ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಟಮಾರಿತನಕ್ಕೆ ಮಣಿಯುವ ಮುನ್ನ...

Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮಧ್ಯ ವಯಸ್ಸಿನ ಅಪ್ಪ– ಅಮ್ಮ ಬಂದು, ಹದಿಹರೆಯದ ಮಕ್ಕಳನ್ನು ಮುಂದಿಟ್ಟು, ನಿಸ್ಸಹಾಯಕರಂತೆ ಕೈ ಚೆಲ್ಲಿ ಕುಳಿತುಕೊಳ್ಳುವುದು ಇಂದು ನಾನು ದಿನನಿತ್ಯ ನೋಡುವ ದೃಶ್ಯವಾಗಿದೆ. ‘ಜೀವನಾನುಭವ, ವಯಸ್ಸಿನ ಹಿರಿತನ ನಿಮಗಿದೆ, ಮಕ್ಕಳ ಅವಶ್ಯಕತೆಗಳಿಗೆ ದುಡ್ಡು ನೀಡಿ ಸಲಹುತ್ತಿರುವವರು ನೀವು, ಅಂದಮೇಲೆ ಅವರಿಗೆ ಹೆದರುವುದು ಏಕೆ? ಹೀಗೆ ಮಾಡಿ, ಹಾಗೆ ಮಾಡಬೇಡಿ ಎಂಬುದನ್ನು ನೇರವಾಗಿ ಹೇಳಿ ನೋಡಿ’ ಎಂದರೆ ಅಪ್ಪ– ಅಮ್ಮ ಹೇಳುವ ಆ ಕ್ಷಣದ ಉತ್ತರ ‘ಹೀಗೆ ಮಾಡು ಎಂದರೆ ನಾನು ಸತ್ತು ಹೋಗ್ತೀನಿ ಅಂತಾನೆ’, ‘ಊಟನೇ ಮಾಡಲ್ಲ ಅಂತಾಳೆ’, ‘ಮೊಬೈಲ್ ಕೊಡಿಸದಿದ್ರೆ ನಾನು ಕಾಲೇಜಿಗೇ ಹೋಗಲ್ಲ ಅಂತ ಹೇಳ್ತಾನೆ’...

ಈಗ್ಗೆ ಹತ್ತು ವರ್ಷಗಳ ಹಿಂದೆ, ದ್ವಿತೀಯ ಪಿಯುಸಿ ಪಾಸಾದವರಲ್ಲಿ ಎಲ್ಲಿಯೋ ಒಬ್ಬರು ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ‘ರಿಜೆಕ್ಟ್’ ಮಾಡಿ, ಇನ್ನೊಂದು ವರ್ಷ ಕುಳಿತು ಓದಿ ಪ್ರಯತ್ನಿಸುವವರು ಇರುತ್ತಿದ್ದರು. ಈಗ ಹಾಗಲ್ಲ. ಒಂದು ವರ್ಷ ಒಂದು ಕೋಚಿಂಗ್ ಸೆಂಟರ್, ಮತ್ತೊಂದು ವರ್ಷ ಇನ್ನೊಂದು ಕೋಚಿಂಗ್ ಕೇಂದ್ರ, ಮಗದೊಂದು ವರ್ಷ ಮನೆಯಲ್ಲಿಯೇ ಕುಳಿತು ಓದುವ ಪ್ರಯತ್ನ ಹೀಗೆ 2-3 ವರ್ಷ ಓದುವುದು, ಎಂಬಿಬಿಎಸ್ ಪದವಿ ಪಡೆಯಲು ಸತತ ಪ್ರಯತ್ನ ಮಾಡುವುದು ಮಾಮೂಲಾಗಿ ಹೋಗಿದೆ. ಇಲ್ಲಿಯೂ ಮಕ್ಕಳ ಹಟಮಾರಿತನ, ಅಪ್ಪ– ಅಮ್ಮಂದಿರ ಅಸಹಾಯಕತೆ ಎದ್ದು ಕಾಣುತ್ತದೆ.

ಮಕ್ಕಳು ಕೈಯಲ್ಲಿ ಇಟ್ಟುಕೊಳ್ಳುವ ಮೊಬೈಲ್ ಎಂಬ ‘ಮಾರಕಾಸ್ತ್ರ’ವನ್ನಂತೂ ಅಪ್ಪ– ಅಮ್ಮ ಕಿತ್ತುಕೊಳ್ಳಲು, ದೂರ ಎಸೆಯಲು, ಅದರ ಬದಲು ಬೇರೆ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಲು ನಿಸ್ಸಹಾಯಕತೆಯ ಮಂತ್ರವನ್ನು ಮತ್ತೆ ಮತ್ತೆ ಜಪಿಸತೊಡಗುತ್ತಾರೆ. ‘ಇವರು ಕೇಳೋದೇ ಇಲ್ಲ ಡಾಕ್ಟ್ರೇ’ ಎಂದೋ, ‘ಡಾಕ್ಟ್ರು ಏನು ಹೇಳ್ತಾರೆ ಸರಿಯಾಗಿ ಕೇಳಿಸ್ಕೋ’ ಎಂದೋ ಎಲ್ಲವನ್ನೂ ಸರಿಪಡಿಸುವ ಜವಾಬ್ದಾರಿಯನ್ನು ವೈದ್ಯರ ಮೇಲೇ ಹಾಕಿಬಿಡುತ್ತಾರೆ!

ಹೀಗೆ ಅಪ್ಪ– ಅಮ್ಮ ನಿಸ್ಸಹಾಯಕರಾಗಿ ನಿಲ್ಲುವುದನ್ನು ನೋಡಿದಾಗ, ಮಕ್ಕಳು ಹಟಮಾರಿತನದಿಂದ ತಮ್ಮ ಭವಿಷ್ಯಕ್ಕೇ ಮತ್ತಷ್ಟು ಸಮಸ್ಯೆಗಳನ್ನು ತಂದುಕೊಳ್ಳುವುದನ್ನು ನೋಡುವಾಗ, ಒಂದು ಸಮಾಜವಾಗಿ ಕೆಲವು ಅಂಶಗಳನ್ನು ಗಮನಿಸುವುದು, ಅಪ್ಪ-ಅಮ್ಮಂದಿರು ಸ್ವತಃ ಆತ್ಮಪರಿಶೀಲನೆಗೆ ತೊಡಗುವುದು ಮುಖ್ಯ ಎನಿಸುತ್ತದೆ. ಮಕ್ಕಳು ಮುಗ್ಧರು, ಅವರಿಗೆ ಏನೂ ಗೊತ್ತಾಗಲಾರದು ಅಥವಾ ಅವರ ಇಚ್ಛೆಗೆ ವಿರುದ್ಧವಾಗಿ ಅಪ್ಪ– ಅಮ್ಮ ನಡೆಯುವುದು ಸರ್ವಥಾ ತಪ್ಪು, ಅವರಿಗೆ ಏನು ಇಷ್ಟವೋ ಅದನ್ನು ಮಾಡಲು ಬಿಟ್ಟುಬಿಡುವುದೇ ಒಳ್ಳೆಯ ಅಪ್ಪ–ಅಮ್ಮ ನಡೆದುಕೊಳ್ಳಬೇಕಾದ ರೀತಿ ಎಂಬಂತಹ ಪೂರ್ವಗ್ರಹಗಳನ್ನು ಪರಿಶೀಲಿಸಿ ನೋಡುವುದು ಅಗತ್ಯ ಎನಿಸುತ್ತದೆ.

ಹಟಮಾರಿತನವೇನೂ ಆಧುನಿಕ ಸಮಸ್ಯೆಯಲ್ಲ! ಮೂರು ತಿಂಗಳ ಶಿಶುವಿನಿಂದಲೇ ಹಟಮಾರಿತನದ ನಡವಳಿಕೆ ಸಾಧ್ಯವಿದೆ. ಎರಡು ವರ್ಷದ ಹೊತ್ತಿಗೆ ಚಾಕೊಲೇಟಿಗೆಂದು, ಆಟದ ಸಾಮಾನಿಗೆಂದು ಹಟ ಮಾಡುವ ಸಾಮಾನ್ಯ ನಡವಳಿಕೆ ಮಕ್ಕಳಲ್ಲಿ ಕಂಡುಬರುತ್ತದೆ. ಮಕ್ಕಳು ದೊಡ್ಡವರಿಗಿಂತ ಬಲು ಸೂಕ್ಷ್ಮಗ್ರಾಹಿಗಳು. ತಾನು ಇತರರ ಎದುರು ಅತ್ತಾಗ, ಹಟ ಹಿಡಿದಾಗ, ಸಾರ್ವಜನಿಕ ಸ್ಥಳಗಳಲ್ಲಿ ರಚ್ಚೆ ಹಿಡಿದಾಗ ಅಪ್ಪ– ಅಮ್ಮನಿಗೆ ಕಿರಿಕಿರಿ, ಭಯ, ಇರಿಸುಮುರಿಸು ಉಂಟಾಗುತ್ತದೆ, ಇಷ್ಟವಿರದಿದ್ದರೂ ಕಿರಿಕಿರಿಯಿಂದ ಪಾರಾಗಲು, ಇತರರ ಎದುರು ಮರ್ಯಾದೆ ಉಳಿಯಲಿ ಎಂಬ ಕಾರಣದಿಂದ ಕೇಳಿದ ವಸ್ತುವನ್ನು ತನಗೆ ಕೊಡಿಸಿಯೇ ಕೊಡಿಸುತ್ತಾರೆ ಎಂಬ ಅಂಶವನ್ನು ದೊಡ್ಡವರಿಗಿಂತ ಮಕ್ಕಳು ಬಲು ಬೇಗ ಗ್ರಹಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಹಟ ಹಿಡಿಯುವ ಮಗುವಿಗೆ ಕೇಳಿದ ವಸ್ತು ಕೈಗಿಟ್ಟರೆ ಹಟ ನಿಲ್ಲುತ್ತದೆ ಎಂದು ಅಪ್ಪ– ಅಮ್ಮ ಕಲಿಯುತ್ತಾರೆ, ಹಟ ಮಾಡಿದರೆ ತನಗೆ ಬೇಕಾದ ವಸ್ತು ದೊರಕುತ್ತದೆ ಎಂಬ ಕಲಿಕೆ ಮಕ್ಕಳಿಗೆ ದೊರಕುತ್ತದೆ!

ಎರಡು ವರ್ಷ ವಯಸ್ಸಿನಿಂದ ಇಪ್ಪತ್ತು ವರ್ಷದವರೆಗೆ ಈ ಪ್ರವೃತ್ತಿ ನಮಗೇ ಗೊತ್ತಿಲ್ಲದಂತೆ ವಿಸ್ತರಿಸುತ್ತದೆ. ಕಡಿಮೆ ವಯಸ್ಸು, ಲೋಕಾನುಭವದ ಕೊರತೆ, ಆರ್ಥಿಕ ಅವಲಂಬನೆಯಿದ್ದರೂ ಮಕ್ಕಳೇ ಅಪ್ಪ– ಅಮ್ಮಂದಿರನ್ನು ನಿಯಂತ್ರಿಸುವ ಪರಿಸ್ಥಿತಿಗೆ ಕಾರಣವಾಗಿಬಿಡುತ್ತದೆ.

ಮನೋವೈದ್ಯಕೀಯ ವಿಜ್ಞಾನ ‘ಮಕ್ಕಳ ಮೇಲೆ ಒತ್ತಡ ಹೇರಬೇಡಿ, ಇಂತಿಷ್ಟೇ ಅಂಕ ಗಳಿಸಬೇಕು ಎಂಬ ಷರತ್ತು ಹಾಕಬೇಡಿ, ಹೊಡೆಯಬೇಡಿ’ ಎಂದೆಲ್ಲ ಪೋಷಕರಿಗೆ ತಿಳಿಹೇಳುತ್ತದೆಯಷ್ಟೆ. ಆದರೆ ಇದನ್ನು ಅವರು ‘ಅಶಿಸ್ತು ಬೆಳೆಸಲು ಬಿಡಿ’ ಎಂಬರ್ಥದಲ್ಲಿ ತಪ್ಪಾಗಿ ಗ್ರಹಿಸಿಬಿಡುತ್ತಾರೆ!

ಮಕ್ಕಳು ರಾತ್ರಿ ಹನ್ನೊಂದಕ್ಕೆ ಮನೆಗೆ ಕಾಲಿಟ್ಟರೆ ‘ಏಕೆ?’ ಎಂದು ಕೇಳಲು, ಮಕ್ಕಳ ಸ್ನೇಹಿತರು ಯಾರು, ಅವರ ಹಿನ್ನೆಲೆ ಏನು ಎಂಬುದನ್ನು ನೇರವಾಗಿ ವಿಚಾರಿಸಲು ಹೆದರುತ್ತಾರೆ! ಮತ್ತೆ ಬಹುಬಾರಿ ಮಕ್ಕಳೊಡನೆ ಸಮಯ ಕಳೆಯಲಾಗದ ತಮ್ಮ ಅಸಮರ್ಥತೆಗೆ ಮನೋವಿಜ್ಞಾನದ ನೆಪವೊಡ್ಡಿ ‘ನಾವು ಮಕ್ಕಳು ಹೇಳಿದ ಹಾಗೆಯೇ ಕೇಳಿದೆವು’ ಎಂದುಬಿಡುತ್ತಾರೆ. ಎಂಟನೇ ತರಗತಿಯ ಹೊತ್ತಿಗೆ ಒಬ್ಬ ಬಾಲಕ ನಾಲ್ಕು ಶಾಲೆಗಳನ್ನು ಬದಲಾಯಿಸಿದಾಗ ‘ಈ ಬದಲಾವಣೆ ಏಕೆ’ ಎಂದು ಪ್ರಶ್ನಿಸಿದರೆ ಅಪ್ಪ– ಅಮ್ಮ ನೀಡಿದ ಉತ್ತರ ‘ನಮಗೇನು ಗೊತ್ತು? ಅವನು ಹೇಳಿದ ಶಾಲೆಗೇ ನಾವು ಬದಲಾಯಿಸಿದ್ದೇವೆ. ಆದರೆ ಅವನು ಓದ್ತಾ ಇಲ್ಲ’. ಹದಿಮೂರು ವರ್ಷದ ಬಾಲಕನಿಗೆ ಶಾಲೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಹಾಗೆ ತೆಗೆದುಕೊಳ್ಳುವುದು ಸೂಕ್ತವೇ ಎಂಬ ಪ್ರಶ್ನೆಗೆ ಮತ್ತೆ ನಿಸ್ಸಹಾಯಕತೆಯ ನಿರುತ್ತರವೇ ಎದುರಾಗುತ್ತದೆ!

‘ಮಕ್ಕಳ ಮೇಲೆ ಒತ್ತಡ ಹೇರಬಾರದು’ ಎಂಬುದನ್ನು ಗಿಣಿಪಾಠದಂತೆ ಪಠಿಸುವ ನಾವು, ಮನೋವೈದ್ಯಕೀಯ ನಿಷ್ಠೆಯಿಂದ ಮತ್ತೆ ಮತ್ತೆ ಬೋಧಿಸುವ ‘ಮಕ್ಕಳೊಂದಿಗೆ ಬಾಲ್ಯದ ಮೊದಲಿನಿಂದ ಸಮಯ ಕಳೆಯಿರಿ, ಹಾಗೆ ನೀವು ನೀಡುವ ಗುಣಮಟ್ಟದ ಸಮಯ ಮಾತ್ರ ಮಕ್ಕಳು ನೀವು ವಿಧಿಸುವ ಶಿಸ್ತನ್ನೂ ಒಪ್ಪಿಕೊಳ್ಳುವಂತೆ ಮಾಡಬಹುದು. ನೀವು ಶಿಸ್ತನ್ನು (ಮೊಬೈಲ್ ಬಳಕೆ, ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ದೈಹಿಕ ವ್ಯಾಯಾಮ, ಒರಟಾಗಿ ನಡೆದುಕೊಳ್ಳದಿರುವುದು...) ರೂಢಿಸಿಕೊಂಡು ಮಾದರಿಯಾಗಿರಿ’ ಎನ್ನುವ ಅಂಶಗಳನ್ನು ನಿರ್ಲಕ್ಷಿಸಿಬಿಡುತ್ತೇವೆ. ಮಕ್ಕಳು ಊಟ ಬಿಡುತ್ತೇವೆ ಅಂದಾಕ್ಷಣ ಕಂಗಾಲಾಗುವ ಅಪ್ಪ– ಅಮ್ಮ, ಅವರು ಊಟ ಮಾಡಬೇಕಾದ್ದು ತಮ್ಮ ಹೊಟ್ಟೆ ಹಸಿವು ನೀಗಿಸಿಕೊಳ್ಳುವ ಸಲುವಾಗಿ ಎಂಬುದನ್ನು ಗಮನಿಸುವುದಿಲ್ಲ. ‘ನೀವು ಇಂಥದ್ದು ಕೊಡಿಸದಿದ್ದರೆ ನಾನು ಸತ್ತುಹೋಗ್ತೀನಿ’ ಎಂದಾಗ, ‘ಮೊದಲು ಮನೋವೈದ್ಯರ ಬಳಿ ಹೋಗೋಣ, ಆಮೇಲೆ ಬೇರೆ ಮಾತು’ ಎನ್ನುವ ಧೈರ್ಯ ತೋರುವುದಿಲ್ಲ.

ಇಡೀ ಜಗತ್ತು ಓಡುತ್ತಿದೆ. ಗುರಿ ಯಾವುದು? ಗೊತ್ತಿಲ್ಲ! ಕೊಂಚ ನಿಂತು, ಗುರಿಗಳನ್ನು ನಿರ್ಧರಿಸಿಕೊಳ್ಳೋಣ. ‘ಇಂದಿನ’ ಆರೋಗ್ಯಕರ ನಡವಳಿಕೆಯ ಬಗ್ಗೆ ಗಮನ ಕೇಂದ್ರೀಕರಿಸೋಣ. ಮುಂದೆ ಏನೋ ಸಿಕ್ಕೀತು, ಅದಕ್ಕಾಗಿ ನಡವಳಿಕೆ ತಪ್ಪಿದರೂ ಪರವಾಗಿಲ್ಲ ಎಂಬ ಮನೋಭಾವ ಸಲ್ಲದು. ಇಂದು ನಾವು ಸ್ವತಃ ರೂಢಿಸಿಕೊಳ್ಳುವ ಸಂಯಮ, ಸ್ವನಿಯಂತ್ರಣವು ಮುಂದಿನ ಹಾದಿಯನ್ನು ಸುಗಮವಾಗಿಸುತ್ತವೆ. ನಮಗೂ, ಮಕ್ಕಳಿಗೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT