ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಲೇಖನ: ‘ಡಿಜಿಟಲ್‌ ಚುನಾವಣೆ’ಗೆ ಸಕಾಲ

ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬಲ್ಲ ಡಿಜಿಟಲ್ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಮನಸ್ಸು ಮಾಡಬೇಕು
Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ದೇಶದ ಕೆಲವೆಡೆ ಈಗ ಚುನಾ ವಣೆಯ ಸಮಯ. ಅತ್ತ ಬಿಹಾರ ವಿಧಾನಸಭೆ ಚುನಾವಣೆ, ಇತ್ತ 56 ಕ್ಷೇತ್ರಗಳಲ್ಲಿ ಉಪಚುನಾವಣೆ. ಇದರಲ್ಲಿ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗಳೂ ಸೇರಿವೆ. ಚುನಾವಣಾ ಪ್ರಕ್ರಿಯೆ ದೇಶಕ್ಕೆ ಹೊಸದೇನಲ್ಲ. ಆದರೆ ಈ ಬಾರಿಯ ಚುನಾವಣೆಯು ಕೊರೊನಾ ಕಾರಣಕ್ಕೆ ಹೊಸ ಬಗೆಯದೂ ಹೌದು, ಸವಾಲಿನದ್ದೂ ಹೌದು.

ಈ ಸವಾಲು ಹಲವಾರು ಅವಕಾಶಗಳನ್ನು ನಮಗೆ ಸೃಷ್ಟಿಸಿದೆ. ಚುನಾವಣೆಯನ್ನು ಬಂಡವಾಳರಹಿತ ಮತ್ತು ಭ್ರಷ್ಟಾಚಾರರಹಿತವಾಗಿ ಮಾಡಲು, ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಯಲು ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕಿದೆ.

ದೇಶದಲ್ಲಿ ಚುನಾವಣಾ ಸುಧಾರಣೆಗೆ ಪ್ರಮುಖವಾಗಿ ಕಾರಣರಾದವರು ಇಬ್ಬರು ಮುಖ್ಯ ಚುನಾವಣಾ ಆಯುಕ್ತರು. ಮೊದಲನೆಯವರು ಟಿ.ಎನ್.ಶೇಷನ್. ಅವರಿಗಿಂತ ಮೊದಲು ಚುನಾವಣಾ ಆಯೋಗವು ಹೆಚ್ಚುಕಡಿಮೆ ಕೇಂದ್ರ ಸರ್ಕಾರದ ಸೂತ್ರದ ಗೊಂಬೆಯಂತಿತ್ತು. ಅದಾಗಲೇ ಜಾರಿಯಾಗಿದ್ದ ಕಾನೂನುಗಳನ್ನು ಬಳಸಿ ಶೇಷನ್ ಈ ಸಂಸ್ಥೆಯನ್ನು ಶಕ್ತಿಯುತವಾಗಿಸಿದರು. ಅವರ ನಂತರ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರಕ್ಕೆ ಬಂದವರು ಎಂ.ಎಸ್.ಗಿಲ್. ಶೇಷನ್ ಅವರಂತೆಯೇ ಗಿಲ್ ಕೂಡ ಚುನಾವಣೆಗೆ ಸಂಬಂಧಿಸಿದಂತೆ ಅನೇಕ ಸುಧಾರಣೆಗಳನ್ನು ತಂದರು. ಶೇಷನ್ ಅವರು ಚುನಾವಣೆಗಳಿಗೆ ವಿಶ್ವಾಸಾರ್ಹತೆ ತಂದುಕೊಟ್ಟರೆ, ಗಿಲ್ ಅವರು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಪರಿಚಯಿಸಿದರು. ಇವರ ನಂತರ ಈ ಸ್ಥಾನವನ್ನು ಅಲಂಕರಿಸಿದ ಜೆ.ಎಂ.ಲಿಂಗ್ಡೊ, ಎನ್.ಗೋಪಾಲಸ್ವಾಮಿ ಹಾಗೂ ಎಸ್.ವೈ.ಖುರೇಷಿ ಅವರಂತಹ ಚುನಾವಣಾ ಕಮಿಷನರ್‌ಗಳು ಮಾಡಿದಂತಹ ಚೊಕ್ಕ, ಕಟ್ಟುನಿಟ್ಟಿನ ಕೆಲಸದಿಂದಾಗಿ, 1970 ಹಾಗೂ 1980ರ ದಶಕದಲ್ಲಿ ವ್ಯಾಪಕವಾಗಿದ್ದ ಮತಗಟ್ಟೆ ವಶದಂತಹ ಅಕ್ರಮಗಳಿಗೆ ತಡೆಬಿದ್ದಿತು. ಇಂತಹ ಸುಧಾರಣೆಗಳಿಂದ ಮತದಾನದ ಪ್ರಮಾಣವೂ ಹೆಚ್ಚಾಯಿತು.

ಕೊರೊನಾ ಸೋಂಕಿನ ಈ ಕಾಲಘಟ್ಟದಲ್ಲಿ ಸಿಂಗಪುರ, ದಕ್ಷಿಣ ಕೊರಿಯಾ, ಪೋಲೆಂಡ್‌, ಶ್ರೀಲಂಕಾ ಹಾಗೂ ಸ್ಪೇನ್‌ನಲ್ಲಿ ಕಟ್ಟುನಿಟ್ಟಿನ ಕ್ರಮಗಳ ನಡುವೆ ಇತ್ತೀಚೆಗೆ ಚುನಾವಣೆಗಳನ್ನು ನಡೆಸಲಾಗಿದೆ. ಡಿಜಿಟಲ್‌ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಮತಪ್ರಚಾರ ನಡೆಸಲಾಗಿದೆ.

ಡಿಜಿಟಲ್ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿ ಕೊಂಡರೆ ಮತದಾರರಿಗೆ ಉಡುಗೊರೆ, ಆಮಿಷದ ಭರಾಟೆ ಇರುವುದಿಲ್ಲ. ಹಣದ ಹರಿವಿಗೆ ತಡೆ ಬೀಳುತ್ತದೆ. ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಪ್ರಣಾಳಿಕೆಯನ್ನು ಜನರ ಮುಂದಿಟ್ಟು ಚರ್ಚೆಗೆ ಮುಂದಾಗಬಹುದು. ಮನೆ ಮನೆಗೆ ಹೋಗಿ ಮತ ಕೇಳುವ ಪ್ರಕ್ರಿಯೆ ಇಲ್ಲವೇ ಇಲ್ಲ. ಇದರಿಂದ, ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನೂ ನಿಯತ್ರಿಸಬಹುದು. ಇವೆಲ್ಲವನ್ನೂ ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಹೀಗೆ, ಚುನಾವಣೆ ಪ್ರಕ್ರಿಯೆಯಲ್ಲಿ ಬದಲಾವಣೆಯಾದರೆ ಪ್ರಜಾಪ್ರಭುತ್ವದ ಬೇರು ಇನ್ನಷ್ಟು ಗಟ್ಟಿಯಾಗುತ್ತದೆ.

ಸಾಮಾಜಿಕ ಜಾಲತಾಣ ಅದರಲ್ಲೂ ಫೇಸ್‌ಬುಕ್ ಪೇಜ್‌ಗಳು ಚುನಾವಣಾ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ ಎಂದು ಇಂಟರ್‌ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ 2014ರಲ್ಲಿ ನಡೆಸಿದ ಅಧ್ಯಯನ ವರದಿ ತಿಳಿಸಿದೆ. ರಾಜಕೀಯ ಪಕ್ಷಗಳು ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಜನರಿಗೆ ಮಾಹಿತಿಯನ್ನು ಪರಿಣಾಮ ಕಾರಿಯಾಗಿ ತಲುಪಿಸಲು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್‌ ನೆರವಾಗಬಲ್ಲವು.

ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಾಮಾಜಿಕ ಪ್ರಜ್ಞೆ ಇಟ್ಟುಕೊಂಡು ಪ್ರಚಾರ ಮಾಡುವ ಹೊಣೆ ಎಲ್ಲಾ ರಾಜಕೀಯ ಪಕ್ಷಗಳ ಮೇಲಿದೆ. ಚುನಾವಣಾ ಆಯೋಗವು ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್, ಮನೆ ಮನೆ ಪ್ರಚಾರಕ್ಕೆ ಕಡಿವಾಣ ಸೇರಿದಂತೆ ಚುನಾವಣಾ ಪ್ರಚಾರಕ್ಕೆ 12 ನಿಯಮಗಳನ್ನು ರೂಪಿಸಿದೆ. ಸಭೆ-ಸಮಾರಂಭ, ಪ್ರಚಾರ ಭಾಷಣ, ಮೈದಾನದಲ್ಲಿ ಗುಂಪು ಸೇರುವುದರಿಂದ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತದೆ ಎಂಬ ಪ್ರಜ್ಞೆಯನ್ನು ಎಲ್ಲರೂ ಹೊಂದಬೇಕು.

ಮೊದಲೆಲ್ಲಾ ಬಹಿರಂಗವಾಗಿ ಸಭೆ, ರ‍್ಯಾಲಿ ನಡೆಸಿ ಪ್ರಚಾರ ಮಾಡಲಾಗುತ್ತಿತ್ತು. ಆದರೆ ಈಗ ಡಿಜಿಟಲ್ ಮಾಧ್ಯಮಗಳ ಮೂಲಕ ಮಾಹಿತಿಯು ಸಾರ್ವಜನಿಕರ ಮೊಬೈಲ್‌, ಟಿ.ವಿ. ಪರದೆಗಳ ಮೇಲೆ ಬಿತ್ತರವಾಗುವುದರಿಂದ ಜನ ಸತ್ಯಾಸತ್ಯತೆಯನ್ನು ಅರ್ಥಮಾಡಿಕೊಂಡು ಯೋಗ್ಯ ವ್ಯಕ್ತಿಗೆ ಮತ ಚಲಾಯಿಸಲು ಅನುಕೂಲವಾಗುತ್ತದೆ. ಸಂಪೂರ್ಣ ರಚನಾತ್ಮಕ ಬದಲಾವಣೆಗೆ ಆದ್ಯತೆ ಕೊಟ್ಟಂತಾಗುತ್ತದೆ.

ಹೀಗೆ, ಚುನಾವಣೆಯನ್ನು ಆದಷ್ಟೂ ಡಿಜಿಟಲೀಕರಣದತ್ತ ಕೊಂಡೊಯ್ಯುವ, ವೆಚ್ಚದ ಮೇಲೆ ಇನ್ನಷ್ಟು ಕಡಿವಾಣ ಹಾಕುವ, ಚುನಾವಣಾ ಅಕ್ರಮ ಗಳನ್ನು ತಡೆಯುವ ವಿಪುಲ ಅವಕಾಶಗಳು ಈಗ ನಮ್ಮ ಮುಂದಿವೆ. ಒಟ್ಟಿನಲ್ಲಿ ಭವಿಷ್ಯದ ಭಾರತದಲ್ಲಿ ಚುನಾವಣಾ ಡಿಜಿಟಲೀಕರಣಕ್ಕೆ ಬಿಹಾರ ವಿಧಾನಸಭೆ ಚುನಾವಣೆ ಮತ್ತು ಅದರ ಜೊತೆಗೆ ನಡೆಯಲಿರುವ ಉಪಚುನಾವಣೆಗಳು ಬುನಾದಿ ಹಾಕುವಂತೆ ಆಗಬೇಕು. ಚುನಾವಣಾ ಸುಧಾರಣೆ ಎಂಬುದು ಒಮ್ಮೆಲೇ ಆಗುವಂತಹದ್ದಲ್ಲ. ಆದರೂ ಆ ದಿಸೆಯಲ್ಲಿನ ಪ್ರಯತ್ನದ ಆರಂಭಕ್ಕೆ ಇದು ಸಕಾಲ.

–ಲೇಖಕ: ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT