ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಿಶ್ವಗುರುವಿನ ನಿರೀಕ್ಷೆಯಲ್ಲಿ...

ನಾವು ಕಳೆದುಕೊಂಡಿರುವ ಮನುಷ್ಯತ್ವವನ್ನು ಈಗಲಾದರೂ ಮರುಶೋಧಿಸಿಕೊಳ್ಳೋಣ
Last Updated 18 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ದಿಗಿಲು ಬಡಿದಂತೆ ಕೂತಿದೆ ಜಗತ್ತು. ಮನುಷ್ಯ ಜಗತ್ತನ್ನು ಮಾಯಾವಿಯಂತೆ ಕಾಡಿದ ಸೂಕ್ಷ್ಮಾಣುವೊಂದರ ಮರ್ಮಾಘಾತಕ್ಕೆ, ತಂತ್ರಜ್ಞಾನದ ಬಲದಲ್ಲಿ ಮೆರೆಯುತ್ತಿದ್ದ, ನಿತ್ಯಧಾವಂತದ ಬಲಾಢ್ಯ ಜಗತ್ತು, ಸದ್ದಿಲ್ಲದೆ ಅವಿತುಕೂತ ಕ್ವಾರಂಟೈನ್‍ನ ಕತ್ತಲ ಕೋಣೆಯಿಂದ ಅನ್‍ಲಾಕ್ ಆದಂತಿಲ್ಲ. ನಂಬಿಕೆ ಕುಸಿಯುತ್ತಿರುವ ಮತ್ತು ಸಾವಿನ ಭೀತಿಯು ಜೀವನ ಕ್ರಮವನ್ನು ಅಸ್ತವ್ಯಸ್ತಗೊಳಿಸುತ್ತಿರುವ ತಲ್ಲಣದ ಹೊತ್ತಿನಲ್ಲಿ, ಬದುಕು ಮತ್ತೆ ಹಳಿಗೆ ಮರಳಲಿ ಎಂಬ ಬಯಕೆ ಸಹಜವಾಗಿ ಹೆಚ್ಚಾಗಿದೆ.

ವಿಶ್ವಸೃಷ್ಟಿಯ ಮೂಲವೆಂದು ನಂಬಲಾದ ಬಿಗ್‍ಬ್ಯಾಂಗ್ ಸ್ಫೋಟದ ತರುವಾಯ ರೂಪುಗೊಂಡ ಭೂಗ್ರಹಕ್ಕೀಗ ಸುಮಾರು ನಾನೂರ ಅರವತ್ತು ಕೋಟಿ ವರ್ಷಗಳು ಸಂದಿವೆ. ಆರಂಭದಲ್ಲಿ ಅದೊಂದು ಉರಿಯುವ ಉಂಡೆ. ಭೂಮಿಯ ಬಿಸಿ ಆರಿ, ತಣ್ಣಗಾಗಿ, ಒಡಲಲ್ಲಿ ನೀರು ಜಿನುಗಲು ಮುಂದಿನ ನೂರು ಕೋಟಿ ವರ್ಷಗಳೇ ಬೇಕಾದವು. ಅಲ್ಲಿಂದ ಏಕಕೋಶ ಜೀವಿಗಳು ಅವತರಿಸುವುದರೊಂದಿಗೆ ಜೀವಜಗತ್ತು ಮೊದಲುಗೊಂಡರೂ ಮುಂದಿನ ಮುನ್ನೂರು ವರ್ಷ ಭೂಮಂಡಲದಲ್ಲಿ ಸೂಕ್ಷ್ಮಾಣುಜೀವಿಗಳದೇ ಆಧಿಪತ್ಯ. ನಂತರ ಹಂತಹಂತವಾಗಿ ಬಹುಕೋಶೀಯ ಮತ್ತು ಸಂಕೀರ್ಣ ಜೀವಿಗಳ ಮೇಳ. ಆಗೆಲ್ಲಾ ಪ್ರಕೃತಿಯಲ್ಲಿ ಪರಸ್ಪರ ಸಹಬಾಳ್ವೆಯ ತತ್ವವೊಂದು ಚಾಲ್ತಿಯಲ್ಲಿತ್ತು. ಅದು ಹದಗೆಡಲು ಶುರುವಾದ ಘಟನೆಯೇ ವಿಕಾಸಪಥದ ಕೊನೆಯ ಕೊಂಡಿಯಾಗಿ ಹೆಜ್ಜೆ ಇರಿಸಿದ ಬುದ್ಧಿಶಾಲಿ ಮಾನವಜೀವಿಯ ಉಗಮ!

ಮನುಷ್ಯ ಸಂತತಿ ಅವತರಿಸಿದ ದಿನದಿಂದಲೇ ಅವನ ಅವಶ್ಯಕತೆ, ಕುತೂಹಲದ ಭಾಗವಾಗಿ ಪ್ರಕೃತಿ ಯಲ್ಲಿ ಬಗೆಬಗೆಯ ಪ್ರಯೋಗಗಳು ಮೊದಲಾದವು. ಮನುಷ್ಯನಿಂದ ನೈಸರ್ಗಿಕ ಸಂಪತ್ತಿನ ಬಳಕೆಯು ಅತಿಯಾಗಿ, ಕೊನೆಗದು ನಿಯಂತ್ರಣ ಮೀರಿ ಪ್ರಕೃತಿಯ ಮೇಲಿನ ದುರಾಕ್ರಮಣವಾಗಿ ಬದಲಾಯಿತು. ಅವನ ನಡೆ-ನಿಲುವುಗಳು ಬದಲಾಗಿ, ಹೊಸ ಬೆಳೆಗಳೊಟ್ಟಿಗೆ, ಸ್ವಾರ್ಥ, ಸಂಕುಚಿತತೆ, ಸ್ವಪ್ರತಿಷ್ಠೆಯನ್ನೂ ಬಿತ್ತಿ ಬೆಳೆಯಲಾರಂಭಿಸಿದ. ತನಗಿಂತ ಬಹುಮುಂಚೆಯೇ ಭೂಮಿಗೆ ಬಂದ ಇತರ ಜೀವಿಗಳು ಮತ್ತು ಅವುಗಳ ಜೀವನ ಕ್ರಮವನ್ನು ನಾಶಗೊಳಿಸಿ ಪರಿಸರ ಸಮತೋಲನವೆಂಬ ನಾಜೂಕು ಹೆಣಿಗೆಯ ತಂತುಗಳನ್ನು ತುಂಡರಿಸಿದ. ಕೊನೆಗೆ ತನ್ನ ಮನುಕುಲದ ವಿರುದ್ಧ, ಜಾತಿ-ಧರ್ಮ, ದೇಶ-ಭಾಷೆ, ಆರ್ಥಿಕತೆ-ಅರಾಜಕತೆ ಕಾರಣಮಾಡಿ ದ್ವೇಷ ಬಿತ್ತಿದ. ತನ್ನ ಅಹಂಕಾರಕ್ಕೆ ಎರಡು ಮಹಾ ಯುದ್ಧಗಳಾದವು. ನಿತ್ಯವೂ ಒಂದಿಲ್ಲೊಂದು ಕಡೆ ಉದ್ರಿಕ್ತತೆ, ಸಂಘರ್ಷ ಸೃಜಿಸಿ ನೆತ್ತರು ಹರಿಸಿದ. ತನ್ನವರೇ ಆದ ಲಕ್ಷಾಂತರ ಅಮಾಯಕರನ್ನು ವಿನಾ ಕಾರಣ ಕೊಂದುಹಾಕಿದ. ಅಮಾಯಕ ಹೆಣ್ಣುಜೀವಗಳ ಮೇಲೆರಗಿ ಅತ್ಯಾಚಾರವೆಸಗಿದ.

ವಿವೇಕ, ಸಂಯಮ ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಂಡು ಉನ್ಮಾದದಲ್ಲಿ ಬೇಯುತ್ತಿದ್ದವನೀಗ ಯಃಕಶ್ಚಿತ್ ವೈರಾಣುವೊಂದು ಸಾರಿ ಹೇಳಿದ ಸತ್ಯದ ಮುಂದೆ ಅಕ್ಷರಶಃ ಬೆತ್ತಲಾಗಿ ನಿಂತಿದ್ದಾನೆ. ಅವನ ಹಣ, ಅಂತಸ್ತು, ಅಧಿಕಾರ, ಅಹಂಕಾರ, ರೂಪ, ಬಣ್ಣ, ವಯಸ್ಸು, ಗಡಿ, ದೇಶ, ಭಾಷೆ, ದ್ವೇಷವೆಲ್ಲವೂ ಸಾವಿನ ಭೀತಿಯಲ್ಲಿ ಶೂನ್ಯವಾಗಿವೆ. ಗರ್ವಭಂಗವಷ್ಟೇ ಅಲ್ಲ, ಪ್ರಕೃತಿಯೊಳಗೆ ತಾನೊಂದು ಕೇವಲ ಹುಳುವೆಂಬ ನಿಜದರ್ಶನವೂ ಅವನಿಗೀಗ ದಕ್ಕಿದೆ.

ಇಲ್ಲಿಂದಲಾದರೂ ಮನುಷ್ಯ ತಾನು ಕಳೆದು ಕೊಂಡಿದ್ದ ಮನುಷ್ಯತ್ವವನ್ನು ಮರುಶೋಧಿಸಿ ಕೊಂಡರೆ ಕ್ಷೇಮ. ಸಂಕಷ್ಟ ಕಾಲದಲ್ಲಷ್ಟೇ ಮಾನವೀಯ ಮೌಲ್ಯಗಳನ್ನು ತೋರುವ ಮನುಷ್ಯ, ಉಳಿದ ಸಮಯದಲ್ಲಿಯೂ ಮನುಷ್ಯನಾಗಿಯೇ ಉಳಿಯಬೇಕಿದೆ. ತನ್ನೊಳಗಿನ ಜೀವಪರ ಮೌಲ್ಯಗಳ ಸೆಲೆ-ನೆಲೆಗಳನ್ನು ಮರುಸ್ಥಾಪಿಸಿಕೊಂಡು ತನ್ನ ಭ್ರಾಮಕ ಜಗತ್ತಿನಿಂದೆದ್ದು ಹೊರಬರುವಂತಾಗಲಿ. ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ಜೀವ ಬೆಸೆಯುವ ಅಮೃತವಾಹಿನಿಯು ಎದೆಯಿಂದಲೆದೆಗೆ ಹರಿಯಲಿ ಎಂಬ ಆಶಯವೀಗ ಸಾರ್ವತ್ರಿಕವಾಗಿ ವ್ಯಕ್ತವಾಗಿದೆ.

ಇಂತಹ ದುರಿತ ಕಾಲದಲ್ಲಿ ಮಾನವ ಜಗತ್ತನ್ನು ಅರಿವಿನ ದಾರಿಯಲ್ಲಿ ಮುನ್ನಡೆಸಬಲ್ಲ ವಿಶ್ವಗುರುವಿನ ತೀವ್ರ ನಿರೀಕ್ಷೆಯಲ್ಲಿದೆ ವರ್ತಮಾನ. ಸಾವಿನೆದುರು ಎಲ್ಲರೂ ಸಮಾನರು ಎಂಬ ಸಂದೇಶದ ಹಿನ್ನೆಲೆಯಲ್ಲಿ, ತಮ್ಮೊಳಗಿನ ರಾಗ–ದ್ವೇಷಗಳನ್ನು ಮೀರಿ ಜಗತ್ತು ಒಗ್ಗೂಡಿದಲ್ಲಿ ಮಾತ್ರ ಭೂಮಿಯ ಮೇಲೆ ಮನುಷ್ಯತ್ವವನ್ನು ಬದುಕಿಸಿಕೊಳ್ಳುವುದು ಸಾಧ್ಯ.

ಪರಂಪರೆಯನ್ನು ತಮ್ಮ ದೂರದೃಷ್ಟಿ- ದಾರ್ಶನಿ ಕತೆಯಿಂದ ಕೈಹಿಡಿದು ನಡೆಸಿದ ಸಂತರ ಚಿಕಿತ್ಸಕ ಮಾರ್ಗವೀಗ ಮತ್ತೊಮ್ಮೆ ತೆರೆದುಕೊಳ್ಳಲೆಂಬ ಕಾತರ ಹೆಚ್ಚಿದೆ. ಆದರೆ ಸಮಾಜದಲ್ಲೀಗ ಆದರ್ಶ ಮಾದರಿಗಳ ಬರವಿದೆ. ನಮ್ಮನ್ನೆಲ್ಲಾ ಮುನ್ನಡೆಸಬೇಕಾದವರಲ್ಲಿ ಆಂತರ್ಯದಲ್ಲಿ ಬೆಳಕಿರುವ ನಾಯಕರು ಎಲ್ಲಿದ್ದಾರೆ ಎಂಬುದು ವರ್ತಮಾನದ ಪ್ರಶ್ನೆ!

ಸದ್ಯಕ್ಕೆ ಬಲಾಢ್ಯ ಎನಿಸಿಕೊಂಡಿರುವ ಕೆಲವಾರು ರಾಷ್ಟ್ರನಾಯಕರು ತಮ್ಮದೇ ಅಜ್ಞಾನ, ಅಹಂಕಾರ, ತೋರಿಕೆಯ ಮುಖವಾಡ, ಧಾರ್ಮಿಕ ಅಸಹಿಷ್ಣುತೆಯಲ್ಲಿ ನರಳುತ್ತಿರುವವರೇ. ಅವರಲ್ಲಿ ಕೆಲವರಾದರೂ ತಮ್ಮ ನೀತಿಗಳನ್ನು ಮಾರ್ಪಡಿಸಿಕೊಂಡು ಮನು ಕುಲದ ಅಗತ್ಯಕ್ಕೆ ಒದಗಬಹುದು ಅಥವಾ ಯಾವುದೇ ಪುಟ್ಟರಾಷ್ಟ್ರದ ಗಟ್ಟಿ ನಾಯಕರೂ ಮುಕ್ತವಾಗಿ ಜೀವಕಾರುಣ್ಯವನ್ನು ಪ್ರಕಟಿಸಿ ಜಗತ್ತಿನ ಬೆಂಬಲ ಪಡೆದು ನಿಜನಾಯಕರಾಗಿ ಹೊರ ಹೊಮ್ಮಬಹುದಾಗಿದೆ. ಅದಾಗದಿದ್ದಲ್ಲಿ ರಾಜಕೀಯ ವಲಯದಾಚೆಗಿನ ಸಾಂಸ್ಕೃತಿಕ ಅಥವಾ ಧಾರ್ಮಿಕ ನಾಯಕರಾದರೂ ಸರಿಯೇ. ಆಧುನಿಕತೆಯ ಅತಿರೇಕಗಳಿಂದ, ಧಾರ್ಮಿಕ ಅಸಹಿಷ್ಣುತೆಗಳಿಂದ, ದುರಹಂಕಾರದ ಸಂಘರ್ಷಗಳಿಂದ ಪ್ರಸ್ತುತ ಜಗತ್ತನ್ನು ಬಿಡುಗಡೆಗೊಳಿಸಿ, ಮುಂದಿನ ಪೀಳಿಗೆಗೆ ಈ ನೆಲವನ್ನು ಬಾಳುವೆಯ ಹೊಲವನ್ನಾಗಿ ಉಳಿಸಲಿ ಎಂಬುದು ಜನಸಾಮಾನ್ಯರ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT