ಮಂಗಳವಾರ, ಫೆಬ್ರವರಿ 7, 2023
27 °C
ತಿಂಗಳಿಗೊಮ್ಮೆ ಬ್ಯಾಗ್‌ರಹಿತ ದಿನವನ್ನಾಗಿ ಮಾಡುವ ನಿರ್ಧಾರವು ಶಾಲಾ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮೂಡಿಸಿದೆ

ಸಂಗತ: ಇದೋ ಬರಲಿದೆ ‘ಸಂಭ್ರಮ ಶನಿವಾರ’

ಸದಾಶಿವ್ ಸೊರಟೂರು Updated:

ಅಕ್ಷರ ಗಾತ್ರ : | |

ತರಗತಿಗೆ ಮೆಮೊ ಬಂದರೆ ಸಾಕು ಮಕ್ಕಳ ಕಣ್ಣಲ್ಲಿ‌ ಹೊಳಪು. ರಜೆ ಇರಬಹುದೇ ಎನ್ನುವ ಆಸೆ. ‘ನಾಳೆ ಒಂದು ಕಾರ್ಯಕ್ರಮ ಇದೆ ಸರಿಯಾದ ಸಮಯಕ್ಕೆ ಬನ್ನಿ’ ಅಂದರೆ ಮರುಕ್ಷಣದ ಅವರ ಪ್ರಶ್ನೆ ‘ಸಾರ್ ಬ್ಯಾಗ್ ತರಬೇಕಾ?’ ಅವರ ಆ ದನಿಯು ‘ಸಾರ್, ಈ ಬ್ಯಾಗಿನಿಂದ ಬಿಡುಗಡೆ ಎಂದು?’ ಅಂದಂತೆ ಕೇಳಿಸುತ್ತದೆ. ‘ಬ್ಯಾಗ್ ಬೇಡ ಹಾಗೆಯೇ ಬನ್ನಿ’ ಅಂದರೆ ಸಾಕು ಅವರ ಖುಷಿ ನೂರ್ಮಡಿಗೊಳ್ಳುತ್ತದೆ. ರಜೆ ಎಂದೇನಾದರೂ ಗೊತ್ತಾದರಂತೂ ಅವರ ಸಂಭ್ರಮಕ್ಕೆ ಎಲ್ಲೆಯೇ ಇರುವುದಿಲ್ಲ.

ಬೆಳಗ್ಗೆ ಶಾಲೆಗೆ ಬರುವಾಗ ಭಾರವಾದ ಬ್ಯಾಗ್ ಮತ್ತು ಕೆಲವರು ಭಾರವಾದ ಮನಸ್ಸಿನಿಂದಲೇ ಬಂದಿ ರುತ್ತಾರೆ. ಶಾಲೆಯ‌ ಅಂದಿನ ಕೊನೆಯ ಬೆಲ್ ಅವರ ಪಾಲಿನ ಇಂಪಾದ ಸಂಗೀತ. ಅವರ ಮುಖದಲ್ಲೊಂದು ಬಿಡುಗಡೆಯ ಭಾವ. ಕೆಲವು‌ ಮಕ್ಕಳಂತೂ ಶಾಲೆಯು ಅವರನ್ನು ಅಟ್ಟಿಸಿಕೊಂಡು ಬರುತ್ತಿದೆಯೇನೋ ಎಂಬಂತೆ ಶಾಲೆ ಬಿಟ್ಟ ತಕ್ಷಣ ಓಡುತ್ತಿರುತ್ತಾರೆ.

ಶಾಲೆಯೆಂದರೆ ಸಿಲೆಬಸ್, ಶಾಲೆಯೆಂದರೆ ನಿರಂತರ ಓದು-ಬರಹ, ಶಾಲೆಯೆಂದರೆ ಮಣಭಾರದ ಬ್ಯಾಗ್, ಶಾಲೆಯೆಂದರೆ ಪರೀಕ್ಷೆಗಳು-ನಿಯೋಜಿತ ಕಾರ್ಯಗಳು, ಶಾಲೆಯೆಂದರೆ ಅಂಕಗಳು, ಶಾಲೆಯೆಂದರೆ ಒಂದು ನೌಕರಿ ಹಿಡಿಯಲು ಸವೆಸಲೇಬೇಕಾದ ಅನಿವಾರ್ಯದ ಮಾರ್ಗ ಎಂಬಂತೆ ಬಿಂಬಿಸಿ ಸತತವಾಗಿ ಮಕ್ಕಳನ್ನು ಕಾಡುವುದರಿಂದ, ಅದರಿಂದ ಬಿಡುಗಡೆ ಪಡೆಯಲು ಮಕ್ಕಳು ಹಂಬಲಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಶಾಲೆಯಲ್ಲಿ ಇದಲ್ಲದೆ ಮತ್ತೇನೋ ಬೇಕಿರಬಹುದೇ? ಹಂತ ಹಂತವಾಗಿ ಅವರನ್ನು ಸುಸ್ತು ಮಾಡುತ್ತಿರುವ ಬ್ಯಾಗಿನ ಭಾರವನ್ನು ತುಸು ಕಡಿಮೆ ಮಾಡಿದರೆ ಸರಿಹೋದೀತೇ? ಮಕ್ಕಳು ಕಲಿಯುತ್ತಿರುವ ವಿಷಯವನ್ನು ತುಸು ಭಿನ್ನವಾದ ರೀತಿಯಲ್ಲಿ ಏನಾದರೂ ಕಲಿಸಬಹುದೇ ಎಂಬಂಥ ಪ್ರಶ್ನೆಗಳು ಮೂಡುತ್ತವೆ. ಅದಕ್ಕೆ ಉತ್ತರ ಎಂಬಂತೆ ತಿಂಗಳಲ್ಲಿ ಒಂದು ದಿನ ‘ಸಂಭ್ರಮ ಶನಿವಾರ’ ಅನ್ನುವ ಕಾರ್ಯಕ್ರಮ ರಾಜ್ಯ ಶಿಕ್ಷಣ ಇಲಾಖೆಯಿಂದ ಜಾರಿಯಾಗುತ್ತಿದೆ. ಅಂದು ಮಗು ಬ್ಯಾಗ್ ತರುವಂತಿಲ್ಲ.

ಮಕ್ಕಳ ಬ್ಯಾಗ್ ಭಾರ ಇಳಿಸುವ ಕಾರ್ಯಗಳು ಎಂದಿನಿಂದಲೂ ಜಾರಿಯಲ್ಲಿವೆ. ಕೇಂದ್ರ ಶಿಕ್ಷಣ ಸಚಿವಾಲಯವು ‘ಸ್ಕೂಲ್ ಬ್ಯಾಗ್ ಪಾಲಿಸಿ– 2020’ರಲ್ಲಿ ಕೆಲವು ನಿಯಮಗಳನ್ನು ರೂಪಿಸಿದೆ. ಬ್ಯಾಗಿನ ಭಾರವು ಮಗುವಿನ ತೂಕದ ಶೇ 10ರಷ್ಟು ಇರಬೇಕೆನ್ನುತ್ತದೆ.
ಪ್ರತೀ ತರಗತಿಯ ಮಗುವು ಹೊಂದಿರಬೇಕಾದ ಬ್ಯಾಗಿನ ತೂಕದ ಪಟ್ಟಿ ನೀಡುತ್ತದೆ. ಉದಾಹರಣೆಗೆ, 1 ಮತ್ತು 2ನೇ ತರಗತಿಯ ಮಕ್ಕಳಿಗೆ 1.6ರಿಂದ 2.2 ಕೆ.ಜಿ ಇದ್ದರೆ, 11 ಮತ್ತು 12ನೇ ತರಗತಿಗಳಿಗೆ 3.5ರಿಂದ
5 ಕೆ.ಜಿ ತೂಕದ ಬ್ಯಾಗ್ ಇರಬೇಕು ಎನ್ನುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ- 2020 ಕೂಡ ಬ್ಯಾಗ್‌ರಹಿತ ದಿನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ.

ನಮ್ಮಲ್ಲೂ ಮಗುವಿನ ಬ್ಯಾಗ್ ಹೊರೆ ತಗ್ಗಿಸುವ ಪ್ರಯತ್ನಗಳಾಗಿವೆ. ಪುಸ್ತಕಗಳನ್ನು ಎರಡು ಭಾಗಗಳಲ್ಲಿ ಮುದ್ರಿಸಿ ಕೊಡಲಾಗಿದೆ. ಸಣ್ಣ ಮಕ್ಕಳು ತಮ್ಮ ಚಟುವಟಿಕೆ ಪುಸ್ತಕವನ್ನು ಶಾಲೆಯಲ್ಲಿಯೇ ಇರಿಸಬೇಕು ಎಂದು ತಿಳಿಸಲಾಗಿದೆ. ತುಂಬಾ ಮನೆಗೆಲಸ ಹೇರದೆ ಪಾಳಿ ಪದ್ಧತಿ ಅನುಸರಿಸಬೇಕು. ಮಕ್ಕಳು ತಮ್ಮ ಇಡೀ ಪುಸ್ತಕದ ರಾಶಿಯನ್ನು ಬ್ಯಾಗಿನಲ್ಲಿ ತುಂಬಿಕೊಂಡು ಬರದಂತೆ ನಿಗಾ ವಹಿಸಲು ಪೋಷಕರಿಗೆ ತಿಳಿಸಲಾಗಿದೆ. ಇದನ್ನು ಮೀರಿಯೂ ಇಂದಿನ ಮಗು ಬ್ಯಾಗ್‌ ಭಾರದಲ್ಲಿ ಬಳಲುತ್ತಿದೆ. ವೈದ್ಯರು ಕೂಡ ಬ್ಯಾಗ್‌ ಹೊರುವ ಮಕ್ಕಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನ ಬಳಸಿ ಮಗುವಿನ ಬ್ಯಾಗ್ ಭಾರವನ್ನು ಇನ್ನಷ್ಟು ಕಡಿಮೆ ಮಾಡಬಹುದಾದರೂ ಸದ್ಯಕ್ಕೆ ತಿಂಗಳಿಗೊಮ್ಮೆ ಬ್ಯಾಗ್‌ರಹಿತ ದಿನವನ್ನಾಗಿ ಮಾಡಿರುವುದು ವಿದ್ಯಾರ್ಥಿಗಳಿಗೆ ಸಂಭ್ರಮ ತಂದಿದೆ. ಅದನ್ನು ‘ಸಂಭ್ರಮ ಶನಿವಾರ’ ಎನ್ನಲಾಗುತ್ತದೆ‌.

ಬ್ಯಾಗ್ ಇಲ್ಲದೆ ಅದೇನು ಕಲಿಸಿಯಾರು ಎಂಬುದು ಬಹುತೇಕರ ಪ್ರಶ್ನೆ. ಕಲಿಕೆ ಎಂಬುದು ಬರೀ ಪುಸ್ತಕ ನೋಡಿ ಕಲಿಯುವುದು ಎಂಬುದು ಒಂದು ತಪ್ಪು ಅಭಿಪ್ರಾಯ. ಮಗು ಪುಸ್ತಕವಿಲ್ಲದೆಯೂ ಕಲಿಯಬಹುದು. ಅದಕ್ಕೆ ನೂರೆಂಟು ದಾರಿಗಳಿವೆ. ಅಂತಹ ಹಲವು ದಾರಿಗಳು ಈ ಕಾರ್ಯಕ್ರಮದಲ್ಲಿವೆ.

ಸಾರ್ವಜನಿಕ ಸೌಕರ್ಯಗಳ ವಿಷಯದಲ್ಲಿ ಮಕ್ಕಳ ಜವಾಬ್ದಾರಿ, ಲಿಂಗತ್ವ ಸಮಾನತೆ, ಪೌಷ್ಟಿಕತೆ, ಸ್ವಾಸ್ಥ್ಯ ಮತ್ತು ಶುಚಿತ್ವ, ಮಾದಕವಸ್ತು ದುರ್ಬಳಕೆ ತಡೆಗಟ್ಟುವಿಕೆ, ಆರೋಗ್ಯಪೂರ್ಣ ಜೀವನಶೈಲಿ, ಹಿಂಸೆ, ಅಪರಾಧ, ಅಪಘಾತಗಳ ಸಂದರ್ಭಗಳಲ್ಲಿ ರಕ್ಷಣೆ ಹಾಗೂ ಭದ್ರತೆ, ಆಧುನಿಕ ತಂತ್ರಜ್ಞಾನ ಸಾಧನಗಳು ಮತ್ತು ಅಂತರ್ಜಾಲದ ಸದ್ಬಳಕೆ, ಸಾರ್ವಜನಿಕ ನೈರ್ಮಲ್ಯ- ಘನತ್ಯಾಜ್ಯದ ನಿರ್ವಹಣೆಯ ಅಗತ್ಯದಂತಹ ಹತ್ತಾರು ವಿಷಯಗಳನ್ನು ‘ಸಂಭ್ರಮದ ಶನಿವಾರ’ದ ದಿನ ಬೇರೆ ಬೇರೆ ಚಟುವಟಿಕೆಗಳ ಮೂಲಕ ಕಲಿಸಲು ಉದ್ದೇಶಿಸಲಾಗಿದೆ.

2019ರಲ್ಲಿ ಜಾರಿಯಲ್ಲಿದ್ದ ಈ ಕಾರ್ಯಕ್ರಮ ನಿಂತುಹೋಗಿತ್ತು. ಈಗ ಜಾರಿಯಾಗುತ್ತಿದೆ. ಆದರೆ ಅನುಷ್ಠಾನದ ಪರಿಯ ಮೇಲೆ ಅದರ ಪರಿಣಾಮ ನಿಂತಿದೆ. ಇತ್ತೀಚೆಗೆ ಜಾರಿ ಯಾಗುತ್ತಿರುವ ಹತ್ತಾರು ಕಾರ್ಯಕ್ರಮಗಳು ಬರೀ ಕಾರ್ಯಕ್ರಮಗಳಾಗಿ ಉಳಿದು ಹೋಗುತ್ತಿರುವಾಗ ‘ಸಂಭ್ರಮ ಶನಿವಾರ’ ಮಕ್ಕಳ ಗೆಳೆಯನಾಗಲಿ. ಮಕ್ಕಳು ಈ ಕಾರ್ಯಕ್ರಮದಲ್ಲಿ ಇನ್ನಷ್ಟು ಆಡಲಿ, ಹಾಡಲಿ, ಕುಣಿಯಲಿ, ನಲಿಯಲಿ. ಅದರ ಮೂಲಕವೇ ಕಲಿಯಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.