ಅದು ಶಾಲೆಯೊಂದರಲ್ಲಿ ಆಯೋಜನೆಗೊಂಡಿದ್ದ ಪ್ರಾಣಿಜನ್ಯ ರೋಗಗಳ ಬಗೆಗಿನ ಅರಿವು ಕಾರ್ಯಕ್ರಮ. ‘ನಿಮ್ಮಲ್ಲಿ ಎಷ್ಟು ಮಕ್ಕಳು ನಾಯಿಯಿಂದ ಕಚ್ಚಿಸಿ ಕೊಂಡಿದ್ದೀರಿ? ಕೈ ಎತ್ತಿ’ ಎಂದು ಕೇಳಿದಾಗ ಸಿಕ್ಕಿದ ಉತ್ತರ ನಿಜಕ್ಕೂ ಗಾಬರಿ ಮೂಡಿಸುವಂತಿತ್ತು! ಅಲ್ಲಿದ್ದ ಸುಮಾರು ಇನ್ನೂರು ಮಕ್ಕಳಲ್ಲಿ ಹೆಚ್ಚುಕಮ್ಮಿ ಅರ್ಧದಷ್ಟು ಎಳೆಯರಿಗೆ ನಾಯಿ ಕಡಿತದ ಅನುಭವ ಆಗಿತ್ತು. ಕೆಲವರು ಮನೆಯಲ್ಲಿ ಸಾಕಿದ ನಾಯಿಯಿಂದ ಕಚ್ಚಿಸಿಕೊಂಡಿದ್ದರೆ, ಮತ್ತೆ ಕೆಲವರಿಗೆ ಬೀದಿನಾಯಿ ಕಚ್ಚಿತ್ತು. ನಾಯಿ ಕಡಿತಕ್ಕೆ ಚುಚ್ಚುಮದ್ದು ತೆಗೆದುಕೊಳ್ಳದ ಮಕ್ಕಳ ಸಂಖ್ಯೆಯೂ ದೊಡ್ಡದಿತ್ತು!

ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಾ ಆತಂಕ ಹೆಚ್ಚಿಸುತ್ತಿದೆ. ಕರ್ನಾಟಕ ಸರ್ಕಾರವು 2022ರಲ್ಲಿ ಮಾರಕ ರೇಬಿಸ್ (ಹುಚ್ಚುನಾಯಿ) ರೋಗವನ್ನು ‘ಘೋಷಿತ ಕಾಯಿಲೆ’ ಪಟ್ಟಿಗೆ ಸೇರಿಸಿದೆ. ಹಾಗಾಗಿ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮಲ್ಲಿ ದಾಖಲಾಗುವ ನಾಯಿ ಕಡಿತದ ಪ್ರಕರಣಗಳನ್ನು ಸರ್ಕಾರಕ್ಕೆ ವರದಿ ಮಾಡುವುದು ಕಡ್ಡಾಯ. ಆರೋಗ್ಯ ಇಲಾಖೆ ಮಾಹಿತಿಯಂತೆ, 2024ರಲ್ಲಿ ನಮ್ಮ ರಾಜ್ಯದಲ್ಲಿ ದಾಖಲಾದ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ 3.57 ಲಕ್ಷ! 2023ರಲ್ಲಿ ಈ ಸಂಖ್ಯೆ ಸುಮಾರು 2.32 ಲಕ್ಷ. ಅಂದರೆ ಒಂದೇ ವರ್ಷದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ 1.25 ಲಕ್ಷದಷ್ಟು ಹೆಚ್ಚಳವಾಗಿದೆ. ಇನ್ನು ನಾಯಿ ಕಡಿತವನ್ನು ನಿರ್ಲಕ್ಷಿಸಿ ವೈದ್ಯಕೀಯ ಸಲಹೆ ಪಡೆಯದವರ ಸಂಖ್ಯೆಯೂ ದೊಡ್ಡದಿದೆ.

ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದಲೇ ನಾಯಿ ಕಡಿತದ ಪ್ರಕರಣಗಳೂ ಏರುತ್ತಿವೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ರೂಪಿಸಿರುವ ನಿಯಮಗಳ ಅನುಸಾರವೇ ಸಂತಾನಶಕ್ತಿ ನಿಯಂತ್ರಣ ಕಾರ್ಯಕ್ರಮಗಳು ನಡೆಯಬೇಕಿದೆ. ಮಂಡಳಿಯಿಂದ ಅನುಮೋದನೆ ಪಡೆದಿರುವ ಪ್ರಾಣಿ ಕಲ್ಯಾಣ ಸಮಿತಿಗಳಷ್ಟೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವ ಅಧಿಕಾರ ಹೊಂದಿರುತ್ತವೆ. ಬೀದಿನಾಯಿಗಳನ್ನು ಹಿಡಿಯುವುದು, ಶಸ್ತ್ರಚಿಕಿತ್ಸೆ ನಡೆಸುವುದು, ಆ ನಂತರ ನಾಲ್ಕು ದಿನಗಳವರೆಗೆ ಅವುಗಳಿಗೆ ಔಷಧೋಪಚಾರ, ಆಹಾರ ನೀಡಿಕೆ, ರೇಬಿಸ್ ಲಸಿಕೆ ಹಾಕುವುದು, ನಂತರದಲ್ಲಿ ಅವುಗಳನ್ನು ಮೂಲ ಸ್ಥಳಕ್ಕೆ ಬಿಡುವುದು ಎಂದೆಲ್ಲಾ ಸೇರಿ ಸಂತಾನಶಕ್ತಿಹರಣ ಪ್ರಕ್ರಿಯೆಗೆ ಪ್ರತಿ ನಾಯಿಗೂ ಹತ್ತಿರ ಹತ್ತಿರ ₹ 2,000ದಷ್ಟು ವೆಚ್ಚವಾಗು ತ್ತದೆ. ನೂರಾರು, ಸಾವಿರಾರು ಸಂಖ್ಯೆಯಲ್ಲಿರುವ ಬೀದಿ ನಾಯಿಗಳನ್ನು ಈ ಪ್ರಕ್ರಿಯೆಗೆ ಒಳಪಡಿಸುವಷ್ಟು ಆರ್ಥಿಕ ಸಂಪನ್ಮೂಲ ಸ್ಥಳೀಯ ಸಂಸ್ಥೆಗಳಲ್ಲಿ ಇಲ್ಲ. ಜೊತೆಗೆ, ನಿಯಮಬದ್ಧವಾಗಿ ಅನುಷ್ಠಾನ ಮಾಡಲು ಕುಶಲ ಮಾನವ ಸಂಪನ್ಮೂಲದ ಕೊರತೆಯೂ ಇದೆ. ಹಾಗಾಗಿ, ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವುದು ಒಂದು ದೀರ್ಘಾವಧಿಯ ಯೋಜನೆಯೇ ಸರಿ.

ನಾಯಿ ಕಡಿತದ ಅಪಾಯಗಳನ್ನು ತಗ್ಗಿಸಲು ಜಾಗೃತಿ ಮೂಡಿಸುವುದೊಂದೇ ನಮ್ಮೆದುರಿಗಿರುವ ಸದ್ಯದ ಮಾರ್ಗ. ಕಡಿತಕ್ಕೆ ಒಳಗಾಗುವವರಲ್ಲಿ 15 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಪ್ರಾಣಿಯ ವರ್ತನೆಯ ಬಗ್ಗೆ ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಆಹಾರ ತಿನ್ನುತ್ತಿರುವ ನಾಯಿಗೆ ಅಡಚಣೆ ಮಾಡಿದಾಗ, ಮರಿ ಹಾಕಿದ ನಾಯಿಯ ಹತ್ತಿರ ಹೋದಾಗ, ಹಿಂಸೆ ಮಾಡಿದಾಗ, ಚಿಕಿತ್ಸೆ ನೀಡುವಾಗ, ಹಿಂಡಿನಲ್ಲಿರುವ ನಾಯಿಗಳನ್ನು ಕೆಣಕಿದಾಗ, ಅವು ಸಂತಾನಾಭಿವೃದ್ಧಿ ಕ್ರಿಯೆಯಲ್ಲಿ ತೊಡಗಿದ್ದಾಗ ತೊಂದರೆ ಮಾಡಿದರೆ ನಾಯಿಗಳು ಕೆರಳಿ ಕಚ್ಚಬಹುದು. ಕೆಲವು ನಾಯಿಗಳು ಸ್ವಭಾವತಃ ಆಕ್ರಮಣಶೀಲ ಆಗಿರುತ್ತವೆ. ಚಿಕ್ಕ ಮಗುವನ್ನು ಒಂಟಿಯಾಗಿ ನಾಯಿಯ ಜೊತೆ ಬಿಡಲೇಬಾರದು. ಎಳೆಯ ಮಕ್ಕಳು ನಾಯಿಗಳಿಗೆ ಬೇಟೆಪ್ರಾಣಿಯಂತೆ ಕಾಣಿಸಿ ಅವು ಆಕ್ರಮಣ ಮಾಡುವ ಸಂಭವ ಇರುತ್ತದೆ!

ನಾಯಿಯ ಹಿಂಡು ದಾಳಿ ಮಾಡಿದರೆ ಓಡಬಾರದು. ಕೈಯಲ್ಲಿರುವ ವಸ್ತುವನ್ನು ಅತ್ತ, ಇತ್ತ ಬೀಸಿ ಅವುಗಳ ಗಮನ ಬೇರೆಡೆಗೆ ಹರಿಯುವಂತೆ ಮಾಡಿ ತಪ್ಪಿಸಿಕೊಳ್ಳುವ ಅವಕಾಶ ಹುಡುಕಬೇಕು. ಬೆರಳುಗಳು ನಾಯಿಯ ಬಾಯಿಗೆ ಸಿಗದ ರೀತಿಯಲ್ಲಿ ಕೈಗಳನ್ನು ಮುಷ್ಟಿ ಮಾಡಿಕೊಂಡು ಅಲುಗಾಡದೆ ನಿಲ್ಲುವುದರಿಂದ ಹೆಚ್ಚಿನ ಕಡಿತದಿಂದ ತಪ್ಪಿಸಿಕೊಳ್ಳಬಹುದು. ಇನ್ನು ಹಿಂಡು ದಾಳಿಯಲ್ಲಿ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡು ಮೊಣಕಾಲುಗಳ ಮಧ್ಯೆ ತಲೆ ಹುದುಗಿಸಿಕೊಂಡು ನೆಲದ ಮೇಲೆ ಚೆಂಡಿನ ರೀತಿಯಲ್ಲಿ ಸುರುಳಿಯಾಗಿ ಕೂರುವುದೂ ಗಂಭೀರ ಅನಾಹುತವನ್ನು ತಪ್ಪಿಸಬಲ್ಲದು.

ಅಕಸ್ಮಾತ್ ನಾಯಿಯಿಂದ ಕಚ್ಚಿಸಿಕೊಂಡರೆ ತಕ್ಷಣ ಗಾಯವನ್ನು ಚೆನ್ನಾಗಿ ತೊಳೆದುಕೊಳ್ಳುವುದು ಅತಿ ಮುಖ್ಯ. ಸೋಪು ಬಳಸಿ ಗಾಯವನ್ನು ಹದಿನೈದು ನಿಮಿಷಗಳವರೆಗೆ ಉಜ್ಜಿ ಉಜ್ಜಿ ತೊಳೆಯುವುದು ರೇಬಿಸ್ ವೈರಾಣುಗಳನ್ನು ನಾಶಗೊಳಿಸುವ ದಿಸೆಯಲ್ಲಿ ಸಹಕಾರಿ. ನಂತರದಲ್ಲಿ ಅಯೋಡಿನ್ ಟಿಂಕ್ಚರ್, ಸ್ಪಿರಿಟ್ನಂತಹ ನಂಜು ನಿವಾರಕ ದ್ರಾವಣ ಇಲ್ಲವೇ ಮುಲಾಮು ಹಚ್ಚಿಕೊಂಡು ಬೇಗನೆ ವೈದ್ಯಕೀಯ ಸಲಹೆ, ಚಿಕಿತ್ಸೆ ಪಡೆಯಬೇಕು. ಗಾಯಕ್ಕೆ ಸುಣ್ಣ, ಖಾರದ ಪುಡಿ, ನೀಲಿ ಪುಡಿ ಹಾಕುವುದು, ಹಸಿಮಣ್ಣು ಮೆತ್ತುವುದು ಖಂಡಿತವಾಗಿಯೂ ಅಪಾಯಕ್ಕೆ ಆಹ್ವಾನವಿತ್ತಂತೆ.

ಹೆಚ್ಚಿನ ಮಕ್ಕಳು ತಂದೆ-ತಾಯಿ ಬೈಯ್ಯುತ್ತಾರೆಂದು ನಾಯಿ ಕಚ್ಚಿದ ವಿಷಯವನ್ನು ಮರೆಮಾಚುತ್ತಾರೆ. ಕಚ್ಚಿದ ನಾಯಿಗೆ ಹುಚ್ಚಿದ್ದರೆ ಕಚ್ಚಿಸಿಕೊಂಡವರ ಜೀವಕ್ಕೂ ಅಪಾಯ. ಹೌದು, ಇಂತಹ ಸಂಭವನೀಯ ಅಪಾಯಗಳಿಂದ ಪಾರಾಗಲು ನಾಯಿಗಳ ವರ್ತನೆಯ ಬಗ್ಗೆ ಅರಿವು ಇರಬೇಕಾದದ್ದು ಅತ್ಯಗತ್ಯ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಪಶು ಆಸ್ಪತ್ರೆ, ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.