ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪ್ರಶಸ್ತಿ ವಾಪಸಾತಿಯೇ ಏಕೆ?

Published 31 ಜುಲೈ 2023, 0:24 IST
Last Updated 31 ಜುಲೈ 2023, 0:24 IST
ಅಕ್ಷರ ಗಾತ್ರ

ಸಾಹಿತಿಗಳು, ಚಿಂತಕರು ಸರ್ಕಾರವನ್ನು ವಿರೋಧಿಸಲು ಪ್ರಶಸ್ತಿ ವಾಪಸ್‌ ಮಾಡುವ ಬದಲು ಪರ್ಯಾಯ ಮಾರ್ಗ ಹುಡುಕುವುದು ಒಳಿತು

ಪ್ರಶಸ್ತಿಗೆ ಭಾಜನರಾದವರು ಮುಚ್ಚಳಿಕೆ ಬರೆದುಕೊಟ್ಟು ಅಕಾಡೆಮಿಗಳ ಪ್ರಶಸ್ತಿ ತೆಗೆದುಕೊಳ್ಳಬೇಕು ಎಂಬಂಥ ಸಲಹೆಯನ್ನು ಶಿಫಾರಸು ಮಾಡುವಷ್ಟು ಕೆಳಮಟ್ಟಕ್ಕೆ ಸಾರಿಗೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕುರಿತ ಸಂಸದೀಯ ಸ್ಥಾಯಿ ಸಮಿತಿ ಇಳಿದಿದೆಯೆಂದರೆ, ಅದಕ್ಕಿಂತ ಘೋರವಾದದ್ದು ಇನ್ನೊಂದಿಲ್ಲ. ಅವರುಗಳ ಬುದ್ಧಿಗೆ ಏನಾಗಿದೆ ಎಂದು ಕೇಳಬೇಕಾಗುತ್ತದೆ.

‘ಈ ಶಿಫಾರಸುಗಳನ್ನು ಸಮಸ್ತ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯ ಸಾರಾಸಗಟಾಗಿ ತಿರಸ್ಕರಿಸಬೇಕಿದೆ’ ಎಂದು ನಾ. ದಿವಾಕರ ಅವರು ಹೇಳಿರುವುದು (ಸಂಗತ, ಜುಲೈ 29) ಅತ್ಯಂತ ಸರಿಯಾಗಿಯೇ ಇದೆ. ಅದರ ಜೊತೆಯಲ್ಲಿಯೇ ಇನ್ನು ಕೆಲವು ಸಂಗತಿಗಳ ಕುರಿತೂ ಪರ್ಯಾಲೋಚಿಸಬೇಕಿದೆ.

ರಾಷ್ಟ್ರ ಮಟ್ಟದ ಇಲ್ಲವೆ ರಾಜ್ಯ ಮಟ್ಟದ ಅಕಾಡೆಮಿಗಳು ಮತ್ತಿನ್ನಿತರೆ ಸಾಹಿತ್ಯಕ ಸಂಸ್ಥೆಗಳು ಸರ್ಕಾರದಿಂದ ಅನುದಾನ ಪಡೆಯುತ್ತವೆ ಎಂಬುದು ನಿಜವೇ ಆದರೂ ಆ ಸಂಸ್ಥೆಗಳಿಗೆ ನೇಮಕಗೊಂಡವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಸೇರಿದವರೇ ಆಗಿರುತ್ತಾರೆ ಎಂಬುದೂ ಸತ್ಯವೇ. ಅದರಲ್ಲೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಸಾಹಿತಿಗಳಿಂದಲೇ ನೇರವಾಗಿ ಆಯ್ಕೆಯಾದವರಾಗಿರುತ್ತಾರೆ. ಇನ್ನು ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಅಥವಾ ಕೆಲವು ಸಲ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಅದಕ್ಕೆ ಪ್ರತ್ಯೇಕವಾದ ಸಮಿತಿಗಳಿರುತ್ತವೆ. ಆ ಸಮಿತಿಗಳಲ್ಲಿ ಇರುವವರು ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಸೇರಿದವರೇ ಆಗಿರುತ್ತಾರೆ.

ದೇಶದ ಇತರ ಎಲ್ಲ ಜನಸಾಮಾನ್ಯರ ಹಾಗೆಯೇ ಸಾಹಿತಿಗಳೂ ಪ್ರಜೆಗಳೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಪಕ್ಷ ಬೇಕಾದರೂ ಜನರಿಂದ ಆಯ್ಕೆಯಾಗಿ ಬರಬಹುದು. ಬರಹಗಾರರಿಗೆ ಯಾವುದೇ ಒಂದು ರಾಜಕೀಯ ಪಕ್ಷದ ಬಗ್ಗೆ ಒಲವಿರುವುದು ಬೇರೆ. ಅದು ಇರಬಾರದೆಂದು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ತಮಗೆ ಇಷ್ಟವಿಲ್ಲದ ರಾಜಕೀಯ ಪಕ್ಷವೊಂದು ಅಧಿಕಾರ ನಡೆಸುತ್ತಿರುವಾಗ, ಅದರ ನಡೆ ಯಾವುದೋ ಕಾರಣಕ್ಕೆ ಸರಿಯಿಲ್ಲ ಎಂದು ಕೆಲ ಸಾಹಿತಿಗಳಿಗೆ ಅನ್ನಿಸಿದಾಗ, ಸರ್ಕಾರವನ್ನು ವಿರೋಧಿಸುವುದು ಅವರ ಪ್ರಜಾಸತ್ತಾತ್ಮಕ ಹಕ್ಕು. ಆದರೆ ಪ್ರಶ್ನೆಯಿರುವುದು, ವಿರೋಧವನ್ನು ವ್ಯಕ್ತಪಡಿಸಲು ಆಯ್ಕೆ ಮಾಡಿಕೊಳ್ಳಬೇಕಾದ ಮಾರ್ಗದ ಬಗ್ಗೆ.

ಸರ್ಕಾರದಿಂದ ನೇರವಾಗಿ ನೇಮಕವಾಗದ ಅಧ್ಯಕ್ಷರಿರುವ, ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಸಲ್ಲಿಸಿದ ಸೇವೆಯ ಮಾನದಂಡದ ಮೇರೆಗೆ ಆಯ್ಕೆ ಸಮಿತಿಗೆ ಆಯ್ಕೆಯಾದ ಸದಸ್ಯರು ಇರುವ ಸಮಿತಿಗಳು ಆಯ್ಕೆ ಮಾಡಿದ ಪ್ರಶಸ್ತಿಗಳನ್ನು ಹಿಂತಿರುಗಿಸುವುದು ಸರ್ಕಾರವನ್ನು ವಿರೋಧಿಸುವ ಸರಿಯಾದ ಮಾರ್ಗವಲ್ಲ ಅನಿಸುತ್ತದೆ. ಅದರಿಂದ, ಪ್ರಶಸ್ತಿಗೆ ಆಯ್ಕೆ ಮಾಡಿದವರನ್ನು, ಸ್ವಾಯತ್ತ ಸಂಸ್ಥೆಯಾದ ಅಕಾಡೆಮಿಯನ್ನು ಪರೋಕ್ಷವಾಗಿ ಅವಮಾನಿಸಿದಂತೆ ಆಗುವುದಿಲ್ಲವೇ ಎಂಬುದನ್ನು ಪರ್ಯಾಲೋಚಿಸಬೇಕು. ಇನ್ನು ಸರ್ಕಾರವೇ ನೇರವಾಗಿ ಬಹಳಷ್ಟು ಸಲ ತನ್ನ ರಾಜಕೀಯ ಸಿದ್ಧಾಂತದ ಬಗ್ಗೆ ಒಲವಿರುವವರನ್ನೇ ಆಯ್ಕೆ ಮಾಡಿ (ಅಪವಾದಗಳು ಇರಬಹುದು, ಇವೆ) ಕೊಡಮಾಡುವ ‘ಪದ್ಮ’ ಪ್ರಶಸ್ತಿಗಳನ್ನು ಬೇಕಾದರೆ ಅದನ್ನು ಪಡೆದವರು ವಿರೋಧದ ಸಂಕೇತವಾಗಿ ಸರ್ಕಾರಕ್ಕೆ ಹಿಂತಿರುಗಿಸಬಹುದು.

ಸ್ವಾತಂತ್ರ್ಯಪೂರ್ವದಲ್ಲಿ ಹಾಗೆ ಬ್ರಿಟಿಷ್ ಸರ್ಕಾರ ನೇರವಾಗಿ ನೀಡಿದ ‘ಸರ್’ ನೈಟ್‌ಹುಡ್ ಪ್ರಶಸ್ತಿಯನ್ನು ರವೀಂದ್ರನಾಥ ಟ್ಯಾಗೋರರು ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಸರ್ಕಾರವನ್ನು ವಿರೋಧಿಸಿ ಹಿಂತಿರುಗಿಸಿದ್ದನ್ನು, ಹಾಗೆಯೇ ತುರ್ತುಪರಿಸ್ಥಿತಿಯನ್ನು ಹೇರಿದ ಸರ್ಕಾರದ ನಡೆ ವಿರೋಧಿಸಿ ಶಿವರಾಮ ಕಾರಂತರು ‘ಪದ್ಮಭೂಷಣ’ ಪ್ರಶಸ್ತಿ ಹಿಂತಿರುಗಿಸಿದ್ದನ್ನು ನೆನೆಯಬಹುದು.

ಅಕಾಡೆಮಿ ಪ್ರಶಸ್ತಿಯು ಕೃತಿ ರಚನೆ ಅಥವಾ ಸಾಹಿತ್ಯ ಸಾಧನೆಗಾಗಿ ನೀಡಿದ್ದು. ಸಾಹಿತಿಗಳೂ ಮನುಷ್ಯರೇ ಆದ್ದರಿಂದ ಅವರ ಕೃತಿ ರಚನೆಯ ಹೊರತಾಗಿ ರಾಜಕೀಯ ಪಕ್ಷವೊಂದರ ವಕ್ತಾರರಂತೆ ನಡೆದುಕೊಳ್ಳುವುದು, ಮಾತನಾಡುವುದು ನಡೆದೇ ಇದೆ. ಅದು ಅವರವರ ಸ್ವಾತಂತ್ರ್ಯ. ಆದರೆ ತನಗೆ ಇಷ್ಟವಿಲ್ಲದ ಪಕ್ಷದ ನೇತೃತ್ವದ ಸರ್ಕಾರವನ್ನು ವಿರೋಧಿಸಲೋಸುಗ, ಸಾಹಿತ್ಯ ಸಾಧನೆ ಮಾಡಿದ್ದಕ್ಕಾಗಿ ಸಾಹಿತ್ಯ ಸಂಸ್ಥೆ ನೀಡಿದ ಪ್ರಶಸ್ತಿಯನ್ನು ಹಿಂತಿರುಗಿಸಿದಾಗ ಸರ್ಕಾರಕ್ಕೂ ಅಂಥವರನ್ನು (ಎಲ್ಲರೂ ಏನೂ ಹಿಂತಿರುಗಿಸುವುದಿಲ್ಲ) ಸಾಹಿತಿಯಾಗಿ ನೋಡಬೇಕೆ ಇಲ್ಲವೆ ಅಧಿಕೃತವಾಗಿ ಪಕ್ಷದ ವಕ್ತಾರರಲ್ಲದಿದ್ದರೂ ಪಕ್ಷದ ಅಧಿಕೃತ ವಕ್ತಾರರಿಗಿಂತ ಹೆಚ್ಚಾಗಿ ನಡೆದುಕೊಳ್ಳುವವರ ಬಗ್ಗೆ ಏನೆಂದು ತಿಳಿಯಬೇಕು ಎಂದು ಗೊಂದಲವಾಗಬಹುದು. ಆದ್ದರಿಂದ ತಮ್ಮ ಸಾಹಿತ್ಯಕ ಸಾಧನೆಗಾಗಿ ಪ್ರಶಸ್ತಿ ಪಡೆದ ಇಂಥವರು ತಮ್ಮ ವಿರೋಧ ವ್ಯಕ್ತಪಡಿಸಲು ಪ್ರಶಸ್ತಿ ಹಿಂತಿರುಗಿಸುವುದರ ಬದಲು ವಿರೋಧದ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬಹುದು ಎನಿಸುತ್ತದೆ.

ಇನ್ನು ಈಚಿನ ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರನ್ನಾಗಿ, ಸದಸ್ಯರನ್ನಾಗಿ ನೇಮಕ ಮಾಡುವಾಗ, ಮಂಡಲಿ, ಕಾರ್ಪೊರೇಷನ್‌ಗಳಿಗೆ ನೇಮಕ ಮಾಡುವಾಗ, ತಮ್ಮ ಪಕ್ಷದ ಶಾಸಕರನ್ನೋ ಕಾರ್ಯಕರ್ತರನ್ನೋ ನೇಮಕ ಮಾಡುವುದಕ್ಕೆ ಅನುಸರಿಸುವ ಮಾನದಂಡಗಳನ್ನೇ, ಅಂದರೆ ತಮ್ಮ ಪಕ್ಷದ, ಸರ್ಕಾರದ ನೀತಿಯ ಬಗೆಗಿನ ಒಲವನ್ನು ಹೊಂದಿರುವ ಬರಹಗಾರರನ್ನೇ ಪರಿಗಣಿಸುವ ಮಾರ್ಗವನ್ನು ಅನುಸರಿಸುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ.

ಇಂಥ ಸನ್ನಿವೇಶದಲ್ಲಿ ನಾ.ದಿವಾಕರ ಅವರು ಪ್ರಾರಂಭದಲ್ಲಿಯೇ ಹೇಳಿರುವಂತೆ, ಬಹುತೇಕ ಅಕಾಡೆಮಿಗಳು ತಮ್ಮ ಮೂಲ ಅಂತಃಸತ್ವ ನೀಗಿಕೊಂಡು ಸರ್ಕಾರಗಳ ಬಾಲಂಗೋಚಿಗಳಂತೆಯೋ ಬಾಲಬಡುಕರಂತೆಯೋ ಆಗಿವೆಯೆಂದು ಕೊರಗುವ ಕಾಲ ಬರಲು ತಡವೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT