ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮುಕ್ತಗೊಳ್ಳಲಿ ವಿಶ್ವವಿದ್ಯಾಲಯಗಳು..

ಸರ್ಕಾರಗಳು ವಿಶ್ವವಿದ್ಯಾಲಯವನ್ನು ತಮ್ಮ ಗಟ್ಟಿ ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶವಾದರೂ ಏನು?
Published 13 ಡಿಸೆಂಬರ್ 2023, 19:28 IST
Last Updated 13 ಡಿಸೆಂಬರ್ 2023, 19:28 IST
ಅಕ್ಷರ ಗಾತ್ರ

ಸ್ವಾತಂತ್ರ್ಯಪೂರ್ವದಲ್ಲಿ, ಅಂದರೆ 1944ರಲ್ಲಿಯೇ ಕುವೆಂಪು ಅವರು ವಿದ್ಯಾರ್ಥಿಗಳೊಡನೆ ಹಂಚಿಕೊಂಡ ನಾಲ್ಕು ಉಪನ್ಯಾಸಗಳ ಮುಖ್ಯ ಉದ್ದೇಶ, ತರುಣರಲ್ಲಿ ವೈಜ್ಞಾನಿಕ ದೃಷ್ಟಿಕೋನ ಮತ್ತು ವೈಚಾರಿಕತೆಯನ್ನು ಪ್ರಚೋದಿಸುವುದೇ ಆಗಿತ್ತು. ಸುಮಾರು ಎಂಬತ್ತು ವರ್ಷಗಳ ನಂತರವೂ ಕುವೆಂಪು ಅವರ ಆತಂಕ, ಕಳಕಳಿ ಪ್ರಸ್ತುತವಾಗಿದೆ.

ವೈಚಾರಿಕತೆಯನ್ನು ಪ್ರಚೋದಿಸುವುದಾದರೂ ಏಕೆ ಎಂಬುದನ್ನೂ ಕುವೆಂಪು ವಿವರಿಸಿದ್ದಾರೆ. ‘ಏಕೆಂದರೆ, ಕಾರ್ಯಭೂಮಿಕೆಯಲ್ಲಿ ಬರಿಯ ಭಾವಭ್ರಾಂತಿಯ ಬೆಡಗಿನ ವೈಖರಿ ನಡೆಯುವುದಿಲ್ಲ. ಹಳೆಯ ನಂಬುಗೆಗಳ ಬೇಳೆ ಅಲ್ಲಿ ಬೇಯುವುದಿಲ್ಲ. ಭಾವಭ್ರಾಂತಿಗೆ ವಶರಾಗಿ ವಿಜ್ಞಾನದೃಷ್ಟಿಗೆ ವಿರುದ್ಧವಾದುದನ್ನು ಏನಾದರೂ ಮಾಡಿದೆವೋ ಅದರಿಂದ ಸಮಾಜಕ್ಕೆ ಆಘಾತವಾಗುವುದು ನಿಶ್ಚಯ. ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಚಾರವಾದವನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಸಮಕಾಲೀನ ವಿಶ್ವವಿದ್ಯಾಲಯಗಳಲ್ಲಿ ಸಮಂಜಸವಾಗಿಲ್ಲ’ ಎಂದು ನೇರವಾಗಿಯೇ ಹೇಳಿದ್ದರು.

ವಿದ್ಯಾರ್ಥಿಗಳು ‘ನಿರಂಕುಶಮತಿಗಳಾಗಬೇಕು’ ಎಂಬ ಆಶಯವು ಬಹುಪಾಲು ಅಧ್ಯಾಪಕರು ಮತ್ತು ಪೋಷಕರಿಗೆ ಅಸಹನೀಯವಾದುದು. ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ಕಾಯ್ದೆಯು ಹೊಸ ಕಲಿಕೆಗೆ ವಿರುದ್ಧವಾಗಿದೆ. ಗುಜರಾತ್, 2016ರಲ್ಲಿ ವಿಶ್ವವಿದ್ಯಾಲಯಗಳ ಸಂಪೂರ್ಣ ನಿಯಂತ್ರಣಕ್ಕೆ ಮುಂದಾಯಿತು. ‘ಗುಜರಾತ್ ಉನ್ನತ ಶಿಕ್ಷಣ ಮಂಡಳಿ’ಗೆ ತಜ್ಞರ ಬದಲು ಮುಖ್ಯಮಂತ್ರಿಯವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಲ್ಲದೆ, ಸರ್ಕಾರದ ಎಲ್ಲಾ ಆದೇಶಗಳನ್ನು ವಿಶ್ವವಿದ್ಯಾಲಯವು ಪಾಲಿಸುವುದನ್ನು ಕಡ್ಡಾಯಗೊಳಿಸಿತು. ಈ ಕ್ರಮವು ವೈಚಾರಿಕತೆಗೆ ತಿಲಾಂಜಲಿ ಕೊಟ್ಟಂತಿದೆ. ಕರ್ನಾಟಕದ ಕಾಯ್ದೆಯಲ್ಲೂ ಕುಲಪತಿಯ ಆಯ್ಕೆ, ಕುಲಸಚಿವರು, ಹಣಕಾಸು ಅಧಿಕಾರಿಗಳ ನೇಮಕ, ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ, ಭ್ರಷ್ಟಾಚಾರದ ಆಪಾದನೆಗೆ ಸಂಬಂಧಿಸಿದ ವಿಚಾರಣೆ- ತನಿಖಾ ಸಮಿತಿಯ ನೇಮಕ ಎಲ್ಲವೂ ಸರ್ಕಾರದ ನಿಯಂತ್ರಣದಲ್ಲಿವೆ.

ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರವು ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳನ್ನು ಒಳಗೊಂಡ ಆಂತರಿಕ ಸಮಿತಿಯೂ ತನ್ನ ತೆಕ್ಕೆಗೆ ಬರುವಂತೆ ಮಾಡಿತ್ತು! ಸಂಶೋಧನೆಯಿಂದ ಆಗಾಗ ದೊರಕುವ ಹೊಸ ವಿಷಯಗಳೂ ಒಳಗೊಂಡಂತೆ ಪಾಠಗಳ ಪಟ್ಟಿಯನ್ನು ಅಗತ್ಯವೆನಿಸಿದಾಗ ಮಾರ್ಪಡಿಸುವುದು, ಪಠ್ಯವಸ್ತುವನ್ನು ಬೋಧಿಸುವ ಕಲೆಯ ಪುನರವಲೋಕನವನ್ನು ಪರಿಶೀಲಿಸುವುದು ಈ ಸಮಿತಿಯ ಕಾರ್ಯ.

ಹೀಗೆ ವಿಶ್ವವಿದ್ಯಾಲಯಗಳನ್ನು ತಮ್ಮ ಬಿಗಿ ಹಿಡಿತದಲ್ಲಿ ಇಟ್ಟುಕೊಳ್ಳಬಯಸುವ ಸರ್ಕಾರಗಳು ಆ ಕಾರ್ಯದಲ್ಲಿ ಸಫಲವಾಗಿವೆಯೇ? ಪ್ರಶ್ನೆಪತ್ರಿಕೆ ಸೋರಿಕೆ, ಪೊಲೀಸ್ ಕೇಸುಗಳು, ಕಾಪಿ ಹೊಡೆಯುವ ವಿದ್ಯಾರ್ಥಿಗಳ ಅಮಾನತು, ಪರೀಕ್ಷೆಗಳ ಮೇಲೆ ನಮಗಿರುವ ಅತೀವ ವಿಶ್ವಾಸ ಇವೆಲ್ಲ ಒಂದೆಡೆಯಾದರೆ, ಪ್ರತಿಯೊಂದು ವಿಶ್ವವಿದ್ಯಾಲಯದಲ್ಲೂ ಮಂಜೂರಾಗಿರುವ ಬೋಧಕರ ಹುದ್ದೆಗಳಲ್ಲಿ ಶೇ 75ರಿಂದ 90ರಷ್ಟು ಖಾಲಿಯಾಗೇ ಉಳಿದಿರುವುದು ಮತ್ತೊಂದೆಡೆ. ಮೈಸೂರು ವಿಶ್ವವಿದ್ಯಾಲಯಕ್ಕೆ ಮಂಜೂರಾಗಿರುವ 460 ಹುದ್ದೆಗಳಲ್ಲಿ 407ರಷ್ಟು ಹುದ್ದೆಗಳಿಗೆ ನೇಮಕಾತಿಯೇ ಆಗಿಲ್ಲ! ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 600ರಲ್ಲಿ 386 ಬೋಧಕ ಹುದ್ದೆಗಳು ಭರ್ತಿಯಾಗಿಲ್ಲ. ಇಲ್ಲೆಲ್ಲ ಅತಿಥಿ ಉಪನ್ಯಾಸಕರನ್ನು ಅವಲಂಬಿಸಲಾಗಿದೆ. ಆದರೂ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯು ಪ್ರತಿಷ್ಠೆಯ ಸಂಕೇತ ಎನಿಸಿಕೊಂಡಿದೆ.

ಹಾ.ಮಾ.ನಾಯಕ ಅವರು ಹಿಂದೊಮ್ಮೆ, ‘ಯೋಚಿಸಿ, ನಿಮಗೆ ಶಿಕ್ಷಣ ಬೇಕೋ, ಶಿಕ್ಷಣ ಸಂಸ್ಥೆ ಸಾಕೋ?’ ಎಂದು ಕೇಳಿದ್ದರು. ಈಗಲೂ ಹಾಗೇ ಕೇಳಬೇಕಾಗಿದೆ. ಇದೀಗ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವುದು ಉತ್ತಮ ಆಲೋಚನೆ! ಒಂದು ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಕನಿಷ್ಠ ₹ 342 ಕೋಟಿ ಅಗತ್ಯವೆಂದು ರಾಜ್ಯ ಉನ್ನತ ಶಿಕ್ಷಣ ಸಮಿತಿ ಹೇಳಿದೆ. ಹಾಲಿ ಇರುವ ವಿಶ್ವವಿದ್ಯಾಲಯಗಳಿಗೇ ಅಗತ್ಯ ಹಣಕಾಸಿಲ್ಲ. ಇನ್ನು ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಎಲ್ಲಿಂದ ಹಣ ಬರುತ್ತದೆ?

‘ಆತ್ಮನಿರ್ಭರ’ದ ಹೆಸರಿನಲ್ಲಿ ‘ಮೆಕಾಲೆ- ಘರ್‌ವಾಪ್ಸಿ’ ಆಗಿದೆ. ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾದ ನಂತರವೂ ಉನ್ನತ ಶಿಕ್ಷಣದ ಅಭಿವೃದ್ಧಿ ಸಾಧ್ಯವಾಗಿಲ್ಲ. ಸ್ವಾಯತ್ತತೆಯನ್ನು ನಮ್ಮ ಸಂಸ್ಥೆಗಳಿಗೆ ತಿರಸ್ಕರಿಸಿ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಯಾವುದೇ ನಿರ್ಬಂಧವಿಲ್ಲದೆ ಅದನ್ನು ನೀಡುವ ಭರವಸೆಯನ್ನು ಯುಜಿಸಿ ಇತ್ತಿದೆ. ಇದು ತಪ್ಪಬೇಕು. ವಿಶ್ವವಿದ್ಯಾಲಯಗಳ ಸ್ವಯಂ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು. 

ಕರ್ನಾಟಕದವರಾದ ಡಾ.ವಿ.ಕೆ.ಆರ್.ವಿ. ರಾವ್ ಅವರು ಕೇಂದ್ರ ಸಚಿವರಾಗಿದ್ದಾಗ, ಜಾಗತಿಕ ಗೌರವವನ್ನು ಗಳಿಸಿಕೊಂಡ ‘ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್’, ‘ಇನ್‌ಸ್ಟಿಟ್ಯೂಟ್‌ ಆಫ್ ಎಕನಾಮಿಕ್ ಗ್ರೋತ್’ ಸಂಸ್ಥೆಗಳನ್ನು ಸ್ಥಾಪಿಸಿದರು. ಈ ಸಂಸ್ಥೆಗಳನ್ನು ಅವರು ಸರ್ಕಾರದ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರಗಿಟ್ಟಿದ್ದು ಗಮನಾರ್ಹ. ಟಾಟಾ ಸಮೂಹವು ಬೆಂಗಳೂರಿನಲ್ಲಿ ‘ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್’ ಸ್ಥಾಪಿಸಿತು. ಇದು, ಭಾರತದಲ್ಲಿ ಅಪರೂಪವಾದ ಮಾದರಿ ಸಂಸ್ಥೆ ಎನಿಸಿಕೊಂಡಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಉನ್ನತ ಶಿಕ್ಷಣದ ಸುಧಾರಣೆಗೆ ಶಿಫಾರಸುಗಳನ್ನು ಸಲ್ಲಿಸಲು ಶಿಕ್ಷಣತಜ್ಞ ಪ್ರೊ. ಸುಖದೇವ್ ತೋರಟ್ ನೇತೃತ್ವದಲ್ಲಿ ರಚಿಸಿರುವ ಸಮಿತಿಯು ಚಿಂತಕ ಯೋಗೇಂದ್ರ ಯಾದವ್ ಅವರಂತಹ ಸದಸ್ಯರನ್ನು ಒಳಗೊಂಡಿದೆ. ಉನ್ನತ ಶಿಕ್ಷಣಕ್ಕೆ ಕಾಯಕಲ್ಪ ನೀಡುವ ದಿಸೆಯಲ್ಲಿ ಸಮಿತಿ ತನ್ನ ಶಿಫಾರಸುಗಳನ್ನು ತ್ವರಿತವಾಗಿ ಸಲ್ಲಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT