ಖ್ಯಾತನಾಮರ ಪ್ರತಿಮೆ ಮತ್ತು ಸ್ಮಾರಕಗಳಿಗೆ ಸಂಬಂಧಿಸಿದ ವಿಚಾರ ಒಂದೆಡೆಯಾದರೆ, ಸಾರ್ವಜನಿಕ ಕಟ್ಟಡಗಳ ಬಣ್ಣ, ರಸ್ತೆ, ವೃತ್ತ, ಮೇಲ್ಸೇತುವೆ, ರೈಲುಗಳ ಹೆಸರುಗಳಿಗೆ ಸಂಬಂಧಿಸಿದ ವಿವಾದ ಮತ್ತೊಂದೆಡೆ. ಕರ್ನಾಟಕದ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸುವ ಯಾರಿಗೇ ಆದರೂ ಈ ರಾಜ್ಯದಲ್ಲಿ ಸಾಮಾನ್ಯ ಜನರನ್ನು ಬಾಧಿಸುವ ಯಾವುದೇ ಸಮಸ್ಯೆಗಳಿಲ್ಲ, ಎಲ್ಲವೂ ಸುಭಿಕ್ಷವಾಗಿ, ಸುಸೂತ್ರವಾಗಿ ನಡೆಯುತ್ತಿವೆ ಎಂದು ಭಾಸವಾದರೆ ಅಚ್ಚರಿಯೇನಿಲ್ಲ. ಆದರೆ ವಸ್ತುಸ್ಥಿತಿಯತ್ತ ಕಣ್ಣು ಹಾಯಿಸಿದರೆ ಕಾಣುವುದೇ ಬೇರೆ.
ಭುಗಿಲೆದ್ದಿರುವ ಗಡಿ ವಿವಾದವೂ ಸೇರಿದಂತೆ ಹಲವಾರು ಗೊಂದಲಗಳ ನಡುವೆಯೇ ಕರ್ನಾಟಕದ ವಿಧಾನಮಂಡಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಉದ್ದೇಶವನ್ನೇ ಮರೆತಂತಿರುವ ರಾಜಕೀಯ ಪಕ್ಷಗಳಿಗೆ ಸುವರ್ಣಸೌಧ ಮತ್ತು ವಿಧಾನಸೌಧದ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವೇ ಅರ್ಥವಾಗಿಲ್ಲ ಎನಿಸುತ್ತದೆ.
ಏಕೀಕರಣವಾದ ದಿನದಿಂದಲೂ ಆಡಳಿತ ನೀತಿಗಳಲ್ಲಿ, ಆರ್ಥಿಕ ನೀತಿಗಳಲ್ಲಿ ತಾರತಮ್ಯವನ್ನೇ ಎದುರಿಸುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳ ಭೌಗೋಳಿಕ, ಸಾಮಾಜಿಕ, ಆರ್ಥಿಕ, ಭಾಷಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ, ಅಧಿವೇಶನ ನಡೆಯುವ ಸ್ಥಳ ಅಥವಾ ಕಟ್ಟಡ ಮುಖ್ಯವಾಗುವುದಿಲ್ಲ. ಬೆಂಗಳೂರುಕೇಂದ್ರಿತ ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಸರ್ಕಾರಗಳು ಹೆಚ್ಚು ಗಮನ ನೀಡುತ್ತಿಲ್ಲ ಎಂಬ ಆಪಾದನೆಗಳ ನಡುವೆಯೇ, ಸುವರ್ಣಸೌಧ ಮತ್ತು ಅಲ್ಲಿ ನಡೆಯುವ ಅಧಿವೇಶನಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ಇದನ್ನು ಅರಿತಾದರೂ ಸರ್ಕಾರ ಮತ್ತು ವಿರೋಧ ಪಕ್ಷಗಳು ಆ ಪ್ರಾಂತ್ಯದ ಜಿಲ್ಲೆಗಳು ಎದುರಿಸುತ್ತಿರುವ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ವರ್ಷಕ್ಕೊಮ್ಮೆ ಗಂಭೀರ ಚರ್ಚೆ ನಡೆಸುವುದು ವಿವೇಕಯುತ ಕ್ರಮವಾದೀತು.
ಸದನದ ಕಲಾಪಗಳು ಬಹುಪಾಲು ಸಂದರ್ಭ ಗಳಲ್ಲಿ ಪರಸ್ಪರ ದೋಷಾರೋಪಗಳ ನಡುವೆ, ಸರ್ಕಾರ ಮತ್ತು ವಿರೋಧ ಪಕ್ಷಗಳ ಕಚ್ಚಾಟದ ನಡುವೆಯೇ ತಮ್ಮ ಔಚಿತ್ಯ ಕಳೆದುಕೊಳ್ಳುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಸರ್ಕಾರದ ನಡೆ–ನಿಲುವು–ಹೇಳಿಕೆ ವಿರೋಧಿಸಿ ಸಭಾತ್ಯಾಗ ಮಾಡುವ ವಿರೋಧ ಪಕ್ಷಗಳಿಗೆ ತಮ್ಮ ವಾಕ್‌ಔಟ್ ಪ್ರಹಸನದ ಹಿಂದೆಯೇ ಯಾವುದೋ ಒಂದು ಜನಪರ ಅಲ್ಲದ ಮಸೂದೆ, ಕಾನೂನು ಸದನದಲ್ಲಿ ಅನುಮೋದನೆ ಪಡೆದಿರುತ್ತದೆ ಎಂಬ ವಿವೇಕ ಇರಬೇಕಲ್ಲವೇ? ಸದನದಲ್ಲಿ ನಡೆಯುವ ಚರ್ಚೆಗಳು ಬಾಹ್ಯ ಸಮಾಜದ ಕೋಟ್ಯಂತರ ಮತದಾರರು ಮತ್ತು ಸಾಮಾನ್ಯ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ ಎನ್ನುವ ವಿವೇಕವೂ ಜನಪ್ರತಿನಿಧಿಗಳಲ್ಲಿ ಇರಬೇಕಲ್ಲವೇ?
ರಾಜ್ಯದ ಇಂದಿನ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿದರೂ ಸಾಕು, ರಾಜಧಾನಿಯಿಂದ ಬೆಳಗಾವಿ ಯವರೆಗೆ ನಡೆಯುತ್ತಿರುವ ಜನಾಂದೋಲನಗಳು, ಹಕ್ಕೊತ್ತಾಯಗಳು, ಪ್ರತಿಭಟನೆಗಳು, ಹೋರಾಟಗಳು ಢಾಳಾಗಿ ಕಾಣುತ್ತವೆ. ರೈತರು ತಮ್ಮ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ, ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದುಪಡಿಸಿ ಹಳೆಯ ಯೋಜನೆಯನ್ನು (ಒಪಿಎಸ್) ಜಾರಿಗೊಳಿಸಲು ಲಕ್ಷಾಂತರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಅಂಗನವಾಡಿ-ಆಶಾ ಕಾರ್ಯಕರ್ತೆಯರು ಉತ್ತಮ ವೇತನ, ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದಾರೆ. ಭೂಮಿ ಕಳೆದುಕೊಂಡಿರುವ, ಕಳೆದುಕೊಳ್ಳುವ ಆತಂಕದಲ್ಲಿರುವ ರೈತಾಪಿ ಸಮುದಾಯ ಹೋರಾಟ ನಡೆಸುತ್ತಿದೆ.
ನಿತ್ಯಾಚಾರವಾಗಿರುವ ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರ ಎಲ್ಲ ವಲಯಗಳಲ್ಲೂ ವ್ಯಾಪಿಸಿದೆ. ಮಹಾರಾಷ್ಟ್ರ ಸರ್ಕಾರದ ಅವಿವೇಕದ ನಡೆಯ ಪರಿಣಾಮವಾಗಿ ಗಡಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ. ಬೆಳಗಾವಿ ನಗರ ಮತ್ತು ಗಡಿ ಪ್ರದೇಶ ಉದ್ವಿಗ್ನವಾಗಿದೆ. ಅಸ್ಪೃಶ್ಯತೆಯ ಪ್ರಸಂಗಗಳು ಹೆಚ್ಚಾಗುತ್ತಿವೆ. ಮಹಿಳಾ ದೌರ್ಜನ್ಯ ಪರಾಕಾಷ್ಠೆ ತಲುಪಿದೆ. ಬಾಲಕಿಯರ ಮೇಲಿನ ಲೈಂಗಿಕ ಶೋಷಣೆಯು ಪಾಂಡವಪುರದ ಸರ್ಕಾರಿ ಹಾಸ್ಟೆಲ್ ವೊಂದರಿಂದ ದುರ್ಗದ ಮುರುಘಾಮಠದವರೆಗೂ ವ್ಯಾಪಿಸಿದೆ. ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿಶಿಕ್ಷಕರೊಬ್ಬರು 10 ವರ್ಷದ ವಿದ್ಯಾರ್ಥಿಯ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾರೆ, ಆ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ತಾಯಿಯೂ ಗಾಯಗೊಂಡಿದ್ದಾರೆ. ಇದರ ನಡುವೆಯೇ ಬೆಲೆ ಏರಿಕೆಯ ಬಿಸಿ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ. ಇವೆಲ್ಲವನ್ನೂ ಸಾಮಾಜಿಕ ಕ್ಷೋಭೆಯ ಸಂಕೇತವಾಗಿಯೇ ನೋಡಬೇಕಾಗುತ್ತದೆ.
ರಾಜಕೀಯ ಲಾಭಕ್ಕಾಗಿ ಖ್ಯಾತನಾಮರ ಪ್ರತಿಮೆ, ಭಾವಚಿತ್ರಗಳನ್ನು ಬಳಸುವ ಪರಂಪರೆ ಹೊಸದೇನಲ್ಲ. ಈಗ ಸಾವರ್ಕರ್ ಈ ಸಾಲಿಗೆ ಸೇರ್ಪಡೆ ಯಾಗಿರುವ ಮತ್ತೋರ್ವ ನಾಯಕರಾಗಿದ್ದಾರೆ. ಸೌಧದ ಸಭಾಂಗಣದಲ್ಲಿ ಅಥವಾ ಸದನದಲ್ಲಿ ಯಾವ ನಾಯಕರ ಭಾವಚಿತ್ರಗಳು ಇರಬೇಕು ಎನ್ನುವುದಕ್ಕಿಂತಲೂ, ಕಲಾಪದಲ್ಲಿ ಏನು ಚರ್ಚೆಯಾಗಬೇಕು ಎನ್ನುವ ಪ್ರಶ್ನೆ ಮುಖ್ಯ ಅಲ್ಲವೇ? ಪ್ರತಿಮೆ, ಸ್ಮಾರಕ, ಭಾವಚಿತ್ರಗಳಿಗಿಂತಲೂ ಆ ನಾಯಕರ ಆಲೋಚನೆ ಗಳನ್ನು ಗೌರವಿಸಿ, ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವುದು, ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಮುಖ್ಯ ಅಲ್ಲವೇ? ಜನಪ್ರತಿನಿಧಿ
ಗಳಿಗೆ ಇಷ್ಟಾದರೂ ಸಾರ್ವಜನಿಕ ಪ್ರಜ್ಞೆ ಇರಬೇಕಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.