ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಿರಿಯ ವಿದ್ಯಾರ್ಥಿಯೊಬ್ಬರು ಎರಡು ದಿನಗಳ ಹಿಂದೆ ಕರೆ ಮಾಡಿದರು. ‘ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ (ಹಾರ್ಟ್ ಲ್ಯಾಂಪ್) ಕೃತಿಗೇನೊ ಬುಕರ್ ಬಂತು. ಆದರೆ, ನಮ್ಮಗಳ ಎದೆಯ ಹಣತೆಯಲ್ಲಿ ಸಮಾನತೆ, ಸಾಮರಸ್ಯದ ಬೆಳಕು ಮೂಡುವುದು ಯಾವಾಗ?’ ಎಂದು ಪ್ರಶ್ನಿಸಿದರು. ‘ಪರಿಶಿಷ್ಟರಿಗೆ ಜಾತಿ ಹೇಳಿಕೊಳ್ಳಲು ಇಕ್ಕಟ್ಟು’ ಎಂಬ ಪತ್ರಿಕಾ ವರದಿಯನ್ನು ನೋಡಿ ಈ ರೀತಿ ಕೇಳುತ್ತಿದ್ದಾರೆಂದು ತಕ್ಷಣ ಅರ್ಥವಾಯಿತು.

ಮೀಸಲಾತಿ ಕಸಿಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳ ನಡುವೆ ಗಣತಿಯಲ್ಲಿ ಜಾತಿ ಹೇಳಿಕೊಳ್ಳಲಾಗದೆ ಪರಿಶಿಷ್ಟರು ಸಂಕಟದಿಂದ ಕುಸಿಯುವಂತಾಗಿದೆ ಎಂಬ ಸುದ್ದಿ, ಮಾನವ ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ. ಸಂವಿಧಾನ ಜಾರಿಯಾಗಿ 75 ವರ್ಷಗಳೇ ಕಳೆದಿದ್ದರೂ ವ್ಯಕ್ತಿ ಗೌರವ, ಭ್ರಾತೃತ್ವದ ಆಶಯಗಳು ಕನ್ನಡಿಯೊಳಗಿನ ಗಂಟಿನಂತೆ ಭಾಸವಾಗುತ್ತಿವೆ.

ವಿದ್ಯಾವಂತರೇ ಹೆಚ್ಚಿರುವ ನಗರಗಳಲ್ಲಿಯೂ ಮನೆಗಳನ್ನು ಬಾಡಿಗೆಗೆ ಕೊಡಲು ಜಾತಿಯನ್ನು ಕೇಳುವ ಸಂಗತಿ, ವಿಜ್ಞಾನ– ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿರುವ ಮಾನವನ ಮತಿ ಅಧೋಗತಿಯತ್ತ ಸಾಗುತ್ತಿರುವ ಸೂಚಕದಂತಿದೆ. ಜಾತೀಯತೆಯ ಪ್ರದರ್ಶನ ಬಹಿರಂಗವಾಗಿ ಕಡಿಮೆಯಾಗಿದ್ದರೂ ಜನರ ಮನೆ– ಮನಗಳಲ್ಲಿ ಇನ್ನೂ ಜೀವಂತವಾಗಿರುವುದರ ಬಗ್ಗೆ ನಾಗರಿಕ ಸಮಾಜ ಚಿಂತಿಸಬೇಕಿದೆ.

ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ‘ವಿಶ್ವಮಾನವ ಸಂದೇಶ’ ಸಾರಿದ ಕುವೆಂಪು ಅವರ ಜಯಂತಿಗಳನ್ನು ಪ್ರತಿವರ್ಷ ನಾಡಿನ ಉದ್ದಗಲಕ್ಕೂ ಆಚರಿಸುತ್ತೇವೆ. ಆದರೆ, ಈ ಆಚರಣೆಗಳನ್ನು ಅಣಕಿಸುವ ಘಟನೆಗಳು ನಡೆಯುತ್ತಲೇ ಇವೆ. ಜಾತಿ ಕಾರಣಕ್ಕೆ ಊರಿಂದ ಬಹಿಷ್ಕಾರ ಹಾಕುವ, ದೇಗುಲ ಪ್ರವೇಶ ಹಾಗೂ ಸಹಪಂಕ್ತಿ ಭೋಜನವನ್ನು ನಿರಾಕರಿಸುವ, ಕುಡಿಯುವ ನೀರಿಗೂ ಅಡ್ಡಿಪಡಿಸುವ ಅಮಾನವೀಯ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಇಷ್ಟಿದ್ದರೂ ‘ಜಾತಿ ಎಲ್ಲಿದೆ? ಅದೆಲ್ಲವೂ ಇತಿಹಾಸ’ ಎಂದು ಹೇಳುವುದು ಆತ್ಮವಂಚನೆಯ ಮಾತೇ ಸರಿ.

ಭಾರತ ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆ ಯನ್ನು ನಿಷೇಧಿಸಿದೆ. ಸಂವಿಧಾನದ 23ನೇ ವಿಧಿಯು ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಭರವಸೆ ನೀಡಿದೆ. ಆದರೆ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜಾತಿಯ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ನೋಡುವ ಮೌಢ್ಯ ಮತ್ತು ಜಾತಿ ಕಾರಣದಿಂದಾಗಿ ನಡೆಯುವ ಶೋಷಣೆ ಕೊನೆಗೊಂಡಿಲ್ಲ.

‘ಸಂಪೂರ್ಣ ಸಮಾನತೆ ಎನ್ನುವುದು ಕಲ್ಪನೆಯೇ ಇರಬಹುದು. ಆದರೆ, ಅದನ್ನು ಆಡಳಿತ ತತ್ವವಾಗಿ ಅಂಗೀಕರಿಸಲೇಬೇಕು. ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯದೇ ಹೋದರೆ ಕಾನೂನಾತ್ಮಕವಾಗಿ ಎಂತಹ ಸ್ವಾತಂತ್ರ್ಯವನ್ನು ಪಡೆದರೂ ಉಪಯೋಗವಿಲ್ಲ’ ಎಂಬ ಬಾಬಾಸಾಹೇಬರ ಮಾತು ಈ ದಿಸೆಯಲ್ಲಿ ಗಮನಾರ್ಹ.

ಶರಣರ, ಸಂತರ, ಸಮಾಜ ಸುಧಾರಕರ ತ್ಯಾಗ, ಬಲಿದಾನಗಳ ಫಲವೋ ದಮನಿತ ಸಮುದಾಯಗಳಲ್ಲಿನ ಜಾಗೃತಿಯ ಕಾರಣಕ್ಕೋ ಅಥವಾ ಕಾನೂನಿನ ಭಯದಿಂದಲೋ ಇಂದು ಜಾತಿ ಪದ್ಧತಿಯ ಕಬಂಧಬಾಹುಗಳು ಸಡಿಲಗೊಂಡಂತೆ ಗೋಚರಿಸುತ್ತಿವೆ. ಇದಕ್ಕೆ ಇನ್ನೊಂದು ತುದಿಯಲ್ಲಿ, ಜಾತಿಯನ್ನು ಸದೃಢಗೊಳಿಸಿ ಪೋಷಿಸುವ ಬಾಹುಗಳು ಬಲಿಷ್ಠವಾಗುತ್ತಿರುವ ಸೂಚನೆಗಳೂ ಕಾಣಿಸುತ್ತಿವೆ. ಇದು ದುರದೃಷ್ಟಕರ. ಸಾಮರಸ್ಯದ ಬದುಕು ಸಾಧ್ಯವಾಗಬೇಕಾದರೆ ‘ಬರು ಸಟಗನ ಭಕ್ತಿ ದಿಟವೆಂದು ನಚ್ಚಲು ಬೇಡ, ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ’ ಎನ್ನುವ ವಚನಕಾರ ಜೇಡರ ದಾಸಿಮಯ್ಯನ ಮಾತನ್ನು ಅರ್ಥೈಸಿಕೊಂಡು, ಎಚ್ಚರಿಕೆ ಮತ್ತು ತಿಳಿವಳಿಕೆಯ ಹೆಜ್ಜೆಗಳನ್ನಿಡ ಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು.

ಜಾಗತೀಕರಣದೊಂದಿಗೆ ನಗರೀಕರಣ ತೀವ್ರಗೊಂಡಂತೆ ನಮ್ಮ ಅಂತಃಕರಣವು ಸೊರಗುತ್ತಿದೆ. ಈ ಹೊತ್ತಿನಲ್ಲಿ ಮೌಢ್ಯಗಳ ವಿರುದ್ಧ ವೈಚಾರಿಕ ಕ್ರಾಂತಿಯ ಕಿಡಿ ಹೊತ್ತಿಸುವ, ಮಹನೀಯರು ಹಚ್ಚಿ ಹೋದ ಅರಿವಿನ ಹಣತೆಗೆ ಬತ್ತಿ ಹೊಸೆದು ಬೆಳಗಿಸುವ, ಅವರು ನಿಲ್ಲಿಸಿದ ರಥವನ್ನು ಮುನ್ನಡೆಸುವ ನವಪೀಳಿಗೆಯನ್ನು ಸಜ್ಜುಗೊಳಿಸುವ ತುರ್ತು ನಮ್ಮ ಮುಂದಿದೆ. ಸಮಾಜಕ್ಕೆ ಅಂಟಿರುವ ಜಾತಿ ರೋಗವನ್ನು ಗುಣಪಡಿಸುವ ವೈದ್ಯರಾಗಿ ಚಿಕಿತ್ಸೆ ನೀಡುವ ಹೊಣೆಯನ್ನು ಯುವಪೀಳಿಗೆ ಹೊರಬೇಕಾಗಿದೆ.

ಮೇಲರಿಮೆ ಮತ್ತು ಕೀಳರಿಮೆಯ ಎರಡೂ ರೋಗಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ, ‘ಸಮಾಜವು ಸಮಾನತೆಯನ್ನು ಹುಟ್ಟು ಹಾಕುವುದಕ್ಕೆ ಹೆಚ್ಚು ಒತ್ತು ನೀಡಬೇಕು... ಬುದ್ಧನ ಮಾರ್ಗ ಅನುಸರಣೆಯಿಂದ ಮಾತ್ರ ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯ ಉಳಿಯಲು ಸಾಧ್ಯ’ ಎಂಬ ಬಾಬಾಸಾಹೇಬರ ಮಾತುಗಳನ್ನು ಪಾಲಿಸಬೇಕಿದೆ. ಆ ಮೂಲಕ, ಬಾಹ್ಯಾಕಾಶದಲ್ಲಿ ಬೆಳೆ ಬೆಳೆಯಲು ಹೊರಡುವ ನಮಗೆ ಮನದ ಕೊಳೆಯನ್ನು ತೊಳೆಯುವುದು ಅಸಾಧ್ಯವೇನೂ ಅಲ್ಲವೆಂಬ ಅರಿವನ್ನು ಸಮಾಜದಲ್ಲಿ ಮೂಡಿಸಬೇಕಿದೆ.

ಅಸ್ಪೃಶ್ಯತೆ ಮತ್ತು ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಸರ್ಕಾರ ಜಾರಿ ಮಾಡಿರುವ ‘ವಿನಯ ಸಾಮರಸ್ಯ ಯೋಜನೆ’ಯನ್ನು ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು. ಜೊತೆಗೆ ‘ದೇಶವೆಂದರೆ ಮಣ್ಣಲ್ಲ, ಮನುಷ್ಯರು’ ಎಂಬ ತೆಲುಗು ಕವಿ ಗುರಜಾಡ ಅಪ್ಪಾರಾವ್ ಅವರ ಮಾತುಗಳನ್ನು ನಮ್ಮೆಲ್ಲರ ಎದೆಗಿಳಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಮನುಷ್ಯ ಪ್ರಜ್ಞೆ ಜಾಗೃತಗೊಂಡಾಗ ಮಾತ್ರ ಸಮಾನತೆಯ ಸಮಾಜ ಸಾಕಾರಗೊಳ್ಳಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.