ದನಿ ಇಲ್ಲದವರ ಪರವಾಗಿ ಯೋಚಿಸುವ ಹಾಗೂ ಅವರ ಬಗ್ಗೆ ಕಾಳಜಿ ತೋರುವ ಮಾತೃಪ್ರಜ್ಞೆಯನ್ನು ಸಮಾಜ ಬೆಳೆಸಿಕೊಳ್ಳಬೇಕಾಗಿದೆ

ಪತ್ರಕರ್ತರೊಬ್ಬರು ಬಿ.ಆರ್.ಅಂಬೇಡ್ಕರ್ ಅವರಿಗೆ ‘ನೀವು ಯಾಕೆ ಪಾಶ್ಚಾತ್ಯರ ಹಾಗೆ ಬಟ್ಟೆ ಧರಿಸುತ್ತೀರಿ? ಸೂಟು, ಬೂಟು, ಹ್ಯಾಟು ಯಾಕೆ ಬೇಕು? ಬಡವರು, ದಲಿತರ ಪರವಾಗಿ ಹೋರಾಡುವ ನೀವು ಬೆಲೆಬಾಳುವ ಉಡುಪು ಧರಿಸುವ ಅಗತ್ಯವಿದೆಯೇ? ಅದೇ ಗಾಂಧೀಜಿಯನ್ನು ನೋಡಿ, ಎಷ್ಟು ಸರಳವಾಗಿ ಇರುತ್ತಾರೆ’ ಎಂದು ತುಸು ಜೋರಾಗಿಯೇ
ಕೇಳಿದರು.

ಅಂಬೇಡ್ಕರ್ ಅವರು ಸಣ್ಣಗೆ ನಕ್ಕು, ‘ಅಯ್ಯಾ, ನಾನು ಹೀಗೆ ಇರುವುದು ಸರಿ, ಗಾಂಧೀಜಿ ಹಾಗೆ ಇರುವುದೇ ಸರಿ. ಆತ್ಮವಿಶ್ವಾಸವೇ ಕುಗ್ಗಿಹೋಗಿರುವ ದಲಿತರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿಯಾದರೂ ನಾನು ಇಂಥ ಬಟ್ಟೆ ಧರಿಸಬೇಕು. ನಮ್ಮ ಮುಂದಿನ ದಿನಗಳು ಆಶಾದಾಯಕವಾಗಿ ಇರಲಿವೆ ಎನ್ನುವುದನ್ನು ನನ್ನ ಬಟ್ಟೆ ತೋರಿಸುತ್ತದೆ. ಗಾಂಧೀಜಿ ಸರಳವಾಗಿರುವುದು ಅಗತ್ಯ. ಅವರು ಮೇಲ್ವರ್ಗದಿಂದ ಬಂದವರು. ವರ್ಗ, ಜಾತಿಗಳ ಅಹಂಕಾರವನ್ನು ಕಳಚಬೇಕಾಗಿರುವುದರ ಪ್ರತೀಕವಾಗಿ ಗಾಂಧಿ ಹಾಗೆ ಇದ್ದಾರೆ’ ಎಂದು ಅವರು ಮಾರ್ಮಿಕವಾಗಿ ಉತ್ತರ ನೀಡಿದ್ದರು.

ಉತ್ತಮ ಉಡುಪು ಸಾಮಾಜಿಕ ಪರಿವರ್ತನೆಗೆ ನೆರವಾಗುತ್ತದೆ. ದಲಿತರು ತಮ್ಮನ್ನು ತಾವೇ ಉನ್ನತೀ
ಕರಿಸಿಕೊಳ್ಳಲು ಉತ್ತಮ ಉಡುಪು ಧರಿಸುವುದು ಅವಶ್ಯ ಎಂದು ಅಂಬೇಡ್ಕರ್ ಹೇಳುತ್ತಿದ್ದರು. ಅವರು ಧರಿಸುತ್ತಿದ್ದ ವಸ್ತ್ರ ಕೂಡ ಹೋರಾಟದ ಅಸ್ತ್ರವಾಗಿತ್ತು.

ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಬಲಿಷ್ಠರು, ಉಳ್ಳವರು, ಅಧಿಕಾರದಲ್ಲಿ ಇರುವವರು ದಲಿತ
ರೊಂದಿಗೆ, ಬಡವರೊಂದಿಗೆ ಉದಾರವಾಗಿ ವರ್ತಿಸಬೇಕಾದ ಅಗತ್ಯವಿದೆ. ದನಿ ಇಲ್ಲದವರ ಪರವಾಗಿ ಯೋಚಿಸುವ, ಕಾಳಜಿ ತೋರುವ ಮಾತೃಪ್ರಜ್ಞೆ ಬೆಳೆಸಿಕೊಳ್ಳುವ ಅಗತ್ಯವೂ ಇದೆ. ಸಮಾಜದ ಹಿರಿಯರು, ಸಾಹಿತಿಗಳು, ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಜನಪ್ರತಿನಿಧಿಗಳು ತಾವೇ ಮುಂದಾಗಿ ಸ್ನೇಹ, ಸೌಜನ್ಯದಿಂದ ಅಸ್ಪೃಶ್ಯತೆಯ ಆಚರಣೆಗಳನ್ನು ತಡೆಯಲು ಸೂಚಿಸಬೇಕು. ಸದ್ದುಗದ್ದಲವಿಲ್ಲದೆ ನಿರಂತರವಾಗಿ ನಡೆಯುವ ಈ ಕ್ರಿಯೆ ಕ್ರಮೇಣ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

ಶ್ರೀರಂಗ ಅವರು ರಚಿಸಿದ ‘ಹರಿಜನ್ವಾರ’ ನಾಟಕದ ಒಂದು ಸನ್ನಿವೇಶ ನೆನಪಾಗುತ್ತಿದೆ. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಗುವೊಂದು ಆಡುತ್ತಿದ್ದಾಗ, ಆಕಸ್ಮಿಕವಾಗಿ ಗಟಾರಕ್ಕೆ ಬಿದ್ದುಬಿಡುತ್ತದೆ. ಮಡಿ ಮೈಲಿಗೆಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದ, ಮೇಲ್ವರ್ಗಕ್ಕೆ ಸೇರಿದ ವೇಣಮ್ಮ ಎಂಬ ಮಹಿಳೆ ಆ ಮಗುವನ್ನು ಎತ್ತಿ ರಕ್ಷಿಸುತ್ತಾಳೆ. ‘ಮಗುವಿನ ಆಕ್ರಂದನಕ್ಕೆ ನಾನು ಕರಗಿಹೋದೆ’ ಎಂದು ಹೇಳುವ ವೇಣಮ್ಮನ ಧ್ವನಿ ಎಲ್ಲರ ಧ್ವನಿ ಆಗಬೇಕು.

ಗದಗ ಜಿಲ್ಲೆಯ ನಾಯಕನೂರು ಗ್ರಾಮದಲ್ಲಿ 2009ರಲ್ಲಿ ಅಲ್ಲಿಯ ದಲಿತರಿಗೆ ಸವರ್ಣೀಯರು ಸಾಮೂಹಿಕ ಬಹಿಷ್ಕಾರ ಹಾಕಿದ್ದರು. ಗದಗ ತೋಂಟದಾರ್ಯ ಮಠದ ಪೀಠಾಧಿಪತಿಯಾಗಿದ್ದ ಸಿದ್ಧಲಿಂಗ ಸ್ವಾಮೀಜಿ ಪಾದಯಾತ್ರೆಯ ಮೂಲಕ ನಾಯಕನೂರು ಗ್ರಾಮಕ್ಕೆ ತೆರಳಿ, ಶರಣರ ವಚನಗಳನ್ನು ಹೇಳಿ ಸವರ್ಣೀಯರ ಮನಃಪರಿವರ್ತನೆ ಮಾಡಿದ್ದರು. ತಾನು ಶ್ರೇಷ್ಠ ಕುಲದವನು ಎಂದು ಹೇಳಿಕೊಳ್ಳುವುದು ಮಾನವ ಕುಲಕ್ಕೆ ಮಾಡುವ ಅಪಮಾನ ಎಂಬ ಮಾತನ್ನು ಅವರು ಈ ಸಂದರ್ಭದಲ್ಲಿ ಹೇಳಿದ್ದರು.

ಮಾನವರೆಲ್ಲರೂ ಸಮಾನರು ಎಂಬುದನ್ನು ಸೂಚಿಸುವುದು ಮಾನವ ಹಕ್ಕುಗಳ ಮೂಲ ಉದ್ದೇಶವಾಗಿದೆ. ವಾಕ್ ಸ್ವಾತಂತ್ರ್ಯ, ಆಹಾರ ಪದ್ಧತಿ, ಸಾಮಾಜಿಕ ಭದ್ರತೆ, ಶಿಕ್ಷಣ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ದೌರ್ಜನ್ಯ, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ. ಸಂವಿಧಾನದತ್ತವಾದ ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ನೋಡಿಕೊಳ್ಳುವುದು ಸಾಮೂಹಿಕ ಹೊಣೆಗಾರಿಕೆ ಆಗಿದೆ ಎಂಬುದನ್ನು ಮರೆಯಬಾರದು.

ಹಳ್ಳಿಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುತ್ತವೆ. ಬಹಳಷ್ಟು ಪ್ರಕರಣಗಳು ದಾಖಲಾಗು
ವುದೇ ಇಲ್ಲ. ಪ್ರತಿಭಟನೆಯ ಧ್ವನಿ ಕೇಳಿಬಂದರೆ ಹಣ ಕೊಟ್ಟು ಅಥವಾ ಹೆದರಿಸಿ ಬಾಯಿ ಮುಚ್ಚಿಸಲಾಗುತ್ತದೆ ಎಂಬ ಆರೋಪ ಇದೆ. ಇಂಥ ಪ್ರಕರಣಗಳನ್ನು ದಬ್ಬಾಳಿಕೆಯಿಂದ ಮುಚ್ಚಿಹಾಕುವುದಕ್ಕೆ ಬದಲಾಗಿ ಸೌಹಾರ್ದದಿಂದ ಪರಿಹರಿಸಬೇಕು. ಇದರ ಪರಿಣಾಮ ಶಾಶ್ವತವಾಗಿ ಉಳಿಯುತ್ತದೆ.

ಎಲ್ಲರಿಗೂ ಪ್ರವೇಶವಿಲ್ಲದ ಮಂದಿರಗಳಿಗೆ ಗಾಂಧೀಜಿ ಹೋಗುತ್ತಿರಲಿಲ್ಲ. ಅಂತರ್ಜಾತಿಯ ವಿವಾಹ ಸಮಾರಂಭಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದರು. ಅವರು ದಂಡಿಯಾತ್ರೆಯ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪರಿಶಿಷ್ಟರ ವಸತಿ ಪ್ರದೇಶಗಳಲ್ಲಿಯೇ ವಾಸ್ತವ್ಯ ಮಾಡಿದ್ದು ಒಂದು ದೊಡ್ಡ ಸಂದೇಶವಾಗಿತ್ತು.

ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರಾಗಿ ಆಯ್ಕೆಯಾಗಿ ಬರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಅವರ ಹಕ್ಕುಗಳನ್ನು ಚಲಾಯಿಸುವುದಕ್ಕೆ ಬಹಳಷ್ಟು ಸಂದರ್ಭಗಳಲ್ಲಿ ಅವಕಾಶ ಕೊಡುವುದಿಲ್ಲ. ಅಲ್ಲಿಯ ಬಲಿಷ್ಠರು, ಉಳ್ಳವರು ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ದಲಿತ ಸದಸ್ಯರು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುಂದಡಿ ಇಡಬೇಕು.

1960ರ ದಶಕದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ಮತಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ರಾಜವಂಶಸ್ಥೆ ವಿಜಯರಾಜೇ ಸಿಂಧಿಯಾ ಅವರ ವಿರುದ್ಧ ಜಾಡಮಾಲಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರನ್ನು ರಾಮಮನೋಹರ್ ಲೋಹಿಯಾ ಸ್ಪರ್ಧೆಗೆ ನಿಲ್ಲಿಸಿದ್ದರು. ‘ಪ್ರಜಾಪ್ರಭುತ್ವದಲ್ಲಿ ಮಹಾರಾಣಿ ಮತ್ತು ಜಾಡಮಾಲಿ ಸಮಾನ ಸ್ಥಾನಮಾನ ಉಳ್ಳವರು’ ಎಂಬುದನ್ನು ತೋರಿಸುವುದು ಈ ಸ್ಪರ್ಧೆಯ ಉದ್ದೇಶ ಎಂದು ಲೋಹಿಯಾ ಹೇಳಿದ್ದರು.

ಸಂಘರ್ಷಕ್ಕಿಂತ ಸೌಹಾರ್ದದ ಮಾರ್ಗ ಹೆಚ್ಚು ಪರಿಣಾಮಕಾರಿಯಾದದ್ದು. ತಾರತಮ್ಯ ನಿವಾರಣೆಗೆ ಸೌಹಾರ್ದವು ದಿವ್ಯ ಔಷಧಿಯಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.