ಜಿಮ್, ಬ್ಯೂಟಿ ಪಾರ್ಲರ್ಗಳು ಇಲ್ಲದ ಬಡಾವಣೆಗಳು ಅತಿ ವಿರಳ ಎನ್ನಬೇಕು. ಆದರೆ, ಸಮಾಜದ ಸ್ವಾಸ್ಥ್ಯಕ್ಕೆ ಮುಂಚೂಣಿಯಲ್ಲಿ ಇರಬೇಕಾದುದು ಗ್ರಂಥಾಲಯಗಳು.

‘ಪ್ರತಿ ಮನೆಯಲ್ಲಿಯೂ ಸಂಜೆ ಆರರಿಂದ ಒಂಬತ್ತರವರೆಗೆ ಟಿ.ವಿ.ಯನ್ನು ಆಫ್ ಮಾಡಿಬಿಟ್ಟರೆ ಕುಟುಂಬಗಳಲ್ಲಿ ಅರ್ಧದಷ್ಟು ಸಮಸ್ಯೆಗಳು ತಾನೇತಾನಾಗಿ ಪರಿಹಾರ ಆಗುತ್ತವೆ...’ –ಗ್ರಂಥಾಲಯಗಳ ಮಹತ್ವದ ಬಗ್ಗೆ ಮಾತನಾಡುತ್ತಿದ್ದ ಹಿರಿಯರೊಬ್ಬರ ಮಾತಿನ ಸಾರವಿದು. ಅವರ ಮಾತಿನ ಮುಂದುವರಿಕೆ ಹೀಗಿದೆ:

‘ಕನ್ನಡ ನಾಡಿನ ಮನೆ ಮನೆಗಳಲ್ಲೂ ಸಂಜೆ ಹೊತ್ತು ಟಿ.ವಿ.ಗಳು ಸ್ವಿಚ್ ಆಫ್ ಆಗಿಬಿಡಬೇಕು. ಮನೆಯಲ್ಲಿ ದಿವ್ಯಮೌನವೊಂದು ಆವರಿಸಬೇಕು. ತಕ್ಕಮಟ್ಟಿನ ಆದಾಯ ಮೂಲವುಳ್ಳ ಪ್ರತಿ ಮನೆಗಳೂ ಪತ್ರಿಕೆ, ನಿಯತಕಾಲಿಕೆ, ಪುಸ್ತಕಗಳಿಗಿಷ್ಟು ಹಣವನ್ನು ಕಡ್ಡಾಯವಾಗಿ ಖರ್ಚು ಮಾಡಬೇಕು. ದೈವಾರಾಧನೆ ರೂಪದಲ್ಲಿ ಉತ್ತಮ ಸಾಹಿತ್ಯ ಗ್ರಂಥಗಳ ಓದು ಮನೆಯಲ್ಲಿ ಮೊಳಗಬೇಕು. ಮನೆಯಲ್ಲಿ ತಂದೆ–ತಾಯಿ ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ಕನಿಷ್ಠಮಟ್ಟದ ಶಾಲಾ ಶಿಕ್ಷಣವನ್ನಾದರೂ ಪಡೆದಿರುತ್ತಾರೆ. ಆದರೆ, ಅವರ ಓದು ಸದ್ಯದ ಸಂದರ್ಭದಲ್ಲಿ ನಿಂತಿರುತ್ತದೆ. ಓದು ಸ್ಥಗಿತಗೊಂಡಿರುವ ಕಾರಣದಿಂದಲೇ ಸಮಚಿತ್ತ, ನೆಮ್ಮದಿ, ನಿದ್ದೆ ಕಾಣೆಯಾಗಿವೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವುದಕ್ಕೂ ಸಾವಧಾನ, ಅಧ್ಯಯನ ಮತ್ತು ಧ್ಯಾನಗಳ ಅಭಾವವೇ ಕಾರಣವಾಗಿದೆ’.

ಓದಿಗೂ ಮಾನಸಿಕ ನೆಮ್ಮದಿಗೂ ಸಂಬಂಧವಿದೆ ಎನ್ನುವ ಮಾತಿನಲ್ಲಿ ಸತ್ಯವಿದೆ. ಒಮ್ಮೆ ಅಧ್ಯಯನಾಸಕ್ತಿ ಒಲಿಯಿತೆಂದರೆ, ಮನೆ ಮಂದಿಯ ಕೌಟುಂಬಿಕ ಕಲಹ, ಮುನಿಸುಗಳಿಗೆ ಔಷಧ ದೊರೆಯುತ್ತದೆ. ಇರುವುದರಲ್ಲಿ ತೃಪ್ತಿ ಹೊಂದುವ, ಆತ್ಮಸಂಯಮ ಮತ್ತು ವಿವೇಕದ ಮಾರ್ಗವು ನಿಚ್ಚಳವಾಗುತ್ತದೆ. ಸರಳ ಮತ್ತು ಸಹಜವಾದ ಬದುಕನ್ನು ಬಾಳಲು ಸಾಧ್ಯವಾಗುತ್ತದೆ. ಮೋಸದ ದುಡಿಮೆ ಹಾಗೂ ಅರ್ಥಹೀನ ಖರ್ಚನ್ನು ಮೀರುವುದು ಕೂಡ. ಮನೆಯಲ್ಲಿ ಓದಿನ ವಾತಾವರಣ ದಕ್ಕಿಸಿಕೊಡುವ ಅರಿವಿನ ಕೈದೀವಿಗೆಯಲ್ಲಿ ಕಾಲಾಂತರದ ಮೌಢ್ಯದ ಮಬ್ಬಿನಿಂದ ಪಾರಾಗುವುದೂ ಸಾಧ್ಯವಿದೆ.

ಬದುಕಿನ ಮೂಲಭೂತ ಅಗತ್ಯಗಳಾಚೆಗೆ ಭ್ರಾಂತಲೋಕವನ್ನು ಹಪಹಪಿಸುವ ಇರಾದೆ ಇವತ್ತಿನದು. ಕ್ರಿಕೆಟ್, ಸಿನಿಮಾ, ಧಾರಾವಾಹಿಗಳಿಗೆ ಮರುಳಾಗಿ ಹೆಚ್ಚಿನ ಸಂಖ್ಯೆಯ ನಾಗರಿಕರು ತಮ್ಮ ಅಮೂಲ್ಯ ಹಣ, ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವ ಬಡಭ್ರಾಂತ ದೇಶ ನಮ್ಮದು. ಸುಳ್ಳು, ಭ್ರಮೆ, ಕೃತಕತೆಯನ್ನು ಆರಾಧಿಸುವ ಮನಃಸ್ಥಿತಿಗೆ ವಾಸ್ತವ ಯಾವಾಗಲೂ ಕಹಿ. ಬದುಕಿಗೆ ಬೇಕಾದ ಮೌಲಿಕ ಸಂದೇಶವನ್ನೂ, ನೈಜ ಸಂತೋಷವನ್ನೂ ನೀಡದೆ ಕೇವಲ ಮೌಢ್ಯ, ದ್ವೇಷ, ಪೊಳ್ಳುಸಂಸ್ಕೃತಿಯನ್ನು ಉತ್ತೇಜಿಸುವ ದೃಶ್ಯಾವಳಿಗಳು ಶ್ರಮದ ದುಡಿಮೆಯನ್ನು ನಿರಾಕರಿಸುತ್ತವೆ; ಬದುಕಿನ ಸವಾಲಿಗೆ ಎದೆಗೊಡದೆ ಪಲಾಯನಗೈಯುವ ಆಲಸ್ಯ ಮಾರ್ಗವನ್ನು ಉತ್ತೇಜಿಸುತ್ತವೆ ಹಾಗೂ ಸಭ್ಯ ಬದುಕನ್ನೂ ವಿಡಂಬಿಸುತ್ತವೆ.

ಮನುಷ್ಯನದು, ಬದುಕನ್ನು ಸಮೃದ್ಧಗೊಳಿಸಿಕೊಳ್ಳುವ ಪ್ರಯತ್ನಗಳಿಗಿಂತ ಪುಕ್ಕಟೆ ಗೊಂದಲಗಳಲ್ಲಿ ಸಿಲುಕಿ ಹೊರಳಾಡಲು ಹಂಬಲಿಸುವ ವಿಕ್ಷಿಪ್ತ ಮಾನಸಿಕತೆ! ಅರಿವು–ಅನುಭವ, ಪರಿಶ್ರಮದ ಧ್ಯಾನಕ್ಕಿಂತ ಆಲಸ್ಯ, ಆಡಂಬರದ ಆಚರಣೆಗಳಿಗೆ ಹೆಚ್ಚು ಗಮನ. ಸಹಜ ಸುಖವನ್ನು ಮರೆತು ಯಾಂತ್ರಿಕ ಸುಖದೆಡೆಗೆ ನಿತ್ಯ ತುಡಿತ. ಸತ್ಯ– ಪ್ರಾಮಾಣಿಕತೆ ಎನ್ನುವ ನಿಜಮೌಲ್ಯಗಳು ಮರೆಯಾಗಿ ಸುಳ್ಳು, ಮೋಸ, ವಂಚನೆಗಳದೇ ಮೆರೆದಾಟ.

ಕೆಲವು ಹಿರಿಯರಿಗೆ ಓದು ಎನ್ನುವುದು ಬ್ಯಾಂಕ್ ಪಾಸ್ಬುಕ್ನ ಓದಾಗಿದ್ದರೆ, ಎಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುವುದನ್ನು ಓದು ಎಂದುಕೊಂಡಿರುವುದಿದೆ. ಹಿರಿಯರು ಟಿ.ವಿ.ಗಳಿಗೆ ಆತು ಕೂತರೆ, ಮಕ್ಕಳ ಮನಸು ರೀಲ್ಸ್ಗಳಲ್ಲಿ ಜಾರುತ್ತಿರುತ್ತದೆ. ಪೋಷಕರು ಹಣ, ಆಸ್ತಿ, ಅಧಿಕಾರಗಳ ಹಿಂದೆ ಓಡುವಾಗ, ಮಕ್ಕಳು ಮೊಬೈಲ್ಗಳಿಗೆ ತಮ್ಮನ್ನು ಒಪ್ಪಿಸಿಕೊಳ್ಳುತ್ತಿದ್ದಾರೆ. ಈ ವಿರೋಧಾಭಾಸದ ಬದುಕಿನಲ್ಲಿ ಅರಿವಿನ ಬೆಳಕು ಬಲುದೂರ. ಸುಳ್ಳುಗಳು ಸುಂದರ. ವಾಸ್ತವವೇ ಬೇಸರ.

ಸಮಾಜದಲ್ಲಿ ನೈತಿಕ ಮೌಲ್ಯಗಳು ಅಧಃಪತನಕ್ಕೆ ಇಳಿಯುತ್ತಿರುವ ಮತ್ತು ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರುವ ಇವತ್ತಿನ ದುರಿತ ಕಾಲಘಟ್ಟದಲ್ಲಿ, ಭವಿಷ್ಯದ ಭರವಸೆಯಾದ ಮಕ್ಕಳಲ್ಲಿ ಮೌಲ್ಯ ಬಿತ್ತನೆ ಜರೂರಾಗಿ ಆಗಬೇಕು. ಹಣಕ್ಕೆ ಇನ್ನಿಲ್ಲದ ಆದ್ಯತೆ ನೀಡುವ ಸಮಾಜವು ಮೌಲ್ಯಮರೆತ ಆತ್ಮಘಾತುಕ ಸಮಾಜ ಎನ್ನಿಸಿಕೊಳ್ಳುತ್ತದೆ; ಜೀವವಿರೋಧಿ ಆಗುತ್ತದೆ. ಇಂತಹ ರೋಗಕಾರಕ ಸ್ಥಿತಿಗೆ ಚಿಕಿತ್ಸೆಯ ರೂಪದಲ್ಲಿ ಒದಗಬೇಕಾದುದು ಮೌಲ್ಯ ಶಿಕ್ಷಣ. ಅದು ಕೇವಲ ಪಠ್ಯ ಶಿಕ್ಷಣ ಮಾತ್ರವಾಗಲಾರದು. ಮಕ್ಕಳೆದುರು ಸುಖ– ಸಂಪತ್ತುಗಳ ಬಗೆಗಿನ ವ್ಯಾಮೋಹ ಮತ್ತು ಜಾತಿ– ಧರ್ಮಗಳ ಬಗೆಗಿನ ಮಮಕಾರವನ್ನು ತೋರಗೊಡದಂತೆ ಜಾಗೃತಿ ವಹಿಸಬೇಕು. ಎಳೆಯರೆದುರು ಅರಿವು, ಪರಿಶ್ರಮ, ಮಾನವೀಯ ಕಾಳಜಿಯ ವ್ಯಾಖ್ಯಾನಗಳು ಗೋಚರಿಸಬೇಕು.

ಬಂಧು–ಮಿತ್ರರ ಕುಟುಂಬವನ್ನು ಮನೆಗೆ ಆಹ್ವಾನಿಸುವ ಮತ್ತು ಅವರಲ್ಲಿಗೆ ಕುಟುಂಬ ಸಮೇತರಾಗಿ ಹೋಗಿ ಕಾಲಕಳೆಯುವ ಪರಿಪಾಟ ಹೆಚ್ಚಬೇಕು. ಗದ್ದೆ–ತೋಟ, ಕಾಡು–ಕಣಿವೆಗಳಲ್ಲಿ ವಿಹರಿಸುವ ಹವ್ಯಾಸವನ್ನು ರೂಢಿಸಿಕೊಳ್ಳುವುದು ಉತ್ತಮ. ಸಮಾಜದಲ್ಲಿ ಹಣಗಳಿಸಿದವರಿಗಿಂತ ಜ್ಞಾನಾರ್ಜನೆಯುಳ್ಳವರನ್ನು ಆದರ್ಶವಾಗಿ ಮಕ್ಕಳಿಗೆ ಪರಿಚಯಿಸುವುದು ಮುಖ್ಯ.

ಶಾಲೆಗಳಲ್ಲಿ ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ ಪಠ್ಯವು ವಿಜ್ಞಾನ– ಗಣಿತದಂತೆ ಕಡ್ಡಾಯಗೊಳ್ಳಬೇಕು. ಮಕ್ಕಳಿಗೆ ಪಾಠ– ಅಭ್ಯಾಸಗಳ ನಡುವೆ ಮನೆಗೆಲಸ, ಸಾಹಿತ್ಯ, ಸಂಗೀತ, ಕ್ರೀಡೆಯಂತಹ ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಬೇಕು. ಸಾರ್ವಜನಿಕರಲ್ಲಿಯೂ ಮಂದಿರ, ಮಸೀದಿ, ಇಗರ್ಜಿಗಳನ್ನು ಸುತ್ತುವುದಕ್ಕಿಂತ ಗ್ರಂಥಾಲಯದಲ್ಲಿ ಕೂತು ಅಭ್ಯಸಿಸುವ ಪ್ರವೃತ್ತಿ ಹೆಚ್ಚಬೇಕು. ಜಿಮ್, ಬ್ಯೂಟಿ ಪಾರ್ಲರ್ಗಳಿಗಿಂತ ಗ್ರಂಥಾಲಯದ ಆಕರ್ಷಣೆ ಹೆಚ್ಚಬೇಕು. ಇದು ಸಾಧ್ಯವಾದಲ್ಲಿ, ನಮ್ಮ ನಾಳೆಗೊಂದು ಸಹ್ಯ ಬದುಕು ಉಳಿಯುವಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.