ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ವಸ್ತ್ರಸಂಹಿತೆ: ನಡೆದಿದೆಯೇ ಸಂಶೋಧನೆ?

ವಸ್ತ್ರಸಂಹಿತೆ ಹೆಸರಿನಲ್ಲಿ ಸಂಕುಚಿತತೆ ಬಿತ್ತಲು ಉತ್ಸಾಹ ತೋರುವ ಅಗತ್ಯ ಇಲ್ಲ
Published : 16 ಏಪ್ರಿಲ್ 2023, 23:00 IST
ಫಾಲೋ ಮಾಡಿ
Comments

ಮಕ್ಕಳ ಮನಸ್ಸಿನಲ್ಲಿ ಬೇರೂರಬಹುದಾದ ಸಂಕುಚಿತ ಆಲೋಚನೆಗಳನ್ನು ಕಿತ್ತೊಗೆದು ವಿಶಾಲ ದೃಷ್ಟಿಕೋನಕ್ಕೆ ನೆಲೆ ಕಲ್ಪಿಸುವುದು ಶಿಕ್ಷಣದ ಆದ್ಯತೆಯಾಗಬೇಕೊ ಅಥವಾ ಸಂಕುಚಿತ ದೃಷ್ಟಿಕೋನವೇ ಈ ಕಾಲಕ್ಕೂ ಸಲ್ಲಬೇಕಿರುವ ಮೌಲ್ಯವೆಂದು ತಿಳಿಹೇಳುವುದು ಮುಖ್ಯವಾಗಬೇಕೊ?

ಶಿಕ್ಷಕರ ಬೋಧನೆ ಮತ್ತು ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಿಸಲು ಏನು ಮಾಡಬೇಕು ಮತ್ತು ಏನೆಲ್ಲಾ ಮಾಡಬಾರದು ಎಂಬ ಕುರಿತು ಗಮನ ಕೇಂದ್ರೀಕರಿಸಬೇಕಿದ್ದ ಶೈಕ್ಷಣಿಕ ವಲಯವು ಇಂದಿಗೂ ಶಿಕ್ಷಕರು ಹಾಗೂ ಮಕ್ಕಳು ಯಾವ ಬಟ್ಟೆ ಧರಿಸಿ ತರಗತಿಗೆ ಬರಬೇಕು, ಯಾವುದನ್ನು ಧರಿಸಬಾರದು ಎಂಬ ಚರ್ಚೆಯಲ್ಲಿ ತೊಡಗುವುದು ವಿಪರ್ಯಾಸವಲ್ಲವೇ?

‘ಶಿಕ್ಷಕರಿಗೊಂದು ನೀತಿ ಸಂಹಿತೆ ಬೇಡವೇ?’ ಎಂಬ ಆರತಿ ಪಟ್ರಮೆ ಅವರ ಬರಹ (ಸಂಗತ, ಮಾರ್ಚ್ 15) ನಮ್ಮ ಶೈಕ್ಷಣಿಕ ವಲಯ ಮತ್ತು ಸಮಾಜ ಸಂಕುಚಿತ ಮನೋಭಾವವನ್ನೇ ಮೌಲ್ಯವೆಂದು ಪ್ರತಿಪಾದಿಸಲು ಹೇಗೆ ಹವಣಿಸುತ್ತಿದೆ ಎಂಬುದಕ್ಕೆ ನಿದರ್ಶನ. ಲೇಖನದಲ್ಲಿ ಒಂದೆಡೆ ‘ಜೀನ್ಸ್ ಪ್ಯಾಂಟ್, ಟಿ-ಶರ್ಟ್‍ನಲ್ಲಿ ಗುರುಗಳನ್ನು ಕಲ್ಪಿಸಿಕೊಳ್ಳಬಲ್ಲೆವೇ’ ಎನ್ನುವ ಪ್ರಶ್ನೆಯನ್ನು ಲೇಖಕಿ ಮುಂದಿಟ್ಟಿದ್ದಾರೆ. ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸಿ ಬರುವವರನ್ನು ಶಿಕ್ಷಕರಾಗಿ ಪರಿಗಣಿಸಬಾರದೆನ್ನುವ ಅಭಿಪ್ರಾಯ ವಿದ್ಯಾರ್ಥಿ ಸಮೂಹದಲ್ಲಿ ನೆಲೆಯೂರಿದೆ ಎಂಬುದನ್ನು ಸಾಬೀತುಪಡಿಸುವ ಆಧಾರಗಳೇನಾದರೂ ಇವೆಯೇ? ಈ ಕುರಿತು ಯಾರಾದರೂ ಸಂಶೋಧನೆ ನಡೆಸಿ, ಅದರ ವಿವರಗಳನ್ನು ಯಾವುದಾದರೂ ಸಂಶೋಧನಾ ಪತ್ರಿಕೆಯಲ್ಲಿ ಅಂಕಿಅಂಶಗಳ ಸಮೇತ ಪ್ರಕಟಿಸಿದ್ದಾರೆಯೇ?

ಒಂದು ವೇಳೆ ಇಂತಹದ್ದೊಂದು ಅಭಿಪ್ರಾಯ ಕೆಲ ವಿದ್ಯಾರ್ಥಿಗಳಲ್ಲಿ ಮೂಡಿದ್ದರೆ, ಅವರಿಗೆ ತಿಳಿಹೇಳುವ ಕೆಲಸವನ್ನು ಶಿಕ್ಷಕರು ಮಾಡಬೇಕಲ್ಲವೇ? ಯಾರ ವ್ಯಕ್ತಿತ್ವವನ್ನೂ ಅವರು ಧರಿಸುವ ಬಟ್ಟೆಯ ಆಧಾರದಲ್ಲಿ ಅಳೆಯಬಾರದು ಎನ್ನುವ ತಿಳಿವಳಿಕೆ ಮೂಡಿಸುವುದು ಕೂಡ ನಮ್ಮ ಆದ್ಯತೆಯಾಗಬೇಕಲ್ಲವೇ? ಜೀನ್ಸ್ ಪ್ಯಾಂಟು, ಟಿ-ಶರ್ಟ್‌ ಇಂದಿಗೂ ನಮ್ಮದಲ್ಲದ ದಿರಿಸುಗಳಾಗಿ ಉಳಿದುಬಿಟ್ಟಿವೆಯೇ? ಪಾಶ್ಚಿಮಾತ್ಯ ದಿರಿಸು ಮತ್ತು ಸಂಸ್ಕೃತಿ ಎಂದು ಮೂರ್ನಾಲ್ಕು ದಶಕಗಳ ಹಿಂದೆ ಗುರುತಿಸುತ್ತಿದ್ದುದೆಲ್ಲ ಇಂದು ನಮ್ಮದೇ ಬದುಕಿನಲ್ಲಿ ಅಂತರ್ಗತವಾಗಿರುವುದನ್ನು ಒಪ್ಪಿಕೊಳ್ಳಲು ಏಕೆ ಹಿಂದೇಟು ಹಾಕಬೇಕು?

ಮನೆಯವರನ್ನೂ ಒಳಗೊಂಡಂತೆ ಸುತ್ತಮುತ್ತಲಿನ ಬಹುತೇಕ ಮಂದಿ ತೊಡುವ, ಎಲ್ಲೆಡೆ ಕಾಣಿಸಿಗುವ ಜೀನ್ಸ್ ಪ್ಯಾಂಟು, ಟಿ-ಶರ್ಟ್‍ನಂತಹ ದಿರಿಸುಗಳನ್ನು ಶಿಕ್ಷಕರು ಧರಿಸಿದ ಕೂಡಲೇ ವಿದ್ಯಾರ್ಥಿಗಳ ಪಾಲಿಗೆ ಸಮಸ್ಯಾತ್ಮಕವಾಗಲು ಹೇಗೆ ಸಾಧ್ಯ? ತಮ್ಮ ಅಗತ್ಯ ಮತ್ತು ಅಭಿರುಚಿಗೆ ಅನುಗುಣವಾಗಿ ಬಟ್ಟೆ ಧರಿಸುವ ಆಯ್ಕೆಯನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿ ಸಮೂಹಕ್ಕೆ ನೀಡುವುದು ಆದ್ಯತೆಯಾಗಬೇಕೊ ಅಥವಾ ಇಂಥದ್ದನ್ನು ಧರಿಸಿದರೆ ಮಾತ್ರ ಶಿಕ್ಷಕರಾಗಲು ಅಥವಾ ವಿದ್ಯಾರ್ಥಿಯಾಗಲು ಯೋಗ್ಯ ಎನ್ನುವ ಸಂಕುಚಿತ ಮನೋಭಾವ ಬೆಳೆಸುವುದು ಗುರಿಯಾಗಬೇಕೊ?

ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಬೇರೆ ಬೇರೆ ಸಮವಸ್ತ್ರ ನಿಗದಿಪಡಿಸುವ ಅಗತ್ಯವೂ ಇಲ್ಲ ಎಂಬುದನ್ನು ಈಗಾಗಲೇ ಕೆಲವು ಶಾಲಾ-ಕಾಲೇಜುಗಳು ಮನಗಂಡು, ಅದನ್ನು ಅನುಷ್ಠಾನಕ್ಕೆ ತಂದಿವೆ. ಹುಡುಗಿಯರ ಶಾಲಾ-ಕಾಲೇಜು ಸಮವಸ್ತ್ರದಲ್ಲಿ ಪ್ಯಾಂಟು, ಶರ್ಟ್‍ಗೆ ಮನ್ನಣೆ ದೊರಕುತ್ತಿರುವ ಮತ್ತು ಅದನ್ನು ಎಲ್ಲರೂ ಸಹಜವೆಂದು ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಶಿಕ್ಷಕಿಯರು ಸೀರೆ ಧರಿಸಿದ್ದರೆ ಮಾತ್ರ ವೃತ್ತಿಘನತೆ ಎತ್ತಿ ಹಿಡಿಯಲು ಸಾಧ್ಯವೆನ್ನುವ ವಾದ ಮಂಡಿಸುವುದು ಹಾಸ್ಯಾಸ್ಪದವಾಗಿ ತೋರುವುದಿಲ್ಲವೇ?

ಎನ್‌ಪಿಟಿಇಎಲ್‌ (ನ್ಯಾಷನಲ್‌ ಪ್ರೋಗ್ರಾಂ ಆನ್‌ ಟೆಕ್ನಾಲಜಿ ಎನ್‌ಹ್ಯಾನ್ಸ್‌ಡ್‌ ಲರ್ನಿಂಗ್‌) ನಡೆಸಿದ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿದ ಸೂಚನೆಯನ್ನು ಎದ್ದು ಕಾಣುವ ಹಾಗೆ ಮುದ್ರಿಸಲಾಗಿತ್ತು. ಅದು ಹೀಗಿತ್ತು: ‘ಪರೀಕ್ಷಾ ಕೇಂದ್ರಗಳು ವಸ್ತ್ರಸಂಹಿತೆಯ ನಿಯಮಾವಳಿಗಳನ್ನು ಹೊಂದಿರಬಹುದು. ಅಭ್ಯರ್ಥಿಗಳು ಆಯಾ ಪರೀಕ್ಷಾ ಕೇಂದ್ರ ನಿಗದಿಪಡಿಸಿದ ವಸ್ತ್ರಸಂಹಿತೆಯನ್ನು ಪಾಲಿಸಬೇಕಿರುವುದು ಅಪೇಕ್ಷಣೀಯ. ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳು ವೃತ್ತಿಪರ ವಸ್ತ್ರ ಧರಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ’.

ಆದರೆ ಯಾವೆಲ್ಲ ವಸ್ತ್ರಗಳನ್ನು ಪರೀಕ್ಷಾ ಕೇಂದ್ರಗಳು ವೃತ್ತಿಪರವೆಂದು ಪರಿಗಣಿಸುತ್ತವೆ ಎಂದು ಎಲ್ಲಿಯೂ ತಿಳಿಸಿರಲಿಲ್ಲ. ಪರೀಕ್ಷೆಗಳನ್ನು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ವಿಷಯಾಸಕ್ತರು ಹೀಗೆ ಯಾರು ಬೇಕಾದರೂ ತೆಗೆದುಕೊಳ್ಳಲು ಅವಕಾಶವಿದೆ. ತಂತ್ರಜ್ಞಾನ ಒದಗಿಸಿರುವ ಅನುಕೂಲಗಳನ್ನು ಬಳಸಿಕೊಂಡು ಜ್ಞಾನ ಪಸರಿಸುವುದು ಹಾಗೂ ಹೊಸ ವಿಷಯಗಳ ಕಲಿಕೆಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿರುವ ಎನ್‍ಪಿಟಿಇಎಲ್‍ಗೆ ಕೂಡ ಪರೀಕ್ಷೆ ಎದುರಿಸಲು ಬರುವವರು ಏನನ್ನು ಧರಿಸಿ ಬರುತ್ತಾರೆ ಎಂಬುದು ಮುಖ್ಯವಾಗುವುದು ವರ್ತಮಾನದ ವಿಪರ್ಯಾಸ.

ವಸ್ತ್ರಸಂಹಿತೆ ಕುರಿತ ಸಂಕುಚಿತ ಮನೋಭಾವವನ್ನು ಮೌಲ್ಯವೆಂದು ಪರಿಭಾವಿಸಿ, ವಿದ್ಯಾರ್ಥಿಗಳ ಮನದಲ್ಲೂ ಬೇರೂರಿಸುವುದರಿಂದ ನಮಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ಅವರಂತೆ ಮಾತನಾಡುವ ವ್ಯಕ್ತಿತ್ವಗಳನ್ನು ಅಣಿಗೊಳಿಸಲು ಸಾಧ್ಯವಾಗಬಹುದೇ ವಿನಾ, ಇದರಿಂದ ಕಲಿಕೆಯ ಗುಣಮಟ್ಟ ಸುಧಾರಿಸಲಾಗದು. ‘ಕೆಟ್ಟದಾಗಿ ಬಟ್ಟೆ ಧರಿಸುವ ಹುಡುಗಿಯರು ರಾಮಾಯಣದಲ್ಲಿ ಬರುವ ಶೂರ್ಪನಖಿ ರಾಕ್ಷಸಿಯ ಹಾಗೆ ಕಾಣುತ್ತಾರೆ’ ಎಂದು ವಿಜಯ ವರ್ಗೀಯ ಇತ್ತೀಚೆಗಷ್ಟೇ ಹೇಳಿದ್ದಾರೆ. ಹೀಗೆ ಮಾತನಾಡುವುದನ್ನು ಕಲಿಸುವುದು ಹಾಗೂ ಹುರಿದುಂಬಿಸುವುದು ಶಿಕ್ಷಣದ ಉದ್ದೇಶವಾಗಬೇಕೆ? ಇಲ್ಲವಾದಲ್ಲಿ ವಸ್ತ್ರಸಂಹಿತೆ ಹೆಸರಿನಲ್ಲಿ ಸಂಕುಚಿತತೆ ಬಿತ್ತಲು ಏಕೆ ಇನ್ನಿಲ್ಲದ ಉತ್ಸಾಹ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT