ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಎರಡನೇ ಬಾಲ್ಯಾವಸ್ಥೆ- ಬೇಕು ಆಸ್ಥೆ

ಇನ್ನೊಬ್ಬರ ಹಂಗಿಲ್ಲದೆ ಜೀವನದ ಕೊನೆಯ ದಿನಗಳನ್ನು ಗೌರವಯುತವಾಗಿ ಹೇಗೆ ಕಳೆಯಬಹುದೆನ್ನುವ ಪೂರ್ವಯೋಜಿತ ಸ್ವಚಿಂತನೆಯನ್ನು ಪ್ರತಿಯೊಬ್ಬರೂ ಮಾಡಬೇಕಿದೆ
Last Updated 8 ಮೇ 2022, 23:00 IST
ಅಕ್ಷರ ಗಾತ್ರ

ವೃದ್ಧಾಪ್ಯವು ಮನುಷ್ಯನ ಸಹಜವಾದ, ಆದರೆ ಸುಲಭ ವಾಗಿ ಒಪ್ಪಿಕೊಳ್ಳಲಾಗದ ಸ್ಥಿತಿ. ಇದನ್ನು ಸಂತೋಷವಾಗಿ ಸ್ವೀಕರಿಸಲು ಮನಸ್ಸಿಗೆ ಕಷ್ಟ. ಯಾಕೆಂದರೆ, ಅಲ್ಲಿಯ ವರೆಗೆ, ಆಕಸ್ಮಿಕ ಸಾವನ್ನು ಮೀರಿದವರು ಕೂಡ ಇಲ್ಲಿ ಸಹಜ ಸಾವಿನ ಸಾಮೀಪ್ಯದಲ್ಲಿ ಇರುವುದರಿಂದ, ಮಾನಸಿಕ ತಳಮಳ ಸ್ವಾಭಾವಿಕ. ಈ ಸ್ಥಿತಿಯಲ್ಲಿ ಮನುಷ್ಯ ತನ್ನ ದೈಹಿಕ ಮಾರ್ಪಾಡುಗಳೊಂದಿಗೆ ಮಾನಸಿಕ ಒತ್ತಡವನ್ನೂ ಅನುಭವಿಸುತ್ತಿರುತ್ತಾನೆ.

ಇಲ್ಲಿನ ಸಮಸ್ಯೆಗಳು ಹಲವಾರು. ದುರ್ಬಲವಾಗು ತ್ತಿರುವ ದೇಹ, ಕಳೆದುಹೋಗುತ್ತಿರುವ ಅಧಿಕಾರ, ಒಮ್ಮೆಲೇ ಸಿಕ್ಕಿರುವ ಬಹಳಷ್ಟು ಉಚಿತ ಸಮಯ, ಕಾಡುವ ಒಂಟಿತನ, ಸಮವಯಸ್ಕರ ಸಾವು, ಆರ್ಥಿಕ ಅಭದ್ರತೆ, ಸಾವಿನ ಭಯ, ಪ್ರೀತಿಪಾತ್ರರಿಂದಲೇ
ಕೇಳಿಸಿಕೊಳ್ಳಬೇಕಾದ ಹಂಗಿನ ಮಾತು, ಜೀವನದಲ್ಲಿ ಸಾಧಿಸಲಾಗದ, ಮಾಡಲಾಗದ ವಿಷಯಗಳ ಕುರಿತು ನಿಟ್ಟುಸಿರು...

‘ಏಜ್ ವೆಲ್’ ಸಂಸ್ಥೆಯ ಅಧ್ಯಯನ ವರದಿಯೊಂದರ ಪ್ರಕಾರ, ದೇಶದ ವೃದ್ಧರಲ್ಲಿ ಶೇ 65ರಷ್ಟು ಮಂದಿ ಯಾವುದೇ ಆದಾಯವಿಲ್ಲದೆ ಅನ್ಯರ ಮೇಲೆ ಅವಲಂಬಿತರಾಗಿದ್ದಾರೆ. ಉಳಿದವರು, ಆರ್ಥಿಕವಾಗಿ ಸಬಲರಾಗಿದ್ದರೂ ನೆಮ್ಮದಿಯ ಜೀವನ ನಡೆಸುತ್ತಿಲ್ಲ. ವಿಶೇಷವೆಂದರೆ, ಗಂಡಸರಿಗೆ ಹೋಲಿಸಿದರೆ, ಹೆಂಗಸರು ದೀರ್ಘ ಜೀವಿತಾವಧಿ ಮತ್ತು ಆರ್ಥಿಕ ಅಭದ್ರತೆಯಿಂದಾಗಿ ವೃದ್ಧಾಪ್ಯದಲ್ಲಿ ಹೆಚ್ಚು ತೊಂದರೆ ಅನುಭವಿಸುತ್ತಾರೆ. ವಿವಿಧ ಜನಸಂಖ್ಯಾ ಸಮೀಕ್ಷೆಗಳು ಹೇಳುವಂತೆ, ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ವೃದ್ಧರ ಸಂಖ್ಯೆ ತೀವ್ರವಾಗಿ ಹೆಚ್ಚಲಿದ್ದು, ಇದೊಂದು ಬೃಹತ್ ಸಾಮಾಜಿಕ ಸಮಸ್ಯೆಯಾಗಬಹುದು. ಈ ದಿಸೆಯಲ್ಲಿ, ವೃದ್ಧಾಪ್ಯದ ದಿನಗಳನ್ನು ಸಹನೀಯವಾಗಿಸುವ ಕುರಿತು ನಾಗರಿಕ ಜವಾಬ್ದಾರಿಯಿರುವ ಸಮಾಜ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯ ಇದೆ.

ಇತ್ತೀಚಿನ ವರ್ಷಗಳಲ್ಲಿ, ವೃದ್ಧರು ಹೆಚ್ಚಾಗಿ ಒಂಟಿಯಾಗಿ ಬದುಕುವುದನ್ನು ನೋಡುತ್ತೇವೆ. ಕೆಲವರಲ್ಲಿ, ಇದು ಅವರ ಸ್ವಾಭಿಮಾನದ ಪ್ರಶ್ನೆಯಿರ ಬಹುದು. ‘ನಾವ್ಯಾಕೆ ಮಕ್ಕಳ ಮನೆಯಲ್ಲಿ ಅವರ ಹಂಗಿನಲ್ಲಿ ಇರಬೇಕು? ಬೇಕಿದ್ದರೆ ಅವರೇ ಬಂದು ನಮ್ಮೊಂದಿಗಿದ್ದು ನೋಡಿಕೊಳ್ಳಲಿ’ ಎನ್ನುವ ಮನೋ ಭಾವ ಇರಬಹುದು. ಇನ್ನು ಕೆಲವರು ಜೀವನವಿಡೀ ದುಡಿದದ್ದನ್ನು ಮಕ್ಕಳ ವಿದ್ಯಾಭ್ಯಾಸ ಮತ್ತು ಆಸ್ತಿಪಾಸ್ತಿ ಗೆಂದು ಖರ್ಚು ಮಾಡಿ, ವೃದ್ಧಾಪ್ಯದಲ್ಲಿ ಕೈ ಖಾಲಿ ಮಾಡಿಕೊಂಡು ಮುದ್ದು ಮಕ್ಕಳ ಕೃಪಾಕಟಾಕ್ಷದಲ್ಲಿ ಬದುಕುವವರು. ಉಳಿದವರು, ತಮ್ಮ ಮಕ್ಕಳಿಗಾಗಿ ಏನೂ ಮಾಡಲಾಗದೆ ಅಸಹಾಯಕರಾಗಿಯೇ ಬದುಕಿ, ಜೀವನದ ಕೊನೆಯ ದಿನಗಳಲ್ಲಿ ನೆಲೆಗಾಗಿ ಹುಡುಕುವವರು. ಇದಕ್ಕೆ ಒಂದು ಪರಿಹಾರವೆಂದರೆ, ಪಾಶ್ಚಾತ್ಯ ಸಂಸ್ಕೃತಿಯ ಬಳುವಳಿಯೆಂದು ಕರೆಯ ಲಾಗುವ ವೃದ್ಧಾಶ್ರಮ. ಭಾರತದಲ್ಲಿ ಕೂಡ ಈಗ ಬಹಳಷ್ಟು ವೃದ್ಧಾಶ್ರಮಗಳಿದ್ದರೂ ನಮ್ಮಲ್ಲಿ ವೃದ್ಧಾಶ್ರಮ ಸೇರುವುದೆಂದರೆ ಅತ್ಯಂತ ದೌರ್ಭಾಗ್ಯವೆನ್ನುವ ಅಭಿ ಪ್ರಾಯವಿದೆ. ಹಾಗಾಗಿ, ಹೋಗಬೇಕಾದ ಅನಿವಾರ್ಯ ಇರುವವರಿಗೆ, ಕಳುಹಿಸಲು ಇಚ್ಛಿಸುವ ಸಂಬಂಧಿಕರಿಗೆ ಇದು ಮುಜುಗರದ ಅಥವಾ ಅಸಹಾಯಕ ಸ್ಥಿತಿ ಎನ್ನುವಂತೆ ಬಿಂಬಿತವಾಗಿದೆ.

ಅಧಿಕಾರ ಮತ್ತು ಆರ್ಥಿಕ ಬಲವಿದ್ದ ಮನುಷ್ಯನ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಅನಿವಾರ್ಯ ಎಂಬಂತೆ ಕೇಳುತ್ತಾರೆ. ಆದರೆ, ವೃದ್ಧಾಪ್ಯದಲ್ಲಿ ಅವೆಲ್ಲವನ್ನೂ ಕಳೆದುಕೊಂಡು ಬಲಹೀನವಾಗಿ ಕಾಣುವಾಗ, ಮನೆಮಂದಿಯ ಚುಚ್ಚುಮಾತುಗಳು ಮನಸ್ಸನ್ನು ಗಾಸಿಗೊಳಿಸುತ್ತವೆ. ಅಲ್ಲದೆ, ಒಂಟಿ ವೃದ್ಧರ ಮರುಮದುವೆಯ ವಿಚಾರದಲ್ಲಿ ನಮ್ಮ ಸಮಾಜ ಇನ್ನೂ ಮುಕ್ತವಾಗಿ ತೆರೆದುಕೊಂಡಿಲ್ಲ. ಬದಲಾಗಿ, ಅಪಹಾಸ್ಯಕ್ಕೆ ಈಡುಮಾಡುತ್ತದೆ. ಇದಕ್ಕಾಗಿ, ಮನುಷ್ಯ ತನ್ನ ವೃದ್ಧಾಪ್ಯವನ್ನು ಸ್ವಾಭಿಮಾನದಿಂದ ಕಳೆಯುವ ಯೋಜನೆಯನ್ನು ಬಹಳಷ್ಟು ಮುಂಚಿತವಾಗಿಯೇ ರೂಪಿಸುವ ಅವಶ್ಯಕತೆಯಿದೆ.

ಮೊದಲನೆಯದಾಗಿ, ವೃದ್ಧಾಶ್ರಮವನ್ನು ಸಂಪ್ರದಾಯಸ್ಥ ಮನಸ್ಸುಗಳು ಒಪ್ಪದಿರಬಹುದು. ಆದರೆ, ಮಕ್ಕಳು ಪಕ್ಕಾ ವ್ಯವಹಾರಸ್ಥರಾಗಿ ಮಾರ್ಪಟ್ಟರೆ, ಬದುಕುವ ಪರ್ಯಾಯ ಮಾರ್ಗ ಬೇಕಲ್ಲವೇ? ವಾಸ್ತವದಲ್ಲಿ, ಎಷ್ಟೊಂದು ವೃದ್ಧ ಮನಸ್ಸುಗಳು ಮನೆಯ ನಾಲ್ಕು ಗೋಡೆಗಳ ಮಧ್ಯೆ ಉಸಿರುಗಟ್ಟಿಸುವ ಮೌನದಲ್ಲಿ ಜೀವ ಸವೆಸುತ್ತಿವೆ ಎನ್ನುವುದನ್ನೂ ಯೋಚಿಸಬೇಕಾಗಿದೆ. ಆದ್ದರಿಂದ, ವೃದ್ಧಾಶ್ರಮಗಳನ್ನು ಒಂದು ಪರ್ಯಾಯ ಆಯ್ಕೆಯನ್ನಾಗಿಸಿ, ಅವುಗಳ ಕಾರ್ಯವೈಖರಿಯ ಕುರಿತು ಸಮಾಜದಲ್ಲಿ ಗುಣಾತ್ಮಕ ಅಭಿಪ್ರಾಯ ಮೂಡಿಸಬೇಕಾಗಿದೆ. ಹೀಗಾದಲ್ಲಿ, ವೃದ್ಧಾಶ್ರಮ ಸೇರುವುದೆಂದರೆ ನಿಕೃಷ್ಟವಾದುದಲ್ಲ, ಬದುಕಿನ ಕೊನೆಯ ದಿನಗಳನ್ನು ಸಮವಯಸ್ಕರೊಂದಿಗೆ ಮಾತುಕತೆಯಾಡುತ್ತಾ, ಸಂತೋಷವಾಗಿ ಕಾಲ ಕಳೆಯುವ ತಾಣವೆನ್ನುವ ಸದಭಿಪ್ರಾಯ ಜನರಲ್ಲಿ ಮೂಡಬಹುದು. ವೃದ್ಧಾಶ್ರಮಗಳಲ್ಲಿಯೂ ಅವ್ಯವ ಹಾರಗಳು, ಲೋಪದೋಷಗಳು ಇರುವುದನ್ನು ಕಾಣುತ್ತೇವೆ. ಹಾಗಾಗಿ, ಅವುಗಳಿಗೆ ಧನಸಹಾಯ ಮಾಡಿ, ಅವು ಪಾರದರ್ಶಕವಾಗಿ ಕಾರ್ಯನಿರ್ವಹಿಸು ವಂತೆ ನೋಡಿಕೊಳ್ಳುವ ಹೊಣೆ ಸಹೃದಯಿಗಳಿಗಿದೆ.

ವೃದ್ಧಾಪ್ಯದಿಂದ ಯಾರೂ ತಪ್ಪಿಸಿಕೊಳ್ಳಲಾಗದು. ಆದ್ದರಿಂದ, ಇದರ ಕುರಿತು ಹೆಚ್ಚು ಸಾರ್ವಜನಿಕ ಚರ್ಚೆಗಳು, ಸಹಾಯಹಸ್ತ ಮತ್ತುವೃದ್ಧರ ಸಮಸ್ಯೆಗಳ ನೈಜ ಅರಿವನ್ನು ಜನಮನದಲ್ಲಿ ಮೂಡಿಸುವ ಅಗತ್ಯವಿದೆ. ಷೇಕ್ಸ್‌ಪಿಯರ್ ಹೇಳಿದಂತೆ, ‘ವೃದ್ಧಾಪ್ಯ ಎಂದರೆ ಎರಡನೆಯ ಬಾಲ್ಯಾವಸ್ಥೆ. ಅವು, ಹಲ್ಲು, ದೃಷ್ಟಿ, ಬಾಯಿರುಚಿ ಏನೂ ಇಲ್ಲದ, ಮುಗ್ಧ ಮನಸ್ಸಿನ ದಿನಗಳು’. ಈ ಬಾಲ್ಯಾವಸ್ಥೆಯಲ್ಲಿ ಜನರಿಗೆ ಅವರ ಮೊದಲ ಬಾಲ್ಯಾವಸ್ಥೆಯಂತೆ ಪ್ರೀತಿ ಸಿಗಬೇಕಾದುದು ಸ್ವಸ್ಥ ಸಮಾಜದ ನಾಗರಿಕ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT