ಶುಕ್ರವಾರ, ಆಗಸ್ಟ್ 19, 2022
25 °C
ಸೂಕ್ತ ವ್ಯವಸ್ಥೆ ಇರದ ಜಾಗಗಳಲ್ಲಿ ಪ್ರಯಾಸದಿಂದ ಮಕ್ಕಳಿಗೆ ಪಾಠ ಹೇಳುವ ಬದಲು, ನೇರವಾಗಿ ಶಾಲೆಯಲ್ಲೇ ಕಲಿಕೆಯನ್ನು ಪ್ರಾರಂಭಿಸಬಾರದೇಕೆ?

ವಿದ್ಯಾಗಮ ಎಂಬ ಸರ್ಕಸ್!

ಈ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಕೊರೊನಾ‌ ಸೋಂಕಿನ ಕಾರಣದಿಂದ ಈಗ ಶಾಲೆಗಳು ಮುಚ್ಚಿವೆ. ಕೋವಿಡ್‌ ಜೊತೆಗೇ ಬದುಕು ಸಾಗಿಸುವುದು ಅನಿವಾರ್ಯವಾಗಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವ ಬಗ್ಗೆ ಶಿಕ್ಷಣ ಇಲಾಖೆಯು ಪೋಷಕರ ಅಭಿಪ್ರಾಯ ಸಂಗ್ರಹಿಸಿತು. ಆದರೆ ಅದರ ಅನ್ವಯ ಮುಂದುವರಿಯುವ ಬದಲು ಇಲಾಖೆಯು ‘ವಿದ್ಯಾಗಮ’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದು, ಸರ್ಕಾರಿ ಶಾಲೆಗಳಿಗೆ ಮೀಸಲಾದ ಕಾರ್ಯಕ್ರಮ. ಖಾಸಗಿ ಶಾಲೆಗಳು ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿವೆ. ಸರಿಯಾಗಿ ನೆಟ್‌ವರ್ಕ್ ಸಿಗದೆ ಆ ವಿದ್ಯಾರ್ಥಿಗಳೂ ಪರದಾಡುತ್ತಿದ್ದಾರೆ. ಏನೋ ಒಟ್ಟಿನಲ್ಲಿ ನಡೆಯುತ್ತಿದೆ!

ನಾಲ್ಕೈದು ದಶಕಗಳ ಹಿಂದೆ ಶಾಲಾ ಕಟ್ಟಡಗಳೇ ಇಲ್ಲದ ಕಡೆಗಳಲ್ಲಿ ಅರಳಿಕಟ್ಟೆಯ ಮೇಲೆ, ದೇವಸ್ಥಾನಗಳಲ್ಲಿ, ಊರ ಗೌಡರ ಮನೆಯ ಜಗಲಿಯ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಶಿಕ್ಷಕರು ಪಾಠ ಮಾಡುತ್ತಿದ್ದರು. ಅದೇ ಈಗ ವಿದ್ಯಾಗಮವಾಗಿದೆ. ಸುಸಜ್ಜಿತ ಕಟ್ಟಡಗಳಿದ್ದರೂ ಮಕ್ಕಳು ಬೀದಿ ಬದಿಯಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ.

ಈ ಬಗ್ಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಹಾಗೂ ಪೋಷಕರ ಅಭಿಪ್ರಾಯವನ್ನೇನೂ ಪಡೆದಿಲ್ಲ. ವಿದ್ಯಾರ್ಥಿಗಳು ವಾಸ ಮಾಡುವ ಸ್ಥಳಕ್ಕೇ ಶಿಕ್ಷಕರು ತೆರಳಿ, ಅಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಪಡೆದು, ಒಂದೆರಡು ಗಂಟೆಗಳ ಕಾಲ ಪಾಠ ಮಾಡುವುದು, ವಾಟ್ಸ್‌ಆ್ಯಪ್ ಮೂಲಕ ಹೋಮ್‌ವರ್ಕ್ ನೀಡಿ ವಿದ್ಯಾರ್ಥಿಗಳು ಉತ್ತರಿಸಿ ವಾಟ್ಸ್‌ಆ್ಯಪ್ ಮಾಡಿದ ನಂತರ ಶಿಕ್ಷಕರು ಮನೆಯಲ್ಲೇ ಅವುಗಳನ್ನು ಪರಿಶೀಲಿಸಿ ಸಲಹೆ ನೀಡುವುದು ಕಾರ್ಯಕ್ರಮದ ಭಾಗವಾಗಿದೆ. ವಿದ್ಯಾರ್ಥಿಗಳು ಮರದ ಕೆಳಗೆ ಕುಳಿತು ಪಾಠ ಕೇಳುತ್ತಿರುವ ಫೋಟೊಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಪ್ರಶಂಸೆ ಪಡೆದಿವೆ.

ಯಾರೋ ಒಬ್ಬರ ಮನೆಯ ಜಗಲಿಯ ಮೇಲೆ ಪಾಠ ಮಾಡಲು ಹೋದಾಗ ಎಲ್ಲ ವಿದ್ಯಾರ್ಥಿಗಳನ್ನೂ ಸೇರಿಸಲು ಅನುಮತಿ ಸಿಗುವುದು ಅಪರೂಪ. ದೇವಸ್ಥಾನದ ಬಗ್ಗೆ ಹೇಳುವಂತೆಯೇ ಇಲ್ಲ. ಕೆಲವು ಕಡೆಗಳಲ್ಲಿ ಸಮುದಾಯ ಭವನಗಳಲ್ಲಿ ಪಾಠ ನಡೆಯುತ್ತಿದೆ. ಇಲ್ಲಿ ವಿದ್ಯಾರ್ಥಿಗಳು ಬರಲೇಬೇಕೆಂಬ ಕಡ್ಡಾಯವೇನೂ ಇಲ್ಲ. ಬಿಸಿಯೂಟವಂತೂ ಇಲ್ಲವೇ ಇಲ್ಲ. ಮಳೆಗಾಲವಾಗಿರುವ ಈ ದಿನಗಳಲ್ಲಿ ಮರಗಳ ಕೆಳಗೆ ಕೂರಿಸಿ ಪಾಠ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೂ ಇದೆ.

ನಗರ ಪ್ರದೇಶಗಳಲ್ಲಂತೂ ಸ್ಥಳಾವಕಾಶದ್ದೇ ದೊಡ್ಡ ಸಮಸ್ಯೆ. ಬೀದಿ ಬದಿಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಮಾಡುವ ಪ್ರಯತ್ನವೂ ನಡೆದಿದೆ. ಅಕ್ಕಪಕ್ಕ ಓಡಾಡುವ ವಾಹನಗಳು, ಅವುಗಳ ಶಬ್ದ, ಹೊಗೆಯ ನಡುವೆ ಕೆಲವು ಕಡೆಗಳಲ್ಲಿ ವಿದ್ಯಾಗಮ ನಡೆಯುತ್ತಿದೆ. ಇದೆಲ್ಲದರ ಜೊತೆಗೆ ಕಪ್ಪು ಹಲಗೆ, ಪಾಠೋಪಕರಣಗಳಿಲ್ಲದೆ ಬೋಧನೆ ಸೊರಗುವುದಂತೂ ನಿಶ್ಚಿತ.

ಇಲ್ಲಿ ಅಂತರವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಪ್ರಶ್ನೆಯೂ ಇದೆ. ಶಿಕ್ಷಕರನ್ನು ಪ್ರಶ್ನಿಸಿದರೆ, ‘ಇದು ಇಲಾಖೆಯ ಆದೇಶ, ನಾವು ಪಾಲಿಸಲೇಬೇಕು’ ಎಂಬ ಉತ್ತರ ಬರುತ್ತದೆ. ಹೀಗೆಲ್ಲಾ ಪ್ರಯಾಸಪಡುವ ಬದಲು ಶಾಲೆಯೊಳಗೇ ಕಲಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಕೆಲವು ಕಡೆಗಳಲ್ಲಿ ಶಾಲೆಯ ಪಕ್ಕದಲ್ಲೇ ಒಂದು ಕಡೆ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪಾಠ ಮಾಡಲಾಗುತ್ತಿದೆ. ಇದನ್ನು ನೋಡಿದರೆ ಯಾರಿಗಾದರೂ ‘ಇದೆಲ್ಲ ಬೇಕಾ’ ಎಂಬ ಪ್ರಶ್ನೆ ಮೂಡುವುದು ಸಹಜ. ವಿದ್ಯಾರ್ಥಿಗಳು ಕಲಿಕೆಯನ್ನು ಮರೆಯಬಾರದು, ಶಿಕ್ಷಕರಿಗೂ ಕೆಲಸ ಕೊಡಬೇಕು ಎಂಬ ಉದ್ದೇಶ ಇಲಾಖೆಗೆ ಇದ್ದರೆ ನೇರವಾಗಿ ಶಾಲೆಯಲ್ಲೇ ಕಲಿಕೆಯನ್ನು ಪ್ರಾರಂಭಿಸಬಾರದೇಕೆ?

ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು ಸಾಕಷ್ಟು ಕೊಠಡಿಗಳಿವೆ. ಐದಾರು ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ ಅಂತರ ಕಾಯ್ದುಕೊಂಡು ಕುಳ್ಳಿರಿಸಿ ಪಾಠ ಮಾಡುವುದರಲ್ಲಿ ಯಾವುದೇ ಸಮಸ್ಯೆ ಕಾಣಿಸದು. ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ ಬೆಳಿಗ್ಗೆ ಮೂರು ಗಂಟೆ ಹಾಗೂ ಮಧ್ಯಾಹ್ನ ಮೂರು ಗಂಟೆಯ ಪಾಳಿಯಲ್ಲಿ ಪಾಠ ಮಾಡಬಹುದು. ಆಗ ಪೋಷಕರಿಗೂ ಜವಾಬ್ದಾರಿ ಬರುತ್ತದೆ, ವಿದ್ಯಾರ್ಥಿಗಳೂ ಬಂದು ಕಲಿಯುತ್ತಾರೆ, ಬಿಸಿಯೂಟದ ವ್ಯವಸ್ಥೆಯನ್ನೂ ಮಾಡಬಹುದು. ಪ್ರಸ್ತುತ ಕ್ಷೀರಭಾಗ್ಯವೂ ಇಲ್ಲ, ಬಿಸಿಯೂಟವೂ ಇಲ್ಲ.

ಬಹುತೇಕ ಶಾಲೆಗಳಲ್ಲಿ ಇರುವ ವಿಶಾಲವಾದ ಮೈದಾನಗಳಲ್ಲಿಯಾದರೂ ಪಾಠ ಮಾಡಲು ಅವಕಾಶವಾಗಬೇಕು. ಲಾಕ್‌ಡೌನ್ ಉಂಟುಮಾಡಿರುವ ನಿರುದ್ಯೋಗದಿಂದಾಗಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಸರ್ಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಕರ್ಯಗಳನ್ನು ಒದಗಿಸಿ, ಮಕ್ಕಳು ಸುರಕ್ಷಿತವಾಗಿ ಕಲಿಯುವ ಆಕರ್ಷಕ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಸ್ಯಾನಿಟೈಸರ್, ಮಾಸ್ಕ್, ಉಷ್ಣತಾ ಮಾಪಕಗಳನ್ನು ಬಳಸಿ ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮವೆನಿಸುತ್ತದೆ.

ವಿದ್ಯಾಗಮದ ಹೆಸರಿನಲ್ಲಿ ಶಾಲೆಯ ಹೊರಗೆ ನಡೆಸುತ್ತಿರುವ ಅನೌಪಚಾರಿಕ ತರಗತಿಗಳಿಗಿಂತ ಇದು ಎಷ್ಟೋ ಪಾಲು ಉತ್ತಮ. ಈ ಬಗ್ಗೆ ಪೋಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸಮುದಾಯದ ಸಲಹೆ ಪಡೆದು ಸರ್ಕಾರ ಮುಂದುವರಿಯುವುದು ಅಪೇಕ್ಷಣೀಯ.

ಲೇಖಕ: ಎಸ್‌ಡಿಎಂಸಿ ಅಧ್ಯಕ್ಷ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು