ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಇಲ್ವಾ? ಕಾಯ್ದೆಯೇ ಅಲ್ಲ!

ಕರಡು ಮಸೂದೆಗಳನ್ನು ಬರೀ ಇಂಗ್ಲಿಷ್, ಹಿಂದಿಯಲ್ಲಿ ಪ್ರಕಟಿಸುವುದು ಎಷ್ಟು ಸರಿ?
Last Updated 27 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಕಣ್ಣಿನ ವೈದ್ಯರೊಬ್ಬರು ತಮ್ಮ ಕ್ಲಿನಿಕ್ ಎದುರು, ‘ಈ ಬೋರ್ಡಿನಲ್ಲಿ ಬರೆದಿರುವುದು ಕಾಣದೇ ಇದ್ದರೆ ಒಳಗೆ ಬಂದು ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ’ ಎಂಬ ಫಲಕ ಇರಿಸಿದ್ದರಂತೆ. ಈ ದಡ್ಡ ವೈದ್ಯನ ಕತೆ ಹಾಗಿರಲಿ, ನಮ್ಮ ಕೇಂದ್ರ ಸರ್ಕಾರವೇ ಈ ರೀತಿ ಮಾಡಿದರೆ ಗತಿಯೇನು?

ಜನತಂತ್ರದಲ್ಲಿ ಸಾರ್ವಜನಿಕರ ಬದುಕನ್ನು ಎಷ್ಟೇ ಚಿಕ್ಕ ಪ್ರಮಾಣದಲ್ಲಿಯಾದರೂ ಪ್ರಭಾವಿಸುವ ಎಲ್ಲಾ ಕಾನೂನುಗಳು ಜಾರಿಗೆ ಬರುವ ಮುಂಚೆ ನಾಗರಿಕರ ನಡುವೆ ಚರ್ಚೆಯಾಗಬೇಕು. ಆದರೆ, ಸರ್ಕಾರಗಳು ಕರಡು ಮಸೂದೆಗಳನ್ನು ಚರ್ಚೆಗೆ ಬಿಡುಗಡೆ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿಯೇ ಇಲ್ಲ. ಅದೇನೋ ಜನರ ಮೇಲೆ ಕೃಪೆ ಮಾಡಿದರೇನೋ ಎನ್ನುವಂತೆ ಮಸೂದೆಗಳ ಕರಡುಗಳನ್ನು ಹಿಂದಿ ಮತ್ತು ಇಂಗ್ಲಿಷಿನಲ್ಲಿ ಗೆಜೆಟ್‌ನಲ್ಲಿ ಪ್ರಕಟಿಸಿ ಕೈತೊಳೆದುಕೊಳ್ಳುತ್ತವೆ. ಎಂದರೆ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಾರದ ನಾಗರಿಕರನ್ನು ಈ ಚರ್ಚೆಯಿಂದ ಹೊರಗಿಟ್ಟ ಹಾಗಾಯಿತಲ್ಲವೇ? ಇದೆಂಥ ಜನತಂತ್ರ?

ಹೋದ ವರ್ಷ, 2020ರ ಹೊಸ ಶಿಕ್ಷಣ ನೀತಿಯ ಸಂವಾದದ ವೇಳೆಯಲ್ಲಿಯೂ ಹೀಗೇ ಆಗಿತ್ತು. ಕೇಂದ್ರ ಪರಿಸರ ಇಲಾಖೆ ಇತ್ತೀಚೆಗೆ ಪ್ರಕಟಿಸಿದ ಪಾರಿಸರಿಕ ಪ್ರಭಾವ ಮೌಲ್ಯಮಾಪನ ಅಧಿಸೂಚನೆ– 2020ರ ಗತಿಯೂ ಇದೇ ಆಯಿತು. ಇಡೀ ದೇಶ ಕೋವಿಡ್-19 ಸಾಂಕ್ರಾಮಿಕಕ್ಕೆ ಸಿಲುಕಿ ನಲುಗಿದ್ದಾಗ, ಇದರ ಕರಡು ಮಸೂದೆಯನ್ನು ಏಪ್ರಿಲ್ 11ರಂದು ಬಿಡುಗಡೆ ಮಾಡಿ, ಜೂನ್ 11ರ ಒಳಗೆ ಜನ ತಮ್ಮ ಸಲಹೆ, ಆಕ್ಷೇಪಗಳನ್ನು ಸಲ್ಲಿಸಬೇಕು ಎಂದು ಗಡುವು ವಿಧಿಸಿತು. ಕರಡು ಅಧಿಸೂಚನೆ ಕೇವಲ ಹಿಂದಿ ಮತ್ತು ಇಂಗ್ಲಿಷಿನಲ್ಲಿರುವುದರಿಂದ ಸಾರ್ವತ್ರಿಕ ಚರ್ಚೆ ಸಾಧ್ಯವಾಗು ವುದಿಲ್ಲ, ಆದ್ದರಿಂದ ಅದರ ಅನುವಾದವನ್ನು ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ ಇಪ್ಪತ್ತೆರಡೂ ಭಾಷೆಗಳಲ್ಲಿ ಒದಗಿಸಬೇಕಾಗಿತ್ತು ಎಂದು ಹಲವು ನಾಗರಿಕ ಹಕ್ಕುಗಳ ಹೋರಾಟಗಾರರು ಹೈಕೋರ್ಟ್‌ಗಳಲ್ಲಿ ದಾವೆ ಹೂಡಿದರು.

ಮದ್ರಾಸ್ ಹೈಕೋರ್ಟ್‌ ‘ಕರಡು ಮಸೂದೆಗೆ ರಾಜ್ಯದ ಜನ ತಮ್ಮ ಸಲಹೆ ಮತ್ತು ಆಕ್ಷೇಪಗಳನ್ನು ಸಲ್ಲಿಸಬೇಕು, ಎಂದರೆ ಅದನ್ನು ತಮಿಳಿನಲ್ಲಿ ಒದಗಿಸಬೇಕು’ ಎಂದು ಪರಿಸರ ಇಲಾಖೆಗೆ ಸೂಚಿಸಿತು. ದೆಹಲಿ ಹೈಕೋರ್ಟ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸದರಿ ಅಧಿಸೂಚನೆಯನ್ನು ಸಂವಿಧಾನದ ಎಂಟನೇ ಅನುಸೂಚಿಯಲ್ಲಿರುವ ಇಪ್ಪತ್ತೆರಡೂ ಭಾಷೆಗಳಲ್ಲಿ ಅನುವಾದಿಸಬೇಕು ಎಂದು ಸೂಚಿಸಿತು. ಕೋಸ್ಟಲ್ ರೆಗ್ಯುಲೇಷನ್ ಜೋನ್ ಅಧಿನಿಯಮವನ್ನು 2010ರಲ್ಲಿ ಕರಾವಳಿಯ 9 ಭಾಷೆಗಳಲ್ಲಿ ಅನುವಾದಿಸಲಾಗಿತ್ತು ಎಂಬ ಉದಾಹರಣೆಯನ್ನೂ ಕೊಡಲಾಯಿತು. ವಿದೇಶದ ಒಂದು ಉದಾಹರಣೆಯಲ್ಲಿ, ಐರೋಪ್ಯ ಒಕ್ಕೂಟದ ಅಧಿಕೃತ ದಾಖಲೆಗಳನ್ನು ಸದಸ್ಯ ರಾಷ್ಟ್ರಗಳ 24 ಭಾಷೆಗಳಲ್ಲಿ ಒದಗಿಸಲಾಗುತ್ತದೆ ಎಂಬ ವಾದ ಮುನ್ನೆಲೆಗೆ ಬಂತು. ಆದರೆ ಕೇಂದ್ರವು ಇದೆಲ್ಲದರ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಯಿತು. ‘ಹಾಗೆಂದು ಕಾನೂನು ಇಲ್ಲ’, ಅಲ್ಲದೆ, ‘ಅನುವಾದದಲ್ಲಿ ಕೆಲವೊಮ್ಮೆ ಪದಗಳ ನಿರ್ದಿಷ್ಟ ಅರ್ಥ ಕಳೆದುಹೋಗುತ್ತದೆ, ಆ ಮೂಲಕ ಕಾನೂನಾತ್ಮಕ ಗೊಂದಲಕ್ಕೆ ಕಾರಣವಾಗುತ್ತದೆ’ ಎಂದು ಸಬೂಬು ಹೇಳಿತು!

ರಾಜ್ಯದ ಕಾನೂನುಗಳನ್ನು ಇಂಗ್ಲಿಷಿನಲ್ಲಿ ರೂಪಿಸಿದರೂ ಅಂತಿಮವಾಗಿ ಅವುಗಳ ಅಧಿಕೃತ ಪ್ರಾದೇಶಿಕ ಆವೃತ್ತಿಯನ್ನು ಪ್ರಕಟಿಸಲು ಅಧಿಕೃತ ಭಾಷಾ ಆಯೋಗಗಳು ರಾಜ್ಯಗಳಲ್ಲಿವೆ. ಇಷ್ಟಿದ್ದರೂ ಕೇಂದ್ರ ಸರ್ಕಾರವು ಕಾಯ್ದೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಕಟಿಸುವುದು ಎಷ್ಟರಮಟ್ಟಿಗೆ ನ್ಯಾಯ? ಸರ್ಕಾರದ ವಾದಕ್ಕೆ ಪ್ರತಿಕ್ರಿಯಿಸುತ್ತಾ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶರದ್ ಎ. ಬೋಬ್ಡೆಯವರು, ‘ಅಧಿಕೃತ ಭಾಷಾ ಅಧಿನಿಯಮ– 1963 ಅನ್ನು ತಿದ್ದುಪಡಿ ಮಾಡಿ ದೇಶದ ಆಡಳಿತದಲ್ಲಿ ಹೆಚ್ಚು ಭಾಷೆಗಳನ್ನು ಸೇರಿಸುವ ಪ್ರಯತ್ನವನ್ನು ಮಾಡಬೇಕು. ನಾವೂ ನಮ್ಮ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿ ಸುತ್ತಿದ್ದೇವೆ’ ಎಂದಿದ್ದಾರೆ. ಸುಪ್ರೀಂ ಕೋರ್ಟ್‌ನ 1951ರ ಒಂದು ತೀರ್ಪು, ‘ಪ್ರಕಟಿಸದೇ ಮತ್ತು ಪ್ರಚಾರ ಕೊಡದೇ ಇರುವ ಕಾನೂನುಗಳನ್ನು ಪಾಲಿಸಲು ನಾಗರಿಕರು ಬದ್ಧರಾಗಿಲ್ಲ’ ಎಂದು ಆದೇಶ ನೀಡಿದೆ. ‘ಕಾನೂನು ಜಾರಿಗೆ ಬರುವ ಮುನ್ನ, ಎಲ್ಲರಿಗೂ ಅದೇನು ಎಂದು ಗೊತ್ತಾಗುವ ರೂಪದಲ್ಲಿ ಅದನ್ನು ಪ್ರಸಾರ ಮಾಡಬೇಕು’ ಎಂದು ಅಭಿಪ್ರಾಯ ಪಟ್ಟಿದೆ. ಎಲ್ಲರಿಗೂ ಗೊತ್ತಾಗಬೇಕು ಎಂದರೆ ಅದನ್ನು ಅವರಿಗೆ ಗೊತ್ತಿರುವ ಭಾಷೆಗಳಲ್ಲಿ, ಕರ್ನಾಟಕದಲ್ಲಿ ಕನ್ನಡದಲ್ಲಿ ಪ್ರಕಟಿಸಬೇಕು ಎಂದರ್ಥವಾಗುವುದಿಲ್ಲವೇ? ಹೀಗಾಗಿ, ಕನ್ನಡದಲ್ಲಿ ಇಲ್ಲದ ಕಾನೂನುಗಳನ್ನು ಪಾಲಿಸಲು ನಾವು ಬದ್ಧರಾಗಿರಬೇಕಾಗಿಲ್ಲ ಎಂದು ತಿಳಿಯಬಹುದು.

ನಿಜವೆಂದರೆ, ಈಗಲೂ ದೇಶದ ಸರಾಸರಿ ಸಾಕ್ಷರತೆ ಶೇ 74ರಷ್ಟು ಎಂದಿದ್ದರೂ ಮುದ್ರಿತ ಅಕ್ಷರಗಳನ್ನು ಓದಿ ಅರ್ಥ ಮಾಡಿಕೊಳ್ಳುವ, ಅದರಲ್ಲೂ ಕಾನೂನು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವುದು ಕೆಲವೇ ಜನರಿಗೆ ಮಾತ್ರ. ಆದ್ದರಿಂದ ಜನತಂತ್ರವಿರುವ ದೇಶದ ಕಾನೂನು ರಚನೆಯಲ್ಲಿ ದೇಶದ ಸಮಷ್ಟಿ ಒಡೆಯರಾದ ನಾಗರಿಕರು ಭಾಗವಹಿಸಿ ಅವುಗಳ ಕುರಿತು ತಮ್ಮ ತೀರ್ಪನ್ನು ಕೊಡಬೇಕು ಎಂದರೆ, ಕರಡು ಕಾನೂನುಗಳನ್ನು ಇತರ ಧ್ವನಿ, ದೃಶ್ಯ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ಪ್ರಸಾರ ಮಾಡಬೇಕು. ಜವಾಬ್ದಾರಿಯುತ ಸರ್ಕಾರಗಳಾದರೆ ಹೀಗೆ ಮಾಡಿಯಾವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT