ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹೊಸ ವಿ.ವಿ: ಯಾರನ್ನು ಮೆಚ್ಚಿಸಲು?

ಇದೊಂದು ನಿರರ್ಥಕವಾದ ಶೈಕ್ಷಣಿಕ ಆಲೋಚನೆಯೇ ಸರಿ
Last Updated 26 ಡಿಸೆಂಬರ್ 2022, 23:30 IST
ಅಕ್ಷರ ಗಾತ್ರ

ಬ್ರಿಟನ್‌ನಲ್ಲಿರುವ ಅನೇಕ ವಿಶ್ವವಿದ್ಯಾಲಯಗಳು –ಪ್ರತಿಷ್ಠಿತವಾದವೂ ಸೇರಿ– ಹಣಕಾಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಬಹಳ ಕಷ್ಟಪಡುತ್ತಿವೆ. ಆಕ್ಸ್‌ಫರ್ಡ್, ಕೇಂಬ್ರಿಜ್‌ನಂತಹ ವಿಶ್ವವಿದ್ಯಾಲಯಗಳು ಜಾಗತಿಕ ಉನ್ನತ ಶಿಕ್ಷಣ ರ್‍ಯಾಂಕಿಂಗ್‍ನಲ್ಲಿ ಉತ್ತಮ ಸ್ಥಾನ ಗಳಿಸಿರುವುದೇನೊ ಸರಿ. ಆದರೆ ಕೆಲವು ದೊಡ್ಡ ವಿಶ್ವವಿದ್ಯಾಲಯಗಳು, ಇಳಿಮುಖವಾಗುತ್ತಿರುವ ಬ್ರಿಟನ್ನಿನ ಉನ್ನತ ಶಿಕ್ಷಣದ ಮುಖಗವಸನ್ನು ಹೊದ್ದು ಕೊಂಡಿವೆ.

ದೇಶದ ಅನೇಕ ವಿಶ್ವವಿದ್ಯಾಲಯಗಳು ಹಣಕಾಸಿನ ಕೊರತೆ ಹಾಗೂ ಸಿಬ್ಬಂದಿಯ ಮುಷ್ಕರದಿಂದ ಹಿನ್ನಡೆ ಅನುಭವಿಸುತ್ತಿವೆ. 150 ವಿಶ್ವವಿದ್ಯಾಲಯಗಳ ಸುಮಾರು 70 ಸಾವಿರ ಸಿಬ್ಬಂದಿಯು ಕಡಿಮೆ ಸಂಬಳ, ಪಿಂಚಣಿ ಕಡಿತ ಹಾಗೂ ಕಾರ್ಯಭಾರದ ಸ್ಥಿತಿಗತಿಯ ವಿರುದ್ಧ ಇತ್ತೀಚೆಗಷ್ಟೆ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಬ್ರಿಟಿಷ್ ಸರ್ಕಾರವು ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಖ್ಯಾತ ವಿಶ್ವವಿದ್ಯಾಲಯಗಳು ಇದ್ದುದರಲ್ಲಿ ತಮ್ಮ ಮಟ್ಟವನ್ನು ಕಾಯ್ದುಕೊಂಡರೆ, ಮಿಕ್ಕವುಗಳ ಪರಿಸ್ಥಿತಿ ಹದಗೆಟ್ಟಿದೆ ಎಂಬ ವರದಿಗಳಿವೆ. ಬ್ರೆಕ್ಸಿಟ್‍ ವಿವಾದ ಹಾಗೂ ಕೋವಿಡ್ ಪರಿಸ್ಥಿತಿಯ ನಿಭಾವಣೆಯು ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಮೇಲೆ ಉಂಟು ಮಾಡಿದ ಪರಿಣಾಮ ಇನ್ನೂ ತಿಳಿಗೊಂಡಿಲ್ಲ. ಕೆಲವು ಸಂಸ್ಥೆಗಳಂತೂ ವಿದೇಶಿ ವಿದ್ಯಾರ್ಥಿಗಳು ನೀಡುವ
ಅಧಿಕ ಶುಲ್ಕವನ್ನೇ ಹೆಚ್ಚಾಗಿ ನೆಚ್ಚಿಕೊಂಡಿವೆ.

ಬ್ರಿಟನ್ನಿನಲ್ಲಿರುವ ಅನುದಾನದ ಪರಿಸ್ಥಿತಿಯು ರಾಜಿ ಮಾಡಿಕೊಂಡಂತಹ ಸ್ಥಿತಿಯಲ್ಲಿದೆ ಎಂದು ಬ್ಲೂಮ್‍ಬರ್ಗ್ ಸಂಸ್ಥೆ ವರದಿ ಮಾಡಿದೆ. ಚೀನಾ ವಿದ್ಯಾರ್ಥಿಗಳ ಕಾಲೇಜು ಪ್ರವೇಶಾತಿ ಪ್ರಮಾಣ ಕುಸಿದಿದೆ. ಅನೇಕ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಟ್ಟ ಸಹ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ.ಬ್ರಿಟನ್‌ ಸರ್ಕಾರವು ಆರ್ಥಿಕ ನೆರವಿಗೆ ಧಾವಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಉನ್ನತ ಶಿಕ್ಷಣ ಅಕಾಡೆಮಿ ಹೇಳಿರುವುದಾಗಿ ರೇಟಿಂಗ್ ಏಜೆನ್ಸಿಯೊಂದು ತಿಳಿಸಿದೆ.

ಈ ಎಚ್ಚರಿಕೆಯ ಗಂಟೆಯನ್ನು ಮುಂದಿಟ್ಟು, ನಮ್ಮ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಕುರಿತ ಚರ್ಚೆಯನ್ನು ಮುನ್ನಡೆಸಬೇಕಾಗಿದೆ. ಹೊಸ ವಿಶ್ವವಿದ್ಯಾಲಯಗಳು ಆರಂಭ ದಿಂದಲೂ ಎದುರಿಸುತ್ತಿರುವ ಮೂಲಸೌಕ‌ರ್ಯ ಕೊರತೆ, ಹಣಕಾಸಿನ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ಹೆಣಗಾಟ, ಕಾಯಂ ಅಧ್ಯಾಪಕರ ಕೊರತೆ ಯಿಂದ ರೋಸಿಹೋಗಿರುವ ಅಧ್ಯಾಪಕ, ವಿದ್ಯಾರ್ಥಿ ಸಮೂಹದ ನಿಸ್ಸಹಾಯಕತೆ ಕರುಣಾಜನಕ ಶೈಕ್ಷಣಿಕ ಪರಿಸ್ಥಿತಿಯನ್ನು ಎತ್ತಿತೋರಿಸುತ್ತವೆ. ವಿಶ್ವವಿದ್ಯಾ
ಲಯಗಳನ್ನು ಆರಂಭಿಸಿದ ಧ್ಯೇಯೋದ್ದೇಶಗಳಿಗೂ ನಂತರದ ವಾಸ್ತವ ಚಿತ್ರಣಕ್ಕೂ ಆಕಾಶ ಭೂಮಿಯಷ್ಟು ಅಂತರ ಕಾಣುತ್ತದೆ. ಗೊಂದಲಮಯ ಶೈಕ್ಷಣಿಕ ನೀತಿಯಿಂದ, ಕಾಲೇಜುಗಳಿಗಿಂತ ವಿಶ್ವವಿದ್ಯಾಲಯಗಳೇ ಹೆಚ್ಚಿನ ಸಂಖ್ಯೆಯಲ್ಲಿವೆಯೇನೋ ಎಂಬ ಆತಂಕ
ಸೃಷ್ಟಿಯಾಗುತ್ತಿದೆ.

ಒಂದು ಕಾಲೇಜಿನ ಸಮಗ್ರ ಶೈಕ್ಷಣಿಕ ಅಭಿವೃದ್ಧಿಯೇ ಹಿಮಾಲಯ ಹತ್ತಿದಷ್ಟು ಕಠಿಣವಾಗಿರುವಾಗ, ಸರ್ಕಾರ ಗೊತ್ತುಗುರಿಯಿಲ್ಲದಂತೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ ಎಂದೇ ಹೇಳಬೇಕು. ಜಿಲ್ಲೆಗೊಂದು ವಿಶ್ವವಿದ್ಯಾಲಯ ಇರಬೇಕು ಎಂಬುದು ಹೊಸ ಶಿಕ್ಷಣ ನೀತಿಯ ಶಿಫಾರಸಾಗಿರಬಹುದು. ಆದರೆ, ಶೈಕ್ಷಣಿಕ ಸುಧಾರಣೆ ಬಗ್ಗೆ ಅದು ಕುರುಡಾಗಿದೆಯೇ? ಜಿಲ್ಲೆ ಗೊಂದು ವಿಶ್ವವಿದ್ಯಾಲಯ ಸ್ಥಾಪನೆಯೇ ಮೂಲ ಉದ್ದೇಶವಾದರೆ, ಅದರ ಸಾಧಕ-ಬಾಧಕಗಳ ಬಗ್ಗೆ ಲವಲೇಶವೂ ಚಿಂತೆ ಬೇಡವೇ? ಒಂದೆಡೆ, ಸರ್ಕಾರಿ ವಿಶ್ವವಿದ್ಯಾಲಯಗಳ ಆಧಿಕ್ಯ, ಮತ್ತೊಂದೆಡೆ, ಅಣಬೆ ಗಳಂತೆ ಹುಟ್ಟುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು– ಇವುಗಳ ಮಧ್ಯೆ ವಿದ್ಯಾರ್ಥಿಗಳು ಮತ್ತು ಪೋಷಕರು ಅಡಕತ್ತರಿಯಲ್ಲಿ ಸಿಲುಕಿದಂತೆ ಇದ್ದಾರೆ. ಇಂತಹ ಅತಂತ್ರ ಸ್ಥಿತಿ ಇನ್ನೂ ಎಷ್ಟು ಕಾಲ ಬಾಧಿಸಬೇಕು?

ಇಷ್ಟಾದರೂ ಸರ್ಕಾರಿ ವಿಶ್ವವಿದ್ಯಾಲಯಗಳು ಇಲ್ಲದಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತಿದೆ. ಹಾಗಾದಲ್ಲಿ, ಈಗಿರುವ ದೊಡ್ಡ ವಿಶ್ವವಿದ್ಯಾಲಯಗಳ ವಿಭಜನೆಯಿಂದ ಮೂಲಸಂಸ್ಥೆಯು ಚಿಕ್ಕದಾಗಿ, ಅದರ ಸೌಲಭ್ಯಗಳ ಬಳಕೆಯು ಸೀಮಿತವಾಗುತ್ತದೆ. ರಾಜ್ಯದಲ್ಲೇ ಅತ್ಯಂತ ಹಳೆಯ ಹಾಗೂ ದೊಡ್ಡದಾದ ಮೈಸೂರು ವಿಶ್ವವಿದ್ಯಾಲಯದ ಸಂಪನ್ಮೂಲಗಳ ಪ್ರಯೋಜನವು ಹತ್ತಿರದ ಜಿಲ್ಲೆಗಳಿಗೆ ಸಿಗದೆ– ಅಕ್ಕಪಕ್ಕದಲ್ಲಿ ಹೊಸ ವಿಶ್ವ
ವಿದ್ಯಾಲಯಗಳು ತಲೆಯೆತ್ತಿರುವುದರಿಂದ–ಅವನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ವೈಫಲ್ಯ ಎದುರಾಗುತ್ತಿದೆ.

ಹೊಸ ವಿಶ್ವವಿದ್ಯಾಲಯಗಳು ಹಣಕಾಸಿನ ಕೊರತೆ ಯಿಂದ ಮಾತ್ರವಲ್ಲ ಬೌದ್ಧಿಕ ದಾರಿದ್ರ್ಯದಿಂದಲೂ ಸೊರಗುತ್ತಿವೆ. ಅವುಗಳನ್ನು ಕಾಡುತ್ತಿರುವುದು ಬರೀ ಮಾನವ ಸಂಪನ್ಮೂಲ ಅಥವಾ ಹಣಕಾಸಿನ ಸಂಪನ್ಮೂಲವಲ್ಲ. ವಿಶ್ವವಿದ್ಯಾಲಯಗಳ ಮಹತ್ತರ ಉದ್ದೇಶವಾದ ಸಂಶೋಧನೆ ಹಾಗೂ ಶೈಕ್ಷಣಿಕ ಆವಿಷ್ಕಾರಗಳು ನನೆಗುದಿಗೆ ಬಿದ್ದಿವೆ. ಹಳೆಯ ವಿಶ್ವವಿದ್ಯಾಲಯಗಳ ಸ್ಥಿತಿಗತಿಯೂ ಸಮಾಧಾನಕರವಾಗಿಲ್ಲ.

ಬ್ರಿಟನ್‍ನಂತಹ ಮುಂದುವರಿದ ರಾಷ್ಟ್ರದ ಶೈಕ್ಷಣಿಕ ಸ್ಥಿತಿಯೇ ಹದಗೆಡುತ್ತಿರುವಾಗ, ನೂರಾರು ಜಟಿಲ ಸಮಸ್ಯೆಗಳುಳ್ಳ ನಮ್ಮಂತಹ ರಾಜ್ಯದಲ್ಲಿ ಮತ್ತಷ್ಟು ವಿಶ್ವವಿದ್ಯಾಲಯಗಳ ಸ್ಥಾಪನೆ ಬೇಕೆ? ಯಾರನ್ನು ಮೆಚ್ಚಿಸಲು ಈ ನಿರರ್ಥಕವಾದ ಶೈಕ್ಷಣಿಕ ಆಲೋಚನೆ?

ಲೇಖಕ: ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT