ಎಂಬತ್ತು ತೊಂಬತ್ತರ ದಶಕದಲ್ಲಿ ಇದ್ದುದು, ನವದೆಹಲಿಯ ದೂರದರ್ಶನ ಕೇಂದ್ರ ಒಂದೇ. ನಂತರದ ದಿನಗಳಲ್ಲಿ ಕನ್ನಡದಲ್ಲಿ ‘ಚಂದನ’ ಸೇರಿದಂತೆ, ಆಯಾ ರಾಜ್ಯಗಳಲ್ಲಿ ಭಾಷಾವಾರು ವಾಹಿನಿಗಳು ಆರಂಭಗೊಂಡವು. ಎಲ್ಲದಕ್ಕೂ ಅದರದ್ದೇ ಆದ ಅಸ್ತಿತ್ವ ಮತ್ತು ವೈವಿಧ್ಯ. ಪ್ರಸಾರದ ಕಾಲಾವಕಾಶ, ತಂತ್ರಜ್ಞಾನ, ಸೌಲಭ್ಯಗಳು ಸೀಮಿತವಾಗಿದ್ದವು. ಆದರೆ, ಎಂಥದ್ದೇ ಕಾರ್ಯಕ್ರಮ ಅಥವಾ ಧಾರಾವಾಹಿಯೇ ಆಗಿರಲಿ, ಹೆಚ್ಚು ಪುನರಾವರ್ತನೆ ಅಥವಾ ಏಕತಾನತೆಗೆ ಅವಕಾಶ ಇರಲಿಲ್ಲ. ಎಲ್ಲದಕ್ಕೂ ಮಿತಿ ಎಂಬುದು ಇತ್ತು.

ಹಿಂದಿ ಚಿತ್ರಗೀತೆಗಳಿಗೆ ಭಾನುವಾರ ‘ರಂಗೋಲಿ’, ಮತ್ತು ಬುಧವಾರ ‘ಚಿತ್ರಹಾರ’, ಕನ್ನಡ ಚಿತ್ರಗೀತೆಗಳಿಗೆ ಗುರುವಾರ ‘ಚಿತ್ರಮಂಜರಿ’ ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. ವಾರಾಂತ್ಯದಲ್ಲಿ ಚಲನಚಿತ್ರ ಪ್ರದರ್ಶನ ಇರುತ್ತಿತ್ತು. ಶಾಸ್ತ್ರೀಯ ಸಂಗೀತ, ರಂಗಭೂಮಿ, ಕೃಷಿ ಚಟುವಟಿಕೆ, ಮಕ್ಕಳ ಧಾರಾವಾಹಿ, ಹೀಗೆ ಕಾರ್ಯಕ್ರಮ ವೈವಿಧ್ಯ ಇರುತ್ತಿತ್ತು.

ಖಾಸಗಿ ವಾಹಿನಿಗಳು ಆರಂಭವಾದಾಗಲೂ, ಒಂದೇ ರೀತಿಯ ಕಾರ್ಯಕ್ರಮ ಅಥವಾ ಧಾರಾವಾಹಿಗಳು ಪ್ರಸಾರ ಆಗದಂತೆ ಎಚ್ಚರ ವಹಿಸಲಾಗಿತ್ತು. ಧಾರಾವಾಹಿಗಳಿಗೆ ಇದ್ದಷ್ಟೇ ಪ್ರಾಮುಖ್ಯ ಸಾಕ್ಷ್ಯಚಿತ್ರ, ಕಿರುಚಿತ್ರ, ವಿಶೇಷ ಟೆಲಿಚಿತ್ರಗಳಿಗೂ ಇರುತ್ತಿತ್ತು.

ಮಧ್ಯಾಹ್ನ, ಸಂಜೆ ಅಥವಾ ರಾತ್ರಿ ಪ್ರಸಾರ ಆಗುತ್ತಿದ್ದ ಧಾರಾವಾಹಿಗಳಲ್ಲೂ ವೈವಿಧ್ಯ ಇರುತ್ತಿತ್ತು. ಕೂಡು ಕುಟುಂಬದ ಬವಣೆಗಳು ಒಂದರಲ್ಲಿ ಇದ್ದರೆ, ಇನ್ನೊಂದರಲ್ಲಿ ಪುಟ್ಟ ಕುಟುಂಬದ ಬದುಕಿನ ಸವಾಲುಗಳು ಕಾಣಸಿಗುತ್ತಿದ್ದವು. ಶ್ರೀಮಂತ ವರ್ಗದವರ ಬದುಕಿನೊಂದಿಗೆ, ಮಧ್ಯಮವರ್ಗ– ಬಡವರ ಜೀವನವೂ ಅಲ್ಲಿ ಅನಾವರಣ ಆಗುತ್ತಿತ್ತು. ಸಂಸಾರದಲ್ಲಿನ ಹಾಸ್ಯ, ಮನರಂಜನೆಗೆ ಪ್ರತ್ಯೇಕ ಧಾರಾವಾಹಿಗಳು ಇರುತ್ತಿದ್ದವು. ಎಲ್ಲಾ ಜಾತಿ, ಧರ್ಮದವರ ಸಂಸ್ಕೃತಿ ಕಥನಗಳಲ್ಲಿ ಬಿಂಬಿತಗೊಳ್ಳುತ್ತಿದ್ದವು. ಧಾರಾವಾಹಿಗಳ ಪ್ರಸಾರ ಅವಧಿಯನ್ನು 13 ಕಂತುಗಳಿಗೆ ನಿರ್ಬಂಧಿಸಲಾಗುತ್ತಿತ್ತು. ಜನಪ್ರಿಯತೆ ಮತ್ತು ಬೇಡಿಕೆ ಮೇರೆಗೆ ಕೆಲವೊಂದಕ್ಕೆ ಮಾತ್ರ ರಿಯಾಯಿತಿ ಇರುತ್ತಿತ್ತು; ವೀಕ್ಷಕರ ಅಭಿಪ್ರಾಯಗಳಿಗೆ ಒತ್ತು ನೀಡಲಾಗುತ್ತಿತ್ತು.

ವರ್ಷಗಳು ಕಳೆದಂತೆ ಹಿಂದಿಯಲ್ಲಿ ಉದ್ಯಮ ಬದುಕು ಕುರಿತು ‘ಸ್ವಾಭಿಮಾನ’, ಮಹಿಳಾ ಸಬಲೀಕರಣ ಕುರಿತು ‘ಶಾಂತಿ’ ಮೆಗಾ ಧಾರಾವಾಹಿಗಳು, ಕನ್ನಡದಲ್ಲಿ ಕೌಟುಂಬಿಕ ಒಗ್ಗಟ್ಟಿನ ಕುರಿತು ‘ಮನೆತನ’ ಮತ್ತು ನಿರುದ್ಯೋಗಿ ಯುವಜನರ ಸಾಹಸಗಳ ಬಗ್ಗೆ ‘ಸಾಧನೆ’ ಮೆಗಾ ಧಾರಾವಾಹಿಗಳ ಪ್ರಸಾರ ಆರಂಭವಾದವು. ಇವು ಕುತೂಹಲ ಕಾಯ್ದುಕೊಂಡವು; ದೀರ್ಘಕಾಲ ಎಳೆಯಲಾಗುತ್ತಿದೆ ಎಂಬ ಭಾವನೆ ಮೂಡಲಿಲ್ಲ. ಸೈನಿಕರ ಬದುಕು ಆಧರಿಸಿದ ಕಥೆಗಳು, ಪತ್ತೇದಾರಿ ಕಥೆಗಳು, ವ್ಯಕ್ತಿಗತ ಸ್ಫೂರ್ತಿದಾಯಕ ಕಥೆಗಳು ಸೇರಿದಂತೆ ಬದುಕಿನ ಹಲವು ಆಯಾಮ ಆಧರಿಸಿದ ಧಾರಾವಾಹಿಗಳು ಪ್ರಸಾರಗೊಂಡವು.

ವರ್ಷಗಳು ಕಳೆದಂತೆ ಎಲ್ಲವೂ ಬದಲಾಯಿತು. ಖಾಸಗಿ ಉಪಗ್ರಹ ವಾಹಿನಿಗಳ ಅಬ್ಬರ ಹೆಚ್ಚಾಯಿತು. ಅವು ಧಾರಾವಾಹಿಗಳಲ್ಲಿ ವೈವಿಧ್ಯ ಉಳಿಸಿಕೊಳ್ಳಲು ಮತ್ತು ಭಿನ್ನವಾದ ಕಥೆಗಳನ್ನು ಹೇಳಲು ಪ್ರಯತ್ನಿಸಿದವು ನಿಜ. ಆದರೆ, ಆ ಕಾಳಜಿ ದೀರ್ಘ ಕಾಲ ಇರಲಿಲ್ಲ. ಕಥೆಗಳಲ್ಲಿ ಬೇರೆಯದ್ದೇ ಆದ ದೃಷ್ಟಿಕೋನ ಪರಿಚಯಿಸುವುದಿರಲಿ, ಆಳವಾಗಿ ಬೇರೂರಿದ ಏಕತಾನತೆಯನ್ನು ಕಿತ್ತೆಸೆಯಲು ಸಾಧ್ಯವಾಗಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ, ಕಥೆ ತಿರುಚುವಿಕೆಗೆ ಮತ್ತು ಜನರ ಭಾವನೆಗಳನ್ನು ಕೆರಳಿಸಲು ಮಿತಿಯೇ ಇಲ್ಲ ಎಂಬಂತೆ ಆಗಿದೆ. ಬಹುತೇಕ ಧಾರಾವಾಹಿಗಳು ಒಂದೇ ಎಳೆಯ ಮೇಲೆ ಪ್ರಸಾರ ಆಗುತ್ತಿವೆ. ವೈವಿಧ್ಯ ಅಪರೂಪ ಅಥವಾ ಇಲ್ಲವೇ ಇಲ್ಲ.

ಬಹುತೇಕ ಧಾರಾವಾಹಿಗಳು ಪ್ರೇಮ ಮತ್ತು ಮದುವೆಗೆ, ಪತಿ–ಪತ್ನಿಯ ವಿರಸಕ್ಕೆ, ಅತ್ತೆ–ಸೊಸೆಯ ಜಗಳಕ್ಕೆ, ತ್ರಿಕೋನ ಪ್ರೇಮಕಥನಕ್ಕೆ, ಮೈಬಣ್ಣ ಆಧರಿಸಿದ ವೈವಾಹಿಕ ಸಂಬಂಧಗಳಿಗೆ, ಧಾರ್ಮಿಕ ಆಚರಣೆ ಹೆಸರಿನಲ್ಲಿ ಮೂಢನಂಬಿಕೆ ಬಿತ್ತುವಿಕೆಗೆ, ದ್ವೇಷ ಸಾಧನೆಗೆ ಸೀಮಿತವಾಗಿವೆ. ಮೂರು ತಿಂಗಳು ಅಥವಾ ಆರು ತಿಂಗಳು ಬಿಟ್ಟು ವೀಕ್ಷಿಸಿದರೂ ಧಾರಾವಾಹಿಗಳ ಕಥೆಗಳು ಅಲ್ಲಿಯೇ ಗಿರಕಿ ಹೊಡೆಯುತ್ತಿರುತ್ತವೆ.

ವೈದ್ಯರು, ಶಿಕ್ಷಕರು, ಉದ್ಯಮಿಗಳ ವೃತ್ತಿ ಬದುಕೇ ಪ್ರಧಾನವೆಂದು ಬಿಂಬಿಸಿಕೊಂಡು ಕೆಲ ಧಾರಾವಾಹಿಗಳು ಆರಂಭಗೊಳ್ಳುತ್ತವೆ. ಆದರೆ, ದಿನಗಳೆದಂತೆ ಅವು ಪಾತ್ರಧಾರಿಗಳ ವೈವಾಹಿಕ ಅಥವಾ ಇನ್ನಿತರ ಸಂಬಂಧಗಳ ಸುತ್ತ ಸುರುಳಿ ಸುತ್ತುತ್ತವೆ. ಆಯಾ ವೃತ್ತಿಯ ಸವಾಲುಗಳು ಕಾಣಿಸುವುದೇ ಇಲ್ಲ. ಹೊಸ ಆಲೋಚನೆ, ದೃಷ್ಟಿಕೋನ ಕಾಣಿಸುವುದಿಲ್ಲ.

ಅನ್ಯ ರಾಜ್ಯಗಳ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಇಲ್ಲಿ ಯಥಾವತ್ತು ರೀಮೇಕ್ ಆಗುತ್ತವೆ. ಇದರ ಜೊತೆಗೆ ಡಬ್ಬಿಂಗ್ ಕೂಡ ಸೇರಿಕೊಂಡಿದೆ. ಈ ಬೆಳವಣಿಗೆ ಕನ್ನಡದಲ್ಲಿ ಕಥೆಗಳ ಕೊರತೆ ಇದೆಯೆಂದು ಹೇಳುತ್ತಿದೆಯೇ ಅಥವಾ ಸೃಜನಶೀಲ ಮನೋಭಾವ ಶೂನ್ಯ ಎಂಬುದರ ಸಂಕೇತವೇ? ‘ಕೊಟ್ಟಿದ್ದನ್ನು ನೋಡಬೇಕು, ಭಿನ್ನಾಭಿಪ್ರಾಯ ಹೇಳಬಾರದು’ ಎನ್ನುವುದು ಧಾರಾವಾಹಿ ನಿರ್ಮಾತೃಗಳ ನಿಲುವಾದರೆ, ಅದು ಹೇರಿಕೆ ಆಗುತ್ತದೆಯೇ ಹೊರತು ವೀಕ್ಷಕರ ಮೆಚ್ಚುಗೆ ಗಳಿಸುವುದಿಲ್ಲ. ಇನ್ನೊಂದು ವಿಷಯ: ಧಾರಾವಾಹಿ ನಿರ್ಮಿಸುವ ಅಥವಾ ನಿರ್ದೇಶಿಸುವವರಿಗೆ ಪ್ರಚಲಿತ ವಿದ್ಯಮಾನ, ಜನಪರ ಹೋರಾಟ, ನಿರುದ್ಯೋಗ ಸಮಸ್ಯೆ, ಸಮಾಜದ ಆಗುಹೋಗುಗಳು ಕಾಣುವುದಿಲ್ಲವೇ? ಗೊತ್ತಿದ್ದರೂ ಅದನ್ನು ವ್ಯವಸ್ಥಿತವಾಗಿ ನಿರ್ಬಂಧಿಸಲಾಗುತ್ತದೆಯೇ?

ನವೆಂಬರ್ ಸಮೀಪಿಸುತ್ತಿದೆ. ಕನ್ನಡ ಮಾಸದ ಚರ್ಚೆಗಳಲ್ಲಿ, ಕನ್ನಡ ಕಿರುತೆರೆಯ ಕಾಯಕಲ್ಪವೂ ಸೇರಿಕೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.