ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಮಯ ಪಾಲನೆ ಮತ್ತು ಸಭೆಯ ಸೊಬಗು

ಅನವಶ್ಯಕವಾಗಿ ಮಾತು ಲಂಬಿಸುವುದರಿಂದ ಸಭೆಯ ಘನತೆಗೆ ಕುಂದು ಉಂಟಾಗುತ್ತದೆ. ಪ್ರೇಕ್ಷಕರು ಕಸಿವಿಸಿಗೆ ಒಳಗಾಗುತ್ತಾರೆ
Last Updated 5 ಆಗಸ್ಟ್ 2022, 21:00 IST
ಅಕ್ಷರ ಗಾತ್ರ

ಯುವ ಕವಿಯೊಬ್ಬರ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮಕ್ಕೆ ಈಚೆಗೆ ಹೋಗಿದ್ದೆ. ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರು ಸ್ವಾಗತ ಭಾಷಣ ಮಾಡಲು ವೇದಿಕೆಗೆ ಬಂದು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ಸ್ವಾಗತದ ಗಡಿ ದಾಟಿ ಸಂಕಲನದಲ್ಲಿನ ಕವನಗಳ ಮೌಲ್ಯಮಾಪನ ಮಾಡಿದರು. ಕಲೆ, ಸಾಹಿತ್ಯದ ಮಹತ್ವ ವಿವರಿಸಿದರು. ರಾಜಕೀಯ ವಿದ್ಯಮಾನಗಳ ವಿಶ್ಲೇಷಣೆಯನ್ನೂ ಮಾಡಿದರು. ಕೆಲವರು ಮಾತು ನಿಲ್ಲಿಸಲು ಅವರಿಗೆ ಮತ್ತೆ ಮತ್ತೆ ಸೂಚಿಸಿದರೂ ಪ್ರಯೋಜನವಾಗಲಿಲ್ಲ. ಅವರು ತಮ್ಮ ಭಾಷಣದ ಚಪಲ ತೀರಿಸಿಕೊಂಡೇ ಮಾತು ನಿಲ್ಲಿಸಿದರು.

ಒಂದು ಗಂಟೆಯ ಕಾರ್ಯಕ್ರಮದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಸ್ವಾಗತ ಭಾಷಣ ಕಬಳಿಸಿದಾಗ ‘ಎಲ್ಲ ಬಣ್ಣವನ್ನೂ ಮಸಿ ನುಂಗಿತು’ ಎನ್ನುವ ನುಡಿ ನೆನಪಾಯಿತು.

ಬಹಳಷ್ಟು ಸಭೆ– ಸಮಾರಂಭಗಳಲ್ಲಿ ಇಂಥ ಅಧ್ವಾನಗಳು ನಡೆಯುತ್ತವೆ. ಅನವಶ್ಯಕವಾಗಿ ಮಾತು ಲಂಬಿಸುವುದರಿಂದ ಸಭೆಯ ಘನತೆಗೆ ಕುಂದು ಉಂಟಾಗುತ್ತದೆ. ಆಮಂತ್ರಿತ ತಜ್ಞರಿಗೆ ವಿಷಯ ಮಂಡನೆಗೆ ಸಮಯದ ಕೊರತೆಯಾಗುತ್ತದೆ. ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳೂ ಉಳಿದುಬಿಡುತ್ತವೆ. ಸಭೆಯ ಮುಖ್ಯ ಉದ್ದೇಶ ಹಿನ್ನೆಲೆಗೆ ಸರಿಯುತ್ತದೆ. ಸಭೆಗೊಂದು ಸಭ್ಯತೆ ಮತ್ತು ಸಂಸ್ಕೃತಿ ಇರುತ್ತದೆ. ಮೈಕ್ ಮುಂದೆ ನಿಲ್ಲುವ ಮುಂದೆ ಅದನ್ನು ತಿಳಿದಿರಬೇಕು.

ಕಾರ್ಯಕ್ರಮದ ಸಂಘಟಕರು ಶಿಸ್ತು, ಸಮಯ ಪಾಲನೆ ಮತ್ತು ಉದ್ದೇಶಿತ ವಿಷಯಗಳ ಚರ್ಚೆಗೆ ಹೆಚ್ಚಿನ ಗಮನ ಕೊಡಬೇಕು. ಕಾರ್ಯಕ್ರಮಕ್ಕೆ ಸೂಕ್ತ ಚೌಕಟ್ಟು ಹಾಕಿಕೊಳ್ಳಬೇಕು. ಅತಿಥಿಗಳ ಭಾಷಣಕ್ಕೆ ಸಮಯ ನಿಗದಿಪಡಿಸಬೇಕು. ಕಡ್ಡಾಯವಾಗಿ ಅದು ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಸ್ವಾಗತ ಮತ್ತು ವಂದನಾರ್ಪಣೆ ಚುಟುಕಾಗಿರಬೇಕು. ಕಾರ್ಯಕ್ರಮದ ರೂಪುರೇಷಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿ, ಅವಶ್ಯವಿದ್ದಲ್ಲಿ ತಾಲೀಮು ಕೂಡ ಮಾಡಬೇಕು. ಸಭೆಯ ಸೊಬಗಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು.

ನಿರೂಪಕರ ಪಾತ್ರ ಅತ್ಯಂತ ಮಹತ್ವದ್ದು. ಆದ್ದರಿಂದಲೇ ಅವರನ್ನು ಕಾರ್ಯಕ್ರಮದ ಮಾಸ್ಟರ್ ಎಂದು ಕರೆಯುತ್ತಾರೆ. ಆದರೆ ಅವರು ಕೂಡ ಅನೇಕ ಸಲ ತಮ್ಮ ವ್ಯಾಪ್ತಿ ಮೀರಿ ಮಾತನಾಡುತ್ತಾರೆ. ಭಾಷಣಕಾರರು ಹೇಳಿದ ವಿಷಯವನ್ನು ಪುನಃ ಹೇಳಿ ಸಮಯ ಹಾಳು ಮಾಡುತ್ತಾರೆ. ಇದು ಆಗಬಾರದು.

ಕೆಲವು ಸಲ ಅತಿಥಿಗಳು ತಡವಾಗಿ ಬಂದು, ತಮಗೆ ಬೇರೆ ಕೆಲಸದ ಒತ್ತಡ ಇದೆ ಎಂದು ಹೇಳಿ ಭಾಷಣ ಮಾಡಿ ಸಭೆ ನಡೆಯುತ್ತಿರುವಾಗಲೇ ಹೊರಟು ಹೋಗುತ್ತಾರೆ. ಕೆಲವರಿಗೆ ಹೋಗಲೇಬೇಕಾದ ಅನಿವಾರ್ಯ ಇದ್ದಿರಬಹುದು. ಆದರೆ ಹೆಚ್ಚಿನವರಿಗೆ ಅದೊಂದು ನೆವ. ಇನ್ನೊಬ್ಬರ ಭಾಷಣ ಕೇಳುವ ಸೌಜನ್ಯವಾಗಲೀ ಸಭೆಯ ಬಗ್ಗೆ ಹೆಚ್ಚಿನ ಆಸಕ್ತಿಯಾಗಲೀ ಅವರಿಗೆ ಇರುವುದಿಲ್ಲ. ಅಂಥವರನ್ನು ಅತಿಥಿಯಾಗಿ ಕರೆಯದಿರುವುದೇ ಲೇಸು.

ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪತ್ರಕರ್ತ ಪಾಟೀಲ ಪುಟ್ಟಪ್ಪ ವಹಿಸಿದ್ದರು. ಆಗ ಮುಖ್ಯಮಂತ್ರಿಆಗಿದ್ದ ಎಸ್.ಎಂ. ಕೃಷ್ಣ ಅವರು ಸಮ್ಮೇಳನ ಉದ್ಘಾಟಿಸಿ ಭಾಷಣ ಮಾಡಿದರು. ನಂತರ ಭಾಷಣ ಮಾಡಲು ಪಾಪು ಎದ್ದು ನಿಂತರು. ಕೃಷ್ಣ ಅವರು ತಮಗೆ ಬೇರೆ ಅವಶ್ಯ ಕೆಲಸ ಇದೆ ಎಂದು ಹೇಳಿ ಸಾವಕಾಶ ವೇದಿಕೆಯಿಂದ ಇಳಿಯತೊಡಗಿದರು. ಆಗ ಪಾಪು ‘ಮಾನ್ಯ ಕೃಷ್ಣ ಅವರೇ, ಮುಖ್ಯಮಂತ್ರಿಯಾದವರಿಗೆ ಕೆಲಸದ ಒತ್ತಡ ಬಹಳ ಇರುತ್ತದೆ.

ಅದು ಎಲ್ಲರಿಗೂ ಗೊತ್ತು. ಆದರೆ ಈಗ ನಾನು 5 ಕೋಟಿ ಕನ್ನಡಿಗರ ಪ್ರತಿನಿಧಿಯಾಗಿ ಮಾತನಾಡುತ್ತಿದ್ದೇನೆ. ನೀವು ಕೇಳಬೇಕು’ ಎಂದು ಹೇಳಿದರು. ಸೇರಿದ್ದ ಜನ ಜೋರಾಗಿ ಚಪ್ಪಾಳೆ ತಟ್ಟಿ ಕೂಗು ಹಾಕಿ ಪಾಪು ಮಾತಿಗೆ ಬೆಂಬಲ ವ್ಯಕ್ತಪಡಿಸಿದರು. ಪ್ರತಿಕ್ರಿಯೆಯ ತೀವ್ರತೆ ಗಮನಿಸಿದ ಕೃಷ್ಣ ಅವರು ತುಟಿ-ಪಿಟಿಕ್‌ ಎನ್ನದೆ ಪ್ರೇಕ್ಷಕರ ಮುಂದಿನ ಆಸನದಲ್ಲಿ ಕುಳಿತು ಭಾಷಣ ಆಲಿಸಿದರು. ಮುಖ್ಯಮಂತ್ರಿಯವರಿಗೆ ದೈನಂದಿನ ಆಡಳಿತಕ್ಕೆ ಸಂಬಂಧಿಸಿ ಏನೇನೋ ಒತ್ತಡಗಳು ಇರುತ್ತವೆ. ಆದರೆ ನೆವ ಮುಂದಿಡುವ ಎಲ್ಲರಿಗೂ ಅಂತಹ ಒತ್ತಡಗಳು ಖಂಡಿತ ಇರಲಾರವು.

ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ಲೇಖಕ ಖುಷವಂತ್‌ ಸಿಂಗ್ ಅವರು ತಮ್ಮ ನಿವಾಸಕ್ಕೆ ಊಟಕ್ಕೆ ಆಮಂತ್ರಿಸಿದ್ದರು. ರಾಜೀವ್ ರಾತ್ರಿ 8 ಗಂಟೆಗೆ ಬರುವುದಾಗಿ ಒಪ್ಪಿಗೆ ಸೂಚಿಸಿದ್ದರು. ಆದರೆ ನಿಗದಿತ ಸಮಯಕ್ಕೆ ಬರಲಿಲ್ಲ. 9 ಗಂಟೆಗೆ ಬರುವುದಾಗಿ ಅವರು ಸಂದೇಶ ರವಾನಿಸಿದರು. ‘ಸಮಯ ಮೀರಿದೆ, ನಾನು ಮಲಗಿದ್ದೇನೆ’ ಎಂದು ಸಿಂಗ್ ಮಾಹಿತಿ ರವಾನಿಸಿದರು. ಸಮಯ ಪಾಲನೆಗೆ ಸಿಂಗ್ ಅಂತಹ ಮಹತ್ವ ನೀಡುತ್ತಿದ್ದರು.

ಸಭೆ, ಸಮಾರಂಭಗಳು ಜನ ಒಂದೆಡೆ ಸೇರಲು, ಹರಟಲು, ಪರಿಣತರ ಮಾತು ಆಲಿಸಲು ಅನುವಾಗಿಸುತ್ತವೆ. ಪ್ರೇಕ್ಷಕರು ಸಮಯ ಹೊಂದಿಸಿಕೊಂಡು ಎಲ್ಲಿಂದಲೋ ಅಲ್ಲಿಗೆ ಬಂದಿರುತ್ತಾರೆ. ಅವರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳುವುದು ಸಂಘಟಕರ ಜವಾಬ್ದಾರಿ. ಅದಕ್ಕೆ ಅತಿಥಿಗಳ ಸಹಕಾರವೂ ಅಗತ್ಯ. ಭಾಗವಹಿಸಿದ್ದಕ್ಕೆ ಪ್ರೇಕ್ಷಕರಿಗೆ ಯಾವುದೋ ಒಂದು ಬಗೆಯಲ್ಲಿ ಖುಷಿ ಕೊಡಬೇಕು. ಅದಕ್ಕೆ ಬಾಧಕ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT