆಗಾಗಿ ತಹಶೀಲ್ದಾರರಲ್ಲಿಗೆ ಬರುವುದು, ಅಲ್ಲಿಂದ ಸಂಬಂಧಿಸಿದ ಒಬ್ಬೊಬ್ಬ ಅಧಿಕಾರಿಯ ಸನಿಹ ಬಂದು ಅರ್ಜಿಗೊಂದು ಉತ್ತರ ಸಿಗಲು ಕನಿಷ್ಠ ಆರು ತಿಂಗಳಾದರೂ ಬೇಕಾಗುತ್ತದೆ. ಸಂತ್ರಸ್ತರಿಗೆ ಪರಿಹಾರ ಸಿಗುವುದು ಆಮೇಲಿನ ಮಾತು. ಅಧಿಕಾರಿಯೊಬ್ಬ ಈ ಎಲ್ಲ ಆಚಾರಗಳನ್ನೂ ಬದಿಗೊತ್ತಿ ಶೀಘ್ರವಾಗಿ ನೊಂದವರ ಸಂಕಷ್ಟವನ್ನು ಗಮನಿಸಿ ನ್ಯಾಯ ಕೊಡಿಸಲು ಸಾಧ್ಯವಿದೆ ಎಂದು ಸಾಬೀತುಪಡಿಸಿದರೆ ಅಂತಹ ಅಧಿಕಾರಿ ಅಪರೂಪವಲ್ಲದೆ ಇನ್ನೇನು!

ಭಾರತ ಸ್ವತಂತ್ರವಾದ ಮೇಲೆ ಸರ್ಕಾರದ ನೌಕರ ರೆಲ್ಲರೂ ನಮ್ಮವರೇ ಎಂದು ಅಭಿಮಾನಪಟ್ಟೆವು. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದಾಗ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಘೋಷವಾಕ್ಯವನ್ನು ಕಚೇರಿಗಳಲ್ಲಿ ಬರೆಸಿಟ್ಟರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ರಾಶಿ ಬಿದ್ದ ಕಡತಗಳ ವಿಲೇವಾರಿ ಯಜ್ಞದ ಮೂಲಕ ವಿಳಂಬ ನೀತಿಯಲ್ಲಿ ಬದಲಾವಣೆ ತಂದರು. ಅವೆಲ್ಲವೂ ಇತಿಹಾಸವಾಗುತ್ತಿವೆ. ಯಾಕೆಂದರೆ ಸರ್ಕಾರಿ ಕಚೇರಿಗಳ ಅನುಭವ ಬಹುತೇಕ ಜನಸಾಮಾನ್ಯರಿಗೆ ಹಿತಸ್ಪರ್ಶ ನೀಡಿಲ್ಲ, ಸುಖಮಯವಾಗಿಲ್ಲ.

ಕೊರೊನಾ ಸಮಯದಲ್ಲಿ ಜನರ ಆರೋಗ್ಯ‌ ಸಂರಕ್ಷಣೆಗಾಗಿ ಪೊಲೀಸರು ಪಟ್ಟ ಶ್ರಮಕ್ಕಿಂತಲೂ ನಿರ್ಬಂಧಕಾಜ್ಞೆ ಉಲ್ಲಂಘಿಸಿದವರಿಗೆ ಹೊಡೆಯುವ ದೃಶ್ಯಗಳೇ ಮೇಲುಗೈ ಪಡೆದವು. ಯಾವುದೇ ಕೆಲಸಕ್ಕೆ ಆಯ್ಕೆಯಾಗಲು ವಿದ್ಯೆಯೇ ಅರ್ಹತೆಯಾಗುತ್ತದೆ ವಿನಾ ಕೆಲಸದಲ್ಲಿ ದಕ್ಷತೆ, ಸಾರ್ವಜನಿಕರೊಡನೆ ನಯ ವಿನಯದಿಂದ ವ್ಯವಹರಿಸುವುದು ಯೋಗ್ಯತೆಗಳಾಗಿ ಪರಿಗಣನೆಯಾಗದೆ ಹೋಗುವುದೇ ದುರ್ದೈವ.

ಕಾಲ ಆಧುನಿಕವಾಗುತ್ತಿದ್ದಂತೆ, ಹಿಂದಿನ ಕಾಲವೇ ಚೆನ್ನಾಗಿತ್ತು ಎಂದು ಎಲ್ಲರೂ ಅಂದುಕೊಳ್ಳುವ ಪರಿಸ್ಥಿತಿ ಯನ್ನು ಕಚೇರಿಗಳಲ್ಲಿ ಸಿಗುವ ಅನುಭವಗಳು ಕೂಡ ಹುಟ್ಟುಹಾಕುತ್ತಿವೆ. ಸರ್ಕಾರಿ ಬಸ್ಸುಗಳಲ್ಲಿ ‘ಹಿರಿಯ ನಾಗರಿಕರಿಗೆ’ ಎಂದು ಫಲಕವಿರುವ ಆಸನದಲ್ಲಿ ದೃಢಕಾಯ ಯುವಕನೊಬ್ಬ ಕುಳಿತಿದ್ದಾನೆ. ‘ಅಂಗ ವಿಕಲರು’ ಎಂದಿರುವಲ್ಲಿ ಸರ್ವಾಂಗ ಪರಿಪೂರ್ಣ ಹಾಯಾಗಿ ಆರೂಢನಾಗಿದ್ದಾನೆ. ಕಾಲಿಲ್ಲದ ವ್ಯಕ್ತಿಯೊಬ್ಬ ಕಂಬಿ ಹಿಡಿದು ನೇತಾಡುತ್ತಿದ್ದಾನೆ. ಯಾರಿಗೆ ಆ ಜಾಗ ಮೀಸಲಿದೆಯೋ ಅದನ್ನು ಕೊಡಿಸಬೇಕಾದ ನಿರ್ವಾ ಹಕ ತೆಪ್ಪಗೆ ಕುಳಿತಿರುವುದೆಂದರೆ ಅದು ಅವನ ಕರ್ತವ್ಯದ ನ್ಯೂನತೆಯೇ ಅಲ್ಲವೆ!

ಕಳೆದುಹೋದ ಕಾಲದ ಹಾಗೆ ಅಲ್ಲ. ಎಲ್ಲ ಕಚೇರಿಗಳಲ್ಲೂ ಗಣಕಯಂತ್ರಗಳಿವೆ. ನ್ಯಾಯ ಸಲ್ಲಿಕೆಗೆ ಕಾಯಬೇಕಿಲ್ಲ. ತೀವ್ರ ನೊಂದವನೂ ಕಡಿಮೆ ನೊಂದವನೂ ನ್ಯಾಯ ಪಡೆಯಬೇಕಿದ್ದರೆ ಶಾಸಕರೋ ಸಚಿವರೋ ಶಿಫಾರಸು ಮಾಡಬೇಕಾದಂತಹ ಹೀನಾಯ ಸ್ಥಿತಿ ಯಾಕಿರಬೇಕು? ಒಬ್ಬ ನೌಕರನಿರಲಿ, ಅಧಿಕಾರಿಯಿರಲಿ, ನೊಂದವನಿಗೆ ದಕ್ಷತೆಯಿಂದ ನ್ಯಾಯ ಒದಗಿಸಲು ತ್ವರಿತ ಕ್ರಮ ಕೈಗೊಳ್ಳುವ ಪರಿಪಾಟ ಆತನ ಸೇವಾ ನಿಯಮವಾದಲ್ಲಿ ಜನರಿಗೂ ಸರ್ಕಾರಿ ಕಚೇರಿಗಳ ಮೇಲೆ ಪ್ರೀತಿ ಹುಟ್ಟುತ್ತದೆ.

ರಾಷ್ಟ್ರೀಕೃತ ಬ್ಯಾಂಕಿಗೆ ಹೋದರೆ ನೌಕರರು ಮುಖ ನೋಡುವುದಿಲ್ಲ. ಖಾಸಗಿ ಬ್ಯಾಂಕ್ ಸಿಬ್ಬಂದಿಗೆ ಬರುವ ವೇತನ ಕಡಿಮೆ. ಆದರೆ ಅಲ್ಲಿ ಏನಿಲ್ಲದಿದ್ದರೂ ಸೌಜನ್ಯ ಮತ್ತು ಸೌಹಾರ್ದಕ್ಕೆ ಬರಗಾಲವಿಲ್ಲ. ಇನ್ನು ಕಂದಾಯ ಇಲಾಖೆ ಮತ್ತು ಸಾರಿಗೆ ಇಲಾಖೆಯ ಕೆಲಸಗಳೆ
ಲ್ಲವೂ ಮಧ್ಯವರ್ತಿಗಳ ಮೂಲಕವೇ ನಡೆಯುವಂತಹ ಕೆಟ್ಟ ಸ್ಥಿತಿ ಯಾವ ಚಿಕಿತ್ಸೆಗೂ ಮಣಿಯದಷ್ಟು ವ್ಯಾಪಕ ವಿಷಗ್ರಸ್ತವಾಗಿ ಬೆಳೆದಿದೆ.

ರಾಮರಾಜ್ಯದ ಬಗೆಗೆ ರಸವತ್ತಾಗಿ ವರ್ಣಿಸುತ್ತೇವೆ. ಆದರೆ ಭಾರತವು ಬ್ರಿಟಿಷ್ ದಬ್ಬಾಳಿಕೆಯಿಂದ ಮುಕ್ತ ಗೊಂಡು ಏಳು ದಶಕ ಕಳೆದರೂ ಕಚೇರಿಗಳಲ್ಲಿ ಅದೇ ದಬ್ಬಾಳಿಕೆ ಇದೆಯೆಂದರೆ ಏನರ್ಥ?! ರಾವಣ ರಾಜ್ಯದ ಭ್ರಮೆಯಲ್ಲಿರುವ ಸರ್ಕಾರಿ ಕಚೇರಿಯ ಅಧಿಕಾರಿಗೆ ‘ಮೊದಲು ಮಾನವನಾಗು’ ಎಂಬುದನ್ನು ಬೆರಳೆತ್ತಿ ತೋರಿಸುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT