ಭಾನುವಾರ, ಏಪ್ರಿಲ್ 5, 2020
19 °C

ಪ್ರಾಣಿಗಳಿಲ್ಲದ ಪ್ರಪಂಚದಲ್ಲಿ...

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಕಾಡುಪ್ರಾಣಿಗಳು ನಾಡನ್ನು ಪ್ರವೇಶಿಸಿ ದಾಂದಲೆ ಎಬ್ಬಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸುದ್ದಿಯಾಗುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಅವು ಮರಳಿ ಕಾಡಿಗೆ ಹೋಗಲಾಗದೆ, ಜನರ ಕೈಯಲ್ಲಿ ಸಿಕ್ಕಿ ಸಾಯುವುದೇ ಜಾಸ್ತಿ. ತುಮಕೂರು ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡು ಜನ ಭೀತರಾದಾಗ, ಅರಣ್ಯ ಸಚಿವರು ‘ಆ ಚಿರತೆಯನ್ನು ಕಂಡಲ್ಲಿ ಗುಂಡಿಟ್ಟು ಸಾಯಿಸಿ’ ಎಂದು ಆದೇಶಿಸಿದರು. ಕಾಡಿನ ಸಮಸ್ತ ಜೀವಸಂಕುಲದ ರಕ್ಷಣೆಯ ಹೊಣೆ ಹೊರಬೇಕಾದ ಸಚಿವರೇ ಈ ರೀತಿ ಹೇಳಿಕೆ ಕೊಟ್ಟದ್ದು ವಿಷಾದನೀಯ.

ಇಲ್ಲಿ ಮೂಲಪ್ರಶ್ನೆ, ನಿಜವಾಗಿಯೂ ಕಾಡುಪ್ರಾಣಿಗಳು ಮನುಷ್ಯನ ನಾಡಿಗೆ ದಾಳಿಯಿಡುತ್ತಿವೆಯೇ ಅಥವಾ ನಾವು, ಪ್ರಾಣಿಗಳ ವಾಸಸ್ಥಾನವನ್ನು ಅತಿಕ್ರಮಿಸುತ್ತಾ, ಅವುಗಳನ್ನು ವಸತಿಹೀನರನ್ನಾಗಿ ಮಾಡುತ್ತಿದ್ದೇವೆಯೇ? ನಿಯಂತ್ರಣವಿಲ್ಲದೆ ಅತಿವೇಗದಲ್ಲಿ ವೃದ್ಧಿಯಾಗುತ್ತಿರುವ ಮನುಷ್ಯಸಂತತಿಯ ಅಗತ್ಯಗಳನ್ನು ಪೂರೈಸಲು ಕಾಡನ್ನು ನಾಶಗೊಳಿಸುತ್ತಾ, ಅದನ್ನು ಕೃಷಿ ಮತ್ತು ಕೈಗಾರಿಕಾಯೋಗ್ಯ ಭೂಮಿಯಾಗಿಸುತ್ತಾ, ವಸತಿ ನಿರ್ಮಿಸುತ್ತಾ, ಉಳಿದ ಜೀವಿಗಳ ನೆಲೆಯನ್ನು ಕಿತ್ತುಕೊಂಡಿದ್ದೇವೆ
ಎನ್ನುವುದನ್ನು ಮರೆಯಬಾರದು.

ತದ್ವಿರುದ್ಧವಾಗಿ, ಪ್ರಾಣಿಗಳಿಗಿರುವ ಅಗತ್ಯವೆಂದರೆ, ಆ ಹೊತ್ತಿನ ಊಟ ಮತ್ತು ವಸತಿ. ಅವುಗಳು ಇರುವಲ್ಲಿಯೇ ಇವೆರಡೂ ದೊರಕಿದರೆ, ಬಹುಶಃ ಅವು ಮನುಷ್ಯ ಜಗತ್ತಿಗೆ ಮೈಯೊಡ್ಡಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳಲಾರವು. ಸ್ವಾಭಾವಿಕವಾಗಿ, ಪ್ರಾಣಿಗಳು ನಿಶ್ಶಬ್ದ ಪರಿಸರವನ್ನು ಬಯಸುತ್ತವೆ ವಿನಾ ಮನುಷ್ಯ ಪ್ರಪಂಚದ ಶಬ್ದಮಾಲಿನ್ಯವನ್ನಲ್ಲ. ಹೀಗಿದ್ದೂ, ಉಳಿದುಕೊಂಡಿರುವ ಅಲ್ಪಸ್ವಲ್ಪ ಕಾಡಿನ ಗೆರೆ ದಾಟಿ ನಾಡಿಗೆ ಕಾಲಿಡುತ್ತವೆಯೆಂದರೆ, ಅಲ್ಲೇನೋ ಗಂಭೀರ ಸಮಸ್ಯೆಯಿದೆ ಎಂದರ್ಥ. ಹಾಗಿದ್ದರೆ, ಆ ಸಮಸ್ಯೆಯೇನು?

ಇದು, ನಾಶವಾಗುತ್ತಿರುವ ಕಾಡಿನ ಸಮಸ್ಯೆ ಮಾತ್ರವಲ್ಲ, ಅಲ್ಲಿರುವ ನೀರು, ಆಹಾರದ ಕೊರತೆ ಕೂಡ. ಯಾಕೆಂದರೆ, ಹುಲಿ, ಚಿರತೆಯಂಥ ಪ್ರಾಣಿಗಳ ಆಹಾರ ಸಂಪನ್ಮೂಲಗಳಾದ ಚಿಕ್ಕಪುಟ್ಟ ಪ್ರಾಣಿಸಂಕುಲವು ಕಾಡಿನಿಂದ ಸಂಪೂರ್ಣ ಕಣ್ಮರೆಯಾಗಿದೆ. ಹಾಗಾಗಿ, ಕಾಡಿನಲ್ಲಿ ದೊರೆಯದ ಆಹಾರವನ್ನು ಹುಡುಕಿಕೊಂಡು ಅವು ನಾಡಿಗೆ ಕಾಲಿಡುತ್ತಿವೆ. ಇದಕ್ಕೆ ಪುರಾವೆಯೆಂಬಂತೆ, ಇತ್ತೀಚಿನ ದಿನಗಳಲ್ಲಿ ಮನುಷ್ಯರ ಕೈಯಲ್ಲಿ ಸತ್ತ ಬಹುತೇಕ ಹುಲಿ, ಚಿರತೆಗಳ ಮರಣೋತ್ತರ ಪರೀಕ್ಷೆಯಲ್ಲಿ, ಎಷ್ಟೋ ದಿನಗಳಿಂದ ಅವು ಖಾಲಿ ಹೊಟ್ಟೆಯಲ್ಲಿದ್ದುದು ಪತ್ತೆಯಾಗಿದೆ.

ಇದರಿಂದ ನಮ್ಮ ನಾಗರಿಕ ಸಮಾಜ ಅರ್ಥಮಾಡಿಕೊಳ್ಳ ಬೇಕಾಗಿರುವುದು, ಮನುಷ್ಯ (ಜನಸಂಖ್ಯೆ ನಿಯಂತ್ರಿಸದೆ) ತನ್ನ ಅಗತ್ಯಗಳ ನೆಪದ ಮುಖವಾಡದ ಹಿಂದಿನ ದುರಾಸೆಯಿಂದ ಭೂಮಿಯನ್ನು ಅತಿಕ್ರಮಿಸಿಕೊಂಡಷ್ಟೂ ಉಳಿದ ಜೀವಸಂಕುಲ ನಿರ್ವಸತಿಗವಾಗುತ್ತದೆ. ಅಷ್ಟೇ ಅಲ್ಲ, ಈ ಪ್ರಾಣಿಗಳು ಹಸಿವಿನಿಂದ ಕಂಗೆಟ್ಟು, ಜೀವದ ಹಂಗು ತೊರೆದು ನಾಡಿನತ್ತ ಮುಖ ಮಾಡುತ್ತವೆ. ಪ್ರಾಣಿಗಳಿಗೆ ಕೇವಲ ಆ ಹೊತ್ತಿನ ಹಸಿವು ನೀಗಿದರೆ ಸಾಕು, ಕಾಣದ ನಾಳೆಗಾಗಿ ಮನುಷ್ಯನಂತೆ ಕೂಡಿಟ್ಟುಕೊಳ್ಳುವ ದುರ್ಬುದ್ಧಿಯಿಲ್ಲ. ‘ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯ ಹೊಂದಿದೆ. ಆದರೆ, ದುರಾಸೆಯನ್ನಲ್ಲ’ ಎಂಬ ಗಾಂಧೀಜಿ ಮಾತು ಇಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ.

ಭೂಮಿಯ ಏಕಮೇವ ಅಧಿಪತಿಯಂತೆ ದಬ್ಬಾಳಿಕೆ ನಡೆಸುತ್ತಿರುವ ಮನುಷ್ಯ, ಕಾಲಚಕ್ರದ ಇತಿಹಾಸದ ಪುಟಗಳಲ್ಲಿ ಈ ಮಣ್ಣು, ಪ್ರಾಣಿಗಳ ವಾಸಸ್ಥಾನವಾಗಿತ್ತು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ತಯಾರಿಸಿದ ಯಂತ್ರಗಳ ಪರಾಶಕ್ತಿಯ ಮುಂದೆ ಉಳಿದ ಜೀವಿಗಳು ಇಂದು ದುರ್ಬಲವಾಗಿ ಕಾಣಿಸಬಹುದು. ಆದರೆ, ಈ ಭೂಮಿಯಲ್ಲಿ ನಾವಿಂದು ಅವುಗಳ ಋಣದಲ್ಲಿದ್ದೇವೆ. ಆದ್ದರಿಂದ, ನಾಡಿಗೆ ಆಹಾರ ಅರಸಿಕೊಂಡು ಬರುವ ಕಾಡಿನ ಅತಿಥಿಗಳನ್ನು ಗೌರವಿಸೋಣ. ಸಾಧ್ಯವಾದರೆ, ಹಸಿವು ನೀಗಿಸೋಣ. ಇಲ್ಲವಾದರೆ, ಕನಿಷ್ಠಪಕ್ಷ ಹಿಂಸಿಸದೆ, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿ ಕಾಡಿಗೆ ಸುರಕ್ಷಿತವಾಗಿ ಮರಳಿಸೋಣ. ಅರಣ್ಯ ಇಲಾಖೆಯೂ ಈ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಬೇಕಾಗಿದೆ.

ಇನ್ನೊಂದು ಮಾತು, ನಮ್ಮ ಸುತ್ತುಲೂ ಕಾಣಸಿಗುವ ಪ್ರಾಣಿಪಕ್ಷಿಗಳಿಗೆ ಬೇಸಿಗೆಯ ಕಾವು ತಟ್ಟಲಾರಂಭಿಸಿದೆ. ಸಾಧ್ಯವಾದರೆ, ಮನೆಯ ಹೊರಗೆ ಒಂದು ಪಾತ್ರೆಯಲ್ಲಿ ಅವುಗಳಿಗಾಗಿ ನೀರು ಇಡೋಣ. ಇನ್ನೂ ಹೃದಯ ಶ್ರೀಮಂತವಾಗಿದ್ದಲ್ಲಿ, ಒಂದಿಷ್ಟು ಆಹಾರ ಹಂಚಿಕೊಳ್ಳೋಣ. ಕೆಲವೊಮ್ಮೆ, ನಾಗರಿಕ ಮನುಷ್ಯರು ತಮ್ಮ ಮಕ್ಕಳು ಹಟ ಹಿಡಿದರೆಂದು ಆಟಿಕೆಯಂತೆ ಪ್ರಾಣಿಪಕ್ಷಿಗಳನ್ನು ಖರೀದಿಸಿ, ಸ್ವಲ್ಪದಿನ ಸಾಕಿ, ಆಮೇಲೆ ಸಂಬಾಳಿಸಲಾಗದೆ, ಯಾವುದೇ ಅನುಕಂಪವಿಲ್ಲದೆ ಬೀದಿಪಾಲು ಮಾಡುವ ದೃಶ್ಯ ನಗರಗಳಲ್ಲಿ ಸಾಮಾನ್ಯ. ಪ್ರಾಣಿಗಳನ್ನು ಜೀವನಪರ್ಯಂತ ನೋಡಿಕೊಳ್ಳುವ ಸ್ಥೈರ್ಯವಿದ್ದರೆ ಮಾತ್ರ ಜವಾಬ್ದಾರಿ ವಹಿಸಿಕೊಳ್ಳೋಣ. ಅವುಗಳಿಗೂ ನಮ್ಮಂತೆ ಭಾವನೆಗಳಿರುತ್ತವೆ.

ಮನುಷ್ಯನು ಭೂಮಿಯ ಮಾಲೀಕನಲ್ಲ, ಕೇವಲ ಬಾಡಿಗೆದಾರ. ಬದುಕಿರುವಷ್ಟು ದಿನ ಈ ಸುಂದರ ಸೃಷ್ಟಿಯನ್ನು ನಮ್ಮ ಅಗತ್ಯಗಳಿಗೆ ತಕ್ಕಂತೆ ಅನುಭವಿಸಿ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟು ಹೋಗುವುದು ನಮ್ಮ ಕರ್ಮ, ಜವಾಬ್ದಾರಿಯೂ ಕೂಡ. ಮುಂದಿನ ಜನಾಂಗದ ಪ್ರತೀ ಮಗು, ಗ್ರೇಥಾಳಂತೆ, ‘ಜೀವಸಂಕುಲವನ್ನು ನಾಶ ಮಾಡಿ, ಮರುಭೂಮಿಯನ್ನಾಗಿಸಿ ಬಿಟ್ಟುಹೋಗುವುದಕ್ಕೆ ಎಷ್ಟು ಧೈರ್ಯ ನಿಮಗೆ’ ಎಂದು ನಮ್ಮ ಕಾಲರ್ ಹಿಡಿದು ಪ್ರಶ್ನಿಸುವ ಮೊದಲು ಎಚ್ಚರಗೊಳ್ಳುವುದು ಅವಶ್ಯ. ಚೀಫ್ ಸಿಯಾಟಲ್ ಹೇಳಿದಂತೆ, ‘ಪ್ರಾಣಿಗಳಿಲ್ಲದ ಪ್ರಪಂಚದಲ್ಲಿ ನೀವು ತೀವ್ರ ಒಂಟಿತನ ಅನುಭವಿಸುತ್ತೀರಿ’.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)