‘ಭಯಂಕರ ಭೈರಾಗಿ’, ‘ಜಾದೂಗಾರ ಜಗದೀಶ’... ಆ ಕಾದಂಬರಿ ಹೆಸರುಗಳೇ ಎಷ್ಟು ರೋಮಾಂಚಕ! ಇನ್ನು ನಮ್ಮದೇ ಶೆರ್ಲಾಕ್ ಹೋಮ್ಸ್, ವಾಟ್ಸನ್ಗಳಾದ ಪತ್ತೆದಾರಿ ಪುರುಷೋತ್ತಮ, ಮಧುಸೂದನ, ಅರಿಂಜಯ, ಪ್ರತಾಪ– ಇಂಥ ನಿಗೂಢ ವರ್ಚಸ್ಸಿನ ಪತ್ತೆದಾರರು!

ಆಗ ತಾನೇ ಓದು ಕಲಿತು ಪಠ್ಯಪುಸ್ತಕಗಳ ಆಚೆಗೆ ಕೈ ಚಾಚಿದ ಎಳೆಯಲೋಕವನ್ನು ಆವರಿಸಿಕೊಂಡು ನಮಗೆ ಅಪಾರ ಸಂತೋಷ ನೀಡಿದ್ದು, ಆ ಪತ್ತೆದಾರಿ ಪ್ರಪಂಚ. ಓದಿನ ಸುಖವನ್ನು ನಮಗೆ ಪರಿಚಯಿಸಿದ್ದೇ ಪತ್ತೆದಾರಿ ಪಿತಾಮಹ ಎನ್. ನರಸಿಂಹಯ್ಯ (ಸೆ. 18, 1925 – ನ. 25, 2011). ಸಹಜವಾಗಿಯೇ ಆಗಿನ ಸರ್ಕ್ಯುಲೇಟಿಂಗ್ ಲೈಬ್ರರಿಗಳಲ್ಲಿ ನರಸಿಂಹಯ್ಯನವರ ಕಾದಂಬರಿಗಳಿಗೆ ಬೇಡಿಕೆ. ಸರಳ ಭಾಷೆ, ಸರಳ ಕಥಾಹಂದರಗಳ ಮೂಲಕ ಅವರು ಸೃಷ್ಟಿಸುತ್ತಿದ್ದ ಕೌತುಕಮಯ ಪತ್ತೆದಾರಿ ಜಗತ್ತು, ಓದು ಬಲ್ಲ ಎಲ್ಲರನ್ನೂ ತಣಿಸುತ್ತಿತ್ತು. ಇನ್ನಷ್ಟು ಮತ್ತಷ್ಟು ಓದಲು ಪ್ರೇರೇಪಿಸುತ್ತಿತ್ತು. ಒಂದು ಪುಸ್ತಕವನ್ನು ಓದಿ ಮುಗಿಸುತ್ತಿದ್ದಂತೆಯೇ ಇನ್ನೊಂದು ಪುಸ್ತಕ ನಮಗಾಗಿ ಕಾದಿರುತ್ತಿತ್ತು.

ಆಗ ನಾವು ಪ್ರೈಮರಿ ಶಾಲೆ ಮುಗಿಸಿ ಅದೇ ತಾನೇ ಮಾಧ್ಯಮಿಕ ಹಂತಕ್ಕೆ ಕಾಲಿಟ್ಟಿದ್ದೆವು. ನಮ್ಮಂಥ ಎಳೆ ಮನಸ್ಸುಗಳನ್ನು ಪುಸ್ತಕಲೋಕಕ್ಕೆ ಕರೆದೊಯ್ದು ಮನದಣಿಸಿ, ಅಭಿರುಚಿ ಎಂಬ ಶಬ್ದವೇ ತಿಳಿದಿರದಿದ್ದ ವಯಸ್ಸಿನಲ್ಲಿ ಯಾವುದೋ ನಿರಾಕಾರ ಅಭಿರುಚಿಯ ಜಲ ಉಕ್ಕಿಸುತ್ತಿದ್ದವರು ನರಸಿಂಹಯ್ಯ. ಅವರ ಕೃತಿಗಳನ್ನು ಹುಡುಹುಡುಕಿ ತಂದು ಓದುತ್ತಿದ್ದಾಗ, ಅವರ ಅಥವಾ ಆ ಕೃತಿಗಳ ಮಹತ್ವ ತಿಳಿದಿರಲಿಲ್ಲ. ಆ ಕೃತಿಗಳ ಲೇಖಕ ಎನ್. ನರಸಿಂಹಯ್ಯ– ನಾನೊಬ್ಬನಲ್ಲ, ನನ್ನ ತಲೆಮಾರು ಸೇರಿದಂತೆ ಸುಮಾರು ನಾಲ್ಕು ಪೀಳಿಗೆಯ ಕನ್ನಡಿಗರಿಗೆ ಓದಿನ ರುಚಿ ಹತ್ತಿಸಿದ ಮಹಾಪುರುಷ!

ನರಸಿಂಹಯ್ಯನವರಿಂದ ಆರಂಭವಾದ ಓದು ಕ್ರಮೇಣ ಪ್ರೌಢ ಅಭಿರುಚಿಯತ್ತ ನಮ್ಮನ್ನು ಎಳೆದೊಯ್ದಿತು. ಅನಕೃ, ತರಾಸು, ತ್ರಿವೇಣಿ, ಮತ್ತೂ ಮುಂದಕ್ಕೆ ಭೈರಪ್ಪ, ಲಂಕೇಶ್, ತೇಜಸ್ವಿ, ದೇವನೂರು, ಕುವೆಂಪು, ಕಾರಂತ– ಇವರೆಲ್ಲ ನಮ್ಮ ಓದಿನ ವಲಯಕ್ಕೆ ಒಬ್ಬೊಬ್ಬರಾಗಿ ಹೆಜ್ಜೆಯಿಟ್ಟರು. ಇನ್ನೂ ಮುಂದಕ್ಕೆ ಟಾಲ್ಸ್ಟಾಯ್, ದಾಸ್ತೊವ್ಸ್ಕಿ, ಷೇಕ್ಸ್ಪಿಯರ್ ಮುಂತಾಗಿ ಜಗತ್ತಿನ ಸರ್ವಶ್ರೇಷ್ಠ ಲೇಖಕರೂ ನಮ್ಮವರೇ ಆಗತೊಡಗಿದರು. ಅವರೆಲ್ಲರಿಗೆ ಪ್ರವೇಶ ಸಿಕ್ಕಿದ್ದು ನರಸಿಂಹಯ್ಯ ಎಂಬ ಈ ನಮ್ರ ಲೇಖಕ ತೆರೆದಿಟ್ಟ ಬಾಗಿಲು, ಕಿಟಕಿಗಳ ಮೂಲಕವೇ.

ನರಸಿಂಹಯ್ಯನವರನ್ನು ಈ ಘಟ್ಟದಲ್ಲಿ ನಿಂತು ಮತ್ತೆ ಓದಿದರೆ ನಮಗೆ ಹಳೆಯ ಎಳೆಯ ಮುಗ್ಧ ಸಂತೃಪ್ತಿ ದೊರೆಯದಿರಬಹುದು. ಆದರೆ, ಅವರೊಬ್ಬರು ಸಿಕ್ಕದಿದ್ದರೆ ನನ್ನಂಥ ಸಹಸ್ರಾರು ಓದುಗರಿಗೆ ಓದಿನ ರುಚಿಯೇ ಹತ್ತುತ್ತಿರಲಿಲ್ಲ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ? ಇಂದು ನಾವು ಎಂ.ಎ, ಪಿಎಚ್.ಡಿ.ಗಳ ಮಟ್ಟ ಮುಟ್ಟಬೇಕಾದರೆ ಅದು ಒಂದನೇ ಎರಡನೇ ತರಗತಿಗಳ ಹಂತದ ಮೂಲಕವೇ ಆರಂಭವಾಗಬೇಕಲ್ಲವೇ? ಹಾಗೆ ನಮ್ಮ ಪಾಲಿಗೆ ಎನ್. ನರಸಿಂಹಯ್ಯನವರಿಲ್ಲದೆ ನಮ್ಮ ಪಯಣ ಷೇಕ್ಸ್ಪಿಯರ್ವರೆಗೆ ಸಾಗುವುದು ಸಾಧ್ಯವಿತ್ತೇ?

ಬರೀ ನಾಲ್ಕನೇ ತರಗತಿ ಓದಿ, ಜೀವನ ನಿರ್ವಹಣೆಗೆ ಯಾವ್ಯಾವುದೋ ಉದ್ಯೋಗಗಳನ್ನು ಮಾಡಿ, ಕಡೆಗೆ ಅಚಾನಕ್ಕಾಗಿ ಬರವಣಿಗೆಯ ದಾರಿ ಹುಡುಕಿಕೊಂಡ ನರಸಿಂಹಯ್ಯನವರ ಬದುಕೇ ಒಂದು ರೋಮಾಂಚಕ ಕಥಾನಕ. ಮೊದಮೊದಲು, ನಾನೂ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಅದು ಹೇಗೆ ಕುದುರಿಸಿಕೊಂಡರೋ ತಿಳಿಯದು. ಒಮ್ಮೆ ಆರಂಭಿಸಿದ ಮೇಲೆ ಅವರನ್ನು ತಡೆಯುವವರೇ ಇರಲಿಲ್ಲ. ಬರೆದರು, ಬರೆದೇ ಬರೆದರು. ಕೆಲವೊಮ್ಮೆ ದುಡ್ಡು ಪಡೆದು ಒಂದೇ ರಾತ್ರಿಯಲ್ಲಿ ಒಂದು ಕಾದಂಬರಿ ಪೂರ್ಣಗೊಳಿಸಿ ಕೊಟ್ಟಿದ್ದೂ ಇದೆ! ಆರಂಭದಲ್ಲಿ ಪ್ರಕಾಶಕರು ಇವರನ್ನು ಮೋಸ ಮಾಡಿದ ಪ್ರಸಂಗಗಳಿಗೇನೂ ಕೊರತೆಯಿಲ್ಲ. ಒಮ್ಮೆ ಜನಪ್ರಿಯತೆಯ ಅಂದಾಜು ಸಿಕ್ಕ ಮೇಲೆ ಅವರು ಪತ್ತೆದಾರಿ ಸಾಮ್ರಾಟರೇ ಆಗಿಹೋದರು.

ಅವರು ದುಡ್ಡು ಮಾಡಿದರೇ? ಮಾಡಿದರು. ಆಗಿನ ಲೆಕ್ಕದಲ್ಲಿ ಎಷ್ಟು ಸಿಗಬಹುದಿತ್ತೋ ಅಷ್ಟು ಅವರಿಗೆ ಸಿಕ್ಕಿತು. ಸಿಕ್ಕಿದಷ್ಟನ್ನೂ ಜೋಪಾನ ಮಾಡಿದರು. ನಶ್ಯ ಸೇವನೆ ಬಿಟ್ಟು ಬೇರೆ ಯಾವ ಚಟವನ್ನೂ ಅಂಟಿಸಿಕೊಳ್ಳದ ನರಸಿಂಹಯ್ಯ ಸ್ವಂತ ದುಡಿಮೆಯಿಂದಲೇ ಚಿಕ್ಕದೊಂದು ಮನೆ ಕಟ್ಟಿಕೊಂಡರು. ಮಕ್ಕಳಿಗೆ ವಿದ್ಯೆ ಕೊಟ್ಟರು, ಮದುವೆ ಮಾಡಿದರು. ಜತನವಾಗಿ ಬದುಕು ಕಟ್ಟಿಕೊಂಡು ತಮ್ಮ ಪಾಡಿಗೆ ತಾವು ಬದುಕಿದರು. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ನಿಜ ಕೊಡುಗೆ ಏನೆಂಬುದರ ಆಳಅಗಲವನ್ನೂ ಅರಿಯದೆ ವಿನಯದಿಂದ ಬರೆದು ಬದುಕಿ, ಓದುಗರೆದೆಯಲ್ಲಿ ಉಳಿದುಹೋದರು.

ಇದು ಅವರ ಜನ್ಮಶತಮಾನೋತ್ಸವ ವರ್ಷ. ಕನ್ನಡಲೋಕ ನರಸಿಂಹಯ್ಯನವರನ್ನು ಹಾಗೂ ಬೆಲೆ ಕಟ್ಟಲಾಗದ ಅವರ ಮಹತ್ತರ ಕೊಡುಗೆಯನ್ನು ಸಂಪೂರ್ಣ ಕಡೆಗಣಿಸಿದೆ. ಐನೂರಕ್ಕೂ ಹೆಚ್ಚು ಕಾದಂಬರಿ ಬರೆದ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಇಂದಿಗೂ ಉದ್ಯಾನವಿಲ್ಲ, ವೃತ್ತವಿಲ್ಲ, ಒಂದು ರಸ್ತೆಯೂ ಇಲ್ಲ. ಅವರನ್ನು ನೆನಪಿಸುವ ಯಾವ ಸ್ಮಾರಕವೂ ಇಲ್ಲಿಲ್ಲ. ನನ್ನಂಥ ಸಹಸ್ರಾರು ಮಂದಿಯನ್ನು ಓದಿನ ಪ್ರಪಂಚಕ್ಕೆ ಕರೆ ತಂದ ಆ ಮಹಾನುಭಾವರನ್ನು ಸ್ಮರಿಸಲು ನಾವು ಕನ್ನಡಿಗರು ಏನು ಮಾಡಿದ್ದೇವೆ?

ಈಗಲಾದರೂ ಅವರ ನೆನಪನ್ನು ಉಳಿಸಲು ಈ ಸಮಾಜ, ಸರ್ಕಾರ, ಮಹಾನಗರ ಪಾಲಿಕೆ ಏನೂ ಮಾಡುವುದು ಬೇಡವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.