ಬುಧವಾರ, ಜನವರಿ 22, 2020
16 °C
ಭಾಷೆಯ ಉಳಿವು ಮತ್ತು ಬೆಳವಣಿಗೆಯು ಅದರ ಬಳಕೆಯನ್ನೇ ಅವಲಂಬಿಸಿದೆ ಎಂಬ ಸತ್ಯ ನಮಗೆ ಮನವರಿಕೆಯಾಗುವುದು ಯಾವಾಗ?

ಭಾಷೆ ಬಳಕೆ: ವೈರುಧ್ಯದ ನಡೆ

ಮಂಜುನಾಥ ಎಸ್. ಎಸ್. Updated:

ಅಕ್ಷರ ಗಾತ್ರ : | |

Prajavani

ಭಾಷಾ ಬಳಕೆ ಕುರಿತಂತೆ ಎರಡು ವೈರುಧ್ಯದ ವಿದ್ಯಮಾನಗಳಿಗೆ ಸಾಕ್ಷಿಯಾಗುವ ಸಂದರ್ಭ ಇತ್ತೀಚೆಗೆ ಒದಗಿಬಂತು. ಮೊದಲನೆಯದು, ಔಷಧ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರ ಮಟ್ಟದ ಸಮ್ಮೇಳನ. ಮತ್ತೊಂದು, ನಮ್ಮದೇ ನಾಡಿನ, ಜಿಲ್ಲಾ ಕೇಂದ್ರದಲ್ಲಿರುವ ಪೂರ್ವ ಪ್ರಾಥಮಿಕ ಶಾಲೆಯೊಂದರ ವಾರ್ಷಿಕೋತ್ಸವ ಸಮಾರಂಭ.

ಚೆನ್ನೈನ ಸಮ್ಮೇಳನದಲ್ಲಿ ಸಂಶೋಧಕರು, ಶಿಕ್ಷಕರು, ತಯಾರಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಜನ ಪಾಲ್ಗೊಂಡಿದ್ದರು. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮೂರು ನೃತ್ಯಗಳಿದ್ದವು, ಮೂರಕ್ಕೂ ತಮಿಳು ಹಾಡುಗಳ ಸಂಯೋಜನೆ ಇದ್ದುದು ವಿಶೇಷವಾಗಿತ್ತು. ರಾಷ್ಟ್ರ ಮಟ್ಟದ ಸಮ್ಮೇಳನ ಎಂದು ಹಿಂದಿಯ ಹಾಡಾಗಲೀ ಹಿಂದಿಯಲ್ಲಿ ನಿರೂಪಣೆಯಾಗಲೀ ಇರಲಿಲ್ಲ. ಉಳಿದಂತೆ ಕಾರ್ಯಕ್ರಮಗಳು ಇಂಗ್ಲಿಷ್‌ನಲ್ಲಿ ಇದ್ದವು.

ಸಮ್ಮೇಳನದ ಹಿಂದಿನ ದಿನ ಆಹ್ವಾನಿತರಿಗೆ ಏರ್ಪಡಿಸಿದ್ದ ಭೋಜನ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಸಹಾ ಆರಂಭದ ಕೆಲವು ಇಂಗ್ಲಿಷ್‌ ಹಾಡುಗಳನ್ನು ಹೊರತು
ಪಡಿಸಿದರೆ ಉಳಿದವೆಲ್ಲಾ ತಮಿಳು ಹಾಡುಗಳೇ. ನಂತರ ಸಂಜೆ ಏರ್ಪಡಿಸಿದ್ದ ಮನರಂಜನಾ ಸಂಗೀತ ಸಂಜೆಯಲ್ಲಿ ಕೂಡ ತಮಿಳು ಹಾಡುಗಳೇ. ಕೊನೆಯಲ್ಲಿ ಹಿಂದಿ ಅಥವಾ ಬೇರೆ ಭಾಷೆಯ ಹಾಡುಗಳನ್ನು ಹಾಡಿದರೋ ಏನೋ, ಆದರೆ ಅಷ್ಟರಲ್ಲಾಗಲೇ ನಾವು ಹೊರಟಿದ್ದೆವು. ಅದು ರಾಷ್ಟ್ರ ಮಟ್ಟದ ಸಮ್ಮೇಳನ, ಅದರಲ್ಲಿ ತಮಿಳು ಬಾರದವರೂ  ಇರುತ್ತಾರೆ ಎಂಬ ಪರಿಗಣನೆ– ಸಂಕೋಚ ಇಲ್ಲದೆ ತಮಿಳುನಾಡಿನವರು ತಮ್ಮ ಭಾಷಾಭಿಮಾನವನ್ನು ಪ್ರದರ್ಶಿಸಿದರು. ಕೆಲವು ವರ್ಷಗಳ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ, ಹೆಚ್ಚಿನ ಹಿಂದಿ ಹಾಡುಗಳ ಜೊತೆಗೆ ಅಲ್ಲೊಂದು ಇಲ್ಲೊಂದು ಕನ್ನಡ ಹಾಡುಗಳನ್ನು ಕೇಳಿದ್ದಲ್ಲದೆ, ಆಗ ಜನಪ್ರಿಯವಾಗಿದ್ದ ‘ಕೊಲವೆರಿ’ ತಮಿಳು ಹಾಡನ್ನೂ ಕೇಳಿ ಎಲ್ಲರೂ ನಲಿದಿದ್ದು ನನಗೆ ಚೆನ್ನಾಗಿ ನೆನಪಿದೆ.

ಮುಖ್ಯ ವಿಷಯ ಅದಲ್ಲ. ಅದಾಗಿ ಒಂದೇ ವಾರಕ್ಕೆ ಇಲ್ಲೇ ನಮ್ಮ ನಾಡಿನ, ಇನ್ನೂ ಗ್ರಾಮೀಣ ಪ್ರಭಾವವನ್ನೇ ಹೊಂದಿರುವ ಜಿಲ್ಲಾ ಕೇಂದ್ರವೊಂದರಲ್ಲಿ ಎಲ್‌.ಕೆ.ಜಿ. ಓದುತ್ತಿರುವ ಸ್ನೇಹಿತರ ಮಗುವಿನ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಳಸಿದ ಭಾಷೆಯ ಕುರಿತು ಆದ ಆಘಾತ. ಅದು ಇತ್ತೀಚೆಗೆ ಜಿಲ್ಲಾ ಕೇಂದ್ರವಾಗಿರುವ, ಪರರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಳ್ಳದ, ಇತರ ಭಾಷೆಗಳ ಪ್ರಭಾವ ಅಷ್ಟೇನೂ ಇಲ್ಲದ ನಗರದ ಬಡಾವಣೆಯೊಂದರಲ್ಲಿರುವ ಶಾಲೆ. ಅಲ್ಲಿ ಇರುವುದೇ ಕೇವಲ ನರ್ಸರಿ, ಪ್ರೀ ಕೆ.ಜಿ, ಎಲ್.ಕೆ.ಜಿ, ಮತ್ತು ಯು.ಕೆ.ಜಿ. ತರಗತಿಗಳು. ಬಹುಶಃ ಶಾಲೆಗೆ ಬರುವ ಮಕ್ಕಳೆಲ್ಲರೂ ಶಾಲೆಯಿಂದ ಅರ್ಧ ಕಿಲೊಮೀಟರ್ ವ್ಯಾಪ್ತಿಯಲ್ಲಿಯೇ ಇರಬಹುದು. ನೂರಕ್ಕೆ ನೂರರಷ್ಟು ಪೋಷಕರು ಕನ್ನಡಬಲ್ಲವರಾಗಿದ್ದು, ಕನಿಷ್ಠ ಶೇ 90ರಷ್ಟು ಮಂದಿಯಾದರೂ ಕನ್ನಡ ಮಾತೃಭಾಷೆಯವರು ಇರಬಹುದೇನೊ. ಆದರೆ ಆ ಶಾಲೆಯ ಸುಮಾರು ನಾಲ್ಕು ಗಂಟೆಗಳ ಸಮಾರಂಭದಲ್ಲಿ ಕೇಳಿದ್ದು ನಿರೂಪಣೆಯಲ್ಲಿ ಒಂದೇ ಒಂದು ಕನ್ನಡ ವಾಕ್ಯ ಮತ್ತು ಒಂದೋ ಎರಡೋ ನೃತ್ಯಗಳಿಗೆ ಹಿನ್ನೆಲೆಯಾಗಿ ಕನ್ನಡ ಹಾಡು. ಉಳಿದವೆಲ್ಲವೂ ಇಂಗ್ಲಿಷ್‌ ಮತ್ತು ಹಿಂದಿಮಯ.

ಇಬ್ಬರು ಯುವತಿಯರಲ್ಲಿ ಒಬ್ಬರು ಇಂಗ್ಲಿಷ್‍ನಲ್ಲಿ, ಮತ್ತೊಬ್ಬರು ಹಿಂದಿಯಲ್ಲಿ ನಿರೂಪಿಸುತ್ತಿದ್ದರು. ಕೊನೆಗೆ, ವೇದಿಕೆಯ ಹಿಂಭಾಗಕ್ಕೆ ಬಂದು ಕಾರ್ಯಕ್ರಮ ನಿರ್ವಾಹಕರಿಗೆ ತೊಂದರೆ ಕೊಡಬಾರದೆಂದು ಪುಟ್ಟ ಮಕ್ಕಳ ತಾಯಂದಿರಿಗೆ ಪ್ರಾಂಶುಪಾಲರು ಸೂಚನೆ ನೀಡಿದ್ದು ಕೂಡ ಇಂಗ್ಲಿಷ್‍ನಲ್ಲಿಯೇ. ಆದರೂ ತಾಯಂದಿರಾರೂ ಸೂಚನೆಗೆ ಗಮನ ನೀಡದೆ ವೇದಿಕೆಯ ಹಿಂಭಾಗಕ್ಕೆ ಹೋಗುತ್ತಿದ್ದುದನ್ನು ನೋಡಿದರೆ, ಇಂಗ್ಲಿಷ್‌ನಲ್ಲಿ ನೀಡಿದ ಸೂಚನೆ ಬಹುಶಃ ಹಲವರಿಗೆ ಅರ್ಥವಾಗಿಲ್ಲವೇನೋ ಎನ್ನಿಸಿತು. ಇಂಗ್ಲಿಷ್ ಮಾಧ್ಯಮದ ಶಾಲೆ ಎಂದೇನೋ ಇಂಗ್ಲಿಷ್ ನಿರೂಪಣೆಯನ್ನು ಒಪ್ಪಬಹುದು. ಆದರೆ ಹಿಂದಿ ಏಕೆ? ಕನಿಷ್ಠ ಅದರ ಜಾಗದಲ್ಲಾದರೂ ಕನ್ನಡ ಬಳಸಬಹುದಿತ್ತಲ್ಲ ಎಂದೆನಿಸಿತು. ಅದಾದ ನಂತರ ಇನ್ನೊಂದು ಶಾಲೆಯ ವಾರ್ಷಿಕೋತ್ಸವ. ಅಲ್ಲೂ ಅದೇ ಇಂಗ್ಲಿಷ್ ಮತ್ತು ಹಿಂದಿಯ ಜೋಡಿ ನಿರೂಪಣೆ. ಬಹುಶಃ ಸಿಬಿಎಸ್ಇ ಪಠ್ಯಕ್ರಮವಿರುವ ಶಾಲೆಯಲ್ಲಿ ಕನ್ನಡವನ್ನು ಬಳಸಬಾರದೆಂಬ ನಿಯಮವಿದೆಯೋ ಏನೋ ಬಲ್ಲವರೇ ತಿಳಿಸಬೇಕು.

ಇವೆರಡೂ ವಿದ್ಯಮಾನಗಳನ್ನು ನೋಡಿದಾಗ ಅನಿಸಿದ್ದಿಷ್ಟು: ಹಲವು ರಾಜ್ಯಗಳಿಂದ ಬೇರೆ ಬೇರೆ ಭಾಷೆಗಳ ಪ್ರತಿನಿಧಿಗಳು ಬಂದಿದ್ದ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲೂ ತಮ್ಮ ಮಾತೃಭಾಷೆಯನ್ನು ಪ್ರದರ್ಶಿಸಬೇಕೆನ್ನುವ ತಮಿಳಿಗರ ಭಾಷಾ ಅಭಿಮಾನವೆಲ್ಲಿ? ಪುಟ್ಟ ಶಾಲೆಯೊಂದರ ಕಾರ್ಯಕ್ರಮದಲ್ಲೂ ಕನ್ನಡದ ಸುಳಿವಿಲ್ಲದಂತೆ ಮಾಡುವ ಕನ್ನಡಿಗರ ನಿರಭಿಮಾನವೆಲ್ಲಿ? ರಾಜ್ಯದ ಉಳಿದ ಶಾಲೆಗಳೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಹಿರಿಯರೊಬ್ಬರು ಹೇಳಿದಂತೆ, ಬಹುಶಃ ನಾವು ಕನ್ನಡವನ್ನು ಉಳಿಸಬೇಕಾಗೂ ಇಲ್ಲ, ಬೆಳೆಸಬೇಕಾಗೂ ಇಲ್ಲ, ಬಳಸಿದರಷ್ಟೇ ಸಾಕು. ಕನ್ನಡ ಅದಾಗೇ ಉಳಿಯುತ್ತದೆ, ಬೆಳೆಯುತ್ತದೆ. ಆದರೆ ನಾವು ಮಾಡುತ್ತಿರುವುದೇನು?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು