ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನ್ಯಾಯಾಂಗದ ನಾಳೆ ಹೀಗಾಗುವುದೇ?

ಆನ್‌ಲೈನ್‌ ಕೋರ್ಟ್‌ಗಳು ಪಾರದರ್ಶಕ ಮೌಲ್ಯಗಳ ಮೂಲಕ ಶಾಶ್ವತವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಭಾಗ ಆಗಬೇಕಾಗಿದೆ
ಅಕ್ಷರ ಗಾತ್ರ

‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದು ಬಸವಣ್ಣನವರು ಹೇಳಿದ್ದು, ಕೋವಿಡ್-19ರ ಸಂಕಷ್ಟದ ಈ ದಿನಗಳಲ್ಲಿ ಎಷ್ಟು ಪ್ರಸ್ತುತ! ವೈಭೋಗದ ಹೋಟೆಲುಗಳು, ವಿಶಾಲವಾದ ಕೋರ್ಟು- ಕಚೇರಿಗಳು, ಮೋಜಿನ ಮಾಲ್‌ಗಳು ಎಲ್ಲವೂ ಕೋವಿಡ್ ಹೊಡೆತಕ್ಕೆ ಸಿಲುಕಿ ಮಕಾಡೆ ಮಲಗಿದವು. ಆಗ ಕೆಲವು ಸಂಸ್ಥೆಗಳ ಸಹಾಯಕ್ಕೆ ಬಂದಿದ್ದು ಅಂತರ್ಜಾಲ.

ಹೀಗೆ ಅನಿವಾರ್ಯದ ಪರಿಸ್ಥಿತಿಯಲ್ಲಿ ನಮ್ಮ ಕೈ ಹಿಡಿದ ಆನ್‌ಲೈನ್‌ ಕೋರ್ಟ್, ಶಾಶ್ವತವಾಗಿ ನಮ್ಮ ವ್ಯವಸ್ಥೆಯ ತಳಹದಿಯಾಗಿ ಮಾರ್ಪಡುವುದೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಆನ್‌ಲೈನ್‌ ಕೋರ್ಟ್ ಅನ್ನು ಹೇಗೆ ದಿಢೀರ್‌ ಎಂದು ಪರಿಚಯಿಸಲಾಯಿತೋ ಹಾಗಲ್ಲದೆ, ಸರಿಯಾದ ಯೋಜನೆಗಳ ಮೂಲಕ, ಸುಲಲಿತವಾಗಿ ಮಾರ್ಪಾಡುಗಳನ್ನು ಹೊಂದಬಹುದಾದ ಸಾಧ್ಯತೆಯನ್ನು ಪರಿಗಣಿಸ
ಬೇಕಾಗಿದೆ.

‘ತೆರೆದ ನ್ಯಾಯಾಲಯ’ ಎನ್ನುವುದೇ ನ್ಯಾಯಾಂಗದ ಒಂದು ಮೌಲ್ಯವಾಗಿದೆ. ಆನ್‌ಲೈನ್‌ ಕೋರ್ಟ್‌ಗಳು ಜನರಿಗೆ ಪ್ರವೇಶ ನೀಡುವುದಿಲ್ಲವಾದ್ದರಿಂದ ಈ ಮೌಲ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಆರೋಪವಿದೆ. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಕೇರಳ ಹೈಕೋರ್ಟ್‌, ಬಾಂಬೆ ಹೈಕೋರ್ಟ್‌ ಸೇರಿದಂತೆ ಹಲವು ಹೈಕೋರ್ಟ್‌ಗಳು ಆನ್‌ಲೈನ್‌ ಕೋರ್ಟ್‌ಗಳಿಗೆ ಸಾಮಾನ್ಯರ ಪ್ರವೇಶಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಒಂದು ಒಳ್ಳೆಯ ತಂತ್ರಾಂಶವನ್ನು ನ್ಯಾಯಾಂಗದ ಸಲುವಾಗಿಯೇ ರೂಪಿಸಿದರೆ, ಯಾರಿಗೆ ಬೇಕಾದರೂ ಪ್ರವೇಶ ಕೊಡುವ ಆನ್‌ಲೈನ್‌ ನ್ಯಾಯಾಲಯವನ್ನು ಸೃಷ್ಟಿಸುವುದು ಸವಾಲಿನ ವಿಷಯವಲ್ಲ.

ಆನ್‌ಲೈನ್‌ ಕೋರ್ಟ್‌ಗಳ ಬಗ್ಗೆ ಈಗ ಜಗತ್ತಿನಾದ್ಯಂತ ಚರ್ಚೆಗಳು ನಡೆಯುತ್ತಿವೆ. ಅವುಗಳಲ್ಲಿ ಪ್ರೊ. ರಿಚರ್ಡ್ ಸಸ್‌ಕೈಂಡ್ ಅವರು ಮಂಡಿಸಿರುವ ಕಲ್ಪನೆ ಗಮನಾರ್ಹ. ಅವರು ಹೇಳುವಂತೆ, ಆನ್‌ಲೈನ್‌ ಕೋರ್ಟ್‌ಗಳು ನಾಲ್ಕು ಹಂತಗಳನ್ನೊಳಗೊಂಡ ಒಂದು ವ್ಯವಸ್ಥೆಯಾಗಿರಬೇಕು. ಮೊದಲನೆಯ ಹಂತದಲ್ಲಿ, ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕಾನೂನುಗಳನ್ನು, ನಿಯಮಗಳನ್ನು ಕೋರ್ಟ್‌ಗಳ ವೆಬ್‌ಸೈಟ್‌ಗಳಲ್ಲಿ ಕೊಡಬೇಕು.ಜನರಲ್ಲಿ ಕಾನೂನು ತಿಳಿವಳಿಕೆ ಹೆಚ್ಚಿಸುವುದು ಇದರ ಉದ್ದೇಶ.

ಎರಡನೆಯ ಹಂತದಲ್ಲಿ, ಯಾವುದಾದರೂ ಸಮಸ್ಯೆಯು ಪ್ರಕರಣದ ರೂಪ ಪಡೆಯುವ ಮುನ್ನವೇ ಮಾತುಕತೆಯ ಮೂಲಕ ಪರಿಹರಿಸಲು ವಕೀಲರು ಪ್ರಯತ್ನಿಸುತ್ತಾರೆ. ಮೂರನೆಯ ಹಂತದಲ್ಲಿ, ಸಮಸ್ಯೆಯನ್ನು ಕಾನೂನು ರೀತ್ಯ ಒಪ್ಪಂದದ ಮೂಲಕ ಪರಿಹರಿಸಲು ಪ್ರಯತ್ನಗಳು ನಡೆಯುತ್ತವೆ. ಈ ಮಾದರಿ, ಈಗಾಗಲೇ ಪ್ರಚಲಿತದಲ್ಲಿರುವ ಮಧ್ಯಸ್ಥಿಕೆ ಹಾಗೂ ರಾಜಿ ರೀತಿಯ ವ್ಯವಸ್ಥೆಗಳನ್ನು ಹೋಲುತ್ತದೆ. ನಾಲ್ಕನೇ ಹಂತದಲ್ಲಿ, ಕೆಲವು ಪ್ರಕರಣಗಳನ್ನು ದೊಡ್ಡ ವಿಚಾರಣೆಗಳಿಲ್ಲದೆ, ಬರೀ ಲಿಖಿತ ವಾದಗಳನ್ನು ಪರಿಗಣಿಸಿ, ಆನ್‌ಲೈನ್‌ ಮೂಲಕ ತೀರ್ಪು ನೀಡುವುದು ಮತ್ತು ಗಂಭೀರವಾದ ವಿಚಾರಣೆ ಅಗತ್ಯವಿರುವಂತಹ ಪ್ರಕರಣಗಳಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ವಿಚಾರಣೆ, ಹೀಗೆ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ನ್ಯಾಯಾಲಯ ವ್ಯವಸ್ಥೆಯ ಒಂದು ಮಿಶ್ರ ಪದ್ಧತಿಯನ್ನು ಜಾರಿಗೆ ತರಬೇಕು.

ಯುರೋಪಿನ ಹಲವು ರಾಷ್ಟ್ರಗಳು, ಸಿಂಗಪುರ, ಅಮೆರಿಕ ಒಳಗೊಂಡಂತೆ ಈಗಾಗಲೇ ಹಲವು ದೇಶಗಳು ವ್ಯವಸ್ಥಿತವಾದ ಆನ್‌ಲೈನ್‌ ಕೋರ್ಟ್‌ಗಳತ್ತ ದಾಪುಗಾಲಿಟ್ಟಿವೆ. ಭಾರತ ಕೂಡಾ ಅಚ್ಚುಕಟ್ಟಾಗಿ ಈ ದಿಸೆಯಲ್ಲಿ ಸಾಗುತ್ತಿದೆ. ಆದರೂ ವಕೀಲರು, ನ್ಯಾಯಾಧೀಶರು ಸೇರಿದಂತೆ ಹಲವರು ಈ ವ್ಯವಸ್ಥೆಯನ್ನು ವಿರೋಧಿಸುತ್ತಿರುವುದಕ್ಕೆ ತಪ್ಪು ಕಲ್ಪನೆಗಳು ಕಾರಣ. ಉದಾಹರಣೆಗೆ, ಆನ್‌ಲೈನ್‌ ಕೋರ್ಟ್‌ಗಳಿಂದ ಕೆಲವು ವಕೀಲರಿಗಷ್ಟೇ ಲಾಭವಾಗುತ್ತದೆ ಎಂಬ ತಿಳಿವಳಿಕೆ ಕೆಲವರಿಗೆ. ನಿಜ, ಭಾರತದ ಮೂಲೆ ಮೂಲೆಯಲ್ಲೂ ಅಂತರ್ಜಾಲ ಸಂಪರ್ಕ ಸಿಗುವವರೆಗೆ ಸಮನಾಗಿ ಎಲ್ಲರಿಗೂ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ, ಇಂತಹ ಸಣ್ಣ–ಪುಟ್ಟ ಕೊರತೆಗಳನ್ನೇ ಮುಂದಿಟ್ಟುಕೊಂಡು, ಆನ್‌ಲೈನ್‌ ಕೋರ್ಟ್‌ಗಳನ್ನೇ ದೂರವಿಡುವುದು ಅದಕ್ಕೆ ಪರಿಹಾರವಲ್ಲ. ಬದಲಾಗಿ, ತಂತ್ರಜ್ಞಾನದ ಅರಿವಿಲ್ಲದ ವಕೀಲರಿಗೆ ತರಬೇತಿ ಕೊಡಬೇಕು. ಹಳ್ಳಿ ಹಳ್ಳಿಗೂ ಅಂತರ್ಜಾಲ ಸೌಲಭ್ಯ ಕಲ್ಪಿಸಿಕೊಡುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಹಾಗೂ ವಕೀಲರ ಸಂಘಗಳು ತಮ್ಮ ಗ್ರಂಥಾಲಯಗಳಲ್ಲಿ ವೇಗದ ವೈಫೈ ವ್ಯವಸ್ಥೆಯನ್ನು ಒದಗಿಸಿಕೊಡಬೇಕು.

ಇಂಟರ್ನೆಟ್‌ನಂತಹ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಿಗೂ ತಲುಪುವಂತಾದರೆ ನಮ್ಮ ನ್ಯಾಯ ನಿರ್ಣಯ ವ್ಯವಸ್ಥೆಯಲ್ಲಿ ಎಂತಹ ಕ್ರಾಂತಿಯಾಗ ಬಹುದು! ಶಿರಸಿಯ ಮನೆಯಲ್ಲಿ ಕುಳಿತು ಒಬ್ಬ ವಕೀಲರು ದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಬಹುದು. ಸಮಯ ಮತ್ತು ದೂರದ ಹಂಗಿಲ್ಲದೆ ವಕೀಲರು ತಮ್ಮ ಪ್ರಭಾವವನ್ನು ದೇಶದ ಎಲ್ಲ ನ್ಯಾಯಾಲಯಗಳಲ್ಲೂ ಬೀರಬಹುದು. ವಕೀಲರ ಪ್ರಯಾಣ ಹಾಗೂ ಇತರ ಖರ್ಚುಗಳು ಇರುವುದಿಲ್ಲ ವಾದ್ದರಿಂದ ಕಕ್ಷಿದಾರರಿಗೂ ಕಿಸೆಯ ಮೇಲಿನ ಭಾರ ಕಡಿಮೆಯಾಗುತ್ತದೆ.

ಅನಿವಾರ್ಯವಾಗಿ ನಮ್ಮ ಜೊತೆಯಾದ ಈ ತಂತ್ರಜ್ಞಾನ ನಮ್ಮೊಂದಿಗೆ ಶಾಶ್ವತವಾಗಿದ್ದು, ನಮ್ಮ ವ್ಯವಸ್ಥೆಯನ್ನು ಇನ್ನಷ್ಟು ನ್ಯಾಯಯುತವಾಗಿಸಲು ನೆರವಾಗಲಿ.

ಲೇಖಕಿ: ವಕೀಲೆ, ಕೇರಳ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT