ಶುಕ್ರವಾರ, ಫೆಬ್ರವರಿ 21, 2020
18 °C
ಚುನಾವಣೆಯು ಅಭಿವೃದ್ಧಿಯತ್ತ ಪ್ರಮುಖ ಹೆಜ್ಜೆಯಾಗಬೇಕಾದರೆ ಆಡಳಿತ, ಅಭಿವೃದ್ಧಿ, ಜನಪ್ರತಿನಿಧಿಗಳ ಬಗೆಗಿನ ಸಿನಿಕತೆಯನ್ನು ಜನ ದೂರವಿಡಲೇಬೇಕು

ಸಂಗತ | ಜನಪ್ರತಿನಿಧಿಗಳಿಗೇ ಮೂಡಿಸಬೇಕಿದೆ ಅರಿವು

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಸಿರುಗುಪ್ಪ, ತೆಕ್ಕಲಕೋಟೆ, ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು ಮತ್ತು ಸಿಂದಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಗೆದ್ದವರು ವಿಜಯೋತ್ಸವ ಆಚರಿಸಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಲೆಕ್ಕಾಚಾರ ಶುರುವಾಗಿದೆ.

ಸಾವಿರಾರು ಮತದಾರರಲ್ಲಿ ತಮ್ಮ ನಗರ, ಪುರ ಮತ್ತು ಪಟ್ಟಣಗಳ ಅಭಿವೃದ್ಧಿ ನಿರೀಕ್ಷೆಯೂ ಗರಿಗೆದರಿದೆ. ರಾಜ್ಯದ ಮಟ್ಟಿಗೆ ಇದೊಂದು ಸಣ್ಣ ಚುನಾವಣೆ ಎಂಬುದು ಸಹಜವೇ. ಆದರೆ ಗಮನಿಸಬೇಕಾದ ವಿಷಯಗಳು ದೊಡ್ಡವಿವೆ.

ವಿಧಾನಸಭೆ ಮತ್ತು ಲೋಕಸಭೆಗೆ ಚುನಾವಣೆಗಳು ನಡೆದಾಗ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದು ಲೋಕಾರೂಢಿ. ರಾಜ್ಯದ, ದೇಶದ ಅಭಿವೃದ್ಧಿಗೆ ತಮ್ಮ ಬದ್ಧತೆ ಮತ್ತು ಭರವಸೆಗಳೇನು ಎಂಬುದನ್ನು ಪ್ರಣಾಳಿಕೆಗಳ ಮೂಲಕ ಪ್ರಕಟಿಸಿ ಮತದಾರರನ್ನು ಓಲೈಸುವ ರಾಜಕಾರಣ ಶಿಸ್ತಾಗಿ ನಡೆಯುತ್ತದೆ. ಆದರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಈ ಪ್ರಕ್ರಿಯೆ ಸಂಪೂರ್ಣ ನಾಪತ್ತೆಯಾಗುವುದು ಮಾತ್ರ ವಿಪರ್ಯಾಸ. ರಾಜಕೀಯ ಪಕ್ಷಗಳಾಗಲೀ ಅಭ್ಯರ್ಥಿಗಳಾಗಲೀ ಅದು ತಮ್ಮ ಪ್ರಾಥಮಿಕ ಜವಾಬ್ದಾರಿ ಎಂದು ಅಂದುಕೊಳ್ಳುವುದೇ ಇಲ್ಲ.

ಸಿರುಗುಪ್ಪ ನಗರಸಭೆ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಚುನಾವಣೆ ಪ್ರಚಾರದ ವೇಳೆ ಈ
ಪ್ರದೇಶಗಳಲ್ಲಿ ಸುತ್ತಾಡಿ, ಅಭ್ಯರ್ಥಿಗಳು ಹಾಗೂ ಪಕ್ಷಗಳ ಮುಖಂಡರೊಂದಿಗೆ ಮಾತನಾಡಿದಾಗ ಈ ವಿಷಯ ಇನ್ನಷ್ಟು ಢಾಳಾಗಿ ಎದ್ದು ಕಂಡಿತ್ತು.

ಅಭ್ಯರ್ಥಿಗಳು ತಮ್ಮ ವಾರ್ಡಿನ ಮೂಲಸೌಕರ್ಯಗಳ ಸಮಸ್ಯೆ ಪರಿಹರಿಸುವ ಭರವಸೆಗಳನ್ನಷ್ಟೇ ಉಳ್ಳ ಕರಪತ್ರಗಳನ್ನು ಎಂದಿನಂತೆ ವಿತರಿಸುತ್ತಿದ್ದರು. ರಾಜಕೀಯ ಪಕ್ಷಗಳ ಮುಖಂಡರು ಕೂಡ ಅದನ್ನೇ ಪ್ರಚಾರ ಸಭೆಗಳಲ್ಲಿ ಹೇಳುತ್ತಾ ಮುಂದೆ ಸಾಗಿದ್ದರು. ‘ನಗರ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಣಾಳಿಕೆಯನ್ನೇನಾದರೂ ಸಿದ್ಧಪಡಿಸಿದ್ದೀರಾ’ ಎಂಬ ಪ್ರಶ್ನೆಗೆ ‘ಅಂಥದ್ದೇನೂ ಇಲ್ಲ’ ಎಂದು ಉತ್ತರ ಕೊಟ್ಟವರೇ ಹೆಚ್ಚು.

ಸಿರುಗುಪ್ಪದ ಅಭ್ಯರ್ಥಿಯೊಬ್ಬರು ಪ್ರಕಟಿಸಿದ್ದ ಕರಪತ್ರದಲ್ಲಿರುವ ಮಾಹಿತಿಯನ್ನು ಹಾಗೇ ಉಳಿಸಿಕೊಂಡು ಹೆಸರು ಮತ್ತು ವಾರ್ಡನ್ನಷ್ಟೇ ಬದಲಿಸಿ ಕರಪತ್ರ ಮುದ್ರಿಸಿದ ಅಭ್ಯರ್ಥಿಯೊಬ್ಬರು ತೆಕ್ಕಲಕೋಟೆಯಲ್ಲಿ ಕಂಡುಬಂದಿದ್ದರು! ಚುನಾವಣೆಗೆ ನಿಲ್ಲುವುದು ಎಂದರೆ ಇಷ್ಟೇ?! ಗೆಲ್ಲುವುದು ಎಂದರೂ ಅಷ್ಟೇ. ಚರಂಡಿ, ನೀರು, ಬೀದಿದೀಪದ ಸೌಕರ್ಯ ಕೊಡುವುದು, ಆಶ್ರಯ ನಿವೇಶನ, ಮನೆ ಹಂಚುವುದು ಅಷ್ಟೇ ಅಲ್ಲವೇ ನಮ್ಮ ಕೆಲಸ ಎಂದು ತಿಳಿದವರೇ ಹೆಚ್ಚು.

ನಗರವನ್ನು ಅದರ ಎಲ್ಲ ವಿಶೇಷಗಳು, ಕೊರತೆಗಳೊಂದಿಗೆ ಇಡಿಯಾಗಿ ಗ್ರಹಿಸಿದ ಜನಸ್ನೇಹಿಯಾದ ‘ಅಭಿವೃದ್ಧಿ ನೀಲನಕ್ಷೆ’ ಎಂಬುದು ಯಾರ ಬಳಿಯಾದರೂ ಇದೆಯೇ ಎಂದು ಹುಡುಕಾಡುವುದು ಕೂಡ ವ್ಯರ್ಥ ಎನ್ನಿಸುವ ಸಂದರ್ಭ ಇದು. ಮೂಲಸೌಕರ್ಯಗಳನ್ನು ಕೊಡುವುದೇ ಅಭಿವೃದ್ಧಿ ಎಂಬ ತಿಳಿವಳಿಕೆಯುಳ್ಳ ಜನಪ್ರತಿನಿಧಿಗಳು ಜನರನ್ನು ಅತ್ಯಂತ ಕೆಳಮಟ್ಟದಲ್ಲಿ ನಿಲ್ಲಿಸಿ ನೋಡುವ ಪರಿಪಾಟವನ್ನೇ
ರೂಢಿಸಿಕೊಂಡಿರುತ್ತಾರೆ. ಮೂಲಸೌಕರ್ಯಗಳನ್ನು ಕೊಟ್ಟ ಬಳಿಕ ಜನರ ಜೀವನಮಟ್ಟದಲ್ಲಿ
ಸುಧಾರಣೆ ಆಗಿದೆಯೇ? ಹೇಗೆ ಆಗಿದೆ? ಬದಲಾವಣೆ ಬೇಕೆ? ಅದು ಹೇಗಿರಬೇಕು ಎಂಬ ಚಿಂತನೆಗಳು ಇಲ್ಲಿ ದುಬಾರಿ ಅಥವಾ ಅನಪೇಕ್ಷಿತ.

ನಗರ, ಪುರ ಮತ್ತು ಪಟ್ಟಣಗಳ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಇಲಾಖೆಯು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಮುಖ್ಯಮಂತ್ರಿ ನಗರೋತ್ಥಾನ, ಅಮೃತ್‌, ಸ್ಮಾರ್ಟ್‌, ಆವಾಸ್‌, ಸ್ವರ್ಣಜಯಂತಿ ಶಹರಿ ರೋಜ್‌ಗಾರ್ ಯೋಜನೆಗಳ ಕುರಿತ ಪ್ರಾಥಮಿಕ ಮಾಹಿತಿಯೂ ಅಭ್ಯರ್ಥಿಗಳಾಗಿದ್ದ ಅನೇಕರಲ್ಲಿ ಇಲ್ಲ. ಎರಡು–ಮೂರು ಬಾರಿ ಸ್ಪರ್ಧಿಸಿ ಗೆದ್ದವರೂ ಅದೇ ರಸ್ತೆ, ಚರಂಡಿ, ನೀರಿನ ಬವಣೆಯ ಕುರಿತೇ ಮಾತನಾಡುತ್ತಾರೆ. ಅದರಾಚೆಗೆ ಅವರ ತಿಳಿವಳಿಕೆ ವಿಸ್ತಾರಗೊಂಡಿಲ್ಲ.

ಇಂಥ ಸನ್ನಿವೇಶದಲ್ಲಿ, ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಗರಾಭಿವೃದ್ಧಿ ಇಲಾಖೆಯು ತನ್ನ ಜವಾಬ್ದಾರಿ ಏನು ಎಂಬುದರ ಕಡೆಗೂ ಗಮನ ಹರಿಸಲೇಬೇಕು. ಯೋಜನೆಗಳ ಕುರಿತು ಜನಪ್ರತಿನಿಧಿಗಳಿಗೆ ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕು. ತಮ್ಮೂರಿನ ಅಭಿವೃದ್ಧಿ ಎಂದರೆ ಏನು ಮತ್ತು ಅದಕ್ಕೆ ಅವರು ಏನು ಮಾಡಬೇಕು, ಒಂದು ಊರನ್ನು ಮತ್ತು ತಾವು ಪ್ರತಿನಿಧಿಸುವ ವಾರ್ಡನ್ನು ಒಟ್ಟಾಗಿ ಮತ್ತು ಪ್ರತ್ಯೇಕವಾಗಿ ಗ್ರಹಿಸುವುದು ಹೇಗೆ ಮತ್ತು ಈ ಪ್ರಕ್ರಿಯೆಯಲ್ಲಿ ಜನರನ್ನು ತೊಡಗಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ಇಲ್ಲದಿದ್ದರೆ, ಇನ್ನೈದು ವರ್ಷ ಈ ನಗರ ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿಯ ಕನಸನ್ನು ಹೊತ್ತು ತೆವಳುವುದನ್ನು ಬಿಟ್ಟು ಬೇರೇನೂ ಮಾಡಲು ಆಗದು. ಜನಪ್ರತಿನಿಧಿಗಳು ಹೆಸರಿಗಷ್ಟೇ ಆಗಿರುತ್ತಾರೆ.

ಜನರೂ ತಮ್ಮ ಊರು, ವಾರ್ಡ್‌ ಮತ್ತು ಜನಪ್ರತಿನಿಧಿಗಳ ಜೊತೆಗೆ ನಿರಂತರ ಸಂಪರ್ಕ ಏರ್ಪಡಿಸಿ
ಕೊಳ್ಳದೇ ಇದ್ದರೆ ಪ್ರಜಾಪ್ರಭುತ್ವ ಯಾಂತ್ರಿಕವಾಗಿ ಮುಂದುವರಿಯುತ್ತದೆ. ಹೊಸ ತಲೆಮಾರಿನವರೂ ಆಡಳಿತ, ಅಭಿವೃದ್ಧಿ, ಜನಪ್ರತಿನಿಧಿಗಳ ಬಗ್ಗೆ ಮತ್ತು ತಮ್ಮ ಬಗ್ಗೆ ಸಿನಿಕತೆಯನ್ನು ರೂಢಿಸಿಕೊಳ್ಳುತ್ತಾರೆ. ಪ್ರತಿ ಚುನಾವಣೆಯೂ ಜನರ ಅಭಿವೃದ್ಧಿಗೆ ಇಡುವ ಪ್ರಮುಖ ಹೆಜ್ಜೆಯಾಗಬೇಕಾದರೆ ಈ ಸಿನಿಕತೆಯನ್ನು ದೂರವಿಡಲೇಬೇಕು. ಅಭಿವೃದ್ಧಿಯ ನೀಲನಕ್ಷೆ ಮೂಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)