ಮಂಗಳವಾರ, ನವೆಂಬರ್ 30, 2021
21 °C
ಚರಿತ್ರೆ ಒಂದು ಬೌದ್ಧಿಕ ಶಿಸ್ತಾಗಿ ನೇಪಥ್ಯಕ್ಕೆ ಸರಿಯುತ್ತಿರುವಂತೆ ಭಾಸವಾಗುತ್ತಿದೆ

ಸಂಗತ: ಚರಿತ್ರೆಯ ‘ಕಾಲಕೋಶ’ದ ಮಾದರಿ

ಡಾ. ಅಶ್ವತ್ಥನಾರಾಯಣ Updated:

ಅಕ್ಷರ ಗಾತ್ರ : | |

Prajavani

‘ಪಠ್ಯಪುಸ್ತಕಗಳಲ್ಲಿನ ದೋಷಗಳನ್ನು ಸಾರ್ವಜನಿ ಕರು ಗಂಭೀರವಾಗಿ ಗಮನಿಸಿದ್ದರೆ, ಸಂಬಂಧಿಸಿದವರ ಮೇಲೆ ಹಲ್ಲೆ ಮಾಡುತ್ತಿದ್ದರು’ ಎಂಬ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆ ಖಂಡನೀಯ ಎಂದು ಹೇಳುತ್ತಲೇ, ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳ ಕುರಿತು ಈ ಪ್ರತಿಕ್ರಿಯೆ.

ತಮ್ಮ ಮತ್ತು ತಮಗೆ ಮಾತ್ರ ಒಪ್ಪಿತವಾದ ಚರಿತ್ರೆ ಯನ್ನು ಕಾಲಕೋಶಗಳ (ಟೈಮ್‌ ಕ್ಯಾಪ್ಸೂಲ್‌) ಮೂಲಕ ಭವಿಷ್ಯಕ್ಕೆ ಸೇರಿಸಬೇಕು ಎನ್ನುವ ಮನೋಧರ್ಮ ಹೊಸದೇನೂ ಅಲ್ಲ. ವಿವಿಧ ಕಾಲಘಟ್ಟಗಳಲ್ಲಿ ಪ್ರಭುತ್ವಗಳು ಇಂತಹ ಮಾದರಿಗಳನ್ನು ಸೃಷ್ಟಿಸುತ್ತಲೇ ಬಂದಿವೆ. ಈಗ ಪಠ್ಯಪುಸ್ತಕಗಳನ್ನು ತಮ್ಮ ಸಿದ್ಧಾಂತಕ್ಕೆ ‘ಪರಿವರ್ತಿಸುವ’ ಮೂಲಕ ಹೊಸ ಬಗೆಯ ‘ಟೈಮ್‌ ಕ್ಯಾಪ್ಸೂಲ್‌’ ಅನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ.

ನಾನು ಸಹ ಪರಿಷ್ಕರಣಾಪೂರ್ವದ 7ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷನಾಗಿ 2013-14ರಲ್ಲಿ, ನಂತರ ಪ್ರೌಢಶಾಲಾ ಹಂತದ ಸಮಾಜವಿಜ್ಞಾನದ ಪರಿಷ್ಕ ರಣಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆಗಲೂ ವಿಷಯ ತಜ್ಞರಾಗಿ ಚರಿತ್ರೆಯನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಿದವರು ಮಾತ್ರ ಸಮಿತಿಯಲ್ಲಿದ್ದರು. ಚರಿತ್ರೆಗೆ ಸಂಬಂಧಿಸಿದ ‘ಸಾರ್ವಜನಿಕ’ ಚರ್ಚೆಗಳು ಸಾಮಾನ್ಯವಾಗಿ ಕೆಲವೇ ವಿಷಯಗಳ ಸುತ್ತ ನಡೆಯುತ್ತಿದ್ದುದರ ಬಗ್ಗೆ ಅರಿವಿದ್ದ ನಾವು ಮುಕ್ತವಾಗಿ ಚರ್ಚಿಸುತ್ತಿದ್ದೆವು. ಈ ಬಗೆಯ ಚರ್ಚೆಗಳು ಧರ್ಮಗಳು ಮತ್ತು ಕೆಲವು ಚಾರಿತ್ರಿಕ ವ್ಯಕ್ತಿಗಳ ಸುತ್ತ, ವಿಶೇಷವಾಗಿ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವುದನ್ನು ಆಗಾಗ ಗಮನಿಸುತ್ತಿದ್ದೇವೆ.

ಅಧಿಕಾರಸ್ಥ ವ್ಯಕ್ತಿಯನ್ನು ಆಯಾ ಕಾಲಘಟ್ಟದ ಸಂಕೀರ್ಣ ರಾಜಕೀಯ ಪ್ರಕ್ರಿಯೆಯ ಭಾಗವಾಗಿ ನೋಡಬೇಕೇ ವಿನಾ ಅವನು ಯಾವ ಧರ್ಮಕ್ಕೆ ಸೇರಿದವನು ಎಂಬುದನ್ನಲ್ಲ. ಹಾಗೆ ನೋಡಿದ ತಕ್ಷಣವೇ ಚರಿತ್ರೆ ಕುರಿತು ಅನಗತ್ಯ ತಕರಾರುಗಳು ಹುಟ್ಟಿಕೊಳ್ಳುತ್ತವೆ. ಚರಿತ್ರೆಯನ್ನು ವ್ಯಕ್ತಿಗಳ, ಕಾಲಘಟ್ಟಗಳ, ಚಳವಳಿಗಳ, ಧರ್ಮಗಳ ಹಿನ್ನೆಲೆಯಿಂದ ಪ್ರವೇಶ ಮಾಡುತ್ತಿರುವುದರಿಂದ ಇಂದು ಈ ಪರಿಯ ಆರ್ಭಟಗಳು ನಡೆಯುತ್ತಿವೆ. ಇದು ಚರಿತ್ರೆಯನ್ನು ‘ರಾಜಕೀಯ ಸಾಧನ’ವಾಗಿ ಪರಿವರ್ತಿಸಿಕೊಂಡ ಪರಂಪರೆಯ ಬಳುವಳಿ. 

ಚರಿತ್ರೆಯನ್ನು ಗಂಭೀರವಾಗಿ ಅಧ್ಯಯನ ಮಾಡಿರುವವರು ಮೌನಸಾಕ್ಷಿಗಳಾಗಿ ಮನಃಸಾಕ್ಷಿಯನ್ನು ಮೌನಕ್ಕೆ ಒಪ್ಪಿಸಿದರೂ ಹೀಗಾಗಬಹುದು. ಕನಿಷ್ಠಪಕ್ಷ ಚರಿತ್ರೆಯಿಂದಲೇ ಬದುಕನ್ನು ಕಟ್ಟಿಕೊಂಡಿರುವವರ ಮೇಲೆ ಇಂದು ದೊಡ್ಡ ಜವಾಬ್ದಾರಿ ಇದೆ. ವಸ್ತುನಿಷ್ಠ ಚರಿತ್ರೆಯನ್ನು ತರಗತಿ ಒಳಗೆ ಮತ್ತು ಹೊರಗೆ ಮಾತನಾಡುವ ತುರ್ತಿದೆ. ಇಷ್ಟಕ್ಕೂ ಪರಿಷ್ಕೃತ ಪಠ್ಯಪುಸ್ತಕಗಳನ್ನು ರೂಪಿಸುವಾಗ ನಿರ್ದಿಷ್ಟ ತತ್ವ, ಸಿದ್ಧಾಂತಕ್ಕೆ ಒಳಗಾಗದೆ ವಸ್ತುನಿಷ್ಠ ಚರಿತ್ರೆಯನ್ನು ಕೊಡುವುದೇ ಮೂಲ ಆಶಯವಾಗಿತ್ತು. ‘ಕೇಸರೀಕರಣಕ್ಕೆ ಪರ್ಯಾಯವಾಗಿ ಪಠ್ಯಗಳನ್ನು ಕಾಂಗ್ರೆಸ್ಸೀಕರಣ ಮಾಡುವುದು ಪರ್ಯಾಯವಲ್ಲ’ ಎಂಬ ಸ್ಪಷ್ಟ ನಿಲುವನ್ನು ಸರ್ವಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಆರಂಭದಲ್ಲಿಯೇ ಸ್ಪಷ್ಟಪಡಿಸಿದ್ದರು. ಅಷ್ಟರಮಟ್ಟಿಗೆ ಪರಿಷ್ಕರಣಕಾರರಿಗೆ ಮುಕ್ತ ಸ್ವಾತಂತ್ರ್ಯವಿತ್ತು.

ಇಂದಿನ ಸಂಕೀರ್ಣ ಸಂದರ್ಭದಲ್ಲಿ ತಿ.ತಾ.ಶರ್ಮ ಅರ್ಧ ಶತಮಾನದ ಹಿಂದೆಯೇ ದಾಖಲಿಸಿದ ಈ ಮಾತುಗಳು ಹೆಚ್ಚು ಪ್ರಸ್ತುತವಾಗಿವೆ: ‘ಇತಿಹಾಸ ವ್ಯಾಖ್ಯಾನ ದ್ವಿಮುಖವಾದದ್ದು. ವರ್ತಮಾನದ ಅವಶ್ಯಕತೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಹಿಂದೆ ನಡೆದುಹೋದುದನ್ನೆಲ್ಲ ಸಮರ್ಥನೆ ಮಾಡುವುದು ಒಂದು; ಭೂತಕಾಲದ ವಿದ್ಯಮಾನಗಳ ಬಣ್ಣವನ್ನು ವರ್ತಮಾನದ ವಿದ್ಯಮಾನಗಳಿಗೆ ಹಚ್ಚುವುದು ಇನ್ನೊಂದು. ನಮ್ಮ ತಲೆಯಲ್ಲಿ ಏನೇನೋ ರಾಜಕೀಯ ಬಯಕೆ ಅಥವಾ ‘ಬೇಕು’ಗಳು ತಲೆಹಾಕುತ್ತವೆ. ಅವುಗಳಿಗೆ ಹೊಂದಿಕೊಳ್ಳುವ ಪುಕ್ಕಟೆ ಪುರಾಣಗಳನ್ನು ಸೃಷ್ಟಿ ಮಾಡುವ ಕಲೆಯೊಂದರ ಅವತಾರವಾಗುತ್ತದೆ. ಹೀಗಾಗಿ ನಮಗೆ ನಿಜವಾಗಿ ನಡೆದದ್ದು ಯಾವುದು, ಕಟ್ಟಿದ ಕಥೆ ಯಾವುದು, ಈ ಬೆರಕೆಯನ್ನು ವಿಂಗಡಿ ಸುವುದೇ ಒಂದು ದೊಡ್ಡ ಸಮಸ್ಯೆ’. ಚರಿತ್ರೆಯ ವಿದ್ಯಾರ್ಥಿಗಳಿಗೆ ಈ ತಿಳಿವಳಿಕೆ ಅತ್ಯಂತ ಪ್ರಾಥಮಿಕವಾದದ್ದು.

ಚರಿತ್ರೆಯ ಜ್ಞಾನಶಿಸ್ತಿನಲ್ಲಿ ವಿಶೇಷ ಪರಿಣತಿ ಇರುವವರು ಮಾತ್ರ ಸಮಿತಿಗಳಲ್ಲಿ ಇದ್ದರೆ ಅದಕ್ಕೆ ಲೆಜಿಟಿಮಸಿ ದಕ್ಕುತ್ತದೆ. ಈ ಬಗೆಯ ಜವಾಬ್ದಾರಿಗಳನ್ನು ನಿರ್ವಹಿಸಲು ಸರ್ಕಾರ ವಿಷಯ ಪರಿಣತರನ್ನೇ ನೇಮಕ ಮಾಡಬೇಕೇ ವಿನಾ, ವಿಷಯದಲ್ಲಿ ‘ಪರಿಣತಿ’ ಇದೆ ಎಂದು ತಮಗೇ ತಾವೇ ಪ್ರಮಾಣಪತ್ರಗಳನ್ನು ಕೊಟ್ಟುಕೊಳ್ಳುವವರನ್ನಲ್ಲ! ಡ್ರೈವಿಂಗ್ ನನಗೆ ಚೆನ್ನಾಗಿ ಬರುತ್ತದೆ ಎಂದು ತನಗೆ ತಾನೇ ‘ಅರ್ಹತೆ’ಯ ಪತ್ರವನ್ನು ಕೊಟ್ಟುಕೊಳ್ಳಲಾಗುವುದಿಲ್ಲ ಅಲ್ಲವೇ?

ಬಹಳ ಗಾಬರಿ ಹುಟ್ಟಿಸುವ ವಿಷಯವೆಂದರೆ, ಚರಿತ್ರೆಯು ಸಾರ್ವಜನಿಕರ ದೃಷ್ಟಿಯಿಂದ ‘ಅನವಶ್ಯಕ’ ಎಂಬ ಹೊಸ ಸಮಸ್ಯೆ ಸೃಷ್ಟಿಯಾಗಿರುವುದು. ನಮ್ಮ ಹಿಂದಿನ ತಲೆಮಾರಿನವರು ಬಹಳ ಪರಿಶ್ರಮಪಟ್ಟು ಚರಿತ್ರೆಗೆ ದೊಡ್ಡ ಘನತೆ, ಗೌರವವನ್ನು ದೊರಕಿಸಿಕೊಟ್ಟಿದ್ದಾರೆ. ಅದನ್ನು ಮತ್ತಷ್ಟು ವಿಸ್ತರಿಸದಿದ್ದರೂ ಅದರ ತಾತ್ವಿಕ ಚೌಕಟ್ಟನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಇಂದು ಜಾರಿಯಾಗುತ್ತಿರುವ ಹೊಸ ‘ಜ್ಞಾನ’ ಕಲಿಕಾ ಮಾದರಿಯಲ್ಲಿ ಗಂಭೀರ ಸ್ಥಿತ್ಯಂತರಗಳು ಕಾಣುತ್ತಿವೆ. ಇಂದಿನ ತಲೆಮಾರಿಗೆ ಚರಿತ್ರೆ ಇನ್ನೂ ಹೆಚ್ಚು ಸ್ಪಷ್ಟವಾಗಿ ಗೋಚರಿಸಬೇಕಿತ್ತು. ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗನಿಗೆ ಅಜ್ಜನಿಗಿಂತ ಹೆಚ್ಚು ದೂರ ಕಾಣುವಂತೆ. ಆದರೆ ಇಂದು ಕಣ್ಣ ಮುಂದಿನ ಮಬ್ಬಿನಿಂದ ಮೊಮ್ಮಗ ನರಳುತ್ತಿದ್ದಾನೇನೊ ಎನ್ನುವ ಅನುಮಾನ ಆವರಿಸಿದೆ.

ಲೇಖಕ: ನಿವೃತ್ತ ಪ್ರಾಧ್ಯಾಪಕ, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು