ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಮಿಡಿವ ಹೃದಯವಿದು ‘ದಿವ್ಯ ಔಷಧ’

ವಿಪತ್ತು ಎದುರಾದಾಗ ತೋರುವ ಮಾನವೀಯತೆಯು ಮನುಕುಲದ ಮಾನಸಿಕ ಮತ್ತು ದೈಹಿಕ ವಿಕಾರಗಳಿಗೆ ಒಂದು ದಿವ್ಯ ಔಷಧಿಯ ರೂಪಕವಾಗಿ ನಿಲ್ಲುತ್ತದೆ
Published : 7 ಆಗಸ್ಟ್ 2024, 23:30 IST
Last Updated : 7 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಆಗಿನ ಕಾಲದ ಅತ್ಯಂತ ವೈಭವೋಪೇತ ಮತ್ತು ಎಂದಿಗೂ ಮುಳುಗದ ಹಡಗು ಎಂದೇ ಪ್ರಸಿದ್ಧವಾಗಿದ್ದ ‘ಟೈಟಾನಿಕ್’ ಮುಳುಗುವ ಹೊತ್ತಿನಲ್ಲಿ, ಅದರಲ್ಲಿ ಜಾನ್ ಜಾಕೋಬ್ ಆಸ್ಟರ್ ಎಂಬ ಆಗರ್ಭ ಶ್ರೀಮಂತ ಪ್ರಯಾಣಿಸುತ್ತಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಟೈಟಾನಿಕ್‌ನಂತಹ ಮೂವತ್ತು ಹಡಗುಗಳನ್ನು ಕೊಳ್ಳುವಷ್ಟು ಸಂಪತ್ತು ಇತ್ತು. ಅಂತಹವರು ತಮ್ಮ ಪಾಲಿನ ಜೀವರಕ್ಷಕ ದೋಣಿಯನ್ನು ಇಬ್ಬರು ಮಕ್ಕಳ ಜೀವ ಉಳಿಸಲು ತ್ಯಾಗ ಮಾಡಿದ್ದರು.

ಇನ್ನೊಬ್ಬ ಕೋಟ್ಯಧಿಪತಿ ಇಸಿಡೋರ್ ಸ್ಟ್ರಾಸ್ ಎಂಬುವರು ಸಹ ಈ ಹಡಗಿನಲ್ಲಿದ್ದರು. ಅವರ ಪತ್ನಿ ಇಡಾ ಸ್ಟ್ರಾಸ್, ಜೀವರಕ್ಷಕ ದೋಣಿಯನ್ನು ಹತ್ತಲು ನಿರಾಕರಿಸಿ, ತಮ್ಮ ಕಂಪನಿಗೆ ಹೊಸದಾಗಿ ನೇಮಕಗೊಂಡಿದ್ದ ಸೇವಕಿ ಎಲೆನ್ ಬರ್ಡ್‌ಗೆ ಆ ಜಾಗವನ್ನು ಬಿಟ್ಟುಕೊಟ್ಟಿದ್ದರು. ಈ ಶ್ರೀಮಂತ ಮಹಿಳೆ ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಗಂಡನೊಂದಿಗೆ ಕಳೆಯಲು ನಿರ್ಧರಿಸಿದ್ದರು.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ನವಜಾತ ಶಿಶುಗಳನ್ನು ಸಹ ಅನಾಥರನ್ನಾಗಿಸಿದ ಹೃದಯವಿದ್ರಾವಕ ಸುದ್ದಿ ಹಲವಾರು ಮಾನವೀಯ ಹೃದಯಗಳು ಮಿಡಿಯುವಂತೆ ಮಾಡಿದೆ. ಇವರ ಪೈಕಿ, ಅದೇ ರಾಜ್ಯದ ಇಡುಕ್ಕಿ ಸಮೀಪದ ಗ್ರಾಮವೊಂದರ ನಿವಾಸಿಯಾದ ಭಾವನಾ ಎಂಬ ಮಹಿಳೆ, ತಮ್ಮ ಎದೆಹಾಲನ್ನು ಇಂತಹ ಮಕ್ಕಳಿಗೆ ಉಣಿಸಲು ನಿರ್ಧರಿಸಿರುವುದು ಅತ್ಯಂತ ಮನನೀಯವಾದದ್ದು. ಭಾವನಾ ಮತ್ತು ಸಚಿನ್ ಎಂಬ ಈ ದಂಪತಿಗೆ ಎದೆಹಾಲು ಕುಡಿಯುವ ನಾಲ್ಕು ತಿಂಗಳ ಮಗು ಇರುವುದು ಗಮನಾರ್ಹ.

ಕೇರಳದ ಪಲ್ಲಿತೊಟ್ಟಂನ ಸುಬೈದಾ ಎಂಬ ವೃದ್ಧೆಯೊಬ್ಬರು ಬ್ಯಾಂಕಿನ ಬಡ್ಡಿ ಕಟ್ಟುವ ಸಲುವಾಗಿ, ತಮ್ಮ ಬಳಿ ಇದ್ದ ನಾಲ್ಕೂ ಮೇಕೆಗಳನ್ನು ಮಾರಾಟ ಮಾಡಿ ಹತ್ತು ಸಾವಿರ ರೂಪಾಯಿ ತಂದಿಟ್ಟುಕೊಂಡಿದ್ದರು. ಅದನ್ನು ಅವರೀಗ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅಂದಹಾಗೆ, ಈ ಹಿರಿಯ ಜೀವ ಒಂದು ಹಳ್ಳಿಯಲ್ಲಿ ಚಿಕ್ಕ ಚಹಾ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದೆ.

ಮನುಕುಲದ ಇತಿಹಾಸದಲ್ಲಿ ಕಾಯಿಲೆ, ಯುದ್ಧ, ಸುನಾಮಿ, ಬರ, ನೆರೆ, ಭೂಕಂಪದಂತಹ ಗಂಡಾಂತರಗಳು ಹೊಸವೇನಲ್ಲ. ಕೆಲವು ನೈಸರ್ಗಿಕ ವಿಕೋಪಗಳಿಂದ ಸಂಭವಿಸಿದರೆ, ಇನ್ನು ಕೆಲವು ಸ್ವತಃ ಮನುಷ್ಯನ ವಿಕೃತಿಗಳಿಂದ ಸೃಷ್ಟಿಯಾಗಿರುವಂತಹವು. ಈ ವಿಕೃತಿಯ ಫಲವಾಗಿ ಕುಸಿಯುತ್ತಿರುವ ಬೆಟ್ಟಗಳು, ಮನುಷ್ಯ ಮನುಷ್ಯನ ನಡುವೆ ಬೆಳೆಯುತ್ತಿರುವ ಕಂದಕಗಳು, ಜಾತಿ– ಧರ್ಮದ ಗೋಡೆಗಳು ಮನುಕುಲಕ್ಕೇ ಸವಾಲಾಗಿವೆ. ಎದೆಯ ದನಿಗೆ ಕಿವುಡಾದ ಲೋಕದ ವೃತ್ತಿ ವೈಪರೀತ್ಯಗಳ ನಡುವೆಯೂ ಜಾಕೋಬ್, ಸ್ಟ್ರಾಸ್, ಸುಬೈದಾ, ಭಾವನಾ ಅವರಂತಹ ವ್ಯಕ್ತಿಗಳು ಸಂಕಟದ ಕಾಲದಲ್ಲಿ ಆದರ್ಶದ ಪ್ರತಿಮೆಗಳಂತೆ ಕಾಣುತ್ತಾರೆ. ‘ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ ಬಿಟ್ಟುಕೊಡುವುದರ ಮೂಲಕ’ ಎಂಬ ಕವಿ ತಿರುಮಲೇಶರ ಕವಿತೆಯೊಂದರ ಸಾಲಿನಂತೆ, ಮನುಕುಲದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಲ್ಲುತ್ತಾರೆ.

ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸಹಾಯಾರ್ಥವಾಗಿ ನಮ್ಮ ಕಾಲೇಜಿನ ಪರವಾಗಿ ದೇಣಿಗೆ ಸಂಗ್ರಹಿಸುತ್ತಿದ್ದಾಗ, ಬಾಲಕನೊಬ್ಬ ತನ್ನ ತಂದೆ ಸೈಕಲ್ ಕೊಳ್ಳಲೆಂದು ಕೊಟ್ಟಿದ್ದ ಹಣವನ್ನು ಪರಿಹಾರ ನಿಧಿಗೆ ಅರ್ಪಿಸಿದ್ದನ್ನು ಎಂದಿಗೂ ಮರೆಯಲಾಗದು.

ಭೋಪಾಲ್‌ನ ಮುಸ್ಕಾನ್ ಅಹಿವಾರ ಎಂಬ ಹನ್ನೊಂದು ವರ್ಷದ ಬಾಲಕಿ ತನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಂದಿದ್ದ 560 ರೂಪಾಯಿಯನ್ನು, ಅಜ್ಮೇರ್‌ನ ಭಿಕ್ಷುಕಿಯೊಬ್ಬಳು ತನ್ನ ಇಡೀ ಜೀವಮಾನದ ದುಡಿಮೆಯ ಆರೂವರೆ ಲಕ್ಷ ರೂಪಾಯಿಯನ್ನು, ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ನಿಕ್ಕಿಯಾಗಿದ್ದ ಮಗಳ ಮದುವೆಯನ್ನು ಮುಂದೂಡಿ, ಅದಕ್ಕೆಂದೇ ತೆಗೆದಿರಿಸಿದ್ದ ₹ 11 ಲಕ್ಷವನ್ನು ಪುಲ್ವಾಮ ಹುತಾತ್ಮ ಯೋಧರ ಕುಟುಂಬಗಳ ನೆರವಿಗಾಗಿ ನೀಡಿದ್ದಾರೆ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರು ಮೃತ ಯೋಧರ ಪುತ್ರರನ್ನು ದತ್ತು ಸ್ವೀಕರಿಸಿದ್ದರು. ಇಲ್ಲೆಲ್ಲ ಮಿಡಿದದ್ದು ಇವರೆಲ್ಲರ ‘ಮಾತೃಹೃದಯ’.

ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಆಗಸ್ಟ್‌ ಒಂದರಿಂದ ಏಳನೆಯ ತಾರೀಖಿನವರೆಗೆ ‘ವಿಶ್ವ ಸ್ತನ್ಯಪಾನ’ ಸಪ್ತಾಹ ಆಚರಿಸಲು ಕೋಟ್ಯಂತರ ರೂಪಾಯಿಯನ್ನು ವಿನಿಯೋಗಿಸುತ್ತದೆ. ಈ ಅಭಿಯಾನವು ಶಿಶುವಿಗೆ ಮಾಡಿಸಬೇಕಾದ ಸ್ತನ್ಯಪಾನದ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುತ್ತದೆ.

ಮಗು ಜನಿಸಿದ ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ಮೊದಲ ಬಾರಿ ಊಡಿಸುವ ಎದೆಹಾಲಿನಲ್ಲಿ ಇರುವ ಕೊಲಾಸ್ಟ್ರಮ್ (ಹಳದಿ ವರ್ಣದ ಗಟ್ಟಿಹಾಲು) ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಈ ಕೊಲಾಸ್ಟ್ರಮ್‌ನಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇರುತ್ತದೆ. ಇದು, ಮಗುವಿನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ, ಭವಿಷ್ಯದಲ್ಲಿ ಬರಬಹುದಾದ ದೀರ್ಘಕಾಲೀನ ಕಾಯಿಲೆಗಳನ್ನು ತಡೆಗಟ್ಟುತ್ತದೆ.

ಅನಾಥ ಮಕ್ಕಳಿಗೆ ಇದೀಗ ತನ್ನ ಎದೆಹಾಲು ನೀಡಲು ಮುಂದಾಗಿರುವ ಭಾವನಾ ಎಂಬ ತಾಯಿ, ಏಕಕಾಲಕ್ಕೆ ಮನುಕುಲದ ಮಾನಸಿಕ ಮತ್ತು ದೈಹಿಕ ವಿಕಾರಗಳಿಗೆ ಒಂದು ದಿವ್ಯ ಔಷಧಿಯ ರೂಪಕವಾಗಿ ನಿಲ್ಲುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT