ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕನ್ನಡ ಚಲನಚಿತ್ರ: ಬೇಕು ಭಿನ್ನ ರೂಪ

ಅರ್ಥಪೂರ್ಣ ಚಲನಚಿತ್ರ ನಿರ್ಮಾಣದ ಬಗೆಗಿನ ಚರ್ಚೆ ಇಂದಿನ ಅಗತ್ಯ
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಚಲನಚಿತ್ರ ಮಾಧ್ಯಮ, ರಂಗ ಒಂದು ಮಹಾಸಮುದ್ರ. ಅಲ್ಲಿ ಆಗಾಗ ಅಲೆಗಳು ಏಳುತ್ತಿರುತ್ತವೆ. ಕನ್ನಡ ಚಲನಚಿತ್ರದ ಇತಿಹಾಸವನ್ನು ಗಮನಿಸಿದರೆ, ಒಂದು ಕಾಲಘಟ್ಟದ (1970, 80ರ ದಶಕಗಳು) ಸಿನಿಮಾಗಳನ್ನು ಹೊಸ ಅಲೆಯ ಚಿತ್ರಗಳು ಎಂದು ಕರೆಯಲಾಗುತ್ತದೆ. ಪ್ರಯೋಗಾತ್ಮಕ, ಆಫ್‌ಬೀಟ್, ಪ್ಯಾರಲಲ್ (ಸಮಾನಾಂತರ), ಇಂಡೀ (ಸ್ವತಂತ್ರ), ಪರ್ಯಾಯ ಎಂದೆಲ್ಲ ಹೆಸರುಗಳಿದ್ದರೂ ಈ ವರ್ಗದ ಚಿತ್ರಗಳನ್ನು ನ್ಯೂ ವೇವ್ ಎನ್ನುವುದೇ ಸೂಕ್ತವೇನೊ.

ಎನ್.ವಿದ್ಯಾಶಂಕರ್ ತಮ್ಮ ಲೇಖನ ಸಂಗ್ರಹ ‘ಸಿನಿಮಾ- ಕಲೆ- ಸಂಸ್ಕೃತಿ’ಯಲ್ಲಿ ಇಂತಹ ಇಪ್ಪತ್ತೆ
ರಡಕ್ಕೂ ಹೆಚ್ಚು ಚಿತ್ರಗಳನ್ನು ಹೆಸರಿಸಿದ್ದಾರೆ. ‘ಫ್ರೆಂಚ್ ನ್ಯೂ ವೇವ್‌ಗೂ ಕನ್ನಡದ ಹೊಸ ಅಲೆಗೂ ವ್ಯತ್ಯಾಸ ಇದೆ. ನಮ್ಮ ಈ ಸಿನಿಮಾಗಳು ‘ಇಟಾಲಿಯನ್‌ ನಿಯೊರಿಯಲಿಸಂ’ ಚಳವಳಿಯನ್ನು ಆಧರಿಸಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, ಕನ್ನಡದಲ್ಲಿ ಹೊಸ ಅಲೆ ತನ್ನ ಅವಸಾನವನ್ನು ಕಂಡುದಕ್ಕೆ ಏನು ಕಾರಣ ಎಂದು ವಿಶ್ಲೇಷಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ತೊಂಬತ್ತರ ದಶಕದಿಂದ ಈಚೆಗೆ ಕೆಲವು ಭಿನ್ನ ರೀತಿಯ ಚಿತ್ರಗಳು ಹೊರಬಂದಿದ್ದರೂ ಅದು ಒಂದು ಟ್ರೆಂಡ್ ಅಥವಾ ಚಳವಳಿಯ ಸ್ವರೂಪ ಪಡೆದಿಲ್ಲ. 2000ದಿಂದ ಈಚೆಗೆ ಗಿರೀಶ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಬರಗೂರು ರಾಮಚಂದ್ರಪ್ಪ ಅವರು ತೊಡಗಿಕೊಂಡ ಕೆಲವು ಚಿತ್ರಗಳು ಪ್ರಶಸ್ತಿ, ಪ್ರಶಂಸೆ ಪಡೆದವು, ಚಿತ್ರೋತ್ಸವ
ಗಳಲ್ಲಿ ಪ್ರದರ್ಶನವನ್ನೂ ಕಂಡವು. ಆದರೆ ಚಿತ್ರಮಂದಿರ
ಗಳಿಗೆ ಬಂದಾಗ ಹೆಚ್ಚಿನವು ನಿರೀಕ್ಷಿತ ಜನಮನ್ನಣೆ ಗಳಿಸಲಿಲ್ಲ. ಕೊರೊನಾ ಕಾಲದಲ್ಲಿ ಒಟಿಟಿಯಂತಹ ಮಾರ್ಗಗಳು ತೆರೆದುಕೊಂಡವು. ಆದರೆ ಕನ್ನಡದ ಚಿತ್ರಗಳಿಗೆ ಅಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ.

2023ರ ಫಸಲನ್ನು ಅವಲೋಕಿಸಿದಾಗ, ಯಶಸ್ವಿ ಅಥವಾ ಪರವಾಗಿಲ್ಲ ಎನ್ನುವಂತಹ ಸಾಧನೆ ತೋರಿದ ಕನ್ನಡ ಚಿತ್ರಗಳ ಶೇಕಡಾವಾರು ಪ್ರಮಾಣ ಕಡಿಮೆ. ಅವುಗಳಲ್ಲಿ ಭಿನ್ನ, ಪ್ರಯೋಗಶೀಲ ಎನಿಸಬಲ್ಲವು ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ, ಅರ್ಥಪೂರ್ಣ ಚಲನಚಿತ್ರ ನಿರ್ಮಾಣದ ಬಗೆಗಿನ ಚರ್ಚೆ ಇಂದಿನ ಅಗತ್ಯ. ಸ್ಕ್ರಿಪ್ಟ್‌ನಿಂದ ಸ್ಕ್ರೀನ್‌ಗೆ ಎಂಬ ದೃಷ್ಟಿಯಿಂದ ನೋಡೋಣ. ‘ಹೊಸ ಅಲೆಯ ಕತೆಗಳೆಲ್ಲ ಸಾಮಾನ್ಯವಾಗಿ ಫ್ರೆಂಚ್ ನವ್ಯ ಸಾಹಿತ್ಯದಿಂದ ಪ್ರಭಾವಿತವಾದ ಸಾಹಿತ್ಯ ಕೃತಿಗಳನ್ನು ಆಧರಿಸಿದವು. ಆದರೆ ಸಿನಿಮಾದ ರೂಪ ಪಡೆದುಕೊಂಡದ್ದು ಫ್ರೆಂಚ್ ಹೊಸ ಅಲೆ ಸಿನಿಮಾಗಳ ಪ್ರಭಾವದಿಂದಲ್ಲ’ ಎಂದಿದ್ದಾರೆ ವಿದ್ಯಾಶಂಕರ್. ‘ಅದರ ಪ್ರವರ್ತಕರು ಮಂಡಿಸಿದ ತಾತ್ವಿಕ ತಳಹದಿಯಾಗಲೀ ತಾಂತ್ರಿಕ ಪ್ರಯೋಗಗಳಾಗಲೀ ನಮ್ಮಲ್ಲಿ ಕಂಡುಬರುವುದಿಲ್ಲ. ಪಾರಂಪರಿಕ ಕಥನಕಲೆಗಳನ್ನು ಬದಲಾಯಿಸುವುದಾಗಲೀ ಅಮೂರ್ತ ಚಿತ್ರಿಕೆಗಳನ್ನು ಕಟ್ಟುವಂತಹ ಪ್ರಯೋಗಗಳಾಗಲೀ ಕನ್ನಡದ ಹೊಸ ಅಲೆಯ ಉದ್ದೇಶವಾಗಿರಲಿಲ್ಲ’ ಎಂದೂ ಹೇಳಿದ್ದಾರೆ.

ತಮ್ಮ ಮೇಲೆ ಯಾವ ಪ್ರಭಾವ ಇತ್ತು ಹಾಗೂ ತಮ್ಮ ಉದ್ದೇಶ ಏನಿತ್ತು ಎಂದು ಈಗಲೂ ಕಾರ್ಯನಿರತರಾಗಿರುವ ಆ ನಿರ್ದೇಶಕರೇ ಈಗ ವೈಯಕ್ತಿಕ ವಿವರಣೆ ನೀಡುವುದು ಸರಿಯಾದೀತು. ‘ತಾತ್ವಿಕ ಚೌಕಟ್ಟು, ಆ ತಾತ್ವಿಕತೆಯನ್ನು ಅಳವಡಿಸಿಕೊಂಡಂತಹ ಚಿತ್ರಗಳು- ಇಂತಹ ಒಂದು ಹಿನ್ನೆಲೆ ಕನ್ನಡ ‘ಹೊಸ ಅಲೆ’ಯ ಚಿತ್ರಗಳಿಗೆ ಇಲ್ಲದಿರುವುದರಿಂದ ಇವು ಪ್ರೇಕ್ಷಕನಿಗೆ ನಿಧಾನ ‘ಗತಿ’ಯ ಚಿತ್ರಗಳಾಗಿ ಸಿನಿಮಾಗಿಂತ ಹೆಚ್ಚಾಗಿ ಒಂದು ಪಠ್ಯಪುಸ್ತಕವಾಗಿ ಕಂಡಿರುವುದು ಆಶ್ಚರ್ಯ ಏನಲ್ಲ’ ಎಂಬ ವಿದ್ಯಾಶಂಕರ್ ಅವರ ಅಭಿಪ್ರಾಯಕ್ಕೆ ಅವರು ಸಾಮೂಹಿಕವಾಗಿ ಪ್ರತಿಕ್ರಿಯಿಸಬಹುದಾಗಿದೆ.

‘ಗಿರೀಶ ಕಾಸರವಳ್ಳಿ ಅವರ ಚಿತ್ರಗಳು ಕನ್ನಡಕ್ಕೆ ಪ್ರಾತಿನಿಧಿಕವಾಗಿ ಉಳಿದಿವೆಯೇ ವಿನಾ ಕನ್ನಡ ಸಂಸ್ಕೃತಿಯ ಒಳಗೆ ಪೂರಕವಾಗಿ ಬೆಳೆಯುತ್ತಿಲ್ಲ. ಅವರ ಚಿತ್ರಗಳು ತಲುಪಬೇಕಾದಷ್ಟು ಪ್ರೇಕ್ಷಕರನ್ನು ತಲುಪದಿರಲು ವಾಣಿಜ್ಯಿಕ ಕಾರಣಗಳ ಜತೆ ಕೆಲವು ಸಾಂಸ್ಕೃತಿಕ ಕಾರಣಗಳೂ ಇರಬಹುದು’ ಎಂಬ ವಿಶ್ಲೇಷಣೆಯ ಜತೆಗೆ ಇತರ ನಿರ್ದೇಶಕರಲ್ಲಿ ಎರಡು ಗುಂಪುಗಳನ್ನು ಸೂಚಿಸಲಾಗಿದೆ: ಹೆಚ್ಚು ಜನಪ್ರಿಯ
ವಾಗುವ ಅಪೇಕ್ಷೆ ಉಳ್ಳವರು, ಜನಪ್ರಿಯತೆಯ ಆಕರ್ಷಣೆಗೆ ಒಳಗಾಗದವರು. ತಾವು ಯಾವ ‘ಗುಂಪಿಗೆ’ ಸೇರಿದವರು ಎಂಬುದನ್ನು ಆ ನಿರ್ದೇಶಕರೇ ಗುರುತಿಸಿಕೊಳ್ಳುತ್ತಾರೋ ಅಥವಾ ಪತ್ರಕರ್ತರು, ವಿಮರ್ಶಕರು ಹಾಗೂ ಈ ಬಗೆಯ ಚಿತ್ರಗಳ ವೀಕ್ಷಕರು ನಿರ್ಧರಿಸಬೇಕೋ?

ಕನ್ನಡದ ಹೊಸ ಅಲೆಯ ಚಿತ್ರಗಳು ಅನುಸರಿಸಿದ ಆ ಇಟಾಲಿಯನ್ ನಿಯೊರಿಯಲಿಸಂ ಚಳವಳಿ‌ 1948ರಲ್ಲಿ‌ ಅಂತ್ಯ ಕಂಡಿತು (ಕೆಲವರ ಪ್ರಕಾರ 1952ರಲ್ಲಿ). ಅದು ಫ್ರೆಂಚ್, ಇರಾನಿಯನ್ ಹೊಸ ಅಲೆ ಚಿತ್ರಗಳ‌ ಮೇಲೂ ಪ್ರಭಾವ ಬೀರಿತ್ತು. ಅದು ಎಡಪಂಥೀಯ ಚಳವಳಿ ಆಗಿತ್ತು ಹಾಗೂ ಮುಂದೆ ಬ್ರೆಜಿಲ್‌ನ ಸಿನಿಮಾ ‘ನೊವೊ’ ಮೇಲೂ ಅದರ ಪರಿಣಾಮ ಇತ್ತು.

ಈಗ ಎರಡು ಯುದ್ಧಗಳು ನಡೆಯುತ್ತಿದ್ದರೂ ಆಗಿನ‌ ಎರಡನೇ ವಿಶ್ವ ಸಮರದ‌ ಕಾರಣ ಹಾಗೂ ಪರಿಣಾಮಗಳ‌ ಸ್ಥಿತಿಗಿಂತ ಭಿನ್ನ. ಆದರೆ ಆಗಿನ ಚಿತ್ರ ಚಳವಳಿಯ ಇನ್ನೊಂದು ಆಸಕ್ತಿಯಾಗಿದ್ದ ಸಾಮಾನ್ಯ ಮಾನವನ ಬದುಕಿನ‌ ಚಿತ್ರಣವು ಈಗಲೂ‌ ಸಂಗತವಾಗಿದೆ. ಇಲ್ಲಿ ಈಗ ಇರುವ ಚಳವಳಿಗಳನ್ನು ಭಾಷಿಕ, ಸಾಂಸ್ಕೃತಿಕ ಎನ್ನುವಂತಿಲ್ಲ. ಅವು ಸ್ವತಂತ್ರ ನಿರ್ದೇಶಕರನ್ನು ಬೆಂಬಲಿಸುತ್ತವೆ ಎಂದು‌ ನಿರೀಕ್ಷಿಸಲಾಗದು. ಫಿಲ್ಮ್ ತಂತ್ರಜ್ಞಾನ ಬೆಳೆದಿದೆ. ಫಿಲ್ಮ್ ಮೇಕಿಂಗ್ ಸರಳಗೊಂಡಿದ್ದರೂ ದುಬಾರಿ. ಕನ್ನಡ ಸಿನಿಮಾ ಪರಂಪರೆಯ ಅರಿವು ಹೊಸ ನಿರ್ದೇಶಕರಿಗೆ ಅಷ್ಟಾಗಿ ಇರಲಿಕ್ಕಿಲ್ಲ. ಆದರೆ ಕತೆಗಳಿಗಾಗಿ ಹೊರಗೆ ನೋಡಬೇಕಿಲ್ಲ. ಹಾಲಿವುಡ್, ಬಾಲಿವುಡ್, ನೆರೆಹೊರೆಯ ಚಿತ್ರರಂಗಗಳು ಅವರನ್ನು ಪ್ರಭಾವಿಸಬಹುದಷ್ಟೆ- ಆ ಪ್ರಭಾವ ಕರ್ನಾಟಕದಲ್ಲಿ ಅವರ ಚಿತ್ರ ಗೆಲ್ಲಲು ನೆರವಾಗದಿರಬಹುದು.

‘ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ’ ಎಂಬ ಹಾಡಿದೆ. ಹಾಗೇ ಕನ್ನಡದಲ್ಲಿ ‘ಹೊಸ ಅಲೆ ಚಿತ್ರಗಳು’ ಬೇರೊಂದು ರೂಪ ತಾಳಿ ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT