ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ತಾಳ, ತಂತು ಇಲ್ಲದವರು, ನಮ್ಮ ಯುವಕರು!

ಪುಣೆ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಕನ ಕುಟುಂಬಸ್ಥರು ಆತನನ್ನು ಪಾರು ಮಾಡಲು ನಾನಾ ಅಡ್ಡಮಾರ್ಗಗಳನ್ನು ಹಿಡಿದಿರುವುದು ದುರದೃಷ್ಟಕರ
Published 1 ಜೂನ್ 2024, 0:14 IST
Last Updated 1 ಜೂನ್ 2024, 0:14 IST
ಅಕ್ಷರ ಗಾತ್ರ

‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎಂಬ ಗಾದೆ ಮಾತನ್ನು ನಾವು ಸಣ್ಣವರಿದ್ದಾಗ ಶಾಲೆಯ ಕೊಠಡಿಗಳಲ್ಲಿ, ಗೋಡೆಗಳ ಮೇಲೆ ಬರೆದದ್ದನ್ನು ಓದಿದ್ದ ನೆನಪು! ಮನೆಯಲ್ಲಿಯ ವಾತಾವರಣ, ತಂದೆ ತಾಯಿಯ ನಡೆ ನುಡಿಯೇ ಮಕ್ಕಳಲ್ಲಿ ಪ್ರತಿಫಲಿಸುವುದು ಸಾಮಾನ್ಯ.  ಆದರೆ ಇತ್ತೀಚಿನ ಕೆಲವು ಪ್ರಕರಣಗಳು, ‘ತಾಳ ಇಲ್ಲ ತಂತು ಇಲ್ಲ, ಊದು ನನ್ನ ತುತ್ತೂರಿ’ ಎಂಬ ಗಾದೆಯನ್ನು ನೆನಪಿಸುವಂತಿವೆ.

ಪುಣೆಯಲ್ಲಿ ಇತ್ತೀಚೆಗೆ ಬಾಲಕನೊಬ್ಬ ಮದ್ಯ ಸೇವಿಸಿ ಪೋಶೆ ಕಾರನ್ನು ಚಲಾಯಿಸಿ, ಇಬ್ಬರು ಅಮಾಯಕರ ಸಾವಿಗೆ ಕಾರಣನಾಗುತ್ತಾನೆ. ಅವನೊಬ್ಬ ‘ಕಾನೂನಿನ ಎದುರು ಸಂಘರ್ಷಕ್ಕೆ ಒಳಗಾಗಿರುವ’ ಬಾಲಕ ಎಂಬ ಕಾರಣಕ್ಕೆ ಬಾಲನ್ಯಾಯ ಮಂಡಳಿಯು ಶಾಲೆಯಲ್ಲಿ ನೀಡುವ ‘ಹೋಮ್ ವರ್ಕ್’ನಂತೆ ರಸ್ತೆ ಸುರಕ್ಷತೆ ಕುರಿತು ಪ್ರಬಂಧ ಬರೆಯುವ ‘ಶಿಕ್ಷೆ’ ನೀಡುತ್ತದೆ! ‘ಏನೂ ಅರಿಯದ ಮುಗ್ಧ ಬಾಲಕ’ ಎಂಬ ಕಾರಣಕ್ಕೋ ಏನೋ ಜಾಮೀನನ್ನು ಸಹ ನೀಡುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿನ ಪ್ರತಿಭಟನೆ, ಸಾರ್ವಜನಿಕರ ಆಕ್ರೋಶಕ್ಕೆ ಮಣಿದು, ಆ ಬಾಲಕನನ್ನು ಅನಿವಾರ್ಯವಾಗಿ  ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಅಚ್ಚರಿಯೆಂದರೆ, ಈ ವಿಷಯದಲ್ಲಿ ಪುಣೆ ಪೊಲೀಸರು ಬಹಳ ಮುತುವರ್ಜಿಯಿಂದ ಪ್ರಕರಣ ದಾಖಲಿಸಿ, ಹಣದ ಕೈಚಳಕ ನಡೆಯದಂತೆ ಆರೋಪಿಯ ರಕ್ತದ ಮಾದರಿ ಸಂಗ್ರಹಿಸಿರುವುದು. ಪೊಲೀಸರ ಕರ್ತವ್ಯನಿಷ್ಠೆಯ ಕಾರಣ ಇಬ್ಬರು ವೈದ್ಯರು ಬಂಧನಕ್ಕೆ ಒಳಗಾಗಿದ್ದಾರೆ. ‘ವೈದ್ಯರು ದೇವರ ಸಮಾನ’ ಎಂಬ ವಿಶ್ವಾಸ, ಗೌರವಕ್ಕೆ ಧಕ್ಕೆ ತರುವಂತೆ ಈ ಇಬ್ಬರು ವೈದ್ಯರು ಆಮಿಷಕ್ಕೆ ಬಲಿಬಿದ್ದು, ರಕ್ತದ ಮಾದರಿಯನ್ನೇ ಬದಲಾಯಿಸಿ ಕಳಂಕಿತರಾಗಿದ್ದಾರೆ. ಸಾಮಾನ್ಯವಾಗಿ ಇಂಥ ಕುತಂತ್ರಗಳನ್ನು ಪೊಲೀಸರೇ ಮಾಡುವುದನ್ನು ಕೇಳಿರುತ್ತೇವೆ. ಆದರೆ ಇಲ್ಲಿ, ನ್ಯಾಯಾಲಯಗಳು ಮತ್ತು ಪೊಲೀಸರು ನಂಬುವಂತಹ ವೈದ್ಯರೇ ಇಂತಹ ದುಷ್ಕೃತ್ಯ ಎಸಗಿರುವುದು ನಾಚಿಕೆಗೇಡಿನ ಸಂಗತಿ. 

ಸಾಕ್ಷಿಗಳಿಂದ ನಂಬಲರ್ಹವಾದ ಮಾಹಿತಿಯು ದೊರಕದೇ ಇದ್ದಾಗ ವೈದ್ಯರು ಹೇಳುವ ಮಾತುಗಳನ್ನೇ ಪ್ರಬಲ ಸಾಕ್ಷ್ಯ ಎಂದು ನ್ಯಾಯಾಲಯಗಳು ತೀರ್ಮಾನಿಸಿ, ಆರೋಪಿಗಳನ್ನು ಅಪರಾಧಿಗಳೆಂದು ನಿರ್ಣಯಿಸಿ ಶಿಕ್ಷೆ ನೀಡಿದ ನಿದರ್ಶನಗಳು ಅಸಂಖ್ಯ. ಇಂತಿರುವಾಗ ಸಮಾಜದ ಉಚ್ಚಸ್ತರದಲ್ಲಿರುವ, ಜವಾಬ್ದಾರಿಯುತ ನಾಗರಿಕರು ಎನ್ನಿಸಿಕೊಂಡಿರುವ ವೈದ್ಯರು ಆರೋಪಿಗೆ ನೆರವಾಗುವಂತೆ ವರ್ತಿಸಿರುವುದು ಅಮಾನವೀಯ, ಅಸಮರ್ಥನೀಯ. ಆಕಸ್ಮಿಕವಾಗಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಾಲಕನ ಹೆಚ್ಚುವರಿ ರಕ್ತದ ಮಾದರಿಯನ್ನು ಪಡೆಯದೇ ಇದ್ದಿದ್ದರೆ? ಆತ ಸುಲಭವಾಗಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿತ್ತಲ್ಲವೇ? ಆರೋಪಿಯ ತಂದೆ ವೈದ್ಯರೊಂದಿಗೆ ಸಂಪರ್ಕದಲ್ಲಿ ಇದ್ದುದನ್ನು ದೃಢ ಪಡಿಸುವ ತಾಂತ್ರಿಕ ಸಾಕ್ಷ್ಯಗಳು, ಸಿ.ಸಿ. ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿನ ದಾಖಲೆಗಳಂತಹವು ವೈದ್ಯರು ಕಾನೂನು ಬಲೆಯಿಂದ ತಪ್ಪಿಸಿಕೊಳ್ಳದಂತೆ ಮಾಡಿವೆ.

ಈ ಹಿಂದೆ ಬಾಲಿವುಡ್ ಚಿತ್ರನಟರೊಬ್ಬರು ಮದ್ಯದ ಅಮಲಿನಲ್ಲಿ, ರಸ್ತೆಬದಿ ಮಲಗಿದ್ದವರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿದ್ದ ಪ್ರಕರಣದ ಕತೆ ಏನಾಯಿತು, ಎಷ್ಟು ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದರು, ಆ ವಿಚಾರಣೆ ಮುಗಿಯಲು ಎಷ್ಟು ಸುದೀರ್ಘ ಸಮಯ ತೆಗೆದುಕೊಂಡಿತು ಎನ್ನುವುದು ನಮಗೆಲ್ಲ ತಿಳಿದಿರುವ ಸಂಗತಿಯೇ ಆಗಿದೆ.

ಇಷ್ಟೆಲ್ಲ ಅವಾಂತರಗಳು ಘಟಿಸಿದಾಗ, ಕಿಂಚಿತ್ತಾದರೂ ಪಶ್ಚಾತ್ತಾಪವಾಗಲೀ ವಿಷಾದದ ಛಾಯೆಯಾಗಲೀ ಆ ಕುಟುಂಬದವರಲ್ಲಿ ಮೂಡಿಲ್ಲ ಎನ್ನುವುದು ಅಸಹ್ಯಕರ. ಆರೋಪಿಯ ತಂದೆಯು ವೈದ್ಯರನ್ನು ಆಮಿಷಕ್ಕೆ ಬಲಿ ಬೀಳಿಸಿ ಮಗನನ್ನು ಪ್ರಕರಣದಿಂದ ಪಾರು ಮಾಡಲು ಪ್ರಯತ್ನಿಸುತ್ತಾರೆ, ತಾತ ಬೆದರಿಕೆ ಒಡ್ಡಿಯೋ ಹಣದ ಆಸೆ ತೋರಿಸಿಯೋ ಚಾಲಕನನ್ನು ಬಲಿಪಶು ಮಾಡಲು ಮುಂದಾಗುತ್ತಾರೆ.

ಇನ್ನೊಂದು ವರದಿಯ ಪ್ರಕಾರ, ಅಪಘಾತ ನಡೆದ ಸ್ಥಳದಲ್ಲಿಯೇ ಬಾಲಕನ ಬದಲು ಬೇರೊಬ್ಬರು ವಾಹನ ಚಲಾಯಿಸುತ್ತಿದ್ದರು ಎಂಬಂತೆ ಸಾಕ್ಷಿಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿತ್ತು ಎನ್ನುವ ಅಂಶವೂ ಉಳ್ಳವರು ಏನಾದರೂ ಮಾಡಬಲ್ಲರು ಎಂಬುದಕ್ಕೆ ಪುಷ್ಟಿ ನೀಡುವಂತೆ ಇದೆ. ಹೊಟ್ಟೆಪಾಡಿಗಾಗಿ ತಮ್ಮ ಬಂಧುಬಳಗವನ್ನು ಬಿಟ್ಟು ಪರ ಊರಿಗೆ ಬಂದು ಹೆಣವಾದ ಎರಡು ಜೀವಗಳನ್ನು ಅವಲಂಬಿಸಿರುವ ಕುಟುಂಬಗಳಿಗೆ ಇವರು ಏನು ಹೇಳುತ್ತಾರೆ?

ಇಂತಹ ಪ್ರಕರಣಗಳಿಗೆ ತಂದೆ ತಾಯಿಯ ಜೀವನಶೈಲಿ ಕಾರಣವೋ ಕುಟುಂಬದ ಸದಸ್ಯರ ವರ್ತನೆ ಕಾರಣವೋ ಶಾಲಾ ಶಿಕ್ಷಣ ಕಾರಣವೋ ಸಮಾಜ ಕಾರಣವೋ ಜಾಲತಾಣಗಳ ಹಾವಳಿಯೋ ನಮ್ಮ ಸಂಸ್ಕೃತಿ-ಪರಂಪರೆಯನ್ನು ಲಘುವಾಗಿ ಕಾಣುತ್ತಿರುವುದು ಕಾರಣವೋ ಕಂಡುಹಿಡಿಯುವ ಅನಿವಾರ್ಯ ಉಂಟಾಗಿದೆ. 40-50 ವರ್ಷಗಳ ಕೆಳಗೆ ಸರ್ಕಾರಿ ಶಾಲೆಗಳಲ್ಲಿ ಓದಿ ವಿದ್ಯಾವಂತರಾದ, ಸಂಸ್ಕೃತಿ, ಪರಂಪರೆಯನ್ನು ಪಾಲಿಸಿದ ಜನಜೀವನದ ವ್ಯವಸ್ಥೆಯನ್ನು ನಮ್ಮ ದೇಶ ಕಂಡಿದೆ.

ಇಂದು ಹಳ್ಳಿಹಳ್ಳಿಗಳಲ್ಲೂ ಕಾನ್ವೆಂಟ್ ಶಾಲಾ ಶಿಕ್ಷಣ ಪದ್ಧತಿ ಬಂದಿದೆ. ಶಿಸ್ತು, ಸಭ್ಯತೆ, ಆತ್ಮವಿಶ್ವಾಸವನ್ನು ತುಲನಾತ್ಮಕವಾಗಿ ಹಿಂದಿಗಿಂತ ಹೆಚ್ಚು ಕಾಣಬೇಕಾಗಿದ್ದ ಸನ್ನಿವೇಶಗಳಲ್ಲಿ, ಅನುತ್ತೀರ್ಣರಾದರೆ ನೇಣಿಗೆ ಶರಣಾಗುವ, ಪ್ರೀತಿಯನ್ನು ನಿರಾಕರಿಸಿದರೆ ಹಾಡಹಗಲೇ ಹತ್ಯೆಗೈಯ್ಯುವ, ಮಾತೆತ್ತಿದರೆ ಜೀವ ತೆಗೆಯುವ, ಆ್ಯಸಿಡ್ ದಾಳಿ ನಡೆಸುವ, ಮಿತಿಮೀರಿದ ಮದ್ಯಸೇವನೆ, ಮಾದಕವಸ್ತುಗಳ ಬಳಕೆ ಹೆಚ್ಚುತ್ತಿರುವ ಪ್ರಕರಣಗಳು, ಇಂತಹ ಎಲ್ಲ ಅಪಸವ್ಯಗಳ ಕೊನೆಗಾಣಿಸುವಿಕೆಗೆ ತುರ್ತು ಪರಿಹಾರ ಮಾರ್ಗ ಕಂಡುಕೊಳ್ಳಬೇಕಿರುವ ಅಗತ್ಯವನ್ನು ಒತ್ತಿ ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT