ಭಾನುವಾರ, ಮೇ 16, 2021
24 °C
ಹಿಂದೆ, ತಿಂಗಳಾನುಗಟ್ಟಲೆ ಎಡೆಬಿಡದೆ ಸುರಿಯುತ್ತಿದ್ದ ಮಳೆಗೂ ಜರಿಯದ ಗುಡ್ಡ, ಬೀಳದ ಗುಡಿಸಲು ಈಗೇಕೆ ಮೂರು ದಿನದ ಮಳೆಗೇ ಕರಗುತ್ತಿವೆ?

ಮಲೆನಾಡಿನ ರಕ್ಷಾ ಕವಚಕ್ಕೆ ಬೇಕು ಶ್ರೀರಕ್ಷೆ

ಕೆ.ಪಿ.ಶ್ರೀಪಾಲ Updated:

ಅಕ್ಷರ ಗಾತ್ರ : | |

Prajavani

ಮಲೆನಾಡು ತೀವ್ರ ಅಪಾಯದ ಅಂಚಿನಲ್ಲಿದೆಯೇ? ಗುಡ್ಡಗಳ ತಪ್ಪಲಿನ ಜನರ ಬದುಕು ಇನ್ನೂ ಕಷ್ಟಕರ ಆಗಲಿದೆಯೇ? ನಮ್ಮ ಹಲವು ತಲೆಮಾರುಗಳ ಊರು, ಮನೆ ಮತ್ತು ಜಮೀನುಗಳಿಗೆ ಕಂಟಕ ಬಂದೊದಗುವುದೇ ಎಂಬ ಆತಂಕದಲ್ಲಿ ಮಲೆನಾಡಿಗರಾದ ನಾವು ಬದುಕು ಸಾಗಿಸುತ್ತಿದ್ದೇವೆ.

ನಮ್ಮ ದಟ್ಟ ಅರಣ್ಯಗಳು, ಅಲ್ಲಿನ ಕಾಡುಜಾತಿಯ ಮತ್ತಿ, ಹೊನ್ನೆ, ನೇರಲು, ಬೀಟೆ, ನಂದಿ... ಹೀಗೆ ನೂರಾರು ಜಾತಿಯ ಗಿಡ ಮರಗಳ ನಡುವೆ ಬಿದಿರು ಮಟ್ಟಿಗಳು, ಮಣ್ಣು ಕೊಚ್ಚಿಕೊಂಡು ಹೋಗದಂತೆ ರಕ್ಷಾಕವಚವಾಗಿ ಬೆಳೆದಿದ್ದವು.

ಸರ್ಕಾರದ ಅದೆಂತಹ ಅವೈಜ್ಞಾನಿಕ ಯೋಜನೆಗಳೋ ತಿಳಿಯದು. ಯೋಜನೆ ರೂಪದಲ್ಲಿ ಬಂದ ಕೋಟಿ ಕೋಟಿ ಹಣವನ್ನು ಸದುಪಯೋಗಪಡಿಸಲೆಂದು, ಹೊನ್ನು ಬೆಳೆವ ಫಲವತ್ತಾದ ಭೂಮಿಯಲ್ಲಿ ಸಾಗುವಾನಿ, ನೀಲಗಿರಿ ನೆಡುತೋಪುಗಳು ಬಂದವು. ಅದರ ಜೊತೆ ಜೊತೆಗೆ ಅಕೇಶಿಯ, ಪೈನೂಸ್ ಎಂಬ ಜಾತಿಯ ಗಿಡಗಳ ನೆಡುತೋಪುಗಳು ಎಂಪಿಎಂ ಹೆಸರಿನಲ್ಲಿ ಮಲೆನಾಡಿನ ಗುಡ್ಡಗಳನ್ನು ಆವರಿಸಿಕೊಂಡವು. ಚಿಕ್ಕಮಗಳೂರಿನ ಹಲವು ತಾಲ್ಲೂಕುಗಳಲ್ಲಿ ಕಾಫಿ ಎಸ್ಟೇಟ್ ಹೆಸರಿನಲ್ಲಿ ಗುಡ್ಡಗಳಲ್ಲಿ ಕಾಫಿ ಗಿಡಗಳ ಮಧ್ಯದಲ್ಲಿ ಪ್ಲಾಸ್ಟಿಕ್ ಶೋ ಗಿಡದ ರೀತಿ ಕಾಣುವ ಸಿಲ್ವರ್ ಗಿಡಗಳು ತಲೆ ಎತ್ತಿದವು. ಇವೆಲ್ಲವುಗಳಿಂದ ನೈಸರ್ಗಿಕ ಅರಣ್ಯ ಬುಡಮಟ್ಟ ನಾಶವಾಯಿತು.

ಪರಿಸರ ವಿರೋಧಿ ಸಾಗುವಾನಿ, ನೀಲಗಿರಿ, ಅಕೇಶಿಯ ಮಲೆನಾಡಿನ ವಾತಾವರಣವನ್ನೇ ಹಾಳು ಮಾಡಿದವು. ಈ ಬದಲಾವಣೆಗೆ ಮೊದಲು ಬಲಿಯಾದದ್ದು ಪಕ್ಷಿ ಸಂಕುಲ. ಈ ಜಾತಿಯ ಮರಗಳಲ್ಲಿ ಪಕ್ಷಿಗಳು ಗೂಡು ಕಟ್ಟುವುದಿರಲಿ ಕನಿಷ್ಠ ಆ ಮರಗಳ ಬಳಿ ಹಾರಾಟವನ್ನು ಸಹ ನಿಲ್ಲಿಸಿದವು. ಈ ಮರಗಳು ಉಂಟುಮಾಡುವ ಉಷ್ಣಾಂಶಕ್ಕೆ, ತಣ್ಣಗಿದ್ದ ಮಲೆನಾಡಿಗೆ ಬಿಸಿ ಗಾಳಿಯ ಅನುಭವವಾಯಿತು. ಇದರ ಜೊತೆಗೆ ಬಿದಿರು ಗಿಡಗಳಿಗೆ ಬಂದ ಕಟ್ಟೆ ರೋಗವು ಬಿದಿರು ನಾಶವಾಗುವಂತೆ ಮಾಡಿತು. ಬೆಟ್ಟದ ತಪ್ಪಲು, ಕಣಿವೆಯಂತಹ ಜಾಗಗಳಲ್ಲಿ ಇದ್ದ ಬಿದಿರು ಮರಗಳು, ಮಣ್ಣು ತೊಳೆದುಹೋಗದಂತೆ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದವು.

ಪ್ರತಿ ಊರಿನಲ್ಲೂ ಇದ್ದ 4ರಿಂದ 15 ಎಕರೆಗಳಷ್ಟು ವಿಸ್ತೀರ್ಣದ ಕೆರೆಗಳು ದುರಾಸೆಯ ಜನರ ಒತ್ತುವರಿಗೆ ಬಲಿಯಾಗಿ ಅಡಿಕೆ ತೋಟಗಳಾಗಿ ಬದಲಾದವು. ಈ ಕೆರೆಗಳನ್ನೇ ಅವಲಂಬಿಸಿದ್ದ ಬಾವಿಗಳು ಬತ್ತಲಾರಂಭಿಸಿ ಪಾಳು ಬಿದ್ದವು. ಊರಿಗೊಂದು ಇದ್ದ ಕೆರೆಯು ನೂರಾರು ಎಕರೆ ಜಮೀನಿಗೆ, ಮನೆಗಳ ಬಾವಿಗಳಿಗೆ, ದನಕರುಗಳಿಗೆ ನೀರು ನೀಡುತ್ತಿತ್ತು. ಆದರೆ ಅದು ಮಾಯವಾಗುವ ಸಮಯದಲ್ಲಿಯೇ ಅಡಿಕೆ ಬೆಲೆ ಗಗನಕ್ಕೇರಿತು. ಏನಾದರೂ ಆಗಲಿ ಅಡಿಕೆ ತೋಟ ಉಳಿಸಿಕೊಳ್ಳಲೇಬೇಕು ಎಂಬ ಕಾರಣಕ್ಕೆ, ತೋಟಕ್ಕೆ ನೀರುಣಿಸಲು ಕೊಳವೆಬಾವಿ ಅನಿವಾರ್ಯವಾಯಿತು.

1990ರ ದಶಕದ ಆರಂಭದವರೆಗೂ ಮಲೆನಾಡು ಭಾಗದಲ್ಲಿ ಕೊಳವೆಬಾವಿ ಎಂದರೆ ‘ಅವು ನಮಗಲ್ಲ, ಬಯಲುಸೀಮೆಗೆ ಮಾತ್ರ’ ಎನ್ನುತ್ತಿದ್ದ ಜನ, ಅಲ್ಲೊಂದು ಇಲ್ಲೊಂದು ಕೊಳವೆಬಾವಿ ಕೊರೆಸಿದ್ದರು. ಕೊಳವೆಬಾವಿ ಕೊರೆಯುವ ಮಿಷನ್ ನೋಡುವುದೇ ವಿಶೇಷವಾಗಿದ್ದ ಜನರಿಗೆ, ಕೊರೆಯುವುದು ಸಮೂಹಸನ್ನಿಯಾಗಿ ಪರಿವರ್ತನೆಗೊಂಡು ನಂತರ ಎಲ್ಲರೂ ಭೂಮಿ ಬಗೆಯಲು ಆರಂಭಿಸಿದರು. ಈಗ ಎಂತಹ ಕೆಳ ಮಧ್ಯಮ ವರ್ಗದ ರೈತನೆಂದರೂ ಕನಿಷ್ಠ ಮೂರು ಕೊಳವೆಬಾವಿಗಳನ್ನು ಕೊರೆಸಿರುತ್ತಾನೆ.

ಒಂದೆಡೆ ಗುಡ್ಡಗಳ ಮಗ್ಗುಲು ಕೊರೆದು ತೋಟ ಒತ್ತುವರಿ ಮಾಡುವ ಜೆಸಿಬಿ ಯಂತ್ರ, ಇನ್ನೊಂದೆಡೆ ಡೈನೊಸಾರ್‌ಗಳ ರೀತಿ ಕಾಣುವ ಕೊಳವೆಬಾವಿ ಯಂತ್ರಗಳು ಮಲೆನಾಡನ್ನೇ ಬರಿದು ಮಾಡಿವೆ. ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಹಲವು ಮಲೆನಾಡ ಹಳ್ಳಿಗಳಲ್ಲಿ ಜೂನ್ ಅಂತ್ಯದಲ್ಲಿ ಆರಂಭವಾಗುವ ಝರಿಗಳು ಸೆಪ್ಟೆಂಬರ್‌ ಅಂತ್ಯದವರೆಗೂ ಹರಿಯುತ್ತಿದ್ದವು. ಈಗ ಅಂತಹ ಜಾಗದಲ್ಲೂ ಕುಡಿಯುವ ನೀರಿಗಾಗಿ ಕೊಳವೆಬಾವಿ ಅನಿವಾರ್ಯವಾಗಿರುವುದು ಈ 30 ವರ್ಷಗಳಲ್ಲಿ ಮಲೆನಾಡು ಬರಡಾಗಿರುವುದಕ್ಕೆ ಸಾಕ್ಷಿಯಾಗಿದೆ.

ಹಿಂದೆ, ಜೂನ್ ತಿಂಗಳಲ್ಲಿ ಆರಂಭವಾದ ಮಳೆ ಆಗಸ್ಟ್ ಮಧ್ಯದವರೆಗೂ ಎಡೆಬಿಡದೆ ಸುರಿದರೂ ಮಲೆನಾಡಿನ ಯಾವ ಗುಡ್ಡವೂ ಜರಿಯುತ್ತಿರಲಿಲ್ಲ, ಗುಡಿಸಲು ಮನೆಗಳಿದ್ದರೂ ಬೀಳುತ್ತಿರಲಿಲ್ಲ. ಈಗ ಮೂರು ದಿನ ಎಡೆಬಿಡದೆ ಸುರಿದ ಮಳೆಗೆ ಗುಡ್ಡಕ್ಕೆ ಗುಡ್ಡಗಳೇ ಕರಗಿ ಹೋಗಿವೆ. ನೂರಾರು ಅಡಿಯ ಸಿಮೆಂಟ್ ಮಿಶ್ರಿತ ಕಬ್ಬಿಣದ ಸರಳಿನ ತಳಪಾಯದ ಮನೆಗಳು ಮಣ್ಣಲ್ಲಿ ಮಣ್ಣಾಗಿವೆ.

ಅಗ್ನಿಪರ್ವತಗಳು ಸಾಗರದ ತಳದಲ್ಲಿ ಅಥವಾ ಇನ್ನೆಲ್ಲೋ ದೊಡ್ಡ ಮಟ್ಟದಲ್ಲಿ ಕಿಲೊಮೀಟರುಗಳ ಎತ್ತರಕ್ಕೆ ಚಿಮ್ಮುವಂತೆ ಸ್ಫೋಟಿಸಿದಾಗ ಭೂಮಿಯ ತಳದಲ್ಲಿ ಆಗಿರಬಹುದಾದ ಬಿರುಕುಗಳು ಪಶ್ಚಿಮ ಘಟ್ಟದಲ್ಲಿ ಉಂಟಾಗಿರಬಹುದೇ? ಕೇರಳ, ಕೊಡಗು, ಮೂಡಿಗೆರೆ, ಬಾಳೆಹೊನ್ನೂರು, ಹೆಗಲತ್ತಿ... ಹೀಗೆ ಬೆಟ್ಟದ ಸರಪಳಿಯಂತೆ ಒಂದೇ ರೇಖೆಯಲ್ಲಿ ಈ ಕುಸಿತ ಗೋಚರಿಸಿದೆ. ಇದರಿಂದಾಗಿ, ಇಂತಹ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದರೆ,
ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಬೇಕಿದೆ. ಆಳುವವರು ಇಚ್ಛಾಶಕ್ತಿ ತೋರಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು