ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಚಿತ್ರನಗರಿ ನಿರ್ಮಾಣ ತುರ್ತು ಅಗತ್ಯವೇ?

ಚಿತ್ರರಂಗವು ಗುಣಾತ್ಮಕವಾಗಿ ಏಳಿಗೆ ಹೊಂದುವ ದೃಷ್ಟಿಯಿಂದ ಸರ್ಕಾರ ತುರ್ತಾಗಿ ಕೈಗೊಳ್ಳಬೇಕಿರುವ ಸುಧಾರಣಾ ಕ್ರಮಗಳು ಮತ್ತು ಉತ್ತೇಜಕ ಹೆಜ್ಜೆಗಳು ಹಲವು ಇವೆ
Published 15 ಜೂನ್ 2023, 19:48 IST
Last Updated 15 ಜೂನ್ 2023, 19:48 IST
ಅಕ್ಷರ ಗಾತ್ರ

ಕೇಸರಿ ಹರವೂ

ಚಿತ್ರರಂಗದ ಕೆಲವು ಗಣ್ಯರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಚಿತ್ರರಂಗಕ್ಕೆ ಬೇಕಿರುವ ಹಲವು ಸೌಕರ್ಯ, ಸವಲತ್ತುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಮೈಸೂರಿನ ಸಮೀಪ ಒಂದು ಚಿತ್ರನಗರಿಯನ್ನು ನಿರ್ಮಿಸಬೇಕೆನ್ನುವುದು ಅವುಗಳಲ್ಲಿ ಪ್ರಮುಖವಾದುದು. ಚಿತ್ರರಂಗವು ಗುಣಾತ್ಮಕವಾಗಿ ಹಾಗೂ ಸಮಾಜಮುಖಿಯಾಗಿ ಏಳಿಗೆ ಹೊಂದುವ ದೃಷ್ಟಿಯಿಂದ ಸರ್ಕಾರ ತುರ್ತಾಗಿ ಕೈಗೊಳ್ಳಬೇಕಿರುವ ಸುಧಾರಣಾ ಕ್ರಮಗಳು ಮತ್ತು ಉತ್ತೇಜಕ ಹೆಜ್ಜೆಗಳು ಹಲವು ಇವೆ. ಹೀಗಿರುವಾಗ, ಚಿತ್ರನಗರಿಯನ್ನು ತುರ್ತಾಗಿ ನಿರ್ಮಿಸಬೇಕಾದ ಅಗತ್ಯ ಇದೆಯೇ ಎಂಬ ಬಗ್ಗೆ ಯೋಚಿಸಬೇಕಿದೆ.

ರಾಜ್ಯದಲ್ಲಿ ಎಲ್ಲೇ ಚಿತ್ರನಗರಿಯನ್ನು ನಿರ್ಮಿಸುವ ಯೋಜನೆ ಹಾಕಿಕೊಂಡರೂ ಅದಕ್ಕೆ ಕನಿಷ್ಠ ಇನ್ನೂರು ಎಕರೆ ವಿಶಾಲವಾದ ಬಯಲು ಭೂಮಿ ಬೇಕು. ಜಾಗತಿಕ ಮಟ್ಟದ ಶೂಟಿಂಗ್ ಫ್ಲೋರುಗಳು, ಒಳಾಂಗಣ ಮತ್ತು ಹೊರಾಂಗಣ ಸೆಟ್ಟುಗಳು, ಸಲಕರಣೆಗಳು, ಸಂಕಲನ ಹಾಗೂ ಸಂಸ್ಕರಣ ಘಟಕಗಳು, ಅತ್ಯಾಧುನಿಕ ಮೂಲಸೌಕರ್ಯ, ವಸತಿ, ಉದ್ಯಾನಗಳು, ಮನರಂಜನೆಗೆ ಅಗತ್ಯವಾದ ತಂತ್ರಜ್ಞಾನ ಸೌಲಭ್ಯಗಳನ್ನು ನಿರ್ಮಿಸಬೇಕೆಂದರೆ ನೂರಾರು ಕೋಟಿ ರೂಪಾಯಿ ಹೂಡಿದರೂ ಕಡಿಮೆಯೇ. ಅಲ್ಲದೆ, ಒಂದು ಪರಿಪೂರ್ಣವಾದ ಸುಸಜ್ಜಿತ ಚಿತ್ರನಗರಿಯ ನಿರ್ಮಾಣಕ್ಕೆ ಕನಿಷ್ಠ ಒಂದು ದಶಕದಷ್ಟು ಸಮಯ ಬೇಕಾಗುತ್ತದೆ. ಇದು ಚಿತ್ರನಗರಿ ಯೋಜನೆಯ ಒಂದು ಆಯಾಮ.

ರಾಜ್ಯದ ಇಂದಿನ ಸ್ಥಿತಿಗತಿಯ ದೃಷ್ಟಿಯಿಂದ ಮತ್ತೊಂದು ಅತಿಮುಖ್ಯ ಆಯಾಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಚಿತ್ರನಗರಿಯ ನಿರ್ಮಾಣ ಹಂತ ಮತ್ತು ನಂತರದಲ್ಲಿ ಅದರ ನಿರಂತರ ನಿರ್ವಹಣೆಗೆ ಎಷ್ಟು ಖರ್ಚಾಗುತ್ತದೆ, ಅಷ್ಟು ವ್ಯಯಿಸಿಯೂ ಅದು ಎಷ್ಟು ಉದ್ಯೋಗ ಸೃಷ್ಟಿ ಮಾಡುತ್ತದೆ? ಬೊಕ್ಕಸಕ್ಕೆ ಎಷ್ಟು ವರಮಾನವನ್ನು ತಂದುಕೊಡುತ್ತದೆ? ಅದೇ ಇನ್ನೂರು ಎಕರೆಯಲ್ಲಿ ಒಂದು ಅತ್ಯವಶ್ಯಕ ಕೈಗಾರಿಕಾ ಪ್ರದೇಶವನ್ನೋ ಸಹಕಾರಿ ಕೃಷಿ ಉದ್ಯಮವನ್ನೋ ಅಥವಾ ಸೌರಶಕ್ತಿ ಘಟಕವನ್ನೋ ಸ್ಥಾಪಿಸುವುದಕ್ಕಿಂತ ಹೆಚ್ಚು ಗುಣಾತ್ಮಕ ಲಾಭಗಳನ್ನು ಒಂದು ಚಿತ್ರನಗರಿ ತಂದುಕೊಡುತ್ತದೆಯೇ?

ಇವೆಲ್ಲಕ್ಕಿಂತಲೂ ಮುಖ್ಯವಾದ ಇನ್ನಷ್ಟು ಪ್ರಶ್ನೆಗಳು ಎದುರಾಗುತ್ತವೆ. ಆದ್ಯತೆಯ ವಲಯಗಳಿಗೆ ಪೂರೈಸಿ, ಚಿತ್ರನಗರಿಗೂ ಬೇಕಿರುವಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿಸುವ ಧಾರಣಾ ಸಾಮರ್ಥ್ಯ ನಮ್ಮ ಪರಿಸರ ಸ್ಥಿತಿಗೆ ಇದೆಯೇ? ಮೇಲೆ ಉದಾಹರಿಸಿದ ಇತರ ಉದ್ಯೋಗಗಳು ಆ ಪ್ರದೇಶದಲ್ಲಿ ಮೂಡಿಸುವ ಕಾರ್ಬನ್ ಹೆಜ್ಜೆ ಗುರುತಿಗಿಂತ ಕಡಿಮೆ ಹೆಜ್ಜೆ ಗುರುತನ್ನು ಚಿತ್ರನಗರಿಯೊಂದು ಮೂಡಿಸುತ್ತದೆಯೇ?

ದೇಶದಲ್ಲಿ ಈಗಾಗಲೇ ಇರುವ ಹಲವು ಚಿತ್ರನಗರಿಗಳನ್ನು ಬಳಸಿಕೊಳ್ಳುತ್ತಿರುವವರು ಅತಿದೊಡ್ಡ ಹೂಡಿಕೆಯ ಚಿತ್ರಗಳು ಮತ್ತು ಟಿ.ವಿ ಕಾರ್ಯಕ್ರಮಗಳನ್ನು ನಿರ್ಮಿಸುವವರು ಮಾತ್ರ. ಬಹುತೇಕ ಟಿ.ವಿ. ಕಾರ್ಯಕ್ರಮಗಳು ಗ್ರಾಹಕ ಮಾರುಕಟ್ಟೆಯ ಪ್ರಾಯೋಜನೆಯಿಂದ ನಿರ್ಮಾಣವಾಗುತ್ತ ಜನರನ್ನು ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಲು ಪ್ರೇರೇಪಿಸುತ್ತಿವೆಯೇ ವಿನಾ ಅವುಗಳಲ್ಲಿ ಯಾವ ಕಲೆ ಅಥವಾ ಸಮಾಜಪ್ರಜ್ಞೆ ಉಳಿದಿಲ್ಲ. ಇನ್ನು ದೊಡ್ಡ ಬಂಡವಾಳದ ತಾರಾಮೌಲ್ಯದ ಚಿತ್ರಗಳು ಅತಿವಾಣಿಜ್ಯ ಉದ್ದೇಶಕ್ಕಾಗಿ ತಯಾರಾಗುತ್ತವೆ. ಅವುಗಳಲ್ಲಿ ನಾಡು, ನುಡಿ ಅಥವಾ ಆರೋಗ್ಯಕರ ಮನರಂಜನೆಯ ಉದ್ದೇಶಗಳು ಗೌಣವಾಗಿಯೇ ಇರುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಹೊಸ ತಲೆಮಾರಿನ ಹತ್ತಾರು ಪ್ರತಿಭಾವಂತರು ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರರಂಗಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಬಂಡವಾಳವನ್ನು ಹೂಡಿ ವಸ್ತು, ವಿನ್ಯಾಸದಲ್ಲಿ ಹೊಸತನ, ಹೊಸ ಕಾಳಜಿ, ಹೊಸ ಪ್ರಾದೇಶಿಕ ಮೌಲ್ಯಗಳನ್ನು ಚಿತ್ರಗಳಲ್ಲಿ ತುಂಬುತ್ತಿದ್ದಾರೆ. ಹೊಸಹೊಸ ನಟರು, ತಂತ್ರಜ್ಞರು ಮಿಂಚುತ್ತಿದ್ದಾರೆ. ಚಿತ್ರನಗರಿಗೆ ಬಂದು ನಿರ್ಮಾಣಕಾರ್ಯ ಮಾಡಿ ಎಂದರೆ ಬಹುಶಃ ಅವರಲ್ಲಿ ಅನೇಕರು ಬರಲಾರರು. ಅದು ಅವರಿಗೆ ಕೈಗೆಟಕುವಂತೆ ಇರುವುದಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ, ಆ ಚಿತ್ರಗಳು ಗುಣಾತ್ಮಕವಾಗಿ ಗೆಲ್ಲುತ್ತಿರುವುದು ಮತ್ತು ಸಮಾಜಕ್ಕೆ ಪ್ರತಿಸ್ಪಂದಿಯಾಗಿರುವುದು ನಮ್ಮ ನೆಲ, ಭಾಷೆ ಹಾಗೂ ಜನಪದ ಕಟ್ಟಿಕೊಟ್ಟಿರುವ ಸಾಮಾಜಿಕತೆ ಮತ್ತು ಸಮಾಕಾಲೀನತೆಯ ಬಲದಿಂದಲೇ. ಆ ಬಲವನ್ನು ಚಿತ್ರನಗರಿಯ ಕೃತಕ ಸೆಟ್ಟುಗಳು, ಉದ್ಯಾನಗಳು ಕೊಡಲು ಸಾಧ್ಯವೇ ಇಲ್ಲ.

ಸಣ್ಣ ಮತ್ತು ಮಧ್ಯಮ ಬಂಡವಾಳದ ಉತ್ತಮ ಸಮಾಜಮುಖಿ ಚಿತ್ರಗಳಿಗೆ ಇಂದು ಕರ್ನಾಟಕದಲ್ಲಿ ಚಿತ್ರಮಂದಿರಗಳು ದೊರಕುತ್ತಿಲ್ಲ. ರಾಜ್ಯದ ಎಲ್ಲ ರೀತಿಯ ಚಿತ್ರಮಂದಿರಗಳಲ್ಲೂ ವರ್ಷಕ್ಕೆ ಕನಿಷ್ಠ ಇಂತಿಷ್ಟು ವಾರ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳನ್ನು ಪ್ರದರ್ಶಿಸಬೇಕು ಎನ್ನುವ ನಿಯಮವನ್ನು ಮತ್ತೆ ಜಾರಿಗೆ ತರಬೇಕು.

ಚಿತ್ರಗಳಿಗೆ ಸರ್ಕಾರ ನೀಡುವ ಸಹಾಯಧನದ ಬಿಡುಗಡೆ ತೀರಾ ವಿಳಂಬವಾಗುತ್ತಿದೆ. ಅಲ್ಲದೆ, ಸಬ್ಸಿಡಿ ಹಂಚಿಕೆಯಲ್ಲಿ ಹಲವು ಬಾರಿ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದಿವೆ. ಗುಣಾತ್ಮಕ ಮತ್ತು ಸಮಾಜಮುಖಿ ಚಿತ್ರಗಳನ್ನು ಇನ್ನಷ್ಟು ಉತ್ತೇಜಿಸುವ ದಿಸೆಯಲ್ಲಿ ಇಡೀ ಸಬ್ಸಿಡಿ ನೀತಿಯನ್ನೇ ಪರಿಷ್ಕರಿಸುವುದು ಸೂಕ್ತ.

ರಾಜ್ಯದಲ್ಲಿ ಒಂದು ಚಲನಚಿತ್ರ ಅಕಾಡೆಮಿ ಇದೆಯಾದರೂ, ಅದು ನಿಜವಾದ ಅರ್ಥದಲ್ಲಿ ಅಕಡೆಮಿಕ್ ಆಗಿ ಕೆಲಸ ಮಾಡಿದ್ದು ಬಹಳ ಕಡಿಮೆ. ಎಲ್ಲಿಯವರೆಗೆ ಚಿತ್ರೋದ್ಯಮ ಮತ್ತು ಚಿತ್ರಮಾಧ್ಯಮಗಳ ನಡುವಿನ ವ್ಯತ್ಯಾಸದ ಸ್ಪಷ್ಟತೆ ಅಕಾಡೆಮಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಅಕಾಡೆಮಿಯನ್ನು ಸ್ಥಾಪಿಸಿದ ನಿಜ ಉದ್ದೇಶ ಈಡೇರುವುದಿಲ್ಲ. ಅದಾಗಬೇಕೆಂದರೆ, ಅಕಾಡೆಮಿಗೆ ಬಹಳಷ್ಟು ಸ್ವಾಯತ್ತತೆ ದೊರಕಬೇಕು.

ಇಂತಹ ಇನ್ನೂ ಹಲವಾರು ಬೇಡಿಕೆಗಳ ಕಡೆಗೆ ಸರ್ಕಾರ ತುರ್ತು ಗಮನಹರಿಸಬೇಕೆ ವಿನಾ ಚಿತ್ರನಗರಿಯ ನಿರ್ಮಾಣಕ್ಕಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT