ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ | ವಾರದ ಸಂತೆ: ಬದಲಾವಣೆಗೆ ಮುನ್ನುಡಿ

ಗ್ರಾಮಭಾರತದ ಆರ್ಥಿಕ ಬೇರು ಬಲಪಡಿಸುವಲ್ಲಿ ಸಂತೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಗ್ರಾಮಸ್ಥರು ಅರಿತುಕೊಳ್ಳಬೇಕು
Published 8 ಜೂನ್ 2023, 0:52 IST
Last Updated 8 ಜೂನ್ 2023, 0:52 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಕಜಿಡೋಣಿ ಗ್ರಾಮಕ್ಕೆ ಸ್ನೇಹಿತರನ್ನು ಭೇಟಿಯಾಗುವ ಸಲುವಾಗಿ ಈಚೆಗೆ ಹೋಗಿದ್ದೆ. ಈ ಗೆಳೆಯರು ತಮ್ಮ ಗ್ರಾಮದಲ್ಲಿ ಹೊಸದಾಗಿ ವಾರದ ಸಂತೆ ಪ್ರಾರಂಭಿಸಿದ ಖುಷಿಯಲ್ಲಿದ್ದರು.

ವಾರದ ಸಂತೆಯು ಕಜಿಡೋಣಿ ಗ್ರಾಮಕ್ಕೆ ಹೊಸ ಚೈತನ್ಯ, ಕೆಲಸ, ವ್ಯಾಪಾರ, ಆರ್ಥಿಕ ಅನುಕೂಲ ತಂದುಕೊಟ್ಟಿರುವುದು ಅವರ ಪ್ರತಿ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ವಾರದ ಸಂತೆಯು ಗ್ರಾಮಗಳಿಗೆ ಹೊಸ ಅವಕಾಶಗಳ ಅಂಬರ ತೆರೆದು ತೋರಿಸುತ್ತದೆ ಎನ್ನುವುದಕ್ಕೆ ಕಜಿಡೋಣಿ ಒಂದು ಉದಾಹರಣೆಯಾಗಿದೆ.

ಸಂತೆಯ ಪರಿಕಲ್ಪನೆ ಹೊಸದೇನಲ್ಲ. ಹಳಗನ್ನಡ ಕಾವ್ಯದಲ್ಲಿ, ವಚನಗಳಲ್ಲಿ ಸಂತೆಯ ಉಲ್ಲೇಖವನ್ನು ಕಾಣಬಹುದಾಗಿದೆ. ‘ನಾ ಸಂತೆಗೆ ಹೋಗಿನಿ, ಆಕೆ ತಂದಿದ್ದಳು ಬೆಣ್ಣಿ’ ಎಂಬ ಹಳೆಯ ಜಾನಪದ ಹಾಡು ಈಗಲೂ ಕಾರ್ಯಕ್ರಮಗಳಲ್ಲಿ ರಮ್ಯವಾಗಿ ಕೇಳಿಸುತ್ತದೆ. ಆದರೆ ಬಹಳಷ್ಟು ಹಳ್ಳಿಗಳಲ್ಲಿ ವಾರದ ಸಂತೆ ನಡೆಯುವುದಿಲ್ಲ. ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ವೇಗ ಒದಗಿಸುವ ಸಂತೆ ನಡೆಸುವ ಬಗ್ಗೆ ಗ್ರಾಮಸ್ಥರು ಆಸಕ್ತಿ ವಹಿಸುವುದು ಬಹಳ ಅವಶ್ಯವಾಗಿದೆ.

ಅಣೆಕಟ್ಟುಗಳು, ಕೈಗಾರಿಕೆಗಳು ಹಾಗೂ ವಿವಿಧ ಯೋಜನೆಗಳಿಂದಾಗಿ ಸ್ಥಳಾಂತರಗೊಂಡ ಜನರಿಂದ ಹೊಸ ಊರುಗಳು ಹುಟ್ಟಿಕೊಂಡಿವೆ. ಒಂದೇ ಸಮಾಜದ ಜನರು ಹೊಸ ಹೊಸ ತಾಂಡಾಗಳನ್ನು ನಿರ್ಮಿಸಿಕೊಂಡಿದ್ದಾರೆ (ಉದಾಹರಣೆಗೆ, ಲಂಬಾಣಿ ತಾಂಡಾಗಳು). ಈ ಎಲ್ಲ ಜನವಸತಿ ಪ್ರದೇಶಗಳಲ್ಲಿ ವಾರದ ಸಂತೆ ಆರಂಭಿಸುವುದರಿಂದ ಜನಜೀವನಕ್ಕೆ ಬಹಳ ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಮಹಿಳೆಯರಿಗೆ ಸಂತೆ ಹೊಸ ಉದ್ಯೋಗಾವಕಾಶವನ್ನು ಕಲ್ಪಿಸುತ್ತದೆ ಮತ್ತು ಮಹಿಳಾ ಸಬಲೀಕರಣಕ್ಕೆ ಇದು ಸರಳ ಮೆಟ್ಟಿಲು ಸಹ ಆಗುತ್ತದೆ.

ಹಳ್ಳಿಗಳಲ್ಲಿ ವಾರದ ಸಂತೆ ಆರಂಭಿಸುವುದು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಸಂತೆಯನ್ನು ಆರಂಭಿಸುವ ಮತ್ತು ನಿರ್ವಹಿಸುವ ಪೂರ್ಣ ಅಧಿಕಾರ ಗ್ರಾಮ ಪಂಚಾಯಿತಿಗೆ ಇದೆ. ಗ್ರಾಮ ಪಂಚಾಯಿತಿಯ ಸದಸ್ಯರು ಸಭೆ ನಡೆಸಿ, ವಾರದಲ್ಲಿ ಒಂದು ನಿಗದಿತ ದಿನದಂದು ಗ್ರಾಮದ ವಿಶಾಲ ಸ್ಥಳದಲ್ಲಿ ಸಂತೆ ನಡೆಸುವ ಬಗ್ಗೆ ನಿರ್ಧರಿಸಬೇಕು. ಈ ನಿರ್ಧಾರವನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿಗೆ ಮತ್ತು ತಹಶೀಲ್ದಾರರಿಗೆ ಲಿಖಿತವಾಗಿ ತಿಳಿಸಬೇಕು. ತಹಶೀಲ್ದಾರ್ ಶಾಂತಿ, ಶಿಸ್ತು, ಸ್ವಚ್ಛತೆ ಕಾಪಾಡುವ ಸೂಚನೆಗಳನ್ನು ನೀಡಿ ಒಪ್ಪಿಗೆ ಪತ್ರ ನೀಡುತ್ತಾರೆ. ಪಂಚಾಯಿತಿಯವರು ಡಂಗುರ ಸಾರಿ, ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ಕರಪತ್ರಗಳನ್ನು ಹಂಚಿ ಸಂತೆ ನಡೆಸುವ ಬಗ್ಗೆ ಪ್ರಚಾರ ಮಾಡಬೇಕು.

ಬೇರೆ ಸ್ಥಳದಿಂದ ಬಂದು ವ್ಯಾಪಾರ ಮಾಡುವವರಿಗೆ ಕೆಲವು ವಾರ ಪ್ರವಾಸದ ಖರ್ಚು, ಊಟದ ವ್ಯವಸ್ಥೆ ಮಾಡಬೇಕು. ವ್ಯಾಪಾರ ವಹಿವಾಟು ಚೆನ್ನಾಗಿ ಬೆಳೆದ ಮೇಲೆ ವ್ಯಾಪಾರಸ್ಥರಿಂದ ಸ್ವಲ್ಪ ಬಾಡಿಗೆಯನ್ನು ಪಂಚಾಯಿತಿ ವಸೂಲು ಮಾಡಬಹುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ, ಸಂತೆಯಲ್ಲಿ ಭಾಗವಹಿಸುವ ವ್ಯಾಪಾರಸ್ಥರಿಗೆ ಶೆಡ್ಡುಗಳು, ವ್ಯಾಪಾರ ವಹಿವಾಟಿಗೆ ಬೇಕಾಗುವ ಇತರ ಅನುಕೂಲಗಳನ್ನು ಕಲ್ಪಿಸಲು ಅವಕಾಶವಿದೆ.

ಕೆಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎರಡು ಅಥವಾ ಮೂರು ಹಳ್ಳಿಗಳು ಬರುತ್ತವೆ. ತನ್ನ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸಂತೆ ಆರಂಭಿಸಲು ಪಂಚಾಯಿತಿಗೆ ಅಧಿಕಾರವಿದೆ.

ಗ್ರಾಮಸ್ಥರು ಬೇರೆ ಊರುಗಳಿಗೆ ಹೋಗಿ ಸಂತೆ ಮಾಡಿಕೊಂಡು ಬರುವುದಕ್ಕೆ ಒಂದು ದಿನ ವ್ಯರ್ಥವಾಗುತ್ತದೆ. ಸಂಚಾರಕ್ಕೆ ಖರ್ಚು ಮಾಡಬೇಕಾಗುತ್ತದೆ. ತಮ್ಮ ಗ್ರಾಮದಲ್ಲೇ ಸಂತೆ ನಡೆದರೆ ಸುಲಭವಾಗಿ ಸಮಯ ಹೊಂದಿಸಿಕೊಳ್ಳಬಹುದು.

ಈಗ ಆನ್‌ಲೈನ್ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಅದು ಆಕರ್ಷಕವಾಗಿಯೂ ಕಾಣುತ್ತಿದೆ. ಆದರೆ ಸಂತೆಯಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿ ವಸ್ತುಗಳನ್ನು ಪರಿಶೀಲಿಸಿ, ಬೆಲೆಯನ್ನು ಚೌಕಾಸಿ ಮಾಡಿ, ತಮಗೆ ಬೇಕಾದಷ್ಟನ್ನು ಮಾತ್ರ ಖರೀದಿಸುವ ಕ್ರಿಯೆ ನಿಜಕ್ಕೂ ಚೇತೋಹಾರಿಯಾದದ್ದು.

ಸಂತೆ ಸ್ಥಳೀಯ ರೈತರಿಗೆ ವರದಾನವಾಗುತ್ತದೆ. ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ರೈತ ದುಡಿದದ್ದೆಲ್ಲ ಮಧ್ಯವರ್ತಿಗಳ ಪಾಲು ಎನ್ನುವ ಮಾತೊಂದು ಇದೆ. ಗ್ರಾಮೀಣ ಸಂತೆಯಿಂದ ಮಧ್ಯವರ್ತಿಗಳ ಹಾವಳಿಯನ್ನು ಸುಲಭವಾಗಿ ತಪ್ಪಿಸಬಹುದು. ಗ್ರಾಹಕರಿಗೂ ತಾಜಾ ಹಣ್ಣು, ಹಾಲು, ಕಾಯಿಪಲ್ಲೆ ದೊರೆಯುತ್ತವೆ.

ಹಳ್ಳಿಗಳ ಸಂತೆಯಲ್ಲಿ ₹ 50 ಲಕ್ಷದಿಂದ ಎರಡು ಕೋಟಿಯವರೆಗೆ ವ್ಯವಹಾರ ನಡೆಯುವ ಮಾಹಿತಿ ಇದೆ. ಕಜಿಡೋಣಿಯ ಪ್ರಗತಿಪರ ರೈತ ಬಸಪ್ಪ ಅವರು ಹೇಳುವಂತೆ, ‘ನಾನು 260 ಮಾವಿನ ಮರಗಳನ್ನು ಬೆಳೆಸಿದ್ದೇನೆ. ಹಣ್ಣುಗಳನ್ನು ಏಜೆಂಟರು ಖರೀದಿಸಿ ಬೇರೆ ನಗರಗಳಿಗೆ ಕಳಿಸುತ್ತಿದ್ದರು. ಈಗ ನಮ್ಮೂರ ಸಂತೆಯಲ್ಲಿಯೇ ಮಾರುತ್ತಿದ್ದೇನೆ. ಹೆಚ್ಚಿಗೆ ಆದಾಯ ಬರುತ್ತಿದೆ ಮಾತ್ರವಲ್ಲ, ನಮ್ಮ ಹಣ್ಣಿನ ರುಚಿಯ ಬಗ್ಗೆ ಇಡೀ ಗ್ರಾಮ ಮೆಚ್ಚುಗೆ ಮಾತು ಹೇಳುತ್ತಿದೆ. ಇದು ನಮ್ಮೂರ ಸಂತೆಯಿಂದ ಪಡೆದ ಸಂಭ್ರಮ’.

ಸಂತೆಯಿಂದ ಗ್ರಾಮದ ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸಹಜವಾಗಿ ಆರಂಭವಾಗುತ್ತದೆ. ಗ್ರಾಮದ ಕುಶಲಕರ್ಮಿಗಳಿಗೆ ಉದ್ಯೋಗ ದೊರೆಯುತ್ತದೆ. ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಗಾಂಧೀಜಿ ಹೇಳುತ್ತಿದ್ದರು. ಗ್ರಾಮಭಾರತದ ಆರ್ಥಿಕ ಬೇರು ಬಲಪಡಿಸುವಲ್ಲಿ ಸಂತೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಗ್ರಾಮಸ್ಥರು ಅರಿತುಕೊಳ್ಳಬೇಕು.

ನಿಮ್ಮ ಹಳ್ಳಿಯಲ್ಲಿ ಸಂತೆ ನಡೆಯುವುದಿಲ್ಲವೇ? ಹಾಗಿದ್ದರೆ ತಡಮಾಡದೆ ಸಂತೆ ಆರಂಭಕ್ಕೆ ಮುಂದಾಗಿ. ಹೆಚ್ಚು ಖರ್ಚು, ಶ್ರಮವಿಲ್ಲದೆ ಬಹು ದೊಡ್ಡ ಬದಲಾವಣೆಗೆ ಮುನ್ನುಡಿ ಬರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT