ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಣತೆ ಹಚ್ಚೋಣ, ಬೆಳಕು ಹಂಚೋಣ

ದೀಪಾವಳಿಯ ನೆಪದಲ್ಲಿ ನಮ್ಮ ಒಳಗನ್ನು ಮೊದಲು ಬೆಳಗೋಣ
Last Updated 13 ನವೆಂಬರ್ 2020, 19:37 IST
ಅಕ್ಷರ ಗಾತ್ರ

ನಿಜವಾದ ಗೆಲುವೆಂದರೆ ಅದೇ, ನಿತ್ಯವೂ ತನ್ನನ್ನು ತಾನು ಜಯಿಸುವುದು, ತನ್ನ ಮಿತಿಗಳನ್ನು ತಾನೇ ಮೀರುವುದು. ಒಳಗಿನ ಕತ್ತಲಿಗೊಂದು ದೀಪ ಹಚ್ಚಿ ಚೆಲ್ಲುವ ಅರಿವಿನ ಬೆಳಕಲ್ಲಿ ಬದುಕನ್ನು ಬೆಳಗಿಸಿಕೊಳ್ಳುವುದು...

ಸುತ್ತಲಿನ ಕತ್ತಲನ್ನು ಕರಗಿಸುವ ಶಕ್ತಿ ದೀಪದ್ದು. ಅದು ಸುಜ್ಞಾನ, ಗೆಲುವು, ನಲಿವಿನ ಸಂಕೇತವೂ ಹೌದು. ಮತ್ತೊಮ್ಮೆ ಎದುರಾಗಿದೆ ಬೆಳಕಿನ ಹಬ್ಬ. ಕಷ್ಟದ, ದುಷ್ಟತನದ ಕತ್ತಲನ್ನು ಗೆದ್ದು ವಿಜಯದ ಬೆಳಕು ಹೊತ್ತಿಸುವ ಹೊತ್ತು. ದೀಪಾವಳಿ ಅಂದರೆ ದೀಪಗಳ ಸಾಲು. ಅದು ಬೆಳಕಿನ, ಬೆಡಗು-ಬೆರಗುಗಳ ರೂಪಕ. ಬಾಹ್ಯಾಂತರಂಗದ ಕತ್ತಲನ್ನು ಗೆಲ್ಲುವುದರ ದ್ಯೋತಕವೂ ಹೌದು.

ಬೆಳಕಿಲ್ಲದಿದ್ದಲ್ಲಿ ಪರಿಸರದ ಜೈವಿಕ ಕ್ರಿಯೆಗಳು ಮಾತ್ರವಲ್ಲ, ಯಾವೊಂದು ಭೌತಿಕ ಕ್ರಿಯೆಯೂ ಜರುಗಲಾರದು, ಜಗತ್ತು ನಿಸ್ತೇಜಗೊಳ್ಳುವುದು. ಸೂರ್ಯನ ಬೆಳಕು ಹಸಿರೆಲೆಯ ಹರಿತ್ತಿನಲ್ಲಿ ಕೂತು, ಅಣುಬಂಧಗಳಲ್ಲಿ ಕಲೆತು ಸರಳ ಶರ್ಕರಗಳನ್ನು ಸೃಜಿಸಿ, ಆಹಾರ ಸರಪಳಿಯುದ್ದಕ್ಕೆ ಕಸುವನ್ನು ಕೊಂಡೊಯ್ಯುವ ವಿದ್ಯಮಾನವೇ ಜೀವಿಗೋಳದ ಶಕ್ತಿ ಸಂಚಾರದ ಮೂಲತತ್ವ. ಅಲ್ಲಿಂದ ಮೊದಲುಗೊಂಡು ಪ್ರಕೃತಿಯಲ್ಲಿ ಶಕ್ತಿಯದ್ದು ಏಕಮುಖ ಸಂಚಾರ.

ಆದರೆ ಬದುಕಲ್ಲಿ ಕತ್ತಲಿಗೂ ಮಹತ್ವವಿದೆ. ನಮ್ಮ ಬ್ರಹ್ಮಾಂಡವು ಮೂಲತಃ ಕತ್ತಲು! ಕತ್ತಲೆಯೇ ವಿಶ್ವದ ಅಸಲೀಯತ್ತು. ಅಲ್ಲಲ್ಲಿ ನಕ್ಷತ್ರಗಳೆಂಬ ಮಿಣಿಮಿಣಿ ದೀಪಗಳಿವೆ ಅಷ್ಟೇ, ಕತ್ತಲಕೊಳದಲ್ಲಿ ಅದ್ದಿ ತೆಗೆದ ಬೆಳಕಿನುಂಡೆಗಳಂತೆ. ತಾರೆಯರು ಹೊಮ್ಮಿಸುವ ಬೆಳಕಲ್ಲಿ ಹೊಳಪಿದೆ. ಜಗದ ಕಣ್ಬೆಳಕದು. ಅವಿಲ್ಲದೇ ಹೋದಲ್ಲಿ ವಿಶ್ವಕ್ಕೇ ಕುರುಡು. ನಕ್ಷತ್ರ ಲೋಕದಿಂದಾಚೆಗಿನ ಅಪರಿಮಿತ ಅನಂತ ದಿಗಂತವೂ ಪೂರ್ತಿ ಕತ್ತಲ ಸಾಮ್ರಾಜ್ಯವೇ! ತಾರಾಕುಲದ ಉಗಮದ ಮುನ್ನ ಮತ್ತು ಅಳಿವಿನ ನಂತರದ್ದು ಯಥಾಪ್ರಕಾರ ಕತ್ತಲು.

ನಮ್ಮ ಬದುಕು ಕೂಡ ಹಾಗೆಯೇ. ನಾವು ಕಣ್ತೆರೆಯುವ ಮುಂಚೆ ಮತ್ತು ಕಣ್ಮುಚ್ಚಿದ ನಂತರದ ಲೋಕ ಬರೀ ಕತ್ತಲು. ಗರ್ಭಾಶಯವೆಂಬ ಕಗ್ಗತ್ತಲ ಗುಹೆಯಿಂದ ಬೆತ್ತಲೆ ಹೊರಟು ಸಮಾಧಿ ಸೇರುವವರೆಗಿನ ಪುಟ್ಟ ಪ್ರಯಾಣದಲ್ಲಿ ಮಾತ್ರವೇ ಒಂದಿಷ್ಟು ಹಗಲು, ಒಂದಷ್ಟು ಬಯಲು. ಅಸಲಿಗೆ, ಕತ್ತಲೆಂದರೆ ಕೇವಲ ಬೆಳಕಿನ ಗೈರು, ಮತ್ತದು ಬೆಳಕಿನ ನೆರಳು. ಕತ್ತಲೆಯು ಬೆಳಕಿನ ಮೂಲಸೆಲೆಯಾದರೂ ಮನದ ಮೂಲೆಯಲ್ಲಿ ಭಯ, ಆತಂಕ, ಮೋಸ-ದ್ವೇಷ, ದುಃಖ-ದಾರಿದ್ರ್ಯದ ಕರಿನೆರಳು.

ಕಾರಿರುಳಲ್ಲಿ ಹಾಲುಚೆಲ್ಲುವ ಬೆಳದಿಂಗಳೆಂದರೆ ಎಲ್ಲರಿಗೂ ಅಕ್ಕರೆ. ‘ಕಾಲ ನಿರ್ಗುಣ’ ಎಂಬುದನ್ನು ಮರೆತು ಕರ್ದಿಂಗಳಿಗೆ ‘ದೋಷಕಾಲ’ವೆಂಬ ಹಣೆಪಟ್ಟಿ! ಸಮಾಜವನ್ನು ಹಿಂದಕ್ಕೆ ತಳ್ಳುವ ದುಷ್ಕೃತ್ಯಗಳಿಗೆ ಕಾರಿರುಳು ಆಪ್ತ. ಅಪವಾದವೆಂಬಂತೆ, ಬೆಳಕಲ್ಲಿ ಚಾಲನೆಗೊಳ್ಳುವ ಅದೆಷ್ಟೋ ಜೈವಿಕಕ್ರಿಯೆಗಳಿಗೆ ನೀಲಿನಕ್ಷೆ ರೂಪುಗೊಳ್ಳುವುದು ಇರುಳಲ್ಲಿಯೇ. ನಿದ್ದೆಗಣ್ಣಿನ ಕತ್ತಲಲ್ಲಿ ಕಂಡ ಕನಸುಗಳಿಂದ ನಾಳಿನ ಬೆಳಗಿಗೆ ಚೈತನ್ಯ ಸಿಗುವಂತೆ. ದುಡಿತದ ದಣಿವು ತಣಿಸುವ ನಿರಾಳತೆಯೊಟ್ಟಿಗೆ, ಜೀವಜಗತ್ತನ್ನು ಮುನ್ನೂಕುವ ಜೀವಗಳೆರಡರ ಮಿಲನಮಹೋತ್ಸವಕ್ಕೂ ರಾತ್ರಿಯೇ ಪ್ರಶಸ್ತಕಾಲ.

ಹಾಗೆಯೇ, ಕಾಲ ಬದಲಾದಂತೆ ಆಧುನಿಕ ಜೀವನವಿಧಾನ ಮತ್ತು ಔದ್ಯೋಗಿಕ ಅನಿವಾರ್ಯಗಳಲ್ಲಿ ಜಗತ್ತು ನಿದ್ದೆಗೆಟ್ಟಿದೆ. ರಾತ್ರಿಪಾಳಿಯಲ್ಲಿ ದುಡಿಯುವವರ ಸಂಖ್ಯೆ ಹೆಚ್ಚಿದೆ. ಊಟ-ನಿದ್ದೆ, ವಿಶ್ರಾಂತಿಯ ವೇಳಾಪಟ್ಟಿ ಬದಲಾಗಿದೆ. ವಿರೂಪಗೊಂಡ ದಿನಚರಿಯಿಂದಾಗಿ ದೇಹದ ಸಮತೋಲನ ವ್ಯವಸ್ಥೆ, ಜೈವಿಕ ಗಡಿಯಾರ ಅಸ್ತವ್ಯಸ್ತಗೊಂಡಿವೆ. ಆಳ ಸಾಗರವಾಸಿಗಳಿಗೆ ಬೆಳಕಿನ ಹಂಗಿಲ್ಲ. ಅವುಗಳದ್ದು ಕತ್ತಲು ಕುಡಿದು ಬೆಳಕು ಉಗುಳುವ ಜೀವದೀಪ್ತಿಯ ಮೋಡಿ. ನಮ್ಮ ದೇಹದೊಳಗಿನ ಪರಾವಲಂಬಿಗಳೂ ಒಳಗಿನ ಕತ್ತಲಲ್ಲಿ ಕುರುಡಾಗಿಯೇ ಬದುಕಿಕೊಳ್ಳುತ್ತವೆ. ಕತ್ತಲಲ್ಲಿ ಅರಳುವ ಅಸಂಖ್ಯ ಹೂಬಳ್ಳಿಗಳಿವೆ, ಮಾಗುವ ಅವೆಷ್ಟೋ ಹಣ್ಣುಗಳಿವೆ. ಬೆಳಕು ಹರಿಯುವುದರೊಳಗೆ ಬಲಿತು ಹೊರಬರುವ ಅಸಂಖ್ಯ ಜೀವಜಂತುಗಳಿವೆ. ಗೂಬೆ, ಬಾವಲಿ, ಇಲಿ, ಜಿರಲೆಗಳ ಇಂದ್ರಿಯಗಳು ಕತ್ತಲಲ್ಲಷ್ಟೇ ಚುರುಕು, ಅವೆಲ್ಲಾ ಹಗಲು ಮಲಗಿ ರಾತ್ರಿ ಹೊತ್ತು ಸಕ್ರಿಯವಾಗುವ ನಿಶಾಚರಿಗಳೆಂಬ ಕತ್ತಲಮೋಹಿಗಳು.

ಬೆಳಕನ್ನು ಸಂಭ್ರಮಿಸುವಷ್ಟರಲ್ಲಿ ಕತ್ತಲು ಕವಿಯುತ್ತದೆ. ಬೆಳಕು ಹೇಗೆ ಶಾಶ್ವತವಲ್ಲವೋ ಹಾಗೆ ಕತ್ತಲೆಯೂ ಒಂದು ತಾತ್ಕಾಲಿಕ ಸ್ಥಿತಿ. ಕತ್ತಲ ಗರ್ಭದಲ್ಲಿ ಬೆಳಕು ಹುಟ್ಟಿದರೆ ಬೆಳಕನ್ನು ನುಂಗಿ ಕತ್ತಲು ಬಂದೆರಗುತ್ತದೆ. ಮತ್ತೆ ಬೆಳಕಿನ ಹುಟ್ಟಿಗೆ ಕತ್ತಲಕುಲುಮೆ. ಹಾಗಾಗಿ ಕತ್ತಲೆಯೇ ಬೆಳಕಿನ ಬೇರು. ಅದೇ ಬೆಳಕಿನ ತವರು. ನೆರಳಿನ ಹಿಂದೆ ಬೆಳಕಿದೆ. ಯಾವ ಕತ್ತಲೆಗೂ ಬೆಳಕನ್ನು ತಡೆಯುವ ಶಕ್ತಿ ಇಲ್ಲ. ಎರಡರ ಕಾದಾಟದಲ್ಲಿ ಯಾರಿಗೂ ಸೋಲಿಲ್ಲ, ಗೆಲುವಿಲ್ಲ. ಪರಸ್ಪರ ಸ್ಥಾನಪಲ್ಲಟಗೊಳ್ಳುತ್ತಿದ್ದಂತೆ ದಿನಗಳು ಬದಲಾಗುತ್ತವೆ. ಕಾಲಚಕ್ರ ಉರುಳುತ್ತದೆ.

ಕತ್ತಲು-ಬೆಳಕಿನಾಚೆಗೆ, ನಮ್ಮಲ್ಲಿ ಮಾನವೀಯತೆ ಬೆಳಗಬೇಕು. ದೀಪಾವಳಿಯನ್ನು ಎದುರುಗೊಳ್ಳುವ ನೆಪದಲ್ಲಿ ನಮ್ಮ ಒಳಗನ್ನು ಬೆಳಗಿಕೊಂಡು, ನಾವೇ ಬೆಳಕಾಗುತ್ತಾ ಬದುಕಲ್ಲಿ ಆಲಸ್ಯ, ಭೇದಭಾವ, ರಾಗದ್ವೇಷಗಳ ಕತ್ತಲನ್ನು ಕಳೆಯಬೇಕು. ಆ ಜಾಗದಲ್ಲಿ ಪ್ರೀತಿ, ಸಹಬಾಳ್ವೆ, ವೈಚಾರಿಕತೆಯೆಂಬ ಅರಿವಿನ ದೀಪಗಳನ್ನು ಹೆಚ್ಚೆಚ್ಚು ಹಚ್ಚುತ್ತಾ ಬೆಳಕನ್ನು ಹಂಚುವ ಕೆಲಸವಾಗಬೇಕು. ಹಾಗೆ, ಬಾಳ್ವೆಯೇ ಬೆಳಕಾಗಿ ಜಗ ಬೆಳಗಲಿ. ಎಲ್ಲರೆದೆಗಳಲ್ಲಿ ಬೆಚ್ಚನೆಯ ಭಾವ ಉಕ್ಕಲಿ. ನಮ್ಮನ್ನು ಸಾತ್ವಿಕ ಬದುಕಿನ, ಬೆಳಗಿನ ಘಮಲು ಸದಾಕಾಲ ಮುತ್ತಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT