ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಗ್ರಂಥಾಲಯ ಸಪ್ತಾಹ– ನಿತ್ಯದ ಹಬ್ಬವಾಗಲಿ

ಸಾರ್ವಜನಿಕ ಗ್ರಂಥಾಲಯಗಳು ನಾಗರಿಕರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಲು ಅಗತ್ಯವಾದ ಯೋಜನೆಗಳನ್ನು ರೂಪಿಸಬೇಕಾಗಿದೆ
Published 16 ನವೆಂಬರ್ 2023, 19:39 IST
Last Updated 16 ನವೆಂಬರ್ 2023, 19:39 IST
ಅಕ್ಷರ ಗಾತ್ರ

ದೇಶದಲ್ಲಿ ಪ್ರತಿವರ್ಷ ನ. 14ರಿಂದ 20ರವರೆಗೆ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ ಆಚರಿಸ
ಲಾಗುತ್ತದೆ. ಈ ಅವಧಿಯಲ್ಲಿ ಪುಸ್ತಕ ಪ್ರದರ್ಶನ, ವಿಶೇಷ ಉಪನ್ಯಾಸದಂತಹ ಕಾರ್ಯಕ್ರಮಗಳನ್ನು
ಗ್ರಂಥಾಲಯಗಳಲ್ಲಿ ಆಯೋಜಿಸಲಾಗುತ್ತದೆ. ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವವನ್ನು
ಸಾರ್ವಜನಿಕರಿಗೆ ತಿಳಿಸಿಕೊಡುವುದು ಇದರ ಉದ್ದೇಶ. ವಿವಿಧ ವಯೋಮಾನದ ಮತ್ತು ಹಿನ್ನೆಲೆಯ ಓದುಗರು ಭೇಟಿ ನೀಡುವ ಈ ತಾಣಗಳಲ್ಲಿ, ಗ್ರಂಥಾಲಯ ಸಪ್ತಾಹದ ಆಚರಣೆಗೆ ಹೆಚ್ಚು ಮಹತ್ವವಿದೆ.

ಅಗತ್ಯವಿರುವ ಪುಸ್ತಕಗಳನ್ನು ವೈಯಕ್ತಿಕವಾಗಿ ಖರೀದಿಸಿ ಓದುವುದು ಆರ್ಥಿಕವಾಗಿ ಕಷ್ಟಸಾಧ್ಯವಾದ ಕೆಲಸ. ಅದಕ್ಕೆಂದೇ ಓದುಗರ ಅಭಿರುಚಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪುಸ್ತಕಗಳು ದೊರೆಯುವ ವ್ಯವಸ್ಥೆಯನ್ನು ಗ್ರಂಥಾಲಯಗಳಲ್ಲಿ ಮಾಡಲಾಗಿದೆ. ಜನರಲ್ಲಿ ಓದಿನಂತಹ ಸುಸಂಸ್ಕೃತ ಹವ್ಯಾಸವನ್ನು ಬೆಳೆಸುವ ದಿಸೆಯಲ್ಲಿ ಇವುಗಳ ಪಾತ್ರ ಪ್ರಶಂಸಾರ್ಹ. ‘ಜನಸಾಮಾನ್ಯರ ವಿಶ್ವವಿದ್ಯಾಲಯ’ಗಳೆಂದು ಪರಿಗಣಿಸಲಾಗುವ ಸಾರ್ವಜನಿಕ ಗ್ರಂಥಾಲಯಗಳನ್ನುಆರ್ಥಿಕವಾಗಿ ಸದೃಢಗೊಳಿಸಲು ದೇಶದಲ್ಲಿ ಗ್ರಂಥಾಲಯ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರಿಂದ ಸಂಗ್ರಹವಾಗುವ ಆಸ್ತಿ ತೆರಿಗೆಯಲ್ಲಿ ಶೇ 6ರಷ್ಟನ್ನು ಗ್ರಂಥಾಲಯಗಳ ಅಭಿವೃದ್ಧಿಗಾಗಿ ಖರ್ಚು ಮಾಡಬೇಕೆಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಗ್ರಂಥಾಲಯಗಳು ಇಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಇದೆ. ಕೆಲವು ದಶಕಗಳ ಹಿಂದಿನ ಗ್ರಂಥಾಲಯಗಳಿಗೆ ಹೋಲಿಸಿದರೆ ಇಂದು ಕಟ್ಟಡ ಮತ್ತು ಪೀಠೋಪ
ಕರಣಗಳು ಆಧುನೀಕರಣಗೊಂಡಿರುವುದುಢಾಳಾಗಿ ಗೋಚರಿಸುತ್ತದೆ. ವಿಪರ್ಯಾಸದ ಸಂಗತಿ ಎಂದರೆ, ಓದುಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ಗ್ರಂಥಾಲಯಗಳಲ್ಲಿ ಗುಣಾತ್ಮಕ ಪುಸ್ತಕಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದೇ ಕಾರಣ ಎನ್ನುವುದು ಓದುಗರ ಅಭಿಪ್ರಾಯ. ಓದುಗರ ಅಭಿರುಚಿ ಮತ್ತು ಅಗತ್ಯಕ್ಕೆ ಅನುಗುಣವಾದ ಪುಸ್ತಕಗಳು ಅಲ್ಲಿ ಲಭ್ಯವಾಗುವಂತೆ ಆಗಬೇಕು.

ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಸರ್ಕಾರವು ನಿಯಮಿತವಾಗಿ ಪುಸ್ತಕಗಳನ್ನು ಖರೀದಿಸುವುದಿಲ್ಲ ಎಂಬುದು ಪ್ರಕಾಶಕರ ಅಳಲು. ಓದಿನ ಸಂಸ್ಕೃತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರವು ಪುಸ್ತಕಗಳ ಖರೀದಿಗೆ ನೆರವು ನೀಡುವಲ್ಲಿ ವಿಳಂಬ ಮಾಡುವುದರಿಂದ, ಈಗಾಗಲೇ ಓದುಗರು ಮತ್ತು ಪುಸ್ತಕಗಳ ನಡುವೆ ಸೃಷ್ಟಿಯಾಗಿರುವ ಕಂದಕವನ್ನು ಮತ್ತಷ್ಟು ವಿಸ್ತರಿಸಲು ಆಹ್ವಾನ ನೀಡಿದಂತೆ ಆಗುತ್ತದೆ.

ಕಟ್ಟಡ, ಪೀಠೋಪಕರಣಗಳು, ಪುಸ್ತಕಗಳಷ್ಟೇ ಅಲ್ಲಿನ ಸಿಬ್ಬಂದಿಯ ಪಾತ್ರವೂ ಮಹತ್ವದ್ದು. ಓದುಗರ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಪುಸ್ತಕಗಳ ವ್ಯಾಪಕ ಬಳಕೆಗೆ ಪೂರಕವಾದ ವಾತಾವರಣವನ್ನು
ಗ್ರಂಥಾಲಯದಲ್ಲಿ ರೂಪಿಸಬೇಕು. ಪುಸ್ತಕಗಳನ್ನು ಕಣ್ಣಿಗೆ ಚೆಂದ ಕಾಣುವಂತೆ ಜೋಡಿಸಿಡುವುದಕ್ಕಿಂತ ಓದಿ ಅರಗಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಪುಸ್ತಕವೊಂದು ಎಷ್ಟೊಂದು ಪ್ರಮಾಣದಲ್ಲಿ ಓದಿಸಿಕೊಂಡಿದೆ ಎನ್ನುವುದನ್ನು ದಾಖಲೆಗಳ ಮೂಲಕ ಹೇಳಲು ಸಾಧ್ಯವಿಲ್ಲ, ಅದರ ಭೌತಿಕ ಸ್ವರೂಪವೇ ಅದನ್ನು ಹೇಳುತ್ತದೆ.

ಕಥೆಗಾರ ಎಸ್.ದಿವಾಕರ್ ‘ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ’ ಎನ್ನುವ ತಮ್ಮ ಪ್ರಬಂಧದಲ್ಲಿ ಹೀಗೆ ಹೇಳಿದ್ದಾರೆ- ‘ಪುಸ್ತಕಗಳ ರಟ್ಟು ಕಿತ್ತುಹೋಗಿರಬಹುದು, ಅವುಗಳ ಪುಟಗಳು ನಾಯಿಕಿವಿಗಳಾಗಿರಬಹುದು, ಹೊಲಿಗೆಯೋ ಅಂಟೋ ಬಿಚ್ಚಿಕೊಂಡು ಕೆಲವು ಹಾಳೆಗಳೇ ಸಡಿಲವಾಗಿರಬಹುದು. ಅವು ಮತ್ತೆ ಮತ್ತೆ ಓದಿಸಿಕೊಂಡು ತಮ್ಮ ಸುಸ್ವರೂಪ ಕಳೆದುಕೊಂಡ ಪುಸ್ತಕಗಳು. ಅಂಥ ಪುಸ್ತಕಗಳ ಮಾರ್ಜಿನ್ನಿನ ತುಂಬ ಪೆನ್ಸಿಲ್ಲಿನಲ್ಲೋ ಪೆನ್ನಲ್ಲೋ ಗೀಚಿರುವ ಬರಹಗಳಿದ್ದರೆ ಆಶ್ಚರ್ಯವಿಲ್ಲ’.

ಹಿಂದೆಲ್ಲ ಮನೆಬಾಗಿಲಿಗೆ ಪುಸ್ತಕಗಳನ್ನು ಕೊಂಡೊಯ್ದು ಓದುಗರಿಗೆ ತಲುಪಿಸುವ ‘ಸಂಚಾರಿ ಗ್ರಂಥಾಲಯ’ ಸೇವೆ ಚಾಲ್ತಿಯಲ್ಲಿತ್ತು. ಇದರಿಂದ ವಿಶೇಷವಾಗಿ ಗೃಹಿಣಿಯರಿಗೆ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದಲು ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಇಂದು ಈ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅದನ್ನು ಪುನರಾರಂಭಿಸುವುದು ಓದಿನ ಅಭಿರುಚಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಅಗತ್ಯ. ಸಾರ್ವಜನಿಕರು ಕೂಡ ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಳ್ಳುವುದು ಮುಖ್ಯ. ಸಾರ್ವಜನಿಕ ಸಭೆ ಸಮಾರಂಭಗಳು ಮಾತ್ರವಲ್ಲದೆ ಕೌಟುಂಬಿಕ ಸಮಾರಂಭಗಳಲ್ಲೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಆಚರಣೆಗೆ ಬರಬೇಕು.

ಮೊಬೈಲ್‍ ಫೋನಿನ ವ್ಯಾಪಕ ಬಳಕೆಯು ಓದಿನ ಆಸಕ್ತಿ ಕ್ಷೀಣಿಸುತ್ತಿರುವುದಕ್ಕೆ ಇರುವ ಪ್ರಬಲ ಕಾರಣಗಳಲ್ಲೊಂದು. ಎಲ್ಲ ವಯೋಮಾನದವರಲ್ಲಿ ಮೊಬೈಲ್ ಬಳಕೆಯ ವ್ಯಾಮೋಹ ಸೋಂಕಿನಂತೆ ಹರಡುತ್ತಿದೆ. ಪುಸ್ತಕಗಳ ಓದಿನ ಹವ್ಯಾಸವನ್ನು ಹೆಚ್ಚಿಸುವುದೇ ಈ ಸಮಸ್ಯೆಯ ಪರಿಹಾರಕ್ಕಿರುವ ಪರ್ಯಾಯ ಮಾರ್ಗ. ಈ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ನಾಗರಿಕರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಲು ಅಗತ್ಯ ಯೋಜನೆಗಳನ್ನು ರೂಪಿಸಬೇಕು. ಯೋಜನೆಗಳನ್ನು ಅನುಷ್ಠಾನಗೊಳಿಸಲು ಗ್ರಂಥಾಲಯ ಇಲಾಖೆಗೆ ಆರ್ಥಿಕ ನೆರವು ನೀಡುವುದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿಯಾಗಬೇಕು. ಜೊತೆಗೆ, ಗ್ರಂಥಾಲಯ ಸಪ್ತಾಹ ಬರೀ ಏಳು ದಿನಗಳ ಆಚರಣೆಯಾಗದೆ ಅದು ದಿನನಿತ್ಯದ ಹಬ್ಬವಾಗಬೇಕು.

ಲೇಖಕ: ಮುಖ್ಯ ಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT