ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ, ದೇಶಭಕ್ತ ಮತ್ತು ಕಪಿಕುಣಿತ

Last Updated 7 ಮಾರ್ಚ್ 2019, 8:30 IST
ಅಕ್ಷರ ಗಾತ್ರ

ಚುನಾವಣೆಯ ಸಂದರ್ಭ ಬಂದಾಗ ಆಳುವ ಪಕ್ಷವೊಂದು ಮಿಲಿಟರಿಯನ್ನು ತನ್ನ ಸ್ವಂತದ್ದೆಂಬಂತೆ ಡೇಂಜರಸ್ ಮಟ್ಟದಲ್ಲಿ ಝಳಪಿಸುವಾಗ ಒಂದು ಗಂಭೀರ ಪ್ರಶ್ನೆ ಎದುರಾಗುತ್ತದೆ: ಪತ್ರಕರ್ತನೊಬ್ಬ ತನ್ನ ದೇಶದ ರಕ್ಷಣಾ ಸಾಮರ್ಥ್ಯವನ್ನು ಪ್ರಶ್ನಿಸಿದರೆ ಅದು ರಾಷ್ಟ್ರದ್ರೋಹವಾದೀತೆ? ಈಗಂತೂ (1) ಬಹುಪಾಲು ಮಾಧ್ಯಮಗಳು ಮಾಹಿತಿರಂಜನಾ ಉದ್ಯಮವಾಗಿದ್ದು, ಹೇಗೋ ಲಾಭ ಗಳಿಸುವುದೇ ಅವುಗಳ ಉದ್ದೇಶವಾಗಿದೆ (2) ಸುಳ್ಳು ಸುದ್ದಿ ಮತ್ತು ಭ್ರಾಮಕ ಚಿತ್ರಣ ನೀಡಬಲ್ಲ ಗ್ರಾಫಿಕ್ ತಂತ್ರಜ್ಞಾನ ಅವುಗಳಿಗೆ ಲಭಿಸಿದೆ. ಎಲ್ಲಕ್ಕಿಂತ ದೊಡ್ಡ ಅಪಾಯ ಏನೆಂದರೆ ಅವು (3) ಆಳುವ ಸರಕಾರದ ಕೈಗೊಂಬೆಗಳಾಗಿವೆ ಅಥವಾ ಆಳುವ ಸರಕಾರವನ್ನೇ ಕುಣಿಸುವ ಮಟ್ಟಕ್ಕೆ ಉದ್ಯಮಿಗಳು ಬೆಳೆದು ನಿಂತಿದ್ದಾರೆ.

ಈ ಮಧ್ಯೆ ಈ ಸಾಮಾಜಿಕ ತಾಣಗಳಲ್ಲಿ ಕಪಿಕುಣಿತ ! ರಾಯಿಟರ್ಸ್ ಬಗೆಗಾಗಲೀ ಇಸ್ರೇಲಿ ಸ್ಪೈಸ್ ಬಾಂಬ್ ಬಗೆಗಾಗಲೀ ಏನೂ ಗೊತ್ತಿಲ್ಲದವರೂ ಮಾಧ್ಯಮದ ಅಂಗಳಕ್ಕೆ ಬಂದು ಕಪಿಕುಣಿತ ಮಾಡಬಹುದಾಗಿದೆ (ಬಾಲಿ ದ್ವೀಪದಲ್ಲಿ ಆಗಾಗ ನಡೆಯುವ “ಕೆಕಾಕ್’” ಎಂಬ ಕಪಿನೃತ್ಯದ ಚಿತ್ರ ಇಲ್ಲಿದೆ). ಈಗಿನ ಸಂದರ್ಭ ಹೇಗಿದೆ ಎಂದರೆ- ಸೆರೆ ಕುಡಿದು ಕುಣಿಯುವ ಕಪಿಗೆ, ಚೇಳು ಕಚ್ಚಿ, ಭೂತ ಸಂಚಾರ ಆದಂತೆ. ಅವು ಹೀಗೆ ಕುಣಿಯುವಾಗ ಹೊಣೆಗೇಡಿ ಮಾಧ್ಯಮಗಳು ತಮ್ಮ ಅತಿರಂಜಿತ ಡೋಲು ಬಜಾಯಿಸುತ್ತ ಭಂಗೀ ಪಾನಕ ಕುಡಿಸುತ್ತವೆ. ಪ್ರಾಮಾಣಿಕ ಪ್ರಶ್ನೆಗಳನ್ನು ಎತ್ತಿದವರನ್ನು ಮಕಾಡೆ ಮಲಗಿಸಿ ಕಪಿಗಳು ಕುಣಿಯುತ್ತವೆ.

ಯಾವ ರಾಜಕೀಯ ಪಕ್ಷಕ್ಕೂ ಸೇರಿರದ, ಸ್ವಾರ್ಥಲಾಲಸೆ ಇಲ್ಲದ ಪತ್ರಕರ್ತರು ದೇಶದ ಭದ್ರತೆಯಲ್ಲಿ ಏನೇ ಲೋಪ ಉಂಟಾದಾಗಲೂ ಪ್ರಶ್ನಿಸಬೇಕು. ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ವೈಫಲ್ಯಗಳನ್ನು ಪ್ರಶ್ನಿಸುತ್ತಿರಬೇಕು. ಅದು ಕೊಳಕು ಉದ್ಯಮಿಗಳಿಗೆ ಮಣೆ ಹಾಕುತ್ತ, ಜನರತ್ತ ಅಭಿವೃದ್ಧಿಯ ಮಂಕುಬೂದಿ ಎರಚುತ್ತ, ಬಡವ-ಶ್ರೀಮಂತರ ನಡುವಣ ಅಂತರವನ್ನು ದಿನದಿನಕ್ಕೂ ಹೆಚ್ಚಿಸುತ್ತ, ಜಾತಿಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತ, ಅಂಕಿಸಂಖ್ಯೆಗಳನ್ನು ತಿರುಚುತ್ತ, ದೇಶದ ಅಡಿಪಾಯವನ್ನೇ ಬದಲಿಸುವ ಮಾತಾಡುತ್ತ, ಮಾತಿನಲ್ಲೇ ಮನೆ ಕಟ್ಟುತ್ತಿದ್ದರೆ -ಅದನ್ನು ಪ್ರಶ್ನಿಸಬೇಕು. ಪಕ್ಕದ ಮನೆಯಲ್ಲಿ ಚೇಳುಗಳಿವೆಯಾದ್ಧರಿಂದ ಆ ಮನೆಯನ್ನೇ ಕೆಡವಿ ಹಾಕಬೇಕೆಂಬ ಮನಸ್ಥಿತಿಯನ್ನು ಪ್ರಶ್ನಿಸಬೇಕು. “ಚೇಳುಗಳನ್ನು ಮಾತ್ರ ಹೊಡೆಯುತ್ತೇವೆ” ಎಂದು ರಣದುಂಧುಭಿ ಊದುತ್ತ, ಆ ಕೆಲಸವೂ ವಿಫಲವಾದಾಗ “ಇನ್ನೂ ದೊಡ್ಡ ಬ್ರಹ್ಮಾಸ್ತ್ರ ಇದ್ದಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು” ಎಂದು ತನ್ನದೇ ದೇಶದ ಪ್ರತಿಪಕ್ಷದ ಮೇಲೆ ಪ್ರಹಾರ ಮಾಡುವುದನ್ನು ಪ್ರಶ್ನಿಸಬೇಕು.

ಈ ಯಾವ ಪ್ರಶ್ನೆಗಳೂ ದೇಶವಿರೋಧಿ ಕೆಲಸ ಆಗಲಾರದು. ಅದು ಸೈನಿಕರನ್ನು ಅವಮಾನಿಸಿದಂತೆಯೂ ಆಗಲಾರದು. ಬದಲಿಗೆ, ಆಳುವ ಪಕ್ಷದ ವೈಫಲ್ಯಗಳೇ ಅದರ ಮಹಾ ಸಾಧನೆ ಎಂಬಂತೆ ಕಪಿಕುಣಿತ ಮಾಡುವುದೇ ದೇಶವಿರೋಧಿ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT