ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಾಸಕ ಸರ್ವಾಧಿಕಾರಿ ಅಲ್ಲ

Last Updated 19 ಏಪ್ರಿಲ್ 2023, 23:15 IST
ಅಕ್ಷರ ಗಾತ್ರ

ನನ್ನ ಸ್ನೇಹಿತರೊಬ್ಬರು ತಾವು ಖರೀದಿಸಿದ ನಿವೇಶನ ನೋಂದಣಿ ಮಾಡಿಸಲು ಉಪನೋಂದಣಿ ಕಚೇರಿಗೆ ಹೋಗಿದ್ದರು. ನಿವೇಶನ ಮಾರಾಟ ಮಾಡಿದವರೂ ಅವರೊಂದಿಗೆ ಇದ್ದರು. ಉಪನೋಂದಣಿ ಅಧಿಕಾರಿ, ‘ಶಾಸಕರನ್ನು ಭೇಟಿ ಮಾಡಿ ನಿವೇಶನ ಖರೀದಿ ವಿಷಯ ತಿಳಿಸಿಬನ್ನಿ’ ಎಂದರು. ನನ್ನ ಗೆಳೆಯನಿಗೆ ಅಪರಿಮಿತ ಸಿಟ್ಟು ಬಂತು. ಆದರೆ ಅದನ್ನು ತಡೆದುಕೊಂಡು, ಶಾಸಕರ ಗೃಹ ಕಚೇರಿಗೆ ತೆರಳಿದರು.

ಅವರು ಬೆಂಗಳೂರಿಗೆ ಹೋಗಿರುವ ಮಾಹಿತಿ ದೊರೆಯಿತು. ಇದನ್ನು ಉಪನೋಂದಣಿ ಅಧಿಕಾರಿಗೆ ತಿಳಿಸಿದಾಗ, ‘ಶಾಸಕರ ಪುತ್ರ ಊರಲ್ಲಿಯೇ ಇದ್ದಾರೆ, ಅವರನ್ನು ಭೇಟಿ ಮಾಡಿ’ ಎಂದರು. ನನ್ನ ಸ್ನೇಹಿತ ಶಾಸಕರ ಪುತ್ರನ ಮುಂದೆ ಕೈಜೋಡಿಸಿ ನಿಂತು ವಿಷಯ ತಿಳಿಸಿದರು. ಅವರು ಸಬ್ ರಿಜಿಸ್ಟ್ರಾರ್‌ ಅವರೊಂದಿಗೆ ಮಾತನಾಡಿದ ಮೇಲೆ ನಿವೇಶನ ಖರೀದಿ ಪ್ರಕ್ರಿಯೆ ಮುಗಿಯಿತು.

ಉಪನೋಂದಣಿ ಅಧಿಕಾರಿಗಳು ನಿವೇಶನ, ಭೂಮಿ ನೋಂದಣಿ ಮಾಡುವಾಗ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಶಾಸಕರನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ಆದರೆ ಅನೇಕ ಕಡೆ ನೋಂದಣಿ ಅಧಿಕಾರಿಗಳು ಶಾಸಕರ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿರುವುದು ಕಾಣಿಸುತ್ತಿದೆ. ಇದು ಜನರಿಗೆ ಮಾಡುವ ಹಿಂಸೆ ಮತ್ತು ಅವಮಾನ. ಪೊಲೀಸ್‌ ಠಾಣೆಗಳಲ್ಲಿಯೂ ಜನರ ತಕರಾರು, ವ್ಯಾಜ್ಯಗಳನ್ನು ದಾಖಲು ಮಾಡಿಕೊಳ್ಳುವಾಗ ಶಾಸಕರ ಸೂಚನೆಯಂತೆ ನಡೆದುಕೊಳ್ಳಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತದೆ.

ಸರ್ಕಾರಿ ವಿದ್ಯಾರ್ಥಿ ನಿಲಯ, ಶಾಲೆ– ಕಾಲೇಜುಗಳ ಪ್ರವೇಶಕ್ಕೆ ವಿದ್ಯಾರ್ಥಿಯ ಜಾತಿ, ಆದಾಯದ ಬಗ್ಗೆ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಅವುಗಳ ಸಮರ್ಪಕ ಪಾಲನೆ ಆಗುವುದಿಲ್ಲ. ಶಾಸಕರು ಸೂಚಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುತ್ತದೆ. ಪಂಚಾಯಿತಿ, ಪುರಸಭೆ, ಸಹಕಾರಿ ಸಂಸ್ಥೆಗಳ ನಿತ್ಯದ ಕೆಲಸಗಳಲ್ಲಿ ಶಾಸಕರ ಹಸ್ತಕ್ಷೇಪ ನಡೆಯುತ್ತದೆ. ಗ್ರಾಮ ಪಂಚಾಯಿತಿ, ಪುರಸಭೆಗಳ ಸದಸ್ಯರು, ಅಧ್ಯಕ್ಷರಿಗೆ ಸರ್ಕಾರವು ಅಧಿಕಾರ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಿದೆ. ಆದರೆ ತಮ್ಮ ವಿವೇಚನೆ ಬಳಸಿ ಕೆಲಸ ಮಾಡುವ ಅವಕಾಶ ಅವರಿಗೆ ಸಿಗುವುದೇ ಇಲ್ಲ. ಅವರು ಕೂಡ ಅನಿವಾರ್ಯವಾಗಿ ಶಾಸಕರ ಮರ್ಜಿ ಕಾಯ್ದುಕೊಂಡೇ ಕೆಲಸ ಮಾಡುತ್ತಾರೆ.

ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರ ಬಳಿ ಗ್ರಾಮಸ್ಥರು ಬಂದು ಗ್ರಾಮದ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರು. ಅವರ ಮಾತು ಆಲಿಸಿದ ಗೋಪಾಲಗೌಡರು, ‘ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರಿಗೆ ನಿಮ್ಮ ಸಮಸ್ಯೆ
ಗಳನ್ನು ಹೇಳಿ, ಅವರು ಸರಿಪಡಿಸುತ್ತಾರೆ. ಶಾಸಕನಾಗಿ ನನ್ನ ಜವಾಬ್ದಾರಿಗಳು ಬೇರೆ ಇವೆ. ಜನರಿಗೆ ಅನುಕೂಲವಾಗುವ ಶಾಸನಗಳನ್ನು ರಚಿಸುವುದು, ಈಗಿರುವ ಶಾಸನಗಳಲ್ಲಿ ದೋಷಗಳಿದ್ದರೆ ಸರಿಪಡಿಸುವುದು, ಹೊಸ ಯೋಜನೆಗಳನ್ನು ರೂಪಿಸುವುದು, ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವುದು, ಸದನದ ಕಲಾಪದಲ್ಲಿ ಭಾಗವಹಿಸುವುದು ಶಾಸಕನ ಜವಾಬ್ದಾರಿ. ಇದರೊಂದಿಗೆ ಒಂದಿಷ್ಟು ಸಮಯ ಹೊಂದಿಸಿಕೊಂಡು ಓದುವ, ಹೊಸದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ’ ಎಂದು ಹೇಳಿದರು. ಈ ಮಾತು ಎಲ್ಲ ಶಾಸಕರಿಗೆ ನೀತಿ ಪಾಠದಂತೆ ಇದೆ.

ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅಂಗನವಾಡಿ ಸಿಬ್ಬಂದಿ ನೇಮಕದ ಉಸ್ತುವಾರಿಯ ಹೊಣೆಯನ್ನೂ ಶಾಸಕರೇ ನಿರ್ವಹಿಸುತ್ತಾರೆ. ವರ್ಗಾವಣೆಗಳಲ್ಲಿ ಶಾಸಕರ ಹಸ್ತಕ್ಷೇಪ ಹೆಚ್ಚಿಗೇ ಇರುತ್ತದೆ. ತಮ್ಮ ಮತಕ್ಷೇತ್ರಕ್ಕೆ ಬೇಕಾದ ಅಧಿಕಾರಿಗಳನ್ನು ವರ್ಗ ಮಾಡಿಸಿ
ಕೊಳ್ಳುತ್ತಾರೆ. ಅನೇಕ ಬಾರಿ ಅಧಿಕಾರಿ ಇವರ ಜಾತಿಯವರೇ ಆಗಿರುತ್ತಾರೆ. ಹೀಗಾಗಿ ಸುಸೂತ್ರ ಆಡಳಿತ ಮತ್ತು ಪ್ರಜಾಪ್ರಭುತ್ವ ಮಂಕಾಗುತ್ತವೆ. ಶಾಸಕರು ಮತಕ್ಷೇತ್ರದ ಸರ್ವಾಧಿಕಾರಿಯಂತೆ ಕೆಲಸ ಮಾಡುತ್ತಿರುವುದು ಢಾಳಾಗಿ ಕಾಣಿಸುತ್ತದೆ.

ಸಾಂಸ್ಕೃತಿಕ ವಲಯದಲ್ಲಿಯೂ ಶಾಸಕರ ಹಸ್ತಕ್ಷೇಪ ನಡೆಯುತ್ತಿರುವುದು ಆತಂಕದ ಸಂಗತಿ. ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಆಯ್ಕೆಯು ಶಾಸಕರ ಸೂಚನೆಗೆ ಅನುಸಾರವಾಗಿ ನಡೆಯುವುದನ್ನು ಕಂಡಿದ್ದೇವೆ. ಯಾವ ಯಾವ ಗೋಷ್ಠಿಗಳನ್ನು ನಡೆಸಬೇಕು, ಯಾರಿಗೆ ಮಹತ್ವ ಕೊಡಬೇಕು ಎಂಬಂತಹ ಸಂಗತಿಗಳನ್ನು ಶಾಸಕರೇ ನಿರ್ಧರಿಸುತ್ತಾರೆ. ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರು ನೇರವಾಗಿ ಶಾಸಕರ ಒಲವಿಗೆ ಅನುಸಾರವಾಗಿ ನಡೆದುಕೊಳ್ಳುತ್ತಾರೆ. ಸರ್ಕಾರಿ ಪ್ರಶಸ್ತಿ ಪುರಸ್ಕಾರಗಳು ಹಾಗೂ ಅಕಾಡೆಮಿಗಳ ಸದಸ್ಯತ್ವಕ್ಕೆ ಶಾಸಕರ ಶಿಫಾರಸು ಅನಿವಾರ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ.

ತಜ್ಞರು, ಕಲಾವಿದರು, ವಿಜ್ಞಾನಿಗಳು, ಚಿಂತಕರೊಂದಿಗೆ ಕುಳಿತು ಚರ್ಚಿಸಿ ಶಾಸಕರು ತಮ್ಮ ತಿಳಿವಳಿಕೆಯ ಕ್ಷಿತಿಜ ಹೆಚ್ಚಿಸಿಕೊಳ್ಳಬೇಕು. ‘ವಿವೇಕವನ್ನಲ್ಲದೆ ಅಧಿಕಾರವನ್ನಷ್ಟೇ ಒಟ್ಟುಗೂಡಿಸುತ್ತಾ ನಡೆದರೆ ಖಂಡಿತವಾಗಿಯೂ ನಮ್ಮನ್ನು ನಾವು ನಾಶ ಮಾಡಿಕೊಳ್ಳುತ್ತೇವೆ’ ಎಂದು ಮಹಾಕವಿ ರನ್ನ ತನ್ನ ದೊರೆಗೆ ಹೇಳಿದ ಮಾತು ಈ ಕಾಲಕ್ಕೂ ಅನ್ವಯವಾಗುತ್ತದೆ.

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಆಯ್ಕೆಯಾಗಿ ಬರುವ ಶಾಸಕರು ಮತಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟ ಚಿತ್ರಣವನ್ನು ಸಿದ್ಧಪಡಿಸಿ, ಸೇವೆ ಮಾಡುವುದಕ್ಕೆ ಇದೊಂದು ಒಳ್ಳೆಯ ಅವಕಾಶ ಎಂದು ಭಾವಿಸಿ ಕೆಲಸ ಮಾಡಬೇಕು, ವಿನಯ ಮತ್ತು ದಿಟ್ಟತನ ಜೊತೆಯಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT