ಶುಕ್ರವಾರ, ಏಪ್ರಿಲ್ 16, 2021
31 °C
ವೈಯಕ್ತಿಕ ಸಮಸ್ಯೆಯಾಗಿದ್ದ ಒಂಟಿತನ, ಇಂದು ಬೃಹತ್ ಸಾಮಾಜಿಕ ಪಿಡುಗಾಗಿದೆ

ಸಂಗತ: ಒಂಟಿತನ ನಿರ್ವಹಣೆಗೊಬ್ಬ ಸಚಿವ!

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಸಮುದಾಯ ಜೀವಿಯಾದ ಮನುಷ್ಯ ಜನಾಂಗಕ್ಕೆ ಮುಂದೊಂದು ದಿನ ಒಂಟಿತನ ನಿರ್ವಹಣೆಗೆ ಒಂದು ಸಚಿವಾಲಯದ ಅಗತ್ಯ ಬರಬಹುದೆಂದು ಹಳೆಯ ತಲೆಮಾರಿನವರು ಬಹುಶಃ ಅಂದುಕೊಂಡಿರಲಿಕ್ಕಿಲ್ಲ. ಪ್ರಸ್ತುತ, ಅದರ ಅನಿವಾರ್ಯವನ್ನು ಕಂಡುಕೊಂಡ ಜಗತ್ತಿನ ಎರಡನೇ ದೇಶ ಜಪಾನ್.

ಜಪಾನಿನ ಪ್ರಧಾನಿ ಈ ತಿಂಗಳ ಆರಂಭದಲ್ಲಿ, ಜನರ ಒಂಟಿತನ ನಿರ್ವಹಣೆ ಎನ್ನುವ ಹೊಸ ಖಾತೆ ಸೃಷ್ಟಿಸಿ, ಮಂತ್ರಿಯೊಬ್ಬರನ್ನು (ಲೋನ್‌ಲಿನೆಸ್‌ ಮಿನಿಸ್ಟರ್) ನಿಯೋಜಿಸಿದರು. 2018ರಲ್ಲಿ, ಒಂಟಿತನ ನಿರ್ವಹಣೆಗೆ ಖಾತೆ ರಚಿಸಿದ ಮೊದಲ ದೇಶ ಬ್ರಿಟನ್. ಪ್ರಸಕ್ತ ಕೊರೊನಾ ಕಾಲಘಟ್ಟದಲ್ಲಿ, ದೇಶದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಡೆಯಲು ಜಪಾನ್ ಈ ಕ್ರಮ ಕೈಗೊಂಡಿದೆ.

ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ಜನಸಾಮಾನ್ಯರಿಗೆ ತಮ್ಮ ಬದುಕನ್ನು ಪುನರ್ ವಿಮರ್ಶಿಸುವಂತೆ ಮಾಡಿರುವುದಂತೂ ನಿಜ. ಇದರೊಂದಿಗೆ, ಜಪಾನಿನ ಸಾಮಾಜಿಕ ವ್ಯವಸ್ಥೆ ಮತ್ತು ಅದರ ಸಮಸ್ಯೆಗಳು ಬಹಳ ಸಂಕೀರ್ಣವಾದವು. ಬಹುಶಃ, ಆಧುನಿಕತೆ ಮತ್ತು ತಂತ್ರಜ್ಞಾನದ ಉತ್ತುಂಗ ದಲ್ಲಿರುವ ಜಪಾನ್, ವಸ್ತುನಿಷ್ಠತೆ ಮತ್ತು ಬಾಹ್ಯ ಜಗತ್ತಿನ ಯಶಸ್ಸಿನ ಮಾನದಂಡಗಳನ್ನು ಗಂಭೀರವಾಗಿ ಪರಿಗಣಿಸುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿ ವಿವಾಹಿತರ ಸಂಖ್ಯೆ ಮತ್ತು ಜನನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಜೊತೆಗೆ, ತಂತ್ರಜ್ಞಾನದ ಅತೀವ ಅವಲಂಬನೆಯಿಂದಾಗಿ ಮನುಷ್ಯರ ನಡುವೆ ಸಾಮಾಜಿಕ ಅಂತರ ಹೆಚ್ಚಾಗುತ್ತಿದೆ. ವಿಸ್ಮಯವೆಂದರೆ, ತಂತ್ರಜ್ಞಾನ ಎನ್ನುವುದು ಮನುಷ್ಯನ ಹೆಚ್ಚಿನ ಕೆಲಸಗಳನ್ನು ತಾನೇ ನಿರ್ವಹಿಸುವುದರ ಮೂಲಕ, ಅವನಿಗೆ ಉಳಿದವರೊಂದಿಗೆ ಸಮಯ ಕಳೆಯುವ ಸಾಧ್ಯತೆಯನ್ನು ಹೆಚ್ಚಿಸಬೇಕಿತ್ತು. ತದ್ವಿರುದ್ಧ ವಾಗಿ, ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚಾದಂತೆ ಜನ ಒಂಟಿ ದ್ವೀಪಗಳಾಗುತ್ತಿದ್ದಾರೆ.

2019ರ ವರದಿಯೊಂದರ ಪ್ರಕಾರ, ಜಪಾನಿನಲ್ಲಿ 5 ಲಕ್ಷ ಆಧುನಿಕ ಸನ್ಯಾಸಿಗಳಿದ್ದಾರೆ (ಮಾಡರ್ನ್‌ ಹರ್ಮಿಟ್). ಅವರನ್ನು ಜಪಾನಿ ಭಾಷೆಯಲ್ಲಿ ‘ಹಿಕಿಕೊಮೊರಿ’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, ಅವರು ಎಲ್ಲಾ ಸಾಮಾಜಿಕ ಸಂಪರ್ಕಗಳನ್ನು ಕಡಿದುಕೊಂಡು ವರ್ಷಾನುಗಟ್ಟಲೆ ಮನೆಯಲ್ಲಿಯೇ ಇರುತ್ತಾರೆ. ಅವರ ಜೀವನದ ಏಕೈಕ ಗುರಿ, ಯಶಸ್ಸಿನ ಹಿಂದೆ ನಾಗಾಲೋಟ. ಇತ್ತೀಚೆಗೆ, ಈ ವಿಶಿಷ್ಟ ಮನುಷ್ಯಸ್ಥಿತಿ ಅಭಿವೃದ್ಧಿ ಹೊಂದಿದ ಹೆಚ್ಚಿನ ದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ಉದಾ ಹರಣೆಗೆ, ದಕ್ಷಿಣ ಕೊರಿಯಾ, ಅಮೆರಿಕ, ಸ್ಪೇನ್, ಇಟಲಿ, ಫ್ರಾನ್ಸ್...

ಮೊದಲನೆಯದಾಗಿ, ಜಪಾನಿನಲ್ಲಿ ಜೀವನದ ಯಶಸ್ಸಿನ ಕುರಿತಾದ ವೈಯಕ್ತಿಕ ನಿರೀಕ್ಷೆಗಳು, ಹೆತ್ತವರು ಮತ್ತು ಸಮಾಜದ ಅತಿಯಾದ ನಿರೀಕ್ಷೆಗಳು ಬದುಕಿನ ಪ್ರತೀ ಕ್ಷಣದಲ್ಲಿಯೂ ಮುಖಾಮುಖಿಯಾಗುತ್ತಾ ಮನಸ್ಸನ್ನು ತೀವ್ರ ಒತ್ತಡಕ್ಕೆ ಸಿಲುಕಿಸುತ್ತವೆ. ಉಳಿದ ದೇಶಗಳಿಗೆ ಹೋಲಿಸಿದರೆ, ಇಲ್ಲಿ ವೃತ್ತಿಯಾಧಾರಿತ ಯಶಸ್ಸಿಗೆ ಅತಿಯಾದ ಮಹತ್ವ ಕೊಡಲಾಗುತ್ತದೆ. ಇದರ ಜೊತೆಗೆ ಇಂಟರ್ನೆಟ್, ಸಾಮಾಜಿಕ ಜಾಲತಾಣ ಮತ್ತು ವಿಡಿಯೊ ಗೇಮ್‌ಗಳ ಪ್ರಭಾವಗಳಿಂದಾಗಿ ಮನುಷ್ಯ ಹೆಚ್ಚು ಅಂತರ್ಮುಖಿಯಾಗುತ್ತಿರುವುದಂತೂ ನಿಜ. ಈ ವಿಷಯವಾಗಿ ಸಂಶೋಧಕರು ಗಮನಿಸಿದ ಬಹಳ ಸೂಕ್ಷ್ಮ ಅಂಶವೆಂದರೆ- ಬಾಹ್ಯ ಜಗತ್ತು ಮತ್ತು ವರ್ಚುವಲ್ ಪರಿಸರದ ನಡುವಿನ ಅಜಗಜಾಂತರ. ನಮ್ಮ ದೈನಂದಿನ ಬದುಕು ಸಾಗಿಸುವ ವಾಸ್ತವದ ಪ್ರಪಂಚದಲ್ಲಿ ಪ್ರತಿಕ್ಷಣವೂ ಅನಿಶ್ಚಿತತೆ ಪ್ರಕಟವಾದರೆ, ಇಂಟರ್ನೆಟ್ ಜಗತ್ತು ಹೆಚ್ಚು ನಿಯಂತ್ರಿತವಾಗಿ ಕಂಡುಬಂದು ತಕ್ಕಮಟ್ಟಿಗೆ ನಮ್ಮ ನಿರೀಕ್ಷೆಯಂತೆ ಕೆಲಸ ಮಾಡುತ್ತದೆ. ಅಂದರೆ, ವರ್ಚುವಲ್ ಪ್ರಪಂಚದಲ್ಲಿ, ಎಲ್ಲವನ್ನೂ ಬಟನ್ ಒತ್ತುವುದರ ಮೂಲಕ ನಿಯಂತ್ರಿಸ ಬಹುದು. ‌ಇಲ್ಲಿ ಸೋಲಿನ ಭಯ, ಮುಖಾಮುಖಿ ಮತ್ತು ಅನುಭವ ಕಡಿಮೆ. ಸೋತರೂ ತಿದ್ದಿಕೊಳ್ಳಲು ಅವಕಾಶಗಳಿವೆ. ಜೊತೆಗೆ, ನೇರ ಸಂವಹನಗಳು ಕಡಿಮೆ. ಅಂದರೆ, ಬಾಹ್ಯ ಪ್ರಪಂಚದೊಂದಿಗಿನ ಮಾತು ಕತೆಗಳ ಅಗತ್ಯ ಬಹಳ ವಿರಳ. ಇಂತಹ ಅನುಕೂಲಕರ, ಯಶಸ್ಸಿನ ಅನುಭವ ಕೊಡುವ ಮತ್ತು ಸಂಪೂರ್ಣ ನಮ್ಮ ನಿಯಂತ್ರಣವಿರುವ ವರ್ಚುವಲ್ ಪ್ರಪಂಚಕ್ಕೆ ಹೋಲಿಸಿದರೆ ವಾಸ್ತವ ಜಗತ್ತು ಅತ್ಯಂತ ನಿಷ್ಠುರವಾಗಿ ಕಾಣಿಸುತ್ತದೆ.

ಯಾಕೆಂದರೆ, ವಾಸ್ತವ ಜಗತ್ತಿನ ಪ್ರತಿಕ್ಷಣವೂ ಆತಂಕದಿಂದ ಕೂಡಿದ್ದು, ಹೆಚ್ಚಿನ ಬಾಹ್ಯ ಸಂಗತಿಗಳು ನಮ್ಮ ನಿಯಂತ್ರಣದಿಂದ ಹೊರಗಿರುತ್ತವೆ. ಜೊತೆಗೆ, ಇಲ್ಲಿ ಯಶಸ್ಸು ಕಡಿಮೆ, ಸೋಲು ಹೆಚ್ಚು. ಹಾಗಾಗಿ, ನಿತ್ಯದ ಸೋಲನ್ನು ಸ್ವೀಕರಿಸಲು ಸ್ಥಿತಪ್ರಜ್ಞೆ ಮತ್ತು ಸಂಯಮ ಬಹಳ ಮುಖ್ಯ. ಈ ಭಿನ್ನ ಪ್ರಪಂಚಗಳ ದ್ವಂದ್ವಗಳನ್ನು ಎದುರಿಸಲಾಗದ, ಸದಾ ಯಶಸ್ಸಿನ ಹಂಬಲದ ಒತ್ತಡದಲ್ಲಿರುವ ಮನಸ್ಸು, ಹತಾಶೆಯಿಂದ ಆತ್ಮಹತ್ಯೆಯತ್ತ ವಾಲುವ ಸಾಧ್ಯತೆಯಿದೆ.

ವರ್ತಮಾನ ಜಗತ್ತಿನ ಈ ಸಮಸ್ಯೆಗೆ ಪರಿಹಾರ ವಾಗಿ, ಜಪಾನ್ ಸರ್ಕಾರ ಒಂಟಿ ಜನರ ಸಾಂಗತ್ಯಕ್ಕಾಗಿ ಪ್ರಾಣಿಗಳನ್ನು ಸಾಕುವುದನ್ನು ಪ್ರೋತ್ಸಾಹಿಸತೊಡಗಿದೆ. ಇದರೊಂದಿಗೆ, ಆಧುನಿಕ ತಂತ್ರಜ್ಞಾನದಲ್ಲಿ ಅತೀವ ಭರವಸೆಯಿರುವ ಜಪಾನ್, ಇದಕ್ಕೂ ತಂತ್ರಜ್ಞಾನದ ಮೊರೆ ಹೊಕ್ಕು, ಒಂಟಿತನ ಹೋಗಲಾಡಿಸಲು ನೆರ ವಾಗುವ ರೋಬೊಟ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಅಂತೂ, ಅತಿಯಾದ ತಂತ್ರಜ್ಞಾನದಿಂದಾದ ಸಮಸ್ಯೆಗೆ ಪರಿಹಾರವನ್ನು ಕೂಡ ತಂತ್ರಜ್ಞಾನದಿಂದಲೇ ಪಡೆಯಲೆತ್ನಿಸುತ್ತಿರುವುದು ವಿಸ್ಮಯವೇ ಸರಿ.

ಒಟ್ಟಿನಲ್ಲಿ, ಒಂದು ಕಾಲದಲ್ಲಿ ಮನುಷ್ಯನ ವೈಯಕ್ತಿಕ ಸಮಸ್ಯೆಯೆಂದು ಪರಿಗಣಿಸಲ್ಪಟ್ಟಿದ್ದ ಒಂಟಿತನ, ಇಂದು ಬೃಹತ್ ಸಾಮಾಜಿಕ ಪಿಡುಗಾಗಿ, ಅದನ್ನು ನಿವಾರಿಸಲು ಸರ್ಕಾರಗಳು ಖಾತೆಯೊಂದನ್ನು ಆರಂಭಿಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದೇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು