ಕೆರೆಗಳಲ್ಲೋ ಮಡುಗಳಲ್ಲೋ ತಲೆಯೆತ್ತಿ ನಿಲ್ಲುವ ತಾವರೆ ಹೂಗಳು ತಮ್ಮ ಸುತ್ತಮುತ್ತಲಿನ ಪರಿಸರದ ಸೌಂದರ್ಯ ಹೆಚ್ಚಿಸುತ್ತವೆ. ಇತ್ತೀಚೆಗೆ, ‘ಪ್ರಜಾವಾಣಿ’ಯಲ್ಲಿ ಕುಶಾಲನಗರದ ಬೈಚನಹಳ್ಳಿಯಲ್ಲಿ ಇರುವ ತಾವರೆಕೆರೆಯ ಒಂದು ಫೋಟೊ ಪ್ರಕಟಗೊಂಡಿತ್ತು (ಜೂನ್ 30, ಚಿತ್ರ: ರಂಗಸ್ವಾಮಿ). ಆ ಚಿತ್ರದಲ್ಲಿ ಇದ್ದುದು ತಾವರೆಗಳಲ್ಲ, ಅಂತರಗಂಗೆಯ ಹೂಗಳು!

ಅಂತರಗಂಗೆಯ ಪುಷ್ಪಗುಚ್ಛಗಳನ್ನು ಒಳಗೊಂಡ ಕೆರೆಯ ಚಿತ್ರ ಪತ್ರಿಕೆಯ ಮುಖಪುಟದ ಶೋಭೆ ಹೆಚ್ಚಿಸಿತ್ತು. ಆದರೆ, ಜೀವವಿಜ್ಞಾನದ ವಿದ್ಯಾರ್ಥಿಯಾದ ನನ್ನ ಅಂತರಂಗವನ್ನು ಆ ಚಿತ್ರಪಟ ಕಲಕಿತ್ತು. ಕಾಕತಾಳೀಯ ಎನ್ನುವಂತೆ, ಕುಶಾಲನಗರಕ್ಕೆ ಪ್ರವಾಸ ಹೋದಪರಿಚಯದವರೊಬ್ಬರ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲೂ ಅಂತರಗಂಗೆ ಆಚ್ಛಾದಿತ ಕೆರೆಯ ವಿಡಿಯೊ ನೋಡಿದೆ. ಅಂತರಗಂಗೆ ಬಗ್ಗೆ ತಿಳಿಯದವರಿಗೆ ಆ ಸಸ್ಯ ಹಾಗೂ ಅದರ ಹೂಗಳು ಸುಂದರವಾಗಿ ಕಾಣಿಸಬಹುದು. ಅಂತರಗಂಗೆ ಉಂಟು ಮಾಡುವ ಅಪಾಯಗಳನ್ನು ಅರಿತವರಿಗೆ ಮಾತ್ರ, ಅದು ಮೃತ್ಯುಪಾಶದಂತೆ ಕಾಣಿಸುತ್ತದೆ.

ಹಳೆಯ ಶಾಲಾ ಪಠ್ಯಗಳಲ್ಲಿ ಅಂತರಗಂಗೆ ಸಸ್ಯವನ್ನು ‘ಐ ಕಾರ್ನಿಯಾ’ ಎಂದು ಕರೆಯಲಾಗಿದೆ. ಇತ್ತೀಚೆಗೆ, ಈ ಸಸ್ಯಕ್ಕೆ ‘ಪಾಂಟೆಡೇರಿಯಾ ಕ್ರಾಸ್ಸಿಪಸ್’ ಎಂದು ಹೊಸತಾಗಿ ಹೆಸರಿಡಲಾಗಿದೆ. ಈ ಸಸ್ಯ ನೋಡಲು ಚೆಂದ ಎನ್ನುವುದು ನಿಜ. ಹೂಬಿಟ್ಟರಂತೂ ಇನ್ನೂ ಅಂದ. ಇದರ ಹೂಗಳನ್ನು ಕೆರೆಗಳಲ್ಲಿ ನೋಡುವುದು ಚಂದ ಕಾಣುತ್ತದಾದರೂ, ಅಲ್ಲಿನ ಪರಿಸರಕ್ಕೆ ಈ ಸಸ್ಯ ಹೊಂದುವುದಿಲ್ಲ.ಅಂತರಗಂಗೆಯನ್ನು ಕೆರೆಗಳಲ್ಲಿ ಬೆಳೆಸಲು ಶುರು ಮಾಡಿದರೆ, ನೀರಿನ ಗುಣಮಟ್ಟ ಕುಸಿಯುತ್ತದೆ ಹಾಗೂ ಈ ಸಸ್ಯ ಜಲಚರಗಳಿಗೂ ಮಾರಕ ಆಗಬಹುದು. ಮೈಯೆಲ್ಲ ವಿಷ ತುಂಬಿಕೊಂಡ ವಿಷಕನ್ನಿಕೆಯರು ಅಪೂರ್ವ ಸೌಂದರ್ಯವತಿಯರೂ ಆಗಿರುವಂತೆ, ಅಂತರಗಂಗೆಯ ಸೌಂದರ್ಯದ ಹಿಂದೆ ಭಸ್ಮಾಸುರ ಹಸ್ತ ಇರುವುದನ್ನು ನಾವು ಮರೆಯಬಾರದು.

ಅಂತರಗಂಗೆಯು ವ್ಯಾಪಕವಾಗಿ ಆವರಿಸಿ ಬೆಳೆಯುವ ಕಳೆಸಸ್ಯ. ದಕ್ಷಿಣ ಅಮೆರಿಕದ ಅಮೆಜಾನ್ ಪ್ರಾಂತ್ಯವು ಈ ಸಸ್ಯದ ಮೂಲ. ಅಮೆರಿಕದ ಫ್ಲೋರಿಡಾ ರಾಜ್ಯಕ್ಕೆ 1884ರಲ್ಲಿ ದಕ್ಷಿಣ ಅಮೆರಿಕದಿಂದ ಆಲಂಕಾರಿಕ ಸಸ್ಯವಾಗಿ ಇದನ್ನು ತರಲಾಯಿತು. ಸಣ್ಣ ಕೆರೆಯೊಂದರಲ್ಲಿ ಬೆಳೆಸಲಾಗುತ್ತಿದ್ದ ಈ ಗಿಡ, ಸಮೀಪದ ತೊರೆಯೊಂದಕ್ಕೆ ಆಕಸ್ಮಿಕವಾಗಿ ಸೇರಿಕೊಂಡಿತು. ನೋಡನೋಡುತ್ತಿದ್ದಂತೆ ಅದು ಆ ಪ್ರಾಂತ್ಯದ ಕಾಲುವೆ ಹಾಗೂ ನದಿಗಳ ಜಾಲವನ್ನೆಲ್ಲ ಆವರಿಸಿಕೊಂಡುಬಿಟ್ಟಿತು.

‘ಪಾಂಟೆಡೇರಿಯಾ ಕ್ರಾಸ್ಸಿಪಸ್’ ಸಸ್ಯದ ಪುನರುತ್ಪಾದನೆಯ ವೇಗ ಎಷ್ಟೆಂದರೆ, ಬರೀ 10 ಗಿಡಗಳು 8 ತಿಂಗಳ ಅವಧಿಯಲ್ಲಿ 6 ಲಕ್ಷ ಗಿಡಗಳಾಗಬಲ್ಲವು! ರಕ್ತಬೀಜಾಸುರ ಸಂತತಿಯಂತೆ ವಿಸ್ತರಣೆಗೊಂಡ ಅಂತರಗಂಗೆಯ ಸಾಮ್ರಾಜ್ಯದಿಂದ ಫ್ಲೋರಿಡಾ ರಾಜ್ಯದ ಜಲವ್ಯೂಹದ ಕತ್ತು ಹಿಸುಕಿದಂತಾಯಿತು. ಪರಿಣಾಮ, ಸ್ಥಳೀಯ ಜಲಸಸ್ಯಗಳು ನಾಪತ್ತೆಯಾದವು. ಅವುಗಳ ಜಾಗದಲ್ಲಿ ನೀರನ್ನೆಲ್ಲಾ ಆವರಿಸಿ ಅಂತರಗಂಗೆ ಒತ್ತಾಗಿ ಬೆಳೆದುದರಿಂದ, ನೀರಿನಲ್ಲಿ ಕರಗಿದ ಆಮ್ಲಜನಕದ ಪ್ರಮಾಣವು ಕುಸಿಯಿತು; ಅಸಂಖ್ಯಾತ ಜಲಚರಗಳು ಸಾವಿಗೀಡಾದವು. ಹಿಂದೊಮ್ಮೆ ಈ ಸಸ್ಯ, ಫ್ಲೋರಿಡಾ ಹಾಗೂ ಕ್ಯಾಲಿಫೋರ್ನಿಯಾ ರಾಜ್ಯಗಳ 8 ಲಕ್ಷ ಹೆಕ್ಟೇರ್ನಷ್ಟು ಜಲಪ್ರದೇಶವನ್ನು ಆವರಿಸಿಕೊಂಡಿತ್ತು!

ಪ್ರಸ್ತುತ, ಫ್ಲೋರಿಡಾ ರಾಜ್ಯವು ಪ್ರತಿ ವರ್ಷ ಸುಮಾರು 20 ಲಕ್ಷ ಡಾಲರ್ಗಳನ್ನು ಅಂತರಗಂಗೆಯ ನಾಶಕ್ಕೆ ಖರ್ಚು ಮಾಡುತ್ತಿದೆ. ಇಂತಹ ಅಂಕಿಅಂಶಗಳು ಭಾರತದಲ್ಲಿ ಸದ್ಯಕ್ಕೆ ಲಭ್ಯವಿಲ್ಲವಾದರೂ, ಅಂತರಗಂಗೆಯ ಹಾವಳಿಯಂತೂ ಕಣ್ಣಿಗೆ ರಾಚುವಂತೆಯೇ ಇದೆ. ಪಶ್ಚಿಮ ಬಂಗಾಳದಲ್ಲಿ ಅಂತರಗಂಗೆ ಸಸ್ಯವನ್ನು ದೊಡ್ಡ ಪಿಡುಗು ಎಂದೇ ಭಾವಿಸಲಾಗುತ್ತಿದೆ. ಈ ಸಸ್ಯದ ವ್ಯಾಪಕ ಬೆಳವಣಿಗೆಯಿಂದಾಗಿ, ನೀರಿನಲ್ಲಿನ ಮೀನುಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತವೆ. ಈ ವಿದ್ಯಮಾನ, ನಿತ್ಯವೂ ಮೀನನ್ನೇ ಬಳಸುವ ಬೆಂಗಾಲಿ ಜನರಿಗೆ ಗಾಬರಿ ಹುಟ್ಟಿಸಿದೆ. ಸ್ಥಳೀಯ ಮೀನು ಪ್ರಭೇದಗಳು ನಾಪತ್ತೆ ಆಗುತ್ತಿವೆ; ಮೀನುಗಳ ಇಳುವರಿ ಕಡಿಮೆಯಾದುದರಿಂದ ಸ್ಥಳೀಯ ಮೀನುಗಾರರೂ ತೊಂದರೆಗೆ ಒಳಗಾಗಿದ್ದಾರೆ.

ನೀರನ್ನೆಲ್ಲ ಅಂತರಗಂಗೆ ಆವರಿಸಿಕೊಳ್ಳುವುದರಿಂದ ದೋಣಿ ನಡೆಸಲೂ ಕಷ್ಟವಾಗುತ್ತದೆ. ಗಿಡಗಳು ಸತ್ತ ನಂತರವೂ ನೀರಿನಾಳದಲ್ಲಿ ಕೊಳೆತು ಶೇಖರಗೊಳ್ಳುತ್ತಾ ಹೋಗಿ, ಕ್ರಮೇಣ ಜಲಮೂಲಗಳ ಆಳ ಕಡಿಮೆಯಾಗುತ್ತದೆ. ಸೌಂದರ್ಯದ ಪರಿಕಲ್ಪನೆಯಲ್ಲಿ ಬೇಕಾದುದನ್ನೂ ಬೇಡವಾದುದನ್ನೂ ಎಲ್ಲೆಲ್ಲಿಂದಲೋ ತಂದು ಹಿತ್ತಲಲ್ಲಿ ಗುಡ್ಡೆ ಹಾಕಿಕೊಳ್ಳುತ್ತೇವೆ. ಕೆಲವೊಮ್ಮೆ ಅದರ ಪರಿಣಾಮ ಭೀಕರವಾಗಿರುತ್ತದೆ. ನಮ್ಮಲ್ಲಿ ಹೆಚ್ಚಿನ ಜಲಮೂಲಗಳು ಮಲಿನಗೊಂಡಿವೆ. ಅಂತರಗಂಗೆಯು ಮಾಲಿನ್ಯಗೊಂಡ ಜಲಾಶಯಗಳಲ್ಲೂ ಯಥೇಚ್ಛವಾಗಿ ಬೆಳೆಯುತ್ತದೆ. ಬೆಳೆಯುತ್ತಾ ಹೋದಂತೆ ಅದರ ಅಂಗಾಂಗಗಳಲ್ಲಿ ಮಲಿನಕಾರಕಗಳು ಶೇಖರಗೊಳ್ಳುತ್ತಾ ಹೋಗುತ್ತವೆ.

ಕರ್ನಾಟಕದಲ್ಲಿ ಜಲಮೂಲಗಳ ಪುನಶ್ಚೇತನ ಕಾರ್ಯ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿದೆ. ಆ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಅಂತರಗಂಗೆ ಸಸ್ಯದ ಅಪಾಯಗಳ ಅರಿವಿದೆ. ಅಂತರಗಂಗೆಯಿಂದ ತುಂಬಿಕೊಂಡಿರುವ ಬೈಚನಹಳ್ಳಿಯ ತಾವರೆಕೆರೆಯಂತಹ ಜಲಮೂಲಗಳನ್ನು ನೋಡಿದಾಗ, ಅವು ‘ನಮ್ಮನ್ನು ಉಳಿಸಿ’ ಎಂದು ಆರ್ತವಾಗಿ ಬೇಡಿಕೊಳ್ಳುತ್ತಿರುವಂತೆ ಭಾಸವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.