ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಔಷಧ ಚೀಟಿ: ಇರಲಿ ಮಧ್ಯಮ ಮಾರ್ಗ

ಡಾ. ಪಿ.ಎಸ್‌.ಶಂಕರ್‌
Published : 18 ಸೆಪ್ಟೆಂಬರ್ 2024, 22:38 IST
Last Updated : 18 ಸೆಪ್ಟೆಂಬರ್ 2024, 22:38 IST
ಫಾಲೋ ಮಾಡಿ
Comments

ಕನ್ನಡದಲ್ಲಿ ಔಷಧ ಚೀಟಿ ಬರೆಯುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂಗ್ಲಿಷ್‌ನಲ್ಲೇ ಬರೆದರೆ ಗ್ರಾಮೀಣ ರೋಗಿಗಳಿಗೆ ಅರ್ಥವಾಗುವುದಿಲ್ಲ, ಆದ್ದರಿಂದ ಕನ್ನಡದಲ್ಲೇ ಬರೆಯಬೇಕು ಎಂಬುದು ಒಂದು ವಾದ. ಇನ್ನೊಂದು ಕಡೆ, ಸರಳ ಕನ್ನಡವನ್ನೇ ಬರೆಯಲು ತಿಣುಕುವ ವೈದ್ಯರು ಇನ್ನುಮೇಲೆ ‘ಅಝಿತ್ರೊಮೈಸಿನ್‌’, ‘ಮೆಟ್ರೋನಿಡಝೊಲ್‌’ನಂತಹ ಕ್ಲಿಷ್ಟ ಪದಗಳನ್ನು ಬರೆಯಲು ಹೋಗಿ ಇನ್ನೇನೋ ಬರೆದು, ರೋಗಿಗಳು ಜೀವನ್ಮರಣದ ತೊಂದರೆಗೆ ಒಳಪಡುವ ಸಂದರ್ಭ ತಲೆದೋರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಅನೇಕ ವೈದ್ಯರು ಇಂಗ್ಲಿಷ್‌ನಲ್ಲಿ ನೀಡುವ ಔಷಧ ಚೀಟಿಯನ್ನು ನೋಡಿದರೆ, ಅವರು ಬರೆದಿರುವುದನ್ನು (ಗೀಚಿರುವುದನ್ನು) ಔಷಧದ ಅಂಗಡಿಗಳಲ್ಲಿ ಕೆಲಸ ಮಾಡುವವರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದು ನನಗಿನ್ನೂ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಇಂದು ಕನ್ನಡ ಮಾಧ್ಯಮದಲ್ಲಿ ಮಾತ್ರವಲ್ಲ ಇಂಗ್ಲಿಷ್‌ ಮಾಧ್ಯಮವೂ ಸೇರಿ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ಅವರು ಹನ್ನೆರಡನೇ ತರಗತಿವರೆಗೆ ಎಷ್ಟು ಕಲಿತಿರುತ್ತಾರೋ ಅಷ್ಟೇ ಇರುತ್ತದೆ. ವಿಜ್ಞಾನ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ದೊರಕಿಸಿಕೊಂಡು ವೈದ್ಯ ಶಿಕ್ಷಣ ಪಡೆಯಬೇಕೆಂಬುದರ ಕಡೆ ಅವರ ಗಮನ ಇರುತ್ತದೆಯೇ ವಿನಾ ಭಾಷೆಗಳ ಮೇಲಿರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳು ಮನೆಗಳಲ್ಲಿ ಕನ್ನಡ ಪತ್ರಿಕೆಗಳನ್ನು (ಅದೂ ತರಿಸುತ್ತಿದ್ದರೆ ಮಾತ್ರ) ಓದುವ ಹವ್ಯಾಸವನ್ನು ಇರಿಸಿಕೊಂಡಿರುವುದಿಲ್ಲ.

ಬಹಳ ದಿನಗಳ ಹಿಂದಿನ ಪ್ರಸಂಗ. ಶಿಕ್ಷಕರ ಆಯ್ಕೆಯ ಸಂದರ್ಶನಕ್ಕೆ ಸಾಂಬ್ರಾಣಿ ಕುಟುಂಬದಿಂದ ಒಬ್ಬರು ಬಂದಿದ್ದರು. ಅವರಿಗೆ ಬೋರ್ಡಿನ ಮೇಲೆ ಆ ಹೆಸರನ್ನು ಬರೆಯುವಂತೆ ಹೇಳಿದೆ. ಆಕೆ ‘ಸಂಬರಣೆ’ ಎಂದು ಬರೆದಿದ್ದಳು.

ವಿಜ್ಞಾನ ವಿಷಯಗಳಿಗೆ ಕೊಟ್ಟಿರುವಷ್ಟು ಮಹತ್ವವನ್ನು ಭಾಷಾ ಅಧ್ಯಯನಕ್ಕೂ ನೀಡಿದರೆ ಮಕ್ಕಳ ಭಾಷೆ ಸುಧಾರಿಸುತ್ತದೆ, ಬರವಣಿಗೆ ಸುಧಾರಿಸುತ್ತದೆ. ಈಗ ಪ್ರ್ಯಾಕ್ಟೀಸ್‌ ಮಾಡುತ್ತಿರುವ, ಕನ್ನಡ ಮಾತೃಭಾಷೆಯ (ಇತರರನ್ನು ಬಿಡಿ) ವೈದ್ಯರಿಗೆ, ಮುಂದೆ ವೈದ್ಯರಾಗುವ ಕನ್ನಡದ ವೈದ್ಯ ವಿದ್ಯಾರ್ಥಿ ಗಳಿಗೆ ಕನ್ನಡದಲ್ಲಿ ತಪ್ಪಿಲ್ಲದೆ, ಅರ್ಥವಾಗುವ ರೀತಿ ಬರೆಯುವುದು ಕಷ್ಟದ ಕೆಲಸ. ಹಾಗೆಂದಾಕ್ಷಣ ಇದು ಅಸಾಧ್ಯದ ಕೆಲಸವೇನಲ್ಲ.

ಆದರೂ ಈ ವಿವಾದದಲ್ಲಿ ಮಧ್ಯಮ ಮಾರ್ಗ ಎಂಬುದೂ ಇದೆಯಲ್ಲ? ಔಷಧ ಚೀಟಿಯಲ್ಲಿ ಔಷಧಗಳ ಹೆಸರನ್ನು ಇಂಗ್ಲಿಷ್‌ನಲ್ಲೇ ಬರೆಯಲಿ. ಆದರೆ ಔಷಧಿ ತೆಗೆದುಕೊಳ್ಳುವ ಕ್ರಮ (ದಿನಕ್ಕೆ ಒಮ್ಮೆ, ಎರಡು ಬಾರಿ, ಮೂರು ಬಾರಿ), ಹಗಲೋ ರಾತ್ರಿಯೋ, ಎದ್ದೊಡನೆಯೋ, ಊಟಕ್ಕಿಂತ ಮೊದಲೋ, ಊಟದ ನಂತರವೋ ಎಂಬುದನ್ನು ಔಷಧ ಚೀಟಿಯಲ್ಲಿ ಸ್ಪಷ್ಟವಾಗಿ ಬರೆದರೆ, ರೋಗಿ ಇಲ್ಲವೆ ರೋಗಿಯ ಆರೈಕೆಯಲ್ಲಿ ನಿರತರಾಗಿರುವವರು ಸುಲಭವಾಗಿ ತಿಳಿದುಕೊಳ್ಳಬಲ್ಲರು. ಉದಾಹರಣೆಗೆ, ಅಂತಹ ಔಷಧದ ಚೀಟಿ ಹೀಗಿರಬಹುದು:

1. Azithromycin 250 mg 10 tabs– ಈ ಮಾತ್ರೆಯನ್ನು ದಿನಕ್ಕೆ ಎರಡು ಬಾರಿ ಸೇವಿಸಿ.
2. Electrol 4 Packets– ಪಾಕೀಟಿನಲ್ಲಿರುವ ಚಮಚೆಯನ್ನು ತುಂಬುವಷ್ಟು ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕರಗಿಸಿ ದಿನಕ್ಕೆ ನಾಲ್ಕು ಬಾರಿ ಕುಡಿಯಲು ಕೊಡಿ.
3. Statin 10 mg 30 tabs– ರಾತ್ರಿ ಮಲಗುವ ಮೊದಲು ಒಂದು ಮಾತ್ರೆ ತೆಗೆದುಕೊಳ್ಳಿ.
4. L-Thyroxin 100 mcg 100 Tabs– ಬಾಟಲಿಯಲ್ಲಿರುವ ಒಂದು ಗುಳಿಗೆಯನ್ನು ಮುಂಜಾನೆ ಎದ್ದಕೂಡಲೇ ನುಂಗಬೇಕು.

ಸಾಮಾನ್ಯವಾಗಿ ಬರೆಯುವ ಔಷಧ ಚೀಟಿಯಲ್ಲಿ ಇಷ್ಟೇ ವಿವರ ಇರುತ್ತದೆ. ಬರೆಯುತ್ತಾ ಹೋದಂತೆ ಅದೇ ರೂಢಿಯಾಗಿಬಿಡುತ್ತದೆ. ಔಷಧದ ಚೀಟಿಯಲ್ಲಿನ ಬರವಣಿಗೆಯ ಸಮಸ್ಯೆ ನಮ್ಮ ರಾಜ್ಯ ಅಥವಾ ದೇಶಕ್ಕೆ ಸೀಮಿತವಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರೋಗಿಗೆ ವಿವರಿಸುವಾಗ, ಬಿಳಿಯ ಗುಳಿಗೆ ದಿನಕ್ಕೆ ಎರಡು ಸಲ, ಕೆಂಪು ಗುಳಿಗೆ ರಾತ್ರಿ ತೆಗೆದುಕೊಳ್ಳ ಬೇಕು ಎಂದು ವಿವರಿಸುತ್ತಾರೆ.

ಇಂದು ಪ್ರಚಲಿತವಿರುವ ಪದ್ಧತಿಯಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು ಔಷಧ ಚೀಟಿಯನ್ನು ವೈದ್ಯರಿಂದ ಪಡೆದ ಮೇಲೆ, ಅವರ ಸೂಚನೆಗಳ ಬಗ್ಗೆ ಮತ್ತೆ ಕೇಳಿಕೊಳ್ಳುತ್ತಾರೆ. ನಂತರ ತಮ್ಮದೇ ರೀತಿಯಲ್ಲಿ ಗುರುತು ಹಾಕಿಕೊಳ್ಳುತ್ತಾರೆ. ಅನೇಕ ವರ್ಷಗಳಿಂದ ನಡೆದುಬಂದ ಈ ವಿಧಾನಕ್ಕೇ ಹೊಂದಿಕೊಂಡಿದ್ದಾರೆ. ಆದರೆ ಬದಲಾವಣೆ ಜಗದ ನಿಯಮವಲ್ಲವೇ?

ಸರ್ಕಾರಿ ವೈದ್ಯರನ್ನೂ ಒಳಗೊಂಡು ಎಲ್ಲ ವೈದ್ಯರಿಗೆ ಕನ್ನಡದಲ್ಲಿ ಬರೆಯುವ ತರಬೇತಿಯನ್ನು ನಿಯಮಿತವಾಗಿ ನೀಡಿದರೆ ಅವರು ಅದನ್ನೇ ರೂಢಿ ಮಾಡಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿಯೇ ಬೇರೆ ರಾಜ್ಯಗಳಿಗೆ ಇಲ್ಲವೇ ಹೊರ ದೇಶಗಳಿಗೆ ಹೋದರೆ ಅವರು ಅಲ್ಲಿನ ನೆಲದ ಭಾಷೆಯನ್ನು ನಾಲ್ಕಾರು ತಿಂಗಳು ಕಲಿತು ಅದರಲ್ಲಿಯೇ ವ್ಯವಹರಿಸುತ್ತಾರೆ. ಹಾಗಿರುವಾಗ, ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಕಷ್ಟದ ಕೆಲಸವೇನಲ್ಲ.

ವೈದ್ಯರಿಗೆ ಕನ್ನಡದಲ್ಲಿ ಬರೆಯುವ ತರಬೇತಿಯನ್ನು ವಾರದಲ್ಲಿ ಒಂದು ದಿನ ಕೊಡುವ ರೂಢಿಯನ್ನು ಪ್ರತಿ ವೈದ್ಯ ಕಾಲೇಜು ತನ್ನ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡರೆ, ಇನ್ನು ನಾಲ್ಕೈದು ವರ್ಷಗಳಲ್ಲಿ ಎಲ್ಲ ವೈದ್ಯರೂ ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವುದು ಸಾಧ್ಯ. ವೈದ್ಯ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವುದರ ಬಗ್ಗೆ ರಾಜೀವ್‌ ಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯ ಈಗಾಗಲೇ ಸಮಿತಿಯೊಂದರ ಮೂಲಕ ನೀಡಿರುವ ಕಾರ್ಯವಿಧಾನವನ್ನು ಅಳವಡಿಸಿಕೊಂಡರೆ, ಯಾವ ಸಮಸ್ಯೆಯೂ ಉದ್ಭವವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT