ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ. ಇದಕ್ಕೆ ಕಾರಣ ತಿಳಿದರೆ ಆಶ್ಚರ್ಯವೂ ಖೇದವೂ ಏಕಕಾಲದಲ್ಲಿ ಉಂಟಾಗುತ್ತವೆ. ಒಂದನೇ ತರಗತಿಯಲ್ಲಿ ಓದುತ್ತಿದ್ದ ಹಿರಿಯ ಮಗ ಮತ್ತು ಯುಕೆಜಿಯಲ್ಲಿದ್ದ
ಕಿರಿಯವನು ಕಲಿಕೆಯಲ್ಲಿ ಹಿಂದುಳಿದಿದ್ದರು ಎಂಬುದೇ ಈ ತಂದೆಯ ಆತಂಕ, ಕೊರಗಾಗಿತ್ತು. ಯಾರಾದರೂ ಇಷ್ಟು ಸಣ್ಣ ವಿಚಾರಕ್ಕೆ ಕೊಲೆ, ಆತ್ಮಹತ್ಯೆಗೆ ಮುಂದಾಗುತ್ತಾರೆಯೇ? ಹೃದಯವಿದ್ರಾವಕವಾದ ಈ ಪ್ರಕರಣ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಇಲ್ಲದಿದ್ದ ನತದೃಷ್ಟ ಗೃಹಿಣಿಯ ಪಾಡನ್ನು ಊಹಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗಳು ಮೂಡುತ್ತವೆ.

ಇದು ಯಾರೋ ಒಬ್ಬ ಅಸ್ಥಿರ ಮನಸ್ಸಿನ ವ್ಯಕ್ತಿಯ ಕೃತ್ಯವೆಂದು ಮರೆತುಬಿಡಬಹುದು. ಆದರೆ ಒನ್ಜಿಸಿಯಂತಹ ಪ್ರತಿಷ್ಠಿತ ಕಂಪನಿಯ ಉದ್ಯೋಗಿಯಾಗಿದ್ದ ಆ ವ್ಯಕ್ತಿ ಬರೆದಿಟ್ಟಿರುವ ಮರಣಪತ್ರದ ಈ ವಾಕ್ಯವನ್ನು ಮಾತ್ರ ಸುಲಭದಲ್ಲಿ ಮರೆಯಲು ಸಾಧ್ಯವಾಗ ಲಾರದು. ಅದೆಂದರೆ ‘ಕಲಿಕೆಯಲ್ಲಿ ಹಿಂದುಳಿದಿರುವ ನನ್ನ ಇಬ್ಬರು ಮಕ್ಕಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಹೆಣಗಾಡಬೇಕಾಗುತ್ತದೆ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’. ಈ ಮಾದರಿಯ ಮುಂದಾಲೋಚನೆ, ತರ್ಕವು ಚಿಂತನೆಗೆ ಹಚ್ಚುವಂತಿವೆ. ಜೊತೆಗೆ ಇದು ಪ್ರಸ್ತುತ ಸಮಾಜದ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿದೆ. ಈ ಪ್ರಕರಣವನ್ನು ವ್ಯಕ್ತಿಯೊಬ್ಬನ ಆಧಾರರಹಿತ ಭಯಗ್ರಸ್ತ ಮನಃಸ್ಥಿತಿ, ಮುರ್ಖತನದ ನಡವಳಿಕೆ ಎಂದೆಲ್ಲ ಕಡೆಗಣಿಸುವುದು ಸುಲಭ. ಆದರೆ ಈ ಪ್ರಕರಣವು ಎಲ್ಲೋ ಆಳದಲ್ಲಿ ಸಮಕಾಲೀನ ಸಮಾಜ ಬೆನ್ನುಹತ್ತಿರುವ ಅತಿರೇಕದ ಬಯಕೆಗಳನ್ನು ಪ್ರತಿಬಿಂಬಿಸುವಂತಿದೆ ಎನ್ನಿಸುತ್ತದೆ.

ಇಂದು ಜನಸಾಮಾನ್ಯರಲ್ಲಿ ಮಿತಿಮೀರಿದ ಆಕಾಂಕ್ಷೆಗಳು ಒಂದೆಡೆ ಅನಗತ್ಯ ಒತ್ತಡ ಸೃಷ್ಟಿಸುತ್ತಿವೆ. ಇನ್ನೊಂದೆಡೆ, ತೀರಾ ಸ್ಪರ್ಧಾತ್ಮಕವಾಗಿರುವ ಶಿಕ್ಷಣ, ಉದ್ಯೋಗದ ವಾಸ್ತವ ಪರಿಸ್ಥಿತಿ ಆತಂಕ ಉಂಟು ಮಾಡುವಂತೆ ಇದೆ. ಹೀಗಾಗಿ, ಕನಸುಗಳು ಮತ್ತು ಅದಕ್ಕೆ ಹೊಂದಿಕೆಯಾಗದ ಕಟು ವಾಸ್ತವದ ಪರಿಸ್ಥಿತಿಯು ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿವೆ. ಮೂರ್ನಾಲ್ಕು ದಶಕಗಳ ಹಿಂದೆ ಸರಳವಾಗಿದ್ದ ಬದುಕು ಬರಬರುತ್ತಾ ಸಂಕೀರ್ಣವಾಗುತ್ತಾ ಬಂದಿರುವುದನ್ನು ಕಾಣುತ್ತಿದ್ದೇವೆ. ಹಿಂದೆ ಹೆತ್ತವರು ಅವರವರ ಅನುಕೂಲ, ಯೋಗ್ಯತೆಗೆ ಅನುಗುಣವಾಗಿ ಮಕ್ಕಳನ್ನು ಶಾಲೆಗೆ ಸೇರಿಸಿಬಿಟ್ಟರೆ ಅವರ ಜವಾಬ್ದಾರಿ ಬಹುತೇಕ ಮುಗಿದಂತೆ ಇರುತ್ತಿತ್ತು. ಇತ್ತ ವಿದ್ಯಾರ್ಥಿಗಳೂ ಅಷ್ಟೇ ನಿರಾತಂಕದಿಂದ ವಿದ್ಯಾಭ್ಯಾಸ ಮುಂದುವರಿಸುತ್ತಿ ದ್ದರು. ಆಗ ಈಗಿನಂತೆ ಸ್ಪರ್ಧೆ, ಸಂಘರ್ಷದ ಮಾತೇ ಇರಲಿಲ್ಲ.

ವಿದ್ಯಾರ್ಥಿಗಳು ಅವರವರ ಬುದ್ಧಿವಂತಿಕೆ, ಪ್ರತಿಭೆಗೆ ಅನುಸಾರವಾಗಿ ಶಿಕ್ಷಣವನ್ನು ಮುಂದುವರಿಸುತ್ತಿದ್ದ ಕಾಲವದು. ಉತ್ತೀರ್ಣ, ಅನುತ್ತೀರ್ಣ ಆಗುವಿಕೆಗೆಲ್ಲ ಮಕ್ಕಳು ಕಂಗೆಡುತ್ತಿರಲಿಲ್ಲ, ಇದಕ್ಕೆಲ್ಲ ಹೆತ್ತವರೂ ದಿಗಿಲು ಬೀಳುತ್ತಿರಲಿಲ್ಲ. ಆ ಕಾಲದಲ್ಲಿ ಅರ್ಹತೆ, ಯೋಗ್ಯತೆಗೆ ತಕ್ಕಂತೆ ಉನ್ನತ ಶಿಕ್ಷಣ, ಉದ್ಯೋಗ ಲಭಿಸುತ್ತಿದ್ದವು. ಇಂತಹ ಸೌಲಭ್ಯಗಳಿಂದ ವಂಚಿತರಾದವರು ಯಾವುದೋ ಕೆಲಸ, ವ್ಯವಹಾರವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹಾಗೆಂದು ಇದನ್ನು ಸ್ವೀಕಾರಾರ್ಹ ಮಾದರಿಯೆಂದು ಒಪ್ಪಿಕೊಂಡುಬಿಡಲು ಸಾಧ್ಯವಿಲ್ಲ. ಕೆಳ ವರ್ಗಗಳಿಗೆ ದಕ್ಕದೇಹೋದ ಶಿಕ್ಷಣ, ಉದ್ಯೋಗ ಸಮಸ್ಯೆಯನ್ನು ಬೇರೆಯೇ ನೆಲೆಯಲ್ಲಿ ಚರ್ಚಿಸಬೇಕಾಗುತ್ತದೆ. ಇಲ್ಲಿ ವಿಷಯ ಅದಲ್ಲ. ಹಿಂದೆ ಶಿಕ್ಷಣ, ಉದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆಯಂತಹ ಅತಿರೇಕದ ಕೃತ್ಯಗಳಿಗೆ ಯಾರೂ ಮುಂದಾಗುತ್ತಿರಲಿಲ್ಲ ಎನ್ನುವುದು ನೆನಪಿಡಬೇಕಾದ ವಿಚಾರ.

ನಿಜ, ಈ ಕಾಲ ಹಿಂದಿನಂತೆ ಇಲ್ಲ. ಅವಿಭಕ್ತ ಕುಟುಂಬಗಳ ವಿಘಟನೆ, ಜನಸಂಖ್ಯೆಯ ಏರಿಕೆ, ಕೃಷಿ ಆಧಾರಿತ ಚಟುವಟಿಕೆಗಳ ಅವಗಣನೆ, ಉದ್ಯೋಗ ಕೊರತೆಯಂತಹವು ಸಮಾಜದಲ್ಲಿ ತೀವ್ರ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಿರುವುದನ್ನು ಒಪ್ಪಿಕೊಳ್ಳಬೇಕು. ಇದಕ್ಕೆ ಸರ್ಕಾರದ ಧೋರಣೆಗಳು ಕಾರಣವೆಂಬುದು ಸ್ಪಷ್ಟ. ಶಿಕ್ಷಣ ರಂಗದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ವಿಫಲವಾಗಿರುವ ಸರ್ಕಾರ, ಉದ್ಯೋಗ ಸೃಷ್ಟಿಸುವಲ್ಲಿ ಸಹ ದಯನೀಯವಾಗಿ ಸೋತಿದೆ. ಇದು ಜನರ ಬದುಕನ್ನು ಕಂಗೆಡಿಸಿದೆ. ಇದರ ಜೊತೆಯಲ್ಲಿ ಜನರನ್ನು ಪ್ರಭಾವಿಸಿರುವಂತಹ ಭ್ರಮೆಗಳು ಪರಿಸ್ಥಿತಿಯನ್ನು ಹದಗೆಡಿಸಿವೆ. ದುರಾಸೆ, ಆಡಂಬರ, ಒಣಪ್ರತಿಷ್ಠೆಯಂತಹ ವಿಚಾರಗಳು ಜನರ ಮನಸ್ಸನ್ನು ಕೆಡಿಸಿವೆ. ಇದರಿಂದಾಗಿಯೇ ಆತ್ಮಹತ್ಯೆಯಂತಹ ಪ್ರಕರಣಗಳು ಸಂಭವಿಸುತ್ತಿರುವುದು.

ಬದಲಾದ ಕಾಲಘಟ್ಟದಲ್ಲಿ ಉತ್ತಮ ಶಿಕ್ಷಣ, ಉದ್ಯೋಗ ಎಂಬುದು ನಮ್ಮೆಲ್ಲರ ಆದ್ಯತೆ, ಕನಸು. ಇದಕ್ಕಾಗಿ ಪ್ರಯತ್ನಿಸುವುದೂ ಸರಿ. ಆದರೆ ಈ ದಿಸೆಯಲ್ಲಿ ನಿರೀಕ್ಷಿತ ಯಶಸ್ಸು ದೊರೆಯದೇಹೋದರೆ ಬದುಕು ಅಂತ್ಯವಾಯಿತೆಂದು ಅರ್ಥವೇ? ಬದುಕು ಬಹಳ ದೊಡ್ಡದು. ಈ ಬದುಕಿನಲ್ಲಿ ಅವಕಾಶಗಳು, ಪರ್ಯಾಯ ಆಯ್ಕೆಗಳು ಅಪಾರ. ನಮ್ಮಲ್ಲಿನ ಭ್ರಮೆಗಳು, ಹೋಲಿಕೆ ಮನೋಭಾವವನ್ನು ಮೊದಲು ಕಳಚಿಕೊಳ್ಳಬೇಕು. ದಿಟ್ಟತನ, ಛಲ, ನಿರಂತರ ಪ್ರಯತ್ನಗಳ ಮೂಲಕ ಮುಂದೆ ಸಾಗುವ ಗುಣ ಪ್ರತಿಯೊಬ್ಬರಲ್ಲೂ ಇರಬೇಕು. ಈ ಬದುಕಿನಲ್ಲಿ ಅಂತಿಮ ಸೋಲು ಅಥವಾ ಅಂತಿಮ ಯಶಸ್ಸು ಎನ್ನುವುದು ಇಲ್ಲವೇ ಇಲ್ಲ. ಯಾಕೆಂದರೆ, ಇಲ್ಲಿ ಯಾವುದೂ ಶಾಶ್ವತವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.