‘ಮೀಸಲಾತಿಯು ಈ ನೆಲದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು’ ಎನ್ನುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಲುವು ಸಹ ಇದೇ ಆಗಿದೆ ಎನ್ನುವುದು ಅನೇಕರ ಭಾವನೆ.

ಹಲವು ಸಭೆ, ಸಮಾರಂಭಗಳಲ್ಲಿ ಸಿದ್ದರಾಮಯ್ಯ ಅವರು, ‘ಈ ರಾಜ್ಯದ ಕಟ್ಟಕಡೆಯವನಿಗೂ ನ್ಯಾಯ ಸಿಗಬೇಕು. ಹಸಿವು ಮುಕ್ತ ಕರ್ನಾಟಕ ಸಾಕಾರಗೊಳ್ಳಬೇಕು’ ಎಂದು ನ್ಯಾಯದ ವಕ್ತಾರರಂತೆ ಮಾತನಾಡಿದ್ದಾರೆ. ಆ ಮಾತುಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಈಗ ಆಗಬೇಕಾಗಿದೆ; ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ನ್ಯಾಯ ದೊರಕಿಸಿಕೊಡಬೇಕಿದೆ.

ಈ ವರ್ಷದ ‘ಬುಕ್ ಬ್ರಹ್ಮ’ ಸಾಹಿತ್ಯೋತ್ಸವದಲ್ಲಿ ‘ಉಚಲ್ಯಾ’ ಆತ್ಮಕಥನದ ಖ್ಯಾತಿಯ ಮರಾಠಿ ಲೇಖಕ ಲಕ್ಷ್ಮಣ ಗಾಯಕವಾಡ ಭಾಗವಹಿಸಿದ್ದರು. ಅವರು ಅಲೆಮಾರಿ ಸಮುದಾಯಕ್ಕೆ ಸೇರಿದವರು. ‘‘ನಿಮಗೆಲ್ಲರಿಗೂ 1947ರಲ್ಲಿ ಸ್ವಾತಂತ್ರ್ಯ ದೊರಕಿದೆ. ಆದರೆ, ನಮಗೆಲ್ಲಿದೆ ಸ್ವಾತಂತ್ರ್ಯ? ನಾವು ತಾಯಿಯ ಗರ್ಭದಿಂದ ಈ ಪ್ರಪಂಚಕ್ಕೆ ಬಂದೊಡನೆಯೇ ‘ಕ್ರಿಮಿನಲ್ ಟ್ರೈಬ್’ ಎಂಬ ಹಣೆಪಟ್ಟಿ ಹಚ್ಚಿಕೊಂಡು ಜನ್ಮ ತಾಳುತ್ತೇವೆ. ನಂತರ ದ್ವಿತೀಯ ದರ್ಜೆಯ ನಾಗರಿಕರಾಗಿ ಬದುಕು ಸಾಗಿಸುತ್ತೇವೆ’’ ಎಂದು ಸಂವಾದದಲ್ಲಿ ಗಾಯಕವಾಡ ಅವರು ಹೇಳಿದ ಮಾತು ಸಹೃದಯರನ್ನು ಕಾಡುವಂತಿದೆ.

ಮಾತು ಮುಂದುವರಿಸಿದ ಅವರು, ‘‘1952ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ನಮ್ಮನ್ನು ಮನುಷ್ಯರಂತೆ ಕಂಡರು. ನಮಗೆ ಅಂಟಿದ ಶಾಪವನ್ನು ಡಿನೋಟಿಫೈ ಮಾಡಿ ಹೊಡೆದೋಡಿಸಿದರು. ಕ್ರಿಮಿನಲ್ ಟ್ರೈಬ್ ಸಂಕೋಲೆಯಿಂದ ಬಿಡುಗಡೆಗೊಳಿಸಿದರು. ದುರ್ದೈವವೆಂದರೆ, ನಮ್ಮನ್ನು ಇಂದಿಗೂ ಎರಡನೆಯ ದರ್ಜೆಯ ನಾಗರಿಕರನ್ನಾಗಿಯೇ ಕಾಣಲಾಗುತ್ತದೆ. ಮಾನವತಾವಾದಿ ದೇವರಾಜ ಅರಸು ಅವರಂಥ ಪುಣ್ಯಾತ್ಮರನ್ನು ನೀವು (ಕರ್ನಾಟಕದವರು) ಕಂಡಿದ್ದೀರಿ. ಆ ದಿಸೆಯಲ್ಲಿ ನೀವು ಅದೃಷ್ಟಶಾಲಿಗಳು. ಕರ್ನಾಟಕದಲ್ಲಿರುವ ಗಂಟುಚೋರ ಸಮುದಾಯಕ್ಕೆ ನ್ಯಾಯ ಒದಗಿಸಲಾಗಿದೆ’’ ಎಂದರು.

ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿರುವ ‘ಉಚಲ್ಯಾ’ಗಳೆಂಬ ಅಲೆಮಾರಿಗಳನ್ನು ನಮ್ಮಲ್ಲಿ ಗಂಟುಚೋರ, ಗಂಟಿಚೋರರೆಂದು ಕರೆಯಲಾಗುತ್ತದೆ.ಈ ಸಮುದಾಯದವರ ಮನೆಮಾತು ತೆಲುಗು. ಅಪರಾಧದ ಹಿನ್ನೆಲೆಯಿಂದ ಮುಕ್ತಗೊಂಡರೂ, ಅಲೆಮಾರಿ ಸಮುದಾಯವನ್ನು ಮುಖ್ಯವಾಹಿನಿಯು ಇನ್ನೂ ಸ್ವೀಕಾರ ಮಾಡಿಲ್ಲ ಎನ್ನುವುದು ಲಕ್ಷ್ಮಣ ಗಾಯಕವಾಡರ ನೋವು. ಈ ನೋವು, ನಾಡಿನ ಬಹುತೇಕ ಅಲೆಮಾರಿ ಸಮುದಾಯಗಳದ್ದೂ ಆಗಿದೆ. ಅವರ ಸ್ಥಿತಿ ಎರಡನೇ ದರ್ಜೆಯ ನಾಗರಿಕನದ್ದೇ ಆಗಿದೆ.

ಅಲೆಮಾರಿಗಳು ಪ್ರಾದೇಶಿಕವಾಗಿ ವಿವಿಧ ರೂಪಗಳಲ್ಲಿ ಚದುರಿ ಹೋದ ಅಸಂಘಟಿತರು. ಇವರ ಬೆಂಬಲಕ್ಕೆ ಯಾರೂ ಇಲ್ಲ. ರಾಜಕೀಯ ಶಕ್ತಿಯಂತೂ ಇಲ್ಲವೇ ಇಲ್ಲ. ಅಲೆಮಾರಿಗಳೊಂದಿಗೆ ಹೋಲಿಸಿದರೆ, ಪರಿಶಿಷ್ಟ ಜಾತಿಯಲ್ಲಿನ ‘ಎಡ’ ಮತ್ತು ‘ಬಲ’ ಸಮುದಾಯಗಳು ಸಾಕಷ್ಟು ಬಲಿಷ್ಠವಾಗಿವೆ. ಅವು ಸಂಘಟಿತವಾಗಿವೆ ಹಾಗೂ ಸುದೀರ್ಘವಾದ ಸಂಘರ್ಷಗಳ ಪರಂಪರೆ ಹೊಂದಿವೆ. ಅವರಿಗೊಂದು ರಾಜಕೀಯ ಒಲವು ಮತ್ತು ಬಲವಿದೆ. ಮತಬ್ಯಾಂಕ್ ರೂಪದಲ್ಲಿ ಪರಿಗಣಿಸುವ ಸಮುದಾಯಗಳಾಗಿವೆ. ಅಲೆಮಾರಿಗಳು ಹಾಗಿಲ್ಲ. ಅಧಿಕಾರ ಕೇಂದ್ರಿತ ರಾಜಕೀಯದಲ್ಲಿ ಅವರಿಗೆ ಯಾವ ಮಹತ್ವವೂ ಇಲ್ಲ. ಸಂಘಟಿತರಲ್ಲದಿರುವುದರಿಂದ ರಾಜಕೀಯ ಇಚ್ಛಾಶಕ್ತಿಯು ಮರೀಚಿಕೆಯೇ ಸರಿ. ಒಗ್ಗಟ್ಟಿಲ್ಲದ ಮೂಕಜೀವಿಗಳು ಅವರು. ಇವರುಗಳಿಗೆ ಶಿಕ್ಷಣದ ಸೌಲಭ್ಯ ಗಳಿಲ್ಲ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಅಕ್ಷರದ ಬೆಳಕಿಗೆ ತಮ್ಮನ್ನು ಇತ್ತೀಚಿನ ವರ್ಷಗಳಲ್ಲಿ ಒಡ್ಡಿಕೊಳ್ಳುತ್ತಿದ್ದಾರೆ. ಅವರಿಗೆ ಒಳಮೀಸಲಿನ ಬಲ ದೊರೆತಲ್ಲಿ, ವ್ಯಕ್ತಿಗತವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಆ ವೈಯಕ್ತಿಕ ಬೆಳವಣಿಗೆ ಸಮುದಾಯಕ್ಕೆ ಪ್ರೇರಣೆ ಒದಗಿಸುತ್ತದೆ.

ಈ ಹಿಂದೆ ನ್ಯಾಯಮೂರ್ತಿ ಸದಾಶಿವ ಆಯೋಗವು ಅಲೆಮಾರಿಗಳಿಗೆ ಪ್ರತ್ಯೇಕ ಶೇ 1ರಷ್ಟು ಮೀಸಲಾತಿ ನೀಡಿತ್ತು. ಪ್ರಸ್ತುತ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಕೂಡ ಶೇ 1ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಿದೆ. ಆದರೆ, ಆ ಪ್ರತ್ಯೇಕ ಮೀಸಲಾತಿಯನ್ನು ಸರ್ಕಾರ ಪರಿಗಣಿಸದೆ ಇರುವುದು ದುರದೃಷ್ಟಕರ. ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕಿತ್ತೆಂಬುದು ಎಲ್ಲರ ಆಶಯ.

ಪರಿಶಿಷ್ಟ ಜಾತಿಯಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 59 ಅಲೆಮಾರಿ ಸಮುದಾಯಗಳಿವೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕಡೆಗಣಿಸಲಾದ ಹಲವು ವೇಷಧಾರಿಗಳು, ಅಲೆಮಾರಿ ಜೀವನ ನಡೆಸುತ್ತ, ಭಿಕ್ಷೆ ಬೇಡಿ ಬದುಕು ಸಾಗಿಸುತ್ತಾರೆ. ಅವರು ಸಹ ನಮ್ಮ ಮುಖ್ಯವಾಹಿನಿಯ ಒಂದು ಭಾಗ. ಆಚರಣೆ, ಭಾಷೆ, ಉಡುಗೆ ತೊಡುಗೆಗಳು, ಬದುಕು, ಪುರಾಣ, ಜಾನಪದದ ಮೂಲಕ ಅಲೆಮಾರಿಗಳು ತಮ್ಮ ಅಸ್ಮಿತೆಯ ಠಸ್ಸೆಯನ್ನು ಈ ನೆಲದ ಮೇಲೆ ಒತ್ತಿದ್ದಾರೆ. ಶೇ 1ರಷ್ಟು ಪ್ರತ್ಯೇಕ ಒಳಮೀಸಲಾತಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಹೃದಯವಂತಿಕೆಯನ್ನು ಸರ್ಕಾರ ಪ್ರದರ್ಶಿಸಬೇಕು. ಅಲೆಮಾರಿಗಳಿಗೆ ನ್ಯಾಯ ದೊರಕದೆ ಹೋದರೆ, ಸಾಮಾಜಿಕ ನ್ಯಾಯದ ಕುರಿತ ಸರ್ಕಾರದ ಯಾವ ಮಾತಿಗೂ ಕಿಮ್ಮತ್ತಿರುವುದಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ, ತಮ್ಮ ಸಾಮಾಜಿಕ ನ್ಯಾಯದ ಮಾತುಗಳನ್ನು ಅನುಷ್ಠಾನಕ್ಕೆ ತರಬೇಕು. ಇಲ್ಲದೆ ಹೋದಲ್ಲಿ, ಚಾರಿತ್ರಿಕ ಪ್ರಮಾದವೊಂದು ಜರುಗಲಿಕ್ಕೆ ಅವರು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.