ಅದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಒತ್ತಡ ನಿರ್ವಹಣಾ ಕಾರ್ಯಾಗಾರ. ಭಯಮುಕ್ತರಾಗಿ, ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಿದ್ಧರಾಗುವ ಬಗ್ಗೆ ಸಲಹೆ ನೀಡುತ್ತಾ, ಮಾನಸಿಕ ಸ್ವಾಸ್ಥ್ಯದ ಜೊತೆಗೆ ದೈಹಿಕ ಆರೋಗ್ಯದ ಮಹತ್ವವನ್ನು ವಿವರಿಸುವಾಗ ಸಾಮಾನ್ಯ ಪ್ರಶ್ನೆಯೊಂದನ್ನು ವಿದ್ಯಾರ್ಥಿಗಳ ಮುಂದಿಟ್ಟಿದ್ದೆ. ‘ನಿಮ್ಮಲ್ಲಿ ಎಷ್ಟು ಮಕ್ಕಳಿಗೆ ಆಗಾಗ್ಗೆ ತಲೆನೋವು ಕಾಡಿಸುತ್ತಾ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ?’ ಪ್ರತಿಕ್ರಿಯೆ ನಿಜಕ್ಕೂ ಗಾಬರಿಗೊಳಿಸುವಂತಿತ್ತು! ಸುಮಾರು ಮೂರನೇ ಒಂದರಷ್ಟು ಮಕ್ಕಳು ತಮಗೆ ಸಮಸ್ಯೆಯಿದೆ ಎಂದು ಕೈಯೆತ್ತಿದ್ದರು. ಅದರಲ್ಲೂ ಹುಡುಗಿಯರ ಸಂಖ್ಯೆಯೇ ದೊಡ್ಡದಿತ್ತು. ಇದು, ಅರಿವಿನ ಕೊರತೆಯನ್ನು ಎತ್ತಿ ತೋರಿಸಿತ್ತು.

ಶಾಲೆ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಆಗಾಗ್ಗೆ ತಲೆನೋವು ಬರಲು ಪ್ರಮುಖ ಕಾರಣವೇ ಶರೀರದಲ್ಲಿ ನೀರಿನ ಕೊರತೆ. ನೀರಿನಾಂಶ ಕಮ್ಮಿಯಾದಾಗ ದೇಹ ತೋರುವ ಮೊದಲ ಸೂಚನೆ ತಲೆನೋವು. ನಿದ್ದೆಯ ಕೊರತೆ, ಶೀತ, ಜ್ವರ, ದೃಷ್ಟಿದೋಷ, ರಸದೂತಗಳ ಏರುಪೇರು, ವಾತಾವರಣದಲ್ಲಿನ ವ್ಯತ್ಯಾಸದಂತಹ ಕಾರಣಗಳಿಂದ ತಲೆನೋವು ಬರಬಹುದಾಗಿದ್ದರೂ ಇಂತಹ ಸಂದರ್ಭಗಳು ಅಪರೂಪ. ಹಾಗಾಗಿ, ಶರೀರದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದೇ ತಲೆಶೂಲೆಯೆಂಬ ಸಾಮಾನ್ಯ ಸಮಸ್ಯೆಗೆ ಸರಳ ಪರಿಹಾರ.

ಸಾಧಾರಣವಾಗಿ ಹದಿಹರೆಯದ ಮಕ್ಕಳು ಪ್ರತಿನಿತ್ಯ ಕನಿಷ್ಠ ಎರಡು ಲೀಟರ್, ಅಂದರೆ ಏಳೆಂಟು ದೊಡ್ಡ ಲೋಟಗಳಷ್ಟು ನೀರು ಕುಡಿಯಬೇಕು. ಇನ್ನು ಆಟೋಟ, ವ್ಯಾಯಾಮದಂತಹ ಕಸರತ್ತುಗಳನ್ನು ಮಾಡಿದಾಗ ಹೆಚ್ಚು ಹೆಚ್ಚು ಬೆವರುವುದರಿಂದ ಶರೀರದ ನೀರಿನ ಬೇಡಿಕೆಯೂ ಏರುತ್ತದೆ. ಆದರೆ ಬಹುತೇಕ ಮಕ್ಕಳು ದಿನಕ್ಕೆ ಎರಡು, ಮೂರು ಲೋಟಗಳಷ್ಟೂ ನೀರು ಕುಡಿಯುವುದಿಲ್ಲ. ನಮ್ಮ ಎಳೆಯರಿಗೆ ನೀರಿನ ಮಹತ್ವದ ಬಗ್ಗೆ ಸರಿಯಾದ ಅರಿವಿಲ್ಲದಿರುವುದೇ ಇದಕ್ಕೆ ಕಾರಣ. ಬರೀ ಕಿರಿಯರು ಅಂತಲ್ಲ, ಹಿರಿಯರೂ ತಲೆನೋವಿನಿಂದ ಬಳಲುವುದಕ್ಕೆ ಪ್ರಮುಖ ಕಾರಣ ನೀರಿನ ಕೊರತೆಯೆ.

ನೀರು ಜೀವಜಲ. ಎಲ್ಲ ಶಾರೀರಿಕ ಕ್ರಿಯೆಗಳಿಗೂ ನೀರು ಬೇಕೇ ಬೇಕು. ನೀರು ಕಡಿಮೆಯಾದಾಗ ದೇಹದ ಕಾರ್ಯಗಳು ಕುಂಠಿತವಾಗುತ್ತವೆ. ರಕ್ತಪರಿಚಲನೆಯ ವೇಗ ಕುಂದುತ್ತದೆ, ಮೆದುಳಿಗೆ ಸಮರ್ಪಕವಾಗಿ ರಕ್ತ ಸರಬರಾಜು ಆಗದಾಗ ದೇಹದ ಈ ನಿಯಂತ್ರಣಾಂಗದ ಕಾರ್ಯಕ್ಷಮತೆ ಕುಂದುತ್ತದೆ. ನೀರಿನಾಂಶದ ಕೊರತೆಯಾದರೆ ಬಾಯಿ ಒಣಗುತ್ತದೆ. ಸುಸ್ತು, ತಲೆಸುತ್ತು, ನಿರುತ್ಸಾಹದಂತಹ ಲಕ್ಷಣಗಳು ಕಾಣಿಸುತ್ತವೆ. ಮಕ್ಕಳು ಇದನ್ನೆಲ್ಲಾ ಮುಚ್ಚಿಡುವುದೇ ಹೆಚ್ಚು. ತಲೆನೋವು ಬಾಧಿಸುವುದರಿಂದ ಏಕಾಗ್ರತೆ ಸಿಗದು. ಗಮನವಿಟ್ಟು ಓದಲಾಗದಾಗ ಪಠ್ಯವನ್ನು ಅರ್ಥೈಸಿಕೊಳ್ಳುವುದು ಕಷ್ಟ. ಸರಿಯಾಗಿ ಪರೀಕ್ಷೆಗೆ ತಯಾರಾಗಲು ಸಾಧ್ಯವಾಗದಾಗ ಆತಂಕವೂ ಏರುತ್ತದೆ. ಇದರಿಂದ ಮತ್ತಷ್ಟು ಭೀತಿಗೊಳಗಾಗುವ ಮಕ್ಕಳು ಸಹಜವಾಗಿಯೇ ಕಡಿಮೆ ಅಂಕ ಗಳಿಸುತ್ತಾರೆ. ಒಮ್ಮೆ ಆತ್ಮವಿಶ್ವಾಸಕ್ಕೆ ಧಕ್ಕೆಯಾದರೆ ಇದರ ಪರಿಣಾಮ ಮುಂದಿನ ಪರೀಕ್ಷೆಗಳ ಮೇಲೂ ಆಗುವುದರಿಂದ ಶೈಕ್ಷಣಿಕವಾಗಿ ಹಿನ್ನಡೆಯಾಗುತ್ತದೆ.

ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದಕ್ಕೆ ತಿಳಿವಳಿಕೆಯ ಕೊರತೆಯೊಂದೇ ಕಾರಣವಲ್ಲ. ನೀರಿಗೆ ಇತರ ಪಾನೀಯಗಳಂತೆ ರುಚಿ ಇಲ್ಲದ್ದರಿಂದ ಇದು ಮಕ್ಕಳಿಗೆ ರುಚಿಸದು. ಶಾಲೆಗಳಲ್ಲಿ ಕುಡಿಯಲು ಶುದ್ಧ ನೀರಿನ ಅಲಭ್ಯತೆ, ಮನೆಯಿಂದ ಬಾಟಲಿಗಳಲ್ಲಿ ನೀರು ತೆಗೆದುಕೊಂಡು ಹೋಗಲು ಸೋಮಾರಿತನ, ಪೋಷಕರು ಒತ್ತಾಯಿಸದಿರುವಂತಹ ಕಾರಣಗಳಿಂದಲೂ ಎಳೆಯರು ಅಗತ್ಯವಿರುವಷ್ಟು ನೀರು ಕುಡಿಯುವುದಿಲ್ಲ. ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಹಿಂಜರಿಯಲು ಮತ್ತೊಂದು ಪ್ರಮುಖ ಕಾರಣ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದಿರುವುದು. ಹೆಚ್ಚು ನೀರು ಕುಡಿದರೆ ಮತ್ತೆ ಮತ್ತೆ ಮೂತ್ರಕ್ಕೆ ಹೋಗಬೇಕಾಗುತ್ತದೆ. ಶೌಚಾಲಯ ಕೊಳಕಾಗಿದ್ದರೆ ಸಹಜವಾಗಿಯೇ ಅದನ್ನು ಬಳಸಲು ಮಕ್ಕಳು ಹಿಂದೇಟು ಹಾಕುತ್ತಾರೆ.

ಪ್ರತಿ ಶಾಲೆಯೂ ಶೌಚಾಲಯ ಹೊಂದಿರಬೇಕಾದದ್ದು ಕಡ್ಡಾಯವಾದ್ದರಿಂದ ಎಲ್ಲೆಡೆ ಕಟ್ಟಡಗಳಂತೂ ಇವೆ. ಆದರೆ, ಮಕ್ಕಳ ಸಂಖ್ಯೆಗೆ ಆಗತ್ಯವಿರುವಷ್ಟು ಶೌಚಾಲಯಗಳು ಇಲ್ಲದಿರುವುದು, ಕಿಟಕಿ- ಬಾಗಿಲು ಸರಿಯಿಲ್ಲದಿರುವುದು, ಸ್ವಚ್ಛತೆ ಇಲ್ಲದಿರುವುದು, ಶೌಚಾಲಯಗಳಿದ್ದರೂ ಬಳಸಲು ನೀರಿಲ್ಲದೆ ಗಬ್ಬು ನಾರುತ್ತಿರುವುದು ವಾಸ್ತವ ಸ್ಥಿತಿ. ನಿರ್ವಹಣೆ ಸರಿ ಇಲ್ಲದಿದ್ದಾಗ ಈ ಜಾಗಗಳೇ ಸೋಂಕು ಹರಡಿಸುತ್ತಾ ಅನಾರೋಗ್ಯಕ್ಕೆ ಕಾರಣವಾಗುವ ಅಪಾಯವಿದೆ.

ನೀರು ಕುಡಿದರೂ ಶೌಚಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಾಗ ಮೂತ್ರವನ್ನು ಕಟ್ಟಿಕೊಳ್ಳುವುದೂ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೂತ್ರಪಿಂಡ, ಮೂತ್ರಕೋಶದ ಸೋಂಕು, ವಿಸರ್ಜನಾಂಗಗಳು, ಕುಹರದ ಸ್ನಾಯು ಸಾಮರ್ಥ್ಯ ಕುಂದುವುದು, ಉರಿಮೂತ್ರ, ಮೂತ್ರಜನಕಾಂಗದಲ್ಲಿ ಹರಳುಗಳಾಗುವುದು, ರಕ್ತದೊತ್ತಡದಲ್ಲಿ ಏರಿಳಿತ, ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಕಾಣಿಸಬಹುದು. ಹಾಗಾಗಿ ಮಲ, ಮೂತ್ರದ ವಿಸರ್ಜನೆಯನ್ನು ದೀರ್ಘ ಅವಧಿಯವರೆಗೆ ತಡೆಹಿಡಿಯುವುದು ಗಂಭೀರ ಸಮಸ್ಯೆಗಳಿಗೆ ಆಹ್ವಾನವಿತ್ತಂತೆ.

ಎಳೆಯರಲ್ಲಿ ಈ ಕುರಿತು ಅರಿವು ಮೂಡಿಸುವುದರ ಜೊತೆಗೆ ಶೌಚಾಲಯಗಳನ್ನು ಬಳಕೆಗೆ ಯೋಗ್ಯವಾಗುವಂತೆ ನಿರ್ವಹಣೆ ಮಾಡುವುದು ಮಕ್ಕಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಅತ್ಯಗತ್ಯ ಕಾರ್ಯ. ಆಡಳಿತ ವ್ಯವಸ್ಥೆ ಈ ದಿಸೆಯಲ್ಲಿ ಗಂಭೀರವಾಗಿ ಗಮನಹರಿಸಿ ತರಗತಿಯೊಳಗಿನ ಚಟುವಟಿಕೆಗಳಿಗೆ ಆದ್ಯತೆ ನೀಡುವ ರೀತಿಯಲ್ಲೇ ಶಾಲಾ ಶೌಚಾಲಯಗಳ ಸುಸ್ಥಿತಿ, ಸೂಕ್ತ ನೀರಿನ ಸೌಲಭ್ಯ ಒದಗಿಸುವತ್ತ ಚಿತ್ತ ಹರಿಸಬೇಕಾದದ್ದು ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಹೆಜ್ಜೆಯೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.