ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉಚಿತ ಸಲಹೆ ದಾರಿ ತಪ್ಪಿಸೀತು!

ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್ ಎಂಬ ಪ್ರಶ್ನೆ ಬಂದಾಗ, ಮಗುವಿನ ಒಲವು ಯಾವುದರ ಕಡೆಗಿದೆ ಎಂಬುದಷ್ಟೇ ಮುಖ್ಯವಾಗಬೇಕು
Last Updated 9 ಮೇ 2022, 23:30 IST
ಅಕ್ಷರ ಗಾತ್ರ

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಮುಗಿದಿದೆ.‌ ಇನ್ನೇನು ಕೆಲವೇ ದಿನಗಳಲ್ಲಿ ಫಲಿತಾಂಶವೂ ಬರಲಿದೆ. ಎಸ್‌ಎಸ್‌ಎಲ್‌ಸಿ ನಂತರ ‌ಮುಂದೇನು ಅನ್ನುವ ಶೂಲವೊಂದು ಈಗಾಗಲೇ ಅಲ್ಲಲ್ಲಿ ಮಕ್ಕಳಿಗೂ, ಪೋಷಕರಿಗೂ ಸಣ್ಣಗೆ ಚುಚ್ಚಲು ಆರಂಭಿಸಿದೆ.

ಬಿಸಿಲಿನೊಂದಿಗೆ ಈ ತಲ್ಲಣಗಳ ಕಾವೂ ಏರುತ್ತಿದೆ. ಯಾರೋ ಗೂಗಲ್ ‌ಮಾಡಿ ಬರೆದ ಲೇಖನ ಓದುತ್ತಾ ಕೂತ ಮಗು ಅಲ್ಲಿರುವ ಕೋರ್ಸಿನೊಳಗೆ ಹೊಕ್ಕು, ಎಲ್ಲೋ ದಾರಿ ತಪ್ಪಿ ಮತ್ತೆಲ್ಲೋ ನುಗ್ಗಿ ಹೊರಬರಲಾರದೆ ದಿಕ್ಕು ತಪ್ಪುತ್ತದೆ.‌ ಮಗುವನ್ನು ಯಾವ ಕೋರ್ಸಿಗೆ ತಳ್ಳಬೇಕು ಅನ್ನುವ ಯೋಚನೆಯಲ್ಲಿ ಪೋಷಕರು ನಿದ್ದೆ ಬಿಡುತ್ತಾರೆ.

ಕೆಲವರಿರುತ್ತಾರೆ, ಅವರ ಸಲಹೆಗಳು ಅವರಷ್ಟೇ ಹಾಸ್ಯಾಸ್ಪದ. ‘90 ಪರ್ಸೆಂಟ್‌ ಬಂದಿದೆಯಾ? ನೀನು ಸೈನ್ಸ್ ತಗೊ’. ‘ನಿಂದು ಬರೀ 80 ಪರ್ಸೆಂಟಾ? ನಿನಗೆ ಕಾಮರ್ಸ್ ಅಡ್ಡಿಯಿಲ್ಲ’. ‘70 ಪರ್ಸೆಂಟ್‌ ಒಳಗಿದ್ರೆ ಆರ್ಟ್ಸ್ ತಗೊಳ್ಳೋದು ಒಳ್ಳೆಯದು’. ‘ಜಸ್ಟ್ ಪಾಸಾ, ನೀನು ಐಟಿಐ ಮಾಡು’. ಇಂತಹ ಸಲಹೆಗಳಿಂದಲೇ ಎಷ್ಟೋ ಹುಡುಗರ ಭವಿಷ್ಯಗಳು ಕತ್ತಲಾಗಿವೆ.

ನನ್ನ ಪಕ್ಕದ ಮನೆಯಲ್ಲಿ ಒಬ್ಬ ಹುಡುಗನಿಗೆ ಶೇ 91ರಷ್ಟು ಅಂಕ ಬಂದಿತ್ತು. ಅವನನ್ನು ನಗರದ ಸೈನ್ಸ್ ಕಾಲೇಜೊಂದರಲ್ಲಿ ಲಕ್ಷ ರೂಪಾಯಿ ಕೊಟ್ಟು ಸೇರಿಸಲಾಯಿತು. ಹೆಚ್ಚುಕಡಿಮೆ ಅವನಷ್ಟೇ ಅಂಕ ಪಡೆದಿದ್ದ ಅವನ ಸ್ನೇಹಿತನಿಗೂ ಅದೇ ಕಾಲೇಜಿನಲ್ಲಿ ಸೈನ್ಸ್ ಓದಲು ಪುಸಲಾಯಿಸಲಾಯಿತು. ‘ನನಗೆ ಸೈನ್ಸ್ ಇಷ್ಟ ಇಲ್ಲ. ಆರ್ಟ್ಸ್ ಓದಿ ಲಾಯರ್ ಆಗ್ಬೇಕು’ ಅಂದರೂ ಬಿಡಲಿಲ್ಲ. ಸಲಹೆಗಾರರು ಅವನ ಪೋಷಕರ ತಲೆತುಂಬಿ, ಇದ್ದ ಒಂದು ಎಕರೆ ಜಮೀನನ್ನು ಮಾರಿಸಿ ಅದೇ ಕಾಲೇಜಿಗೆ ಸೇರಿಸಿದರು. ಒಂದೇ ವರ್ಷಕ್ಕೆ ಅವನು ಕಾಲೇಜು ಬಿಟ್ಟು ಮನೆಗೆ ಬಂದು ಕೂತ. ಕೊನೆಗೆ ಅವನ ಓದೂ‌ ಇಲ್ಲ, ಇದ್ದ ಒಂದು ಎಕರೆ ಜಮೀನೂ ಇಲ್ಲ.

ಹಾಗಾದರೆ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡುವುದು ತಪ್ಪೇ? ಖಂಡಿತ ತಪ್ಪಲ್ಲ.‌ ಆದರೆ ಆ ಮಾಹಿತಿ ಯಾರು ನೀಡುತ್ತಿದ್ದಾರೆ ಅನ್ನುವುದು ಮುಖ್ಯ. ಅಷ್ಟಕ್ಕೂ ನಾವು ನೀಡಿದ ಮಾಹಿತಿ ಆಧರಿಸಿ ಮಗುವಿನ ಒಳಗಿನ ಗುರಿ ಬದಲಾಗುವುದೇ? ಮಗುವಿನ ಗುರಿ ರೂಪುಗೊಳ್ಳುವುದು ಹೊರಗಿನ ಮಾಹಿತಿ ಹೇರುವಿಕೆಯಿಂದಲ್ಲ, ಒಳಗಿನ ತುಡಿತದಿಂದ. ಒಂದನೇ ಕ್ಲಾಸಿನ ಮಗುವಿಗೆ ‘ನೀನು ಏನಾಗಬೇಕು’ ಅಂತ ಕೇಳಿ ನೋಡಿ. ಮಗು ‘ನಾನು ಡ್ರೈವರ್ ಆಗ್ತೀನಿ’ ಅನ್ನುತ್ತೆ. ಸ್ವಲ್ಪ ದೊಡ್ಡವನಾದ ಮೇಲೆ ಕೇಳಿ ನೋಡಿ ‘ಪೊಲೀಸ್ ಆಗ್ತೀನಿ’ ಅನ್ನುತ್ತೆ. ಆದರೆ ಹತ್ತನೇ ತರಗತಿಗೆ ಬರುವ ಹೊತ್ತಿಗೆ ಮಗುವಿಗೆ ತಾನೇನು ಆಗಬೇಕೆಂಬುದರ ಒಂದು ಅಂದಾಜು ಖಂಡಿತ ಇರುತ್ತದೆ.

‘ನೀಟ್‌’ನಲ್ಲಿ ಮೆಡಿಕಲ್ ಸೀಟು ಗಿಟ್ಟಿಸಿಕೊಂಡ ನನ್ನ ವಿದ್ಯಾರ್ಥಿನಿಗೆ ಶುಭಾಶಯ ಹೇಳಲು ಫೋನ್ ಮಾಡಿದೆ.‌ ‘ನಾನು ಮೆಡಿಕಲ್‌ಗೆ ಹೋಗ್ತಿಲ್ಲ ಸರ್‌. ಮನೆಯವರ ಬಲವಂತಕ್ಕೆ ನೀಟ್ ಬರೆದೆ. ಫ್ಯಾಷನ್ ಡಿಸೈನಿಂಗ್ ನಂಗಿಷ್ಟ. ಆ ಫೀಲ್ಡಲ್ಲಿ ನಂಗೆ ಖುಷಿ ಇದೆ’ ಅಂದಳು. ‘3 ಈಡಿಯಟ್ಸ್’ ಸಿನಿಮಾದಲ್ಲಿ ಬರುವ ಒಂದು ಸಂಭಾಷಣೆ ಹೀಗಿದೆ ‘ನಿನಗೆ ಏನು ಓದಬೇಕು ಎನಿಸುವುದೋ ಅದನ್ನು ಓದು. ರೇಸ್ ನಡೆದಿದೆ ಎಂದು ಹುಚ್ಚು ಹಿಡಿದವರ ಹಾಗೆ ನೀನೂ ಓಡಬೇಡ. ಯೋಗ್ಯತೆ ಗಳಿಸಿಕೊಳ್ಳಲಿಕ್ಕೆ ಏನು ಬೇಕೋ ಅದನ್ನು ಮಾಡು. ಒಮ್ಮೆ ಯೋಗ್ಯ ಅನ್ನಿಸಿಕೊಂಡರೆ ಸಾಕು, ಯಶಸ್ಸು ನಿನ್ನ ಹಿಂದೆ ನೆರಳಿನಂತೆ ಬರುತ್ತೆ...’ ಯೋಚಿಸಬೇಕಾದ ಮಾತುಗಳಿವು.

ಈಗ ಅನುಭವಿಸುತ್ತಿರುವ ಜೀವನ ನಮ್ಮ ನಮ್ಮ ಆಯ್ಕೆಗಳ ಫಲ. ಏನೋ ಸರಿಯಲ್ಲ ಅನಿಸಿದರೆ, ದುಡ್ಡು ಇದ್ದರೂ ನೆಮ್ಮದಿ ಇಲ್ಲ ಅನಿಸಿದರೆ, ನೆಮ್ಮದಿ ಇದೆ ದುಡ್ಡಿಲ್ಲ ಅನಿಸಿದರೆ, ಅದು ಜೀವನದ ಯಾವುದೋ ಸಂದರ್ಭದಲ್ಲಿ ನೀವು ಆಯ್ದುಕೊಂಡ ದಾರಿಯ ಫಲ. ‘ಆಯ್ಕೆಗಳು ಗುರಿಗೆ ಕೀಲುಗಳಿದ್ದಂತೆ’ ಎನ್ನುತ್ತಾರೆ ಅಮೆರಿಕದ ಖ್ಯಾತ ಬರಹಗಾರ ಮಾರ್ಕಮ್. ಹೌದು, ಸರಿಯಾದ ಸಮಯದಲ್ಲಿ ಮಾಡುವ ಆಯ್ಕೆ ಜೀವನದ ದಿಕ್ಕನ್ನೇ ಬದಲಿಸುತ್ತದೆ.

ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಅನ್ನುವ ಪ್ರತೀ ಸಲಹೆಯು ಷೇರು ಮಾರುಕಟ್ಟೆಗೆ ಮಗುವಿನ ನಾಳೆಗಳನ್ನು ಹೂಡುತ್ತಿರುವಂತೆ ಕೇಳಿಸುತ್ತದೆ. ಎಲ್ಲಾ ಸಲಹೆಗಳಲ್ಲಿ ಇರುವ ಪ್ರಮುಖ ಅಂಶ ಹಣ. ನೀವು ಎಲ್ಲಿ ಹೆಚ್ಚು ದುಡಿಯಬಹುದು ಎಂಬುದನ್ನು ಮಾತ್ರ ಹೇಳುತ್ತವೆ. ‘ನಿನ್ನ ಇಷ್ಟದ ಓದಿನಿಂದ ಬದುಕು ನಿನ್ನಿಷ್ಟದಂತೆ ಆಗುತ್ತದೆ’ ಎನ್ನುವುದಿಲ್ಲ ಯಾರೂ. ‘ನೀನೊಬ್ಬ ಒಳ್ಳೆಯ ರೈತನಾಗಬಹುದು’ ಎಂದು ಹೇಳಿರುವ ಒಂದೇ ಒಂದು ಸಲಹೆ ಕೂಡ ಕಿವಿಗೆ ಬೀಳುವುದಿಲ್ಲ.

ಪ್ರೀತಿಸುವ ಓದನ್ನು ಮತ್ತು ಅದರಿಂದ ಸಿಕ್ಕುವ ಕೆಲಸವನ್ನು ಮಾಡುವ ವ್ಯಕ್ತಿಯೇ ಜೀವನದಲ್ಲಿ ಪರಮಸುಖಿ. ಯಾವ ಕೋರ್ಸ್ ಎಂಬ ಪ್ರಶ್ನೆ ಬಂದಾಗ ಮಕ್ಕಳೇ ನೀವೆಷ್ಟು ನಿಮಗೆ ಅರ್ಥವಾಗಿದ್ದೀರಿ ಯೋಚಿಸಿ. ನಿಮ್ಮ ಒಲವು ಯಾವ ಕಡೆ, ನಿಮ್ಮ ಬದುಕಿನ ನಿಲುವೇನು ಚಿಂತಿಸಿ. ಹಣ ಸಿಗಬಹುದು, ಆದರೆ ಅದರಿಂದ ನಿಮ್ಮ ಬಾಳು ಎಷ್ಟು ಚೆಂದವಾಗುತ್ತದೆ ಕೇಳಿಕೊಳ್ಳಿ. ಹಣವಿಲ್ಲದೆ ಬರೀ ಆದರ್ಶ ಕೂಡ ಹೊಟ್ಟೆ ತುಂಬಿಸುವುದಿಲ್ಲ ನೆನಪಿರಲಿ. ಎರಡನ್ನೂ ಕರುಣಿಸುವ ಹಾದಿಯೇ ನಿಮ್ಮ ಆಯ್ಕೆಯಾಗಲಿ.

ಮಹತ್ವಾಕಾಂಕ್ಷೆಯೆಂಬುದು ನಿಮ್ಮ ಒಳಗಿನಿಂದ ಬರುತ್ತದೆಯೇ ವಿನಾ ಹೊರಗಿನಿಂದಲ್ಲ. ವೃತ್ತದಲ್ಲಿ ಇರುವವನು ನಿಮಗೆ ಚೆನ್ನಾಗಿರುವ ದಾರಿ ತೋರಿಸ ಬಹುದು. ಆದರೆ ಅದು ನಿಮ್ಮನ್ನು ನಿಮ್ಮ ಊರಿಗೆ ಕರೆದೊಯ್ಯುವ ಖಾತರಿ ಇದೆಯೇ? ಅದನ್ನು ನೀವೇ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT