ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸ್ವಚ್ಛ ರಾಜಕಾರಣ ಅಭಿಯಾನ!

‘ಭ್ರಷ್ಟಾಚಾರಮುಕ್ತ ಭಾರತ’ ಎಂಬುದು ಜನಸಾಮಾನ್ಯರ ಘೋಷವಾಕ್ಯವಾದರೆ, ನವಭಾರತವು ಬೌದ್ಧಿಕವಾಗಿ, ರಾಜಕೀಯವಾಗಿ ಸ್ವಚ್ಛವಾಗಲು ಸಾಧ್ಯ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕೆಲವೇ ದಶಕಗಳ ಹಿಂದಿನ ರಾಜಕೀಯ ಚಿತ್ರಣವನ್ನು ಮತ್ತೆ ತೆರೆದು ನೋಡಿದರೆ ಸ್ಪಷ್ಟವಾಗಿ ಕಾಣಬಹುದಾದ ಒಂದು ದೃಶ್ಯ ಎಂದರೆ, ರಾಜಕೀಯ ಪಕ್ಷಗಳು ತಮ್ಮ ಪ್ರಾಮಾಣಿಕತೆ ಮತ್ತು ನೈತಿಕತೆಯ ಬಗ್ಗೆ ಎದೆ ಬಡಿದುಕೊಂಡು ಪ್ರಚಾರ ಮಾಡುತ್ತಿದ್ದುದು. ವೈಯಕ್ತಿಕ ನೈತಿಕತೆ, ವ್ಯಕ್ತಿಗತ ಪ್ರಾಮಾಣಿಕತೆ ಮತ್ತು ಆಡಳಿತ ನಿಷ್ಠೆ ಈ ಮೂರೂ ಮೌಲ್ಯಗಳನ್ನು ಹೊರನೋಟಕ್ಕಾದರೂ ಪ್ರದರ್ಶಿಸುವ ಮೂಲಕ ರಾಜಕೀಯ ನಾಯಕರು ತಮ್ಮ ಪಕ್ಷಗಳ ಬಲವೃದ್ಧಿಗಾಗಿ ಶ್ರಮಿಸುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು. ಈ ಪ್ರಚಾರದಲ್ಲಿ ಜನರ ಮುಂದೆ ಇಡಬಹುದಾದ ಚಹರೆಗಳೂ ಪಕ್ಷಗಳಿಗೆ ಲಭ್ಯವಾಗು ತ್ತಿದ್ದವು. ಅಟಲ್‌ ಬಿಹಾರಿ ವಾಜಪೇಯಿ ಇಂತಹ ಚಹರೆಗಳಲ್ಲಿ ಪ್ರಮುಖರಾಗಿದ್ದರು. ಬಿಜೆಪಿಯ ಹಿಂದುತ್ವ ಸಿದ್ಧಾಂತದ ಹೊರತಾಗಿಯೂ ಯುವ ರಾಜಕಾರಣಿಗಳು ಆ ಪಕ್ಷದ ಆಕರ್ಷಣೆಗೊಳಪಡಲು ವಾಜಪೇಯಿಯವರ ವ್ಯಕ್ತಿಗತ ಪ್ರಾಮಾಣಿಕತೆ ಆದರಣೀಯವಾಗಿತ್ತು.

ಸಂಸದೀಯ ಪ್ರಜಾತಂತ್ರದಲ್ಲಿ ಅಧಿಕಾರ ಗಳಿಸು ವುದೇ ಮುಖ್ಯ ಗುರಿಯಾಗುವುದರಿಂದ ಪಕ್ಷದ ಬಲವರ್ಧನೆಯ ಹಾದಿಯಲ್ಲಿ ಸಂಖ್ಯಾಬಲ ಪ್ರಧಾನ ಆಗುತ್ತದೆ. ವ್ಯಕ್ತಿಗತವಾಗಿ ನೈತಿಕ ಗುಣಮಟ್ಟ ಮತ್ತು ನಾಯಕತ್ವದ ಪ್ರಾಮಾಣಿಕತೆಯ ಮಾನದಂಡಗಳು ಹಿಂಬದಿಗೆ ಸರಿಯುತ್ತವೆ. ‘ತಿನ್ನುವುದೂ ಇಲ್ಲ, ತಿನ್ನಲು ಬಿಡುವುದೂ ಇಲ್ಲ’ ಎಂಬ ಉದಾತ್ತ ಘೋಷಣೆಯೊಡನೆ ಅಧಿಕಾರಕ್ಕೆ ಬಂದ ಬಿಜೆಪಿ, ತಿಂದು ತೇಗಿದವರ
ನ್ನೆಲ್ಲಾ ಇಂದು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತಿರುವುದನ್ನು ಗಮನಿಸಿದಾಗ, ‘ಭ್ರಷ್ಟ ರಾಜಕಾರಣಿಗಳು’ ಎಂಬ ಒಂದು ಪ್ರಭೇದವು ಸಂಸದೀಯ ಮಾನ್ಯತೆ ಪಡೆಯುತ್ತಿರುವುದು ಕಾಣುತ್ತದೆ. ಬಿಜೆಪಿಯು ಮೇಲೆ ಉಲ್ಲೇಖಿಸಿದ ಘೋಷಣೆಯೊಂದಿಗೆ ‘ತಿಂದವರನ್ನು, ತಿನ್ನುವವರನ್ನು ಮುಟ್ಟುವುದಿಲ್ಲ’ ಎಂದೇನೂ ಹೇಳಿಲ್ಲ. ಹಾಗಾಗಿ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿ, ಗಂಭೀರ ಆರೋಪ ಎದುರಿಸುತ್ತಿರುವವರೂ ಇಂದು ‘ಸ್ವಚ್ಛವಾಗುವ ಸಲುವಾಗಿ’ ಪಕ್ಷಾಂತರ ಮಾಡುತ್ತಿದ್ದಾರೆ.

ಭಾರತವನ್ನು ಬಯಲುಶೌಚ ಮುಕ್ತಗೊಳಿಸುವ ಸ್ವಚ್ಛ ಭಾರತ ಅಭಿಯಾನ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು, ದೇಶದ ಸಾರ್ವಜನಿಕ ವಾತಾವರಣ ಮತ್ತು ಪರಿಸರ ಸ್ವಚ್ಛವಾದಂತೆ ಕಾಣುತ್ತಿದೆ. ಆದರೆ ಈ ಸಾರ್ವಜನಿಕ ವಾತಾವರಣವನ್ನು ಬೌದ್ಧಿಕವಾಗಿ ಪ್ರಭಾವಿಸಬಹುದಾದ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚು ಕಲುಷಿತವಾಗುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ. ಯುವಮನಸ್ಸುಗಳನ್ನು ಪ್ರಭಾವಿಸು ವಂತಹ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಇಂದಿಗೂ ಇತಿಹಾಸದ ಬುಟ್ಟಿಯಿಂದಲೇ ಹೆಕ್ಕಿ ತೆಗೆಯಬೇಕಾದ ಸನ್ನಿವೇಶದಲ್ಲಿ ನವ ಭಾರತ ಮುನ್ನಡೆಯುತ್ತಿದೆ. ಸಮಕಾಲೀನ ರಾಜಕಾರಣದಲ್ಲಿ ಭವಿಷ್ಯದ ಪೀಳಿಗೆಗೆ ಆದರ್ಶಪ್ರಾಯವಾಗಬಹುದಾದ ಒಂದು ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ವರ್ತಮಾನ ಭಾರತ ಸೋತಿರುವುದು ಒಪ್ಪಲೇಬೇಕಾದ ಸತ್ಯ.

ಈ ಸನ್ನಿವೇಶದಲ್ಲಿ ಭಾರತೀಯ ಸಮಾಜ ಮತ್ತು ರಾಜಕಾರಣವನ್ನು ಕಾಡುತ್ತಿರುವ ರಾಜಕೀಯ ಭ್ರಷ್ಟಾಚಾರ ಮತ್ತು ಭ್ರಷ್ಟ ರಾಜಕಾರಣದ ಮಾದರಿಗಳು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುವ ಸಾಧ್ಯತೆಗಳಿವೆ. ತಾವು ಅಥವಾ ತಮ್ಮ ಪಕ್ಷ ಅಥವಾ ತಮ್ಮ ಪಕ್ಷದ ನೇತೃತ್ವದ ಸರ್ಕಾರ ಪ್ರಾಮಾಣಿಕ ಎಂದು ಎದೆಯುಬ್ಬಿಸಿ ಹೇಳುವ ನೈತಿಕತೆಯನ್ನೇ ಕಳೆದುಕೊಂಡಿರುವ ರಾಜಕೀಯ ವ್ಯವಸ್ಥೆಯಲ್ಲಿ ಕಡು ಭ್ರಷ್ಟಾಚಾರವೂ ಸಾಪೇಕ್ಷತೆಯನ್ನು ಪಡೆದುಕೊಂಡಿದೆ. ‘ನಾವು ಅವರಷ್ಟು ಭ್ರಷ್ಟರಲ್ಲ ಅಥವಾ ಅವರಿಗಿಂತಲೂ ಮೇಲು’ ಎನ್ನುವ ನಿರೂಪಣೆ ಸಾಮಾನ್ಯವಾಗಿದೆ.

ಒಂದು ದಶಕದ ಹಿಂದೆ ಭ್ರಷ್ಟಾಚಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರೆ ನೀಡಿದ ಅಣ್ಣಾ ಹಜಾರೆ ಅವರಂತಹ ಹಿರಿಯರೂ ಕೇಜ್ರಿವಾಲ್‌ ಅವರಿಗೆ ಶಿಕ್ಷೆಯಾದಾಗ ‘ಮಾಡಿದ್ದುಣ್ಣೋ ಮಹರಾಯ’ ಎಂಬ ಉಪಮೆಯನ್ನು ಬಳಸುತ್ತಾರೆ. ಆದರೆ ಕಣ್ಣೆದುರಿನಲ್ಲೇ ಅನಾವರಣವಾಗುತ್ತಿರುವ ಚುನಾವಣಾ ಬಾಂಡ್‌ ಸುತ್ತಲಿನ ಭ್ರಷ್ಟಾಚಾರದ ಕುರಿತು ಚಕಾರ ಎತ್ತುವುದಿಲ್ಲ.

ರಾಜಕೀಯ ವಲಯದಲ್ಲಿ ಭ್ರಷ್ಟತೆ, ಭ್ರಷ್ಟಾಚಾರ ಎನ್ನುವ ವಿದ್ಯಮಾನವು ಹೊಂದಾಣಿಕೆ, ಪರಸ್ಪರ ಹೋಲಿಕೆ ಅಥವಾ ದೋಷಾರೋಪದ ವಿಚಾರವಾಗಿ ಪ್ರಚಲಿತವಾಗಿದ್ದು, ಸಂಭಾವ್ಯ ಶಿಕ್ಷೆಯಿಂದ ತಪ್ಪಿಸಿ
ಕೊಳ್ಳುವುದಕ್ಕಾಗಿ ಅತ್ಯಂತ ಕಡು ಭ್ರಷ್ಟರೂ ‘ಸಮಾಜಸೇವೆ, ದೇಶಸೇವೆ, ಜನಸೇವೆ’ಯ ಹೆಸರಿನಲ್ಲಿ ಪಕ್ಷಾಂತರ ಮಾಡುತ್ತಿರುವುದು ನವ ಭಾರತದ ಹೊಸ ರಾಜಕೀಯ ಶಕೆಗೆ ನಾಂದಿ ಹಾಡಿದಂತಿದೆ. ಈ ವೇಳೆಗೆ ಪ್ರಬುದ್ಧತೆ ಪಡೆಯಬೇಕಿದ್ದ ಮತದಾರರೂ ಈ ಹೊಸ ಬೆಳವಣಿಗೆಯನ್ನು ಸ್ವೀಕರಿಸುತ್ತಾ, ನಾಯಕರೊಂದಿಗೆ ತಮ್ಮ ವೈಯಕ್ತಿಕ ನಿಷ್ಠೆಯನ್ನೂ ಬದಲಿಸುತ್ತಿರುವುದು ಇನ್ನೂ ಅಪಾಯಕಾರಿ ಬೆಳವಣಿಗೆ. ಮುಖ್ಯವಾಹಿನಿಯ ಹಲವು ಮಾಧ್ಯಮಗಳು ವೃತ್ತಿಪರತೆಯಿಂದ ದೂರ ಸರಿಯುತ್ತಿರುವ ಈ ಹೊತ್ತಿನಲ್ಲಿ, ಭಾರತದ ರಾಜಕಾರಣವನ್ನು ಸ್ವಚ್ಛಗೊಳಿಸುವ ಒಂದು ಅಭಿಯಾನ ಜನರ ಮಧ್ಯದಿಂದಲೇ ಆರಂಭವಾಗಬೇಕಿದೆ.

ರಾಜಕೀಯ ಪ್ರಣಾಳಿಕೆಗಳಲ್ಲಿ ಕಾಣಲಾಗದ ‘ಭ್ರಷ್ಟಾಚಾರಮುಕ್ತ ಭಾರತ’ ಎಂಬುದು ಜನಸಾಮಾನ್ಯರ ಘೋಷವಾಕ್ಯವಾದರೆ ನವಭಾರತವು ಬೌದ್ಧಿಕವಾಗಿ, ರಾಜಕೀಯವಾಗಿ ಸ್ವಚ್ಛವಾಗಲು ಸಾಧ್ಯ. ಭವಿಷ್ಯದ ಭಾರತಕ್ಕೆ ಬೇಕಿರುವುದು ಭ್ರಷ್ಟರನ್ನು ಸ್ವಚ್ಛವಾಗಿಸುವ ರಾಜಕೀಯ ಯಂತ್ರಗಳಲ್ಲ. ಪ್ರಜಾತಂತ್ರದ ಸಮೃದ್ಧ ಫಸಲಿನ ನಡುವೆ ಕಳೆಗಳಂತೆ ಇರುವ ಭ್ರಷ್ಟಾಚಾರದ ಬೇರುಗಳನ್ನು ಕಿತ್ತೊಗೆಯುವ ಬೌದ್ಧಿಕ ಯಂತ್ರಗಳು ಬೇಕಿವೆ. ಯುವಸಮೂಹ ಈ ದಿಸೆಯಲ್ಲಿ ಯೋಚಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT