ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಇನ್‌ಪುಟ್‌ ತೆರಿಗೆ: ಗೊಂದಲದ ಕಡೆಗೆ?

ಈ ತೆರಿಗೆ ಸೌಲಭ್ಯ ಇರುವುದು ನಾವು ಮಾಡುವ ವ್ಯಾಪಾರ ವಹಿವಾಟು, ಸೇವೆಗೆ ಮಾತ್ರ. ಅದನ್ನು ಸ್ವಂತಕ್ಕೆ ಬಳಸಿಕೊಂಡರೆ ಬ
Last Updated 29 ಮಾರ್ಚ್ 2023, 19:22 IST
ಅಕ್ಷರ ಗಾತ್ರ

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಎಂಬುದು ‘ಒಂದು ದೇಶ ಒಂದು ತೆರಿಗೆ’ ಎಂಬ ಘೋಷವಾಕ್ಯದೊಂದಿಗೆ 2017ರ ಜುಲೈ 1ರಂದು ಜಾರಿಯಾದ ಪರೋಕ್ಷ ತೆರಿಗೆ ಪದ್ಧತಿ. ಅದು ಇಂದಿನವರೆಗೂ ಶ್ರೀಸಾಮಾನ್ಯನಿಗೆ ಸಂಪೂರ್ಣವಾಗಿ ಅರ್ಥವಾಗಿಲ್ಲ
ಎಂಬುದು ಸರಳ ಸತ್ಯ. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದು ಐದೂವರೆ ವರ್ಷಗಳಾಗಿದ್ದರೂ ಇದುವರೆಗೆ 49 ಜಿಎಸ್‌ಟಿ ಮಂಡಳಿ ಸಭೆಗಳು ನಡೆದಿದ್ದರೂ ಜನರಲ್ಲಿ ಈ ತೆರಿಗೆ ಪದ್ಧತಿಯ ಬಗ್ಗೆ ಅನೇಕ ಗೊಂದಲಗಳಿವೆ.

ದೇಶದಲ್ಲಿ ಇಂದಿಗೂ ತೆರಿಗೆ ಎಂದರೆ ಮಾರುದೂರ ಹೋಗುವವರೇ ಹೆಚ್ಚು. ಕಾರಣ, ತೆರಿಗೆ ವಿಷಯದ ಬಗ್ಗೆ ನಮಗಿರುವ ಪೂರ್ವಗ್ರಹ, ಭಯ, ಇದು ನಮಗೆ ಅರ್ಥವಾಗುವ ವಿಷಯವಲ್ಲ ಎನ್ನುವ ಮನೋಭಾವ. ನಾವೂ ಪರೋಕ್ಷ ತೆರಿಗೆಯ ಮೂಲಕ ದೇಶದ
ಅಭಿವೃದ್ಧಿಯಲ್ಲಿ ಪಾಲುದಾರರು ಎನ್ನುವ ಸತ್ಯ ಕೂಡ ಅನೇಕ ಮಂದಿಗೆ ತಿಳಿದಿರುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನೇರ ಮತ್ತು ಪರೋಕ್ಷ ತೆರಿಗೆಯನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿಬಿಡುವ ಮಂದಿಯೂ ಬಹಳಷ್ಟಿದ್ದಾರೆ.

ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ತಿಳಿಯಬೇಕು. ಅದೆಂದರೆ, ನಾವು ಕೊಳ್ಳುವ ಐದು ರೂಪಾಯಿಯ ಚಾಕೊಲೇಟ್‌ನಿಂದ ಹಿಡಿದು ವಿಮಾನ ಖರೀದಿ ಮಾಡುವ ತನಕ, ನಾವು ಪಡೆಯುವ ಸೇವೆಯಿಂದ ಮೊದಲ್ಗೊಂಡು ಗುಂಡು ಪಿನ್ನಿನವರೆಗೆ ಪ್ರತಿಯೊಂದರಲ್ಲೂ ನಾವು ಜಿಎಸ್‌ಟಿ ಎನ್ನುವ ಪರೋಕ್ಷ ತೆರಿಗೆ ಕಟ್ಟುತ್ತಿರುತ್ತೇವೆ. ಹಾಗಾಗಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತೆರಿಗೆ ಪಾವತಿದಾರರೇ.

ಇದರ ನಡುವೆ ಒಂದು ಸುಳ್ಳು ಸಂದೇಶ ಜಿಎಸ್‌ಟಿ ಜಾರಿಯಾದಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಹರಿದಾಡುತ್ತಿದೆ. ಅದೇನೆಂದರೆ, ನೀವು ಕೊಳ್ಳುವ ಪ್ರತೀ ವಸ್ತು ಮತ್ತು ಪಡೆಯುವ ಸೇವೆಗೆ ಅನುಗುಣವಾಗಿ ಶೇಕಡಾವಾರು ತೆರಿಗೆ ಪಾವತಿ ಮಾಡುವಾಗ ಕೆಲವು ಕಡೆ ‘ಈ ಜಿಎಸ್‌ಟಿಯನ್ನು ನೀವು ವಾಪಸ್‌ ತೆಗೆದುಕೊಳ್ಳ ಬಹುದು, ನಿಮಗೆ ರೀಫಂಡ್‌ ಬರುತ್ತದೆ’ ಎನ್ನುವ ಸುಳ್ಳು ಸಲಹೆಗಳನ್ನು ಜನರ ನಡುವೆ ಹರಿಯಬಿಡಲಾಗುತ್ತದೆ. ಇದು ಎಷ್ಟು ಅಪಾಯಕಾರಿ ಎಂದರೆ, ಈ ರೀತಿ ಸಂಬಂಧಪಡದೇ ಇರುವ ಜಿಎಸ್‌ಟಿ ಇನ್‌ಪುಟ್‌ ಸೌಲಭ್ಯ ‍ಪಡೆದುಕೊಂಡ ಅದೆಷ್ಟೋ ಮಂದಿ ಜಿಎಸ್‌ಟಿ ನೋಂದಣಿದಾರರು ಬಡ್ಡಿ ಮತ್ತು ದಂಡದ ಸಮೇತ ಆದಾಯ ತೆರಿಗೆ ಇಲಾಖೆಗೆ ಮುಂದೊಂದು ದಿನ ಪಾವತಿಸಬೇಕಾಗುತ್ತದೆ.

ಅಸಲಿಗೆ ಜಿಎಸ್‌ಟಿ ಇನ್‌ಪುಟ್‌ ಎಂದರೇನು? ಒಬ್ಬ ವ್ಯಕ್ತಿ ಜಿಎಸ್‌ಟಿ ನೋಂದಣಿ ಪಡೆದುಕೊಂಡ ಮೇಲೆ ಯಾವುದೇ ವಸ್ತುವನ್ನು ಕೊಂಡರೆ ಅಥವಾ ಸೇವೆ ಪಡೆದುಕೊಂಡರೆ, ಅದರ ಮೇಲೆ ಹಾಕಲಾಗುವ ತೆರಿಗೆಯು ಮಾರಾಟಗಾರನಿಗೆ ಔಟ್‌ಪುಟ್‌ ತೆರಿಗೆಯಾದರೆ, ಕೊಂಡುಕೊಂಡ ವ್ಯಕ್ತಿಗೆ ಅದು ಹೂಡುವಳಿ (ಇನ್‌ಪುಟ್‌) ತೆರಿಗೆಯಾಗುತ್ತದೆ. ಹೀಗೆ ಕೊಂಡುಕೊಂಡ ವ್ಯಕ್ತಿ ಅದೇ ವಸ್ತುವನ್ನು ಬೇರೆಯವರಿಗೆ ಮಾರಾಟ ಮಾಡಿದಾಗ ಆತ ಅದಾಗಲೇ ಕಟ್ಟಿರುವ ತೆರಿಗೆಯನ್ನು ಇಲ್ಲಿ ಹೊಂದಾಣಿಕೆ ಮಾಡಬಹುದು ಮತ್ತು ಆತ ಮತ್ತೊಮ್ಮೆ ಆ ವಸ್ತುವಿನ ಬೆಲೆಯ ಮೇಲೆ ಜಿಎಸ್‌ಟಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಆತನ ಲಾಭದ ಮೇಲೆ ಮಾತ್ರ ತೆರಿಗೆ ಕಟ್ಟಬೇಕಾಗುತ್ತದೆ. ಒಟ್ಟಾರೆ, ಜಿಎಸ್‌ಟಿ ಪಾವತಿಸುವವರು ಯಾರು ಎನ್ನುವ ಸರಳ ಪ್ರಶ್ನೆಗೆ ಉತ್ತರ ಕಟ್ಟಕಡೆಯ ಗ್ರಾಹಕ ಎನ್ನುವುದೇ ಸತ್ಯ. ಹೀಗಿರುವಾಗ, ಈ ಇನ್‌ಪುಟ್‌ ತೆರಿಗೆ ಸೌಲಭ್ಯವು ಬರೀ ನಾವು ಮಾಡುವ ವ್ಯಾಪಾರ ವಹಿವಾಟಿಗೆ, ಸೇವೆಗೆ ಸಂಬಂಧಿಸಿದ್ದು ಮಾತ್ರ. ಅದನ್ನು ನಾವು ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸುವಾಗ ಬಳಸಿಕೊಳ್ಳಬಹುದು. ಮನೆ ಬಳಕೆಗೆ ಅಥವಾ ಸ್ವಂತಕ್ಕಾಗಿ ಖರೀದಿಸಿದ ವಸ್ತುವಿಗೆ ಜಿಎಸ್‌ಟಿ ನಂಬರ್‌ ಕೊಟ್ಟು, ಸಂಸ್ಥೆಯ ಹೆಸರಿಗೆ ಬಿಲ್ಲನ್ನು ತೆಗೆದುಕೊಳ್ಳಲು ಬರುವುದಿಲ್ಲ. ಆದರೆ, ಈ ಕುರಿತು ತಿಳಿದೋ ತಿಳಿಯದೆಯೋ ಹೂಡುವಳಿ ತೆರಿಗೆ ಸೌಲಭ್ಯ ಉಪಯೋಗಿಸಿಕೊಂಡಿರುವ ಹಲವಾರು
ಉದಾಹರಣೆಗಳಿವೆ.

ಇಲಾಖೆಯ ಗಮನಕ್ಕೆ ಈ ವಿಷಯ ಬಂದು ಅದು ನಿಮಗೆ ನೋಟಿಸ್‌ ಜಾರಿ ಮಾಡುವ ವೇಳೆಗಾಗಲೇ ನೀವು ಇನ್‌ಪುಟ್‌ ಸೌಲಭ್ಯ ಪಡೆದುಕೊಂಡು ವರ್ಷಗಳೇ ಕಳೆದುಹೋಗಿರುತ್ತವೆ ಮತ್ತು ನೀವು ಅನಿವಾರ್ಯವಾಗಿ ಹೂಡುವಳಿ ತೆರಿಗೆಯನ್ನು ಬಡ್ಡಿ ಮತ್ತು ದಂಡದ ಸಮೇತ ಇಲಾಖೆಗೆ ಪಾವತಿಸಬೇಕಾಗುತ್ತದೆ. ವರ್ಷಗಳು ಕಳೆದಷ್ಟೂ ಬಡ್ಡಿ ಮತ್ತು ದಂಡದ ಮೊತ್ತ ಏರುತ್ತಲೇ ಇರುತ್ತದೆ.

ಇಂತಹ ಪ್ರಕರಣಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಜರುಗಿಸಬಹುದು? ವ್ಯವಹಾರಕ್ಕೆ ಸಂಬಂಧಿಸದ ಹೂಡುವಳಿ ತೆರಿಗೆ ಅಥವಾ ಇನ್‌ಪುಟ್‌ ತೆರಿಗೆ ಉಪಯೋಗಿಸುವುದರಿಂದ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ ಸೆಕ್ಷನ್‌ 61ರ ಪ್ರಕಾರ ರಿಟರ್ನ್ಸ್‌ ಪರಿಶೀಲನೆ, ಸೆಕ್ಷನ್‌ 65ರ ಪ್ರಕಾರ ಲೆಕ್ಕಪರಿಶೋಧನೆಗೆ ಕ್ರಮ, ಸೆಕ್ಷನ್‌ 73ರ ಪ್ರಕಾರ ನ್ಯಾಯ ನಿರ್ಣಯ ಮತ್ತು ದುರುದ್ದೇಶಪೂರ್ವಕ ಎಂಬುದು ಸಾಬೀತಾದರೆ ಸೆಕ್ಷನ್‌ 74ರ ಅಡಿಯಲ್ಲಿ ಬಡ್ಡಿ ಮಾಸಿಕ ಶೇ 1.5ರಂತೆ, ದಂಡದ ಜೊತೆಗೆ ಹೂಡುವಳಿ ತೆರಿಗೆ ಕಟ್ಟಲು ಇಲಾಖೆ ಕ್ರಮ ಜರುಗಿಸಬಹುದು.

ಹೀಗಾಗಿ, ನಿಮ್ಮ ಬಳಿ ಜಿಎಸ್‌ಟಿ ಸಂಖ್ಯೆ ಇದೆ ಅಂದಾಕ್ಷಣ ಅದನ್ನು ವೈಯಕ್ತಿಕ ಬಳಕೆಗೆ, ಮನೆಗೆ ಸಾಮಾನು ಸರಂಜಾಮು ಕೊಳ್ಳುವಾಗ ಕೊಡುವಂತಿಲ್ಲ. ವ್ಯವಹಾರಕ್ಕೆ ಸಂಬಂಧಿಸಿದ ಖರೀದಿಗಳಿಗೆ ಮಾತ್ರ ನೀವು ಅದನ್ನು ಉಪಯೋಗಿಸಬೇಕು ಎನ್ನುವ ಸರಳ ಸತ್ಯ ನಿಮಗೆ ತಿಳಿದಿರಲಿ. ಇಲ್ಲವಾದರೆ ಮುಂದೊಂದು ದಿನ ದಂಡ ಮತ್ತು ಬಡ್ಡಿಯ ಸಮೇತ ಕಟ್ಟಬೇಕಾದುದು ಅನಿವಾರ್ಯವಾದೀತು, ಎಚ್ಚರ…!

ಲೇಖಕಿ: ತೆರಿಗೆ ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT